ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!

0
80

ವಿಶಾಲ್ ಹೊಸದಾಗಿ ಮನೆ ಖರೀದಿಸುವ ಖಯಾಲಿಯಿಂದ ಲೋನ್ ಗೆ ಅರ್ಜಿ ಸಲ್ಲಿಸಿದ್ದ;ಹಾಗೂ ಅವನ ಕೈಗೆಟುಕುವ ಬಡ್ಡಿ ದರದಲ್ಲಿ ಬ್ಯಾಂಕ್ನಿಂದ ಲೋನ್ ಸಾಂಕ್ಷನ್ ಪತ್ರವೂ ತಲಪಿತು.ಈ ಖುಷಿಯನ್ನು ಸ್ನೇಹಿತನ ಬಳಿ ಹಂಚಿಕೊಳ್ಳೋಕೋಸ್ಕರ ಅವನ ಮನೆಗೆ ಹೋದ.ಆದರೆ ಅಲ್ಲಿ ನಡೆದಿದ್ದೇ ಬೇರೆ.ಅವನ ಸ್ನೇಹಿತ ಕೇಳಿದ ಹಲವು ಪ್ರಶ್ನೆಗಳ ಸುರಿಮಳೆಯಿಂದ ಅವನ ಈ ಸಂತೋಷ ಹೆಚ್ಚುಸಮಯ ಉಳಿಯಲಿಲ್ಲ. ವಿಶಾಲ್ ಗೆ ಪಾಪ ಇದ್ಯಾವುದರ ಸುಳಿವೇ ಇರಲಿಲ್ಲ. ಅವನ ಯೋಚನೆಯಲ್ಲಿ ಕೇವಲ ಸಾಲಕ್ಕಿರುವ ಬಡ್ಡಿದರದ ಮೇಲಷ್ಟೇ ಗಮನ ಹರಿಸುವುದಾಗಿತ್ತು. ಆದ್ರೆ ಬ್ಯಾಂಕ್ನವ್ರು ಬೇರೆ ಬೇರೆ ಶುಲ್ಕದ ನೆಪದಲ್ಲಿ ಜನಸಾಮಾನ್ಯರಿಂದ ಮಾಡೊ ಸುಲಿಗೆ ಅದ್ಭುತ ಅನುಭವ ನೀಡುತ್ತೆ. ಇದು ತಮಾಷೆಯಲ್ಲ! ಸತ್ಯದ ಸಂಗತಿ. ಕೆಲವ್ರಿಗೆ ಇದ್ರ ಅನುಭವ ಇರ್ಲೂ ಬಹುದು. ಇನ್ನೂ ಕೆಲವ್ರಿಗೆ ಇಲ್ದಿರ್ಬೋದು. ಹಾಗಿದ್ರೆ ಅದೇನು ಅಂತ ನೋಡೋಣವೇನು?
ಲೋನ್ ತೆಗೆದುಕೊಳ್ಳೋಕ್ ಮೊದ್ಲು ಗಮನಿಸಬೇಕಾದ ಅಂಶ:
ನಿಜ!ಮೊತ್ತಮೊದಲಿಗೆ ನಾವು ಗಮನಿಸಬೇಕಾದ ಅಂಶವು ಬಡ್ಡಿಯದರವಾಗಿದೆ.ಯಾಕಂದ್ರೆ ಇದ್ರಿಂದ ಸಾಲಗಾರನ ಜೇಬಿಗೆ ಕತ್ತರಿ ಬೀಳುತ್ತದಲ್ವೆ?ಮನೆ ಸಾಲವು ದೊಡ್ದ ಮೊತ್ತದಲ್ಲಿರುವ ಕಾರಣದಿಂದ ಇದು ಅನೇಕ ವರ್ಷಗಳ ತನಕ ಮುಂದುವರಿಯುತ್ತದೆ.ನಾವು ಈಗ ತೆಗೆದುಕೊಳ್ಳೋ ನಿರ್ಧಾರದಿಂದ ಇದು ನಮ್ಮ ಮುಂದಿನ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ.ಅಂದರೆ ಪ್ರತೀ ತಿಂಗಳು ಬ್ಯಾಂಕ್ ಗೆ E.M.I ರೂಪದಲ್ಲಿ ಹೊರಹೋಗುವ ಮೊತ್ತದ ಮೇಲೇ ನಿರ್ದಿಷ್ಟ ಸಮಯದ ತನಕ ಹೊರೆ ಬೀಳುತ್ತದೆ.ಕೆಲವೊಂದು ವ್ಯತ್ಯಸ್ತ ಅಂಶಗಳ ಆಧಾರದ ಮೇಲೆ ಸಾಲಗಾರನು ನೀಡುವ ಒಟ್ಟು ಬಡ್ದಿಯ ಮೊತ್ತದಲ್ಲಿ ಬದಲಾವಣೆಯುಂಟಾಗಬಹುದು.
ಇನ್ನುಳಿದಂತೆ ಇತರ ಅಂಶಗಳತ್ತ ಗಮನ ಹರಿಸೋಣ.
ಬಡ್ಡಿಯ ದರವು ನಿರ್ದಿಷ್ಟ(fixed)ದರವೇ ಅಥವಾ ಬದಲಾಗುವ (floating) ದರವೆ?
ಈ ಅಂಶವು ಹೆಚ್ಚಾಗಿ ಮುಖ್ಯ ಪ್ರಿಂಟ್ನಲ್ಲಿ ನಮೂದಿಸಿರಲು ಬಿಟ್ಟು ಹೋಗಿರುತ್ತದೆ.ನಿರ್ದಿಷ್ಟ ದರವು ನಮ್ಮ ಲೋನ್ ಅವಧಿ ಇರೋ ತನಕ ಒಂದೇ ಬಡ್ಡಿದರದಲ್ಲಿ ಮುಂದುವರಿಯುತ್ತಿರುತ್ತದೆ,ಆದರೆ ಬದಲಾಗುವ ದರವು ಬ್ಯಾಂಕ್ ನೀತಿಗನುಸಾರವಾಗಿ,ಅದರಲ್ಲೂ ಹೆಚ್ಚಾಗಿ ಮಾರುಕಟ್ಟೆಯಲ್ಲಿ ವ್ಯತಿರಿಕ್ತವಾಗುತ್ತಿರುವ ಸ್ಥಿತಿಗತಿಗಳಿಗನುಗುಣವಾಗಿ ಬದಲಾಗುತ್ತದೆ.
ಇನ್ನೊಂದು ತಿಳಿಯಬೇಕಾದ ಅಂಶವೇನೆಂದರೆ ಫಿಕ್ಸ್ಡ್ ಲೋನ್ ಸಾಮಾನ್ಯವಾಗಿ ಫಿ‍ಕ್ಸ್ಡ್ ಆಗಿರುವುದಿಲ್ಲ.ಲೋನ್ ಅಗ್ರಿಮೆಂಟ್ನಲ್ಲಿ ಇದನ್ನು “after x years the bank will revise the rates”ಈ ರೀತಿಯಾಗಿ ಹೇಳಿರುತ್ತಾರೆ.ಒಂದು ವೇಳೆ ಬಡ್ಡಿ ದರ ಹೆಚ್ಚಿದಲ್ಲಿ ಮಾತ್ರ ಫಿಕ್ಸ್ಡ್ ದರ ಪ್ರಯೋಜನಕಾರಿ ,ಬಡ್ಡಿ ದರ ಕಡಿಮೆಯಾಗಿದ್ದಲ್ಲಿ ಫ಼್ಲೋಟಿಂಗ್ ದರವೇ ಸೂಕ್ತ.ಆದ ಕಾರಣ ಕೇವಲ ಕಡಿಮೆದರದ ಮೇಲಷ್ಟೆ ನಿಮ್ಮಗಮನ ವಿರಬಾರದು.ಅದು ಫಿಕ್ಸ್ ಅಥವಾ ಫ಼್ಲೋಟಿಂಗೋ ಎಂದು ಗಮನಿಸಿರಿ.
ಪ್ರೊಸೆಸ್ಸಿಂಗ್ ಫೀಸ್:
ಈ ಶುಲ್ಕ ವನ್ನು ನಾವು ಮೊತ್ತ ಮೊದಲು ಬ್ಯಾಂಕ್ ಗೆ ಪಾವತಿಸಬೇಕಾಗಿದ್ದು,ಇದನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ. ನಮ್ಮ ಲೋನ್ ಅರ್ಜಿಯನ್ನು ಸ್ವೀಕರಿಸಿದರೂ ಇಲ್ಲದಿದ್ದರೂ ಈ ಫೀಸ್ ನ್ನು ನಾವು ಕೊಡಲೇ ಬೇಕು.ಕೆಲವೊಂದು ಬ್ಯಾಂಕ್ ಗಳು ಮೊದಲಿಗೆ ಈ ಶುಲ್ಕದ ಮೊತ್ತದ ಅರ್ಧದಷ್ಟನ್ನು ಲೋನ್ ಅರ್ಜಿ ಜೊತೆ ಪಾವತಿಸಲು ಹೇಳಿ ಬಾಕಿ ಉಳಿದ ಮೊತ್ತವನ್ನು ಲೋನ್ ಲಭಿಸಿದ ಮೇಲೆ ಪಾವತಿಸುವಂತೆ ಕೇಳಿಕೊಳ್ಳುತ್ತದೆ.ಇದು ನಿರ್ದಿಷ್ಟ ದರದಲ್ಲಾದರೂ ಇರಬಹುದು ಅಥವಾ ನಮ್ಮ ಲೋನ್ ಮೇಲೆ ….% ಎಂದೂ ಬ್ಯಾಂಕ್ನಿಂದ ಚಾರ್ಜ್ ಮಾಡಲಾಗುತ್ತದೆ.
ಲೀಗಲ್ ಫೀಸ್
ಬ್ಯಾಂಕ್ ನಾವು ಖರೀದಿಸುವ ವಸ್ತುವಿನ ಲೀಗಲ್ ಸ್ಟೇಟಸ್ ನ್ನು ತಿಳಿಯಲೋಸುಗ ವಕೀಲರನ್ನು ನೇಮಿಸಿರುತ್ತಾರೆ,ಇದು ನಾವು ವಕೀಲರಿಗೆ ಪಾವತಿಸುವ ಮೊತ್ತವಾಗಿದೆ.
ಪ್ರೀಪೇಮೆಂಟ್ ಪೆನಾಲ್ಟಿ
ಮೇಲ್ನೋಟಕ್ಕೆ ಈ ಫೀಸ್ ಬಗ್ಗೆ ಮಾಹಿತಿಯು ಎಲ್ಲಿಯೂ ವ್ಯಕ್ತವಾಗಲಾರದು.ಆದರೆ ಸಾಲಗಾರನು ಇದನ್ನು ತಪ್ಪದೆ ಪಾವತಿಸಲೇಬೇಕಾಗಿದೆ.ಅದಕ್ಕಾಗಿ ಇದರ ಬಗೆಗಿನ ಮಾಹಿತಿ ಇರಲೇಬೇಕು.ಸಾಲಗಾರನು ಲೋನ್ ನ ಸಂಪೂರ್ಣ ಮೊತ್ತವನ್ನು ಲೋನ್ ಅವಧಿಗೆ ಮುನ್ನ ಹಿಂತಿರುಗಿಸುತ್ತಿದ್ದಲ್ಲಿ ಬ್ಯಾಂಕ್ ಗೆ ನಾವು ಹಿಂತಿರುಗಿಸುವ ಲೋನ್ ನ ಮೊತ್ತದ ಮೇಲೆ …% ದಂಡ ಕೊಡಬೇಕಾಗುತ್ತದೆ.ಇದನ್ನೆ ಪ್ರೀಪೇಮೆಂಟ್ ಪೆನಾಲ್ಟಿ ಎನ್ನುತ್ತಾರೆ.
ಇನ್ಷುರೆನ್ಸ್ ಹೋಮ್ ಲೋನ್ ಜೊತೆಗೆ ಸೇರಿದೆಯೆ?
ನಾವು ಪಡೆಯುವ ಲೋನ್ ಮೇಲೆ ಇನ್ಷುರನ್ಸ್ ವಿಮೆ ಮಾಡಿಸುವುದು ಒಂದು ಒಳ್ಳೆ ಉಪಾಯ,ಇದನ್ನು ಹೇಗಿದ್ದರೂ ಸಾಲಗರನೇ ಆಯ್ಕೆ ಮಾಡುವುದಾಗಿದೆ.ಸುರಕ್ಷತೆಗಾಗಿ ಒಂದು ಸಣ್ಣ ವಿಮೆ ಮಾಡಿಸಿದಲ್ಲಿ ಸಾಕಾಗುತ್ತದೆ.ಆದರೆ ಕೆಲವೊಮ್ಮೆ ಬ್ಯಾಂಕ್ ಇದನ್ನು E.M.I ಜೊತೆಗೆ ಸೇರಿಸಿರುತ್ತದೆ ಇದರ ಬಗ್ಗೆ ಕೆಲವೊಮ್ಮೆಸಾಲಗಾರನಿಗೆ ಅರಿವಿರುವುದಿಲ್ಲ.ಆಗ ಸಾಲಗಾರನು E.M.I ಜೊತೆಗೆ ಇದನ್ನೂ ಸೇರಿಸಿ ಕಟ್ಟ ಬೇಕಾಗುವುದರಿಂದ ಅವ ಇದಕ್ಕೆ ಹಣ ಹೊಂದಿಸಲು ಪಾಡು ಪಡಬೇಕಾಗುತ್ತದೆ.
ಲೋನ್ ಅವಧಿ ಅಂದರೇನು?
ಇದರ ಕುರಿತು ಸ್ವಲ್ಪ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾಗುತ್ತದೆ.ಕೆಲವರಿಗೆ ಬ್ಯಾಂಕ್ ನಿಗಧಿಪಡಿಸಿದ ಗರಿಷ್ಟ ಅವಧಿಗಿಂತಲೂ ಕಡಿಮೆ ಅವಧಿಗೆ ಸಾಲ ಬೇಕಾಗಿರುತ್ತದಾದರೆ ಇನ್ನೂ ಕೆಲವರಿಗೆ ಗರಿಷ್ಟ ಅವಧಿಗೂ ಮೀರಿದ ಅವಧಿಗೆ;ಇದು ಕೆಲವೊಮ್ಮೆ ಬ್ಯಾಂಕ್ ನಿಬಂಧದೊಳಗಿರಲಾರದು ಅಥವಾ ಇಂಥವುಗಳಿಗೆ ಬ್ಯಾಂಕ್ ನಿಂದ ವಿಧಿಸುವ ಬಡ್ಡಿಯ ದರಗಳಲ್ಲಿ ವ್ಯತ್ಯಾಸವಿರಬಹುದು.ಅದಕ್ಕಾಗಿ ಮೊದಲೆ ನೀವು ನಿಮ್ಮ ಲೋನ್ ಅವಧಿಯು ನಿಮ್ಮ E.M.I ಹೊರೆಯ ಮೇಲೆ ಹಾಗೂ ಸಂಪೂರ್ಣ ಬಡ್ಡೀ ದರದ ಮೇಲೆ ಪರಿಣಾಮ ಬೀರುವುದೇ ಅಂತ ಗಮನಿಸಬೇಕು.
ಮೇಲಿನ ವಿಷಯಗಳು ನಿಮಗೆ ನಿಮ್ಮ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಹಾಯ ಮಾಡಬಹುದು. ಹೋಮ್ ಲೋನ್ ಪಡೆಯೋ ಮುನ್ನ ಮನೆಯಲ್ಲಿ ನೀವು ಸಾಕಷ್ಟು ಹೋಂ ವರ್ಕ್ ಮಾಡಲೇಬೇಕು.ಇಲ್ಲವಾದಲ್ಲಿ ನಿಮ್ಮ ಪ್ರತೀ ತಿಂಗಳ ಆದಾಯದ ಮೇಲೆ ಹಿಡಿತ ಇಲ್ಲವಾಗುತ್ತದೆ ,ಹಣಕಾಸಿನ ವಿಷಯದಲ್ಲಿ ಜೀವನ ಏರು ಪೇರಾಗುತ್ತದೆ.

  • ಸ್ವರ್ಣಲತ ಭಟ್

LEAVE A REPLY

Please enter your comment!
Please enter your name here