ಕಿರಿಕ್ ಪಾರ್ಟಿ ಸಿನಿಮಾ ಗೆಲ್ಲುವುದರ ಜೊತೆಗೆ ಇಡೀ ತಂಡವೇ ದೊಡ್ಡ ಯಶಸ್ಸನ್ನು ಗಳಿಸಿತ್ತು. ಈ ಯಶಸ್ಸಿನಿಂದ ತಂಡದ ಬಹುತೇಕರಿಗೆ ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿದವು.
ಚಿತ್ರದ ನಿರ್ದೇಶಕ ರಿಶಬ್ ಶೆಟ್ಟಿ, ನಾಯಕ ನಟ ರಕ್ಷಿತ್ ಶೆಟ್ಟಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನಾಯಕಿ ರಶ್ಮಿಕಾ ಮಂದಣ್ಣ ಅವರು ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆ ಗಿಟ್ಟಿಸಿಕೊಂಡಿರುವ ನಟಿ. ಕಿರಿಕ್ ಪಾರ್ಟಿ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಅಂಜನೀಪುತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದು, ಚಮಕ್ ನಲ್ಲಿ ಗೋಲ್ಡನ್ ಸ್ಟಾರ್ ಜೊತೆ ನಟಿಸಿದ ರಶ್ಮಿಕಾಗೆ ಅವಕಾಶಗಳು ಒಂದರ ಹಿಂದೊಂದರಂತೆ ಹುಡುಕಿಕೊಂಡು ಬರುತ್ತಿವೆ. ಸಂಯುಕ್ತ ಹೆಗಡೆ ಸಹ ಬ್ಯುಸಿ ಇದ್ದಾರೆ.
ಕಿರಿಕ್ ಪಾರ್ಟಿಯಲ್ಲಿ ರಕ್ಷಿತ್ ಸ್ನೇಹಿತರಾಗಿ ನಟಿಸಿದ್ದ ಹುಡುಗರು ಸಹ ಗೆದ್ದಿದ್ದಾರೆ. ಇವರಿಗೂ ಅವಕಾಶಗಳು ಬರುತ್ತಿವೆ. ಅರವಿಂದ್ ಅಯ್ಯರ್ ‘ಭೀಮಸೇನ ನಳ ಮಹಾರಾಜ’ ಹಾಗೂ ‘777 ಚಾರ್ಲಿ’ ಚಿತ್ರಗಳಲ್ಲಿ ಹೀರೋ…!
ಇದೀಗ ಇನ್ನೋರ್ವ ನಟ ಚಂದನ್ ಆಚಾರ್ ಹೀರೋ ಆಗುತ್ತಿದ್ದಾರೆ. ಮೈಸೂರಿನಲ್ಲಿ ಹುಟ್ಟಿ ಬೆಳೆದ ಚಂದನ್ ಒಳ್ಳೆಯ ಕಲಾವಿದ. ನಟನೆ ಇವರ ಕೈಹಿಡಿಯುತ್ತಿದೆ. ರಂಗಭೂಮಿ ಕಡೆಗೆ ಒಲವು ಮೂಡಿದ್ದರಿಂದ ‘ನಟನಾ’ತಂಡ ಸೇರಿ ತನ್ನೊಳಗಿನ ಕಲಾವಿದನಿಗೆ ಸುಂದರ ಆಕಾರ ನೀಡಿದವರು. ‘ಸಂಕ್ರಾಂತಿ’ , ‘ಮಲೆಗಳಲ್ಲಿ ಮದುಮಗಳು’ ನಾಟಕಗಳಲ್ಲಿ ಅಭಿನಯಿಸಿದ್ದ ಚಂದನ್ ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಪಾರ್ಟಿಯಲ್ಲದೆ ‘ರ್ಯಾಂಬೋ’ ‘ಮುಗುಳುನಗೆ’ ‘ದಯವಿಟ್ಟು ಗಮನಿಸಿ’ ಚಿತ್ರಗಳಿಗೂ ಬಣ್ಣ ಹಚ್ವಿದ್ದರು.
ಇದೀಗ ಆರ್ .ಬಾಬು ಅವರ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಚಂದನ್ ಆಚಾರ್ ನಾಯಕನಾಗಿ ಆಯ್ಕೆಯಾಗಿದ್ದಾರೆ.ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆರ್. ವಿಜಯ್ ಕುಮಾರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶಕ ಆರ್.ವೆಂಕಟೇಶ್ ಅವರು ನಿರ್ದೇಶಕ ಕೃಷ್ಣ ಹಾಗೂ ಆರ್ ಚಂದ್ರು ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.