ಇವರು ಕುರುಡರು, ಆದರೆ ಇವರಂಥಾ ಸ್ವಾಭಿಮಾನ ನಮಗಿಲ್ಲ..! ಕನ್ನಡದ ಈ `ಅಂಧ ಸಾಧಕರಿಗೆ' ಬೇಕಿದೆ ನಮ್ಮೆಲ್ಲರ ಪ್ರೋತ್ಸಾಹ..!

0
61

ಅವರು ಹುಟ್ಟು ಕುರುಡರು. ಮನೆಯಿಂದ ಆಚೆ ಹೋದರೆ ಎಲ್ಲಿ ಬಿದ್ದು ಕೈಕಾಲು ಮುರಿದು ಕೊಳ್ಳುತ್ತಾನೋ, ಯಾವ ವಾಹನದ ಚಕ್ರಕ್ಕೆ ಸಿಲುಕಿ ಮಗ ಇನ್ನಿಲ್ಲವಾಗುತ್ತಾನೋ ಎಂಬ ಆತಂಕ ಅವರ ಅಪ್ಪ-ಅಮ್ಮನಿಗೆ..! ಮಗನ ಮೇಲಿನ ಪ್ರೀತಿಯಿಂದ ಅವರನ್ನು ಹೊರಗೆ ಕಳುಹಿಸ್ತಾ ಇರ್ಲಿಲ್ಲ..! ಇತರ ಮಕ್ಕಳಂತೆ ಆಟ ಆಡಲೂ ಬಿಡ್ತಿರ್ಲಿಲ್ಲ..! ಅದೆಷ್ಟೋ ಬಾರಿ ಮನೆಯ ಕೋಣೆಯಲ್ಲಿ ಅವರನ್ನು ಕೂಡಿ ಹಾಕಿದ್ದರು..! ನಾನೂ ಆಚೆ ಹೋಗುತ್ತೇನೆ, ಓಡಾಡುತ್ತೇನೆಂದು ಎಷ್ಟೇ ಹಠ ಮಾಡಿದರೂ ಅಪ್ಪ-ಅಮ್ಮ ಎಲ್ಲರಂತಿರಲು ಅವರಿಗೆ ಅವಕಾಶ ಕೊಡಲೇ ಇಲ್ಲ..! ಚಿಕ್ಕವಯಸ್ಸಲ್ಲೇ ಅಂಧರ ಹಾಸ್ಟೆಲ್ ನಲ್ಲಿ ಬಿಟ್ಟರು..! ಒಂದೆಡೆ ಕಣ್ಣುಕಾಣಲ್ಲ, ಇನ್ನೊಂದಡೆ ಕಿತ್ತು ತಿನ್ನುವ ಬಡತನ, ಇದರ ನಡುವೆಯೂ ಹತ್ತನೇ ತರಗತಿ ತನಕ ಓದ್ತಾರೆ..! ಬಡತನದಿಂದಾಗಿ ಮುಂದಕ್ಕೆ ಓದಲು ಸಾಧ್ಯ ಆಗಲ್ಲ..! ನಂತರ ಕೆಲಸಕ್ಕೆ ಹೋಗೋ ಯೋಚನೆ ಮಾಡ್ತಾರೆ..!
ಕಣ್ಣುಕಾಣಲ್ಲವೆಂಬ ನೆಪ ಹೇಳಿ ಭಿಕ್ಷೆ ಬೇಡಿ ತಿನ್ನಲು ಅವರ ಮನಸ್ಸು ಒಪ್ಪಲ್ಲ..! ಎಷ್ಟು ದಿನ ಅಪ್ಪ-ಅಮ್ಮನ ಆಶ್ರಯದಲ್ಲೇ ಬದುಕಲು ಸಾಧ್ಯ? ನಾನೂ ಸ್ವಾವಲಂಭಿಯಾಗಿ ಬದುಕ ಬೇಕು..! ಸಾಮಾನ್ಯರಂತೆ ದುಡಿಯಬೇಕು..! ದುಡಿದು ಮುಂದೊಂದು ದಿನ ನನ್ನಂತವರಿಗೆ ನಾನು ನೆರಳಾಗಬೇಕೆಂದು ಯೋಚಿಸಿದ ಆ ಹುಟ್ಟು ಕುರುಡರು ಅಪ್ಪ-ಅಮ್ಮ ಬೇಡ ಬೇಡ ಅಂದರೂ ಕೇಳಲಿಲ್ಲ..! ಕೆಲಸವನ್ನ ಹುಡುಕುತ್ತಾರೆ..!
ನಾನೂ ಸಾಮಾನ್ಯರಂತೆ ಬದುಕ ಬಲ್ಲೆ ಎಂದು ಹಠತೊಟ್ಟು ಹೊರ ಬಂದಾಗ ಅದೆಷ್ಟೋ ಸಾರಿ ಎಡವಿದ್ದಾರೆ, ಬಿದ್ದಿದ್ದಾರೆ…! ಯಾಕಪ್ಪಾ ಕಣ್ಣು ಕಾಣದೇ ಇದ್ದರೂ ಹೀಗೆಲ್ಲಾ ಬಂದು ಸುಮ್ಮನೇ ಪೆಟ್ಟು ಮಾಡಿಕೊಳ್ತೀಯಾ? ಒಂದೆಡೆ ಸುಮ್ಮನೇ ಕೂತರೆ ಆಗಲ್ವೇ ಎಂದು ಅದೆಷ್ಟೋ ಜನ ಪುಕ್ಕಟೆ ಸಲಹೆಯನ್ನೂ ಕೊಟ್ಟಿದ್ದಾರೇನೋ? ಆದರೆ ಎಡವುವುದು, ಬೀಳುವುದು ನಡೆಯುವವನೇ ಹೊರತು, ಸುಮ್ಮನೇ ಕೂತವನಲ್ಲ..! ನಾನು ನಡೆಯುತ್ತೇನೆ, ಎಡವುತ್ತೇನೆ, ಬೀಳುತ್ತೇನೆ, ಎದ್ದು ಮುಂದೆ ಸಾಗಿಯೇ ಸಾಗುತ್ತೇನೆಂದು ಪಣತೊಟ್ಟು ಮತ್ತೆ ಮತ್ತೆ ಕೆಲಸವನ್ನು ಹುಡುಕುತ್ತಾ ಸುತ್ತುತ್ತಾರೆ..! ನೀನು ಕುರುಡ ನೀನು ಮಾಡುವಂಥಾ ಕೆಲಸ ನಮ್ಮಲ್ಲಿ ಯಾವುದೂ ಇಲ್ಲವೆಂದು ಅದೆಷ್ಟೋ ಜನ ಅವಮಾನಿಸಿ ಅವರನ್ನು ಆಚೆದಬ್ಬಿದ್ದರು..! ಕೊನೆಗೊಂದು ದಿನ ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡರು, ಕೆಲಸ ಮಾಡುತ್ತಾ ಬೆರಳೊಂದನ್ನೂ ಮುರಿದು ಕೊಂಡಿದ್ದಾರೆ..! ನಂತರ ಬೇರೆ ಬೇರೆ ಸಂಗೀತ ತಂಡಗಳ ಜೊತೆ ಕೆಲಸಕ್ಕೆ ಹೋದರು..! ಹಾಡನ್ನೂ ಹಾಡಿದರು, ತಬಲ, ಹಾರ್ಮೋನಿಯಂ ಮೊದಲಾದ ಸಂಗೀತ ವಾದ್ಯಗಳನ್ನು ನುಡಿಸೋದನ್ನು ಕಲಿತರು..! ಕಣ್ಣಿರುವವರು ಅವೆಲ್ಲವನ್ನೂ ಕಣ್ಣಿನಿಂದ ನೋಡಿ ಅರ್ಥ ಮಾಡಿಕೊಂಡರೆ ಇವರು ಕೇವಲ, ಗ್ರಹಿಕೆಯಿಂದ ಕಲಿಯುತ್ತಾರೆ..! ಆಂಪ್ಲಿಫೈರ್, ಮೈಕ್ ಸೆಟ್ಟಿಂಗ್ ಹೀಗೆ ಸಂಗೀತಕ್ಕೆ ಸಂಬಂಧಿಸಿದ ಎಲ್ಲಾ ವಿಚಾರ, ಸಾಧನಗಳ ಬಗ್ಗೆ ತಿಳಿದರು..! ಅಲ್ಲಿ-ಇಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಕೇಳುಗರಿಂದ ಶಹಬ್ಬಾಶ್ ಗಿರಿ ಪಡೆದರು..!

murugan-blind-singer
ಇಷ್ಟಕ್ಕೇ ಸುಮ್ಮನೇ ಕೂರಲಿಲ್ಲ. ನನ್ನಂತವರನ್ನೇ ಸೇರಿಸಿ ಒಂದು ಸಂಗೀತ ತಂಡವನ್ನು ಕಟ್ಟಬೇಕೆಂದು ಯೋಚಿಸಿದ್ರು..! `ಮಾರ್ಗ ಜ್ಯೋತಿ ಕ್ಷೇಮಾಭಿವೃದ್ಧಿ ಟ್ರಸ್ಟ್’ ಎಂಬ ಸಣ್ಣ ಟ್ರಸ್ಟ್ ನ್ನು ಹುಟ್ಟುಹಾಕಿದ್ದಾರೆ..! ನಾನಾ ಪತ್ರಿಕೆಗಳಲ್ಲಿ ಜಾಹಿರಾತು ನೀಡಿ, ಅಂಧರ ಸಂಗೀತ ಗೋಷ್ಠಿ ಇದೆ, ಆಸಕ್ತ ಅಂಧ ಹಾಡುಗಾರರು ತಮ್ಮ ತಂಡವನ್ನು ಕೂಡಿಕೊಳ್ಳುವಂತೆ ಕೇಳಿಕೊಂಡರು..! ರಾಜ್ಯದ ನಾನಾ ಭಾಗಗಳಿಂದ ಅಂಧ ಹಾಡುಗಾರರು ಇವರೊಡನೆ ಕೈ ಜೋಡಿಸಿದರು..! ಈಗ ಇವರುಗಳೆಲ್ಲಾ, ಬೆಂಗಳೂರು ಸೇರಿದಂತೆ, ರಾಜ್ಯದ ನಾನಾ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಕೊಡುತ್ತಿದ್ದಾರೆ..! ವೇಧಿಕೆ ಕಾರ್ಯಕ್ರಮಕ್ಕಿಂತಲೂ ಮಿಗಿಲಾಗಿ, ಬೀದಿ-ಬೀದಿಗಳಲ್ಲಿ ಹಾಡಿ, ಆರ್ಕೆಸ್ಟ್ರಾಗಳನ್ನು ನಡೆಸಿ ಜನ ನೀಡುವ ಅಷ್ಟೋ ಇಷ್ಟೋ ಹಣದಿಂದ ಜೀವನ ನಡೆಸ್ತಾ ಇದ್ದಾರೆ..!
ಹೀಗೆ, ಅಂಧರಾಗಿದ್ದರೂ ತಾನು ಬೆಳೆಯುತ್ತಾ, ತನ್ನಂತವರನ್ನೂ ಬೆಳಸುತ್ತಿರುವ ಒಳ್ಳೆಯ ವ್ಯಕ್ತಿ, ಗ್ರೇಟ್ ಮ್ಯಾನ್ ಆಫ್ ಕರ್ನಾಟಕ `ಬಾಲ ಮುರುಗನ್’. ನಮ್ಮ ಬೆಂಗಳೂರಿನ ಆರ್.ಟಿ.ನಗರದ ಕಾವಲ್ ಬೈರಸಂದ್ರದವರು. ಹುಟ್ಟಿದ್ದು, ಬೆಳೆದಿದ್ದೆಲ್ಲಾವೂ ಇಲ್ಲಯೇ. ಇವರ ಅಪ್ಪ ಬಡಗಿ. ಕಷ್ಟದಲ್ಲೇ ಬೆಳೆದ, ಇಂದಿಗೂ ಕಷ್ಟದಲ್ಲೇ ಬದುಕುತ್ತಿರುವ ಅಂಧರು ಬಾಲಮುರುಗನ್..! ಹೊರಗಣ್ಣಿಲ್ಲದಿದ್ದರೇನಂತೆ, ಇವರಿಗೆ ಸ್ವಚ್ಛಂದದ ಆಂತರ್ಯದ ಕಣ್ಣಿದೆ..!
ನೀವು ಇಲ್ಲಿತನಕ ಓದಿದಂತೆ, ಮುರುಗನ್ ಕಷ್ಟಪಟ್ಟು ಇಲ್ಲಿತನಕ ಬಂದಿದ್ದಾರೆ. ಇವರ ತಂಡದಲ್ಲಿ ರಾಜ್ಯದ ಬೇರೆ ಬೇರೆ ಕಡೆಯ 15 ಅಂಧಕಲಾವಿದರಿದ್ದಾರೆ. ( ಮುರುಗನ್ ಅಲ್ಲದೇ ಸಿದ್ದಗಂಗಮ್ಮ, ಚಂದ್ರಶೇಖರ್, ಬಾಲು, ಕುಮಾರ್, ಚಂದ್ರು ಹೂಗಾರ್, ಸುಬ್ರಮಣಿ, ಮಹದೇವ್ ಮೊದಲಾದ 14 ಜನ) ಒಬ್ಬರು ಹಾಡುತ್ತಾ, ಇನ್ನೊಬ್ಬರು, ಹಾರ್ಮೋನಿಯಂ ನುಡಿಸುತ್ತಾರೆ, ಮತ್ತೊಬ್ಬರು ತಬಲ, ಮಗದೊಬ್ಬರು, ಆಂಪ್ಲಿಫೈರ್(ವರ್ಧಕ) ವ್ಯವಸ್ಥೆ ನೋಡಿಕೊಳ್ಳುತ್ತಾರೆ..! ತಂಡವನ್ನು ಕಟ್ಟಿ 10 ವರ್ಷಗಳಾಗಿದೆ..! ಮೊದಲ 4 ವರ್ಷ ಕೇವಲ ಸುಗಮ ಸಂಗೀತದತ್ತ ಗಮನ ಹರಿಸಿದ್ದರು..! ಆಮೇಲೆ ಸಿನಿಮಾ ಗೀತೆಗಳನ್ನೂ ಹಾಡಿ ಕೇಳುಗರ ಮನರಂಜಿಸಲಾರಂಭಿಸ್ತಾರೆ..! ಮುಂದೆ, ಸಧ್ಯದ್ಲಲೇ ಡ್ಯಾನ್ಸ್ (ನೃತ್ಯ)ವನ್ನೂ ಮಾಡುವ ಯೋಜನೆ ಇದೆಯಂತೆ..! ಹೀಗೆ ಕುರುಡರೇ ಒಂದು ತಂಡವನ್ನು ಕಟ್ಟಿ ಸ್ವಾವಲಂಭಿಯಾಗಿ ಬದುಕುತ್ತಿದ್ದಾರೆ. ಇನ್ನೊಂದು ಮುಖ್ಯ ಅಂಶವೆಂದರೆ, ಜಯಕುಮಾರ್, ವೀರಭದ್ರ, ಪಾಲಾಕ್ಷ ಎಂಬ ಮೂವರು ಆಟೋ ಡ್ರೈವರ್ ಗಳು ಸದಾ ಒಬ್ಬರಲ್ಲದೆ ಇನ್ನೊಬ್ಬರು, ಕೆಲವೊಮ್ಮೆ ಮೂವರೂ ಈ ತಂಡದ ಜೊತೆಗಿದ್ದು, ನಿಸ್ವಾರ್ಥ ಆಟೋ ಸೇವೆ ಒದಗಿಸ್ತಾರೆ..! ಅಂಧ ಸಾಧಕರಿಗೆ ಪ್ರೋತ್ಸಾಹ ನೀಡುತ್ತಾ ಬೆಳೆಸುತ್ತಿರುವ ಈ ಆಟೋಡ್ರೈವರ್ ಗಳ ಮಾನವೀಯತೆಗೂ ನನ್ನದೊಂದು ನಮನ..!
ಈ ಮುರುಗನ್ ಹಾಗೂ ಅವರ ತಂಡದ ಬಗ್ಗೆ ಸರ್ಕಾರಕ್ಕೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ..! ಸರ್ಕಾರ ಕೆಲವೊಮ್ಮೆ ಗೊತ್ತಿದ್ದು. ಗೊತ್ತಿಲ್ಲದಂತೆ ನಟಿಸುತ್ತದೆ ಎಂಬ ನೋವು ಸ್ವತಃ ಮುರುಗನ್ ಅವರಿಗಿದೆ. ತಂದೆ-ತಾಯಿಗಳೂ ಅಷ್ಟೇ ಅಂಧ ಮಕ್ಕಳಿಗೆ ಪ್ರೋತ್ಸಾಹ ನೀಡಿ ಬೆಳೆಸಬೇಕು, ಅಂಧರಲ್ಲೂ ಅಸಾಧರಣ ಪ್ರತಿಭೆ ಇದೆ ಎನ್ನುವ ಮುರುಗನ್ ನಮ್ಮ ಸಂಸ್ಥೆ ಬಡ ಸಂಸ್ಥೆಯಾಗಿದ್ದು ನಮ್ಮನ್ನು ಸಾರ್ವಜನಿಕರೇ ಬೆಳೆಸಬೆಕು, ಧಾನ್ಯ ಅಥವಾ ಹಣವನ್ನು ನೀಡಿ ಸಹಕರಿಸಿ, ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಪ್ರೋತ್ಸಾಹ ಬೇಕೆನ್ನುತ್ತಾರೆ ಈ ಸಾಧಕರು..! ಸರ್ಕಾರ ಅಂಧರಿಗೆ ನೀಡುವ ಪಿಂಚಣಿಯನ್ನೂ ಹೆಚ್ಚಿಸುತ್ತಿಲ್ಲಾ..! ನಮ್ಮಂತವರಿಗೆ ಸಹಾಯವನ್ನೂ ಮಾಡುತ್ತಿಲ್ಲ, ಪ್ರೋತ್ಸಾಹಿಸುತ್ತಲೂ ಇಲ್ಲ ಎಂದು ಮುರುಗನ್ ಬೇಸರದಿಂದ ಹೇಳುತ್ತಾರೆ.
ಫ್ರೆಂಡ್ಸ್, ನಾವು-ನೀವೆಲ್ಲಾ ಸೇರಿಯಾದ್ರು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡೋಣ, ಎಲ್ಲಾದರು ಇವರನ್ನು ಕರೆಸಿ ಕಾರ್ಯಕ್ರಮ ನೀಡುವ ಮೂಲಕವೂ ಇವರಿಗೆ, ಇವರಂಥವರಿಗೆ ಪ್ರೋತ್ಸಾಹ ಮತ್ತು ಸಹಾಯವನ್ನು ಮಾಡೋಣ..! ಈಗ ಈ ಎಲೆಮರೆಯ ಸಾಧಕರ ಪರಿಚಯ ಎಲ್ಲರಿಗೂ ಆಗುವಂತೆ ಮಾಡುವ ಹೊಣೆ ನಿಮ್ಮದು..! ಮನಸ್ಸಿದ್ದರೆ, ಈ ಸ್ಟೋರಿಯನ್ನು ಎಲ್ಲರಿಗೂ ತಲುಪುವಂತೆ ಶೇರ್ ಮಾಡಿ. ಇವರಿಗೆ ಒಳ್ಳೆಯದಾಗಲಿ ಅಂತಲೂ ಹರಸಿ.

 

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

POPULAR  STORIES :

ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?

ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!

ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್‌ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?

ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?

ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!

ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

 

LEAVE A REPLY

Please enter your comment!
Please enter your name here