ಧರ್ಮಸ್ಥಳದಿಂದ ವಾಪಸ್ ಬರುತ್ತಿದ್ದಾಗ ದುರ್ಘಟನೆ: ನಾಲೆಗೆ ಕಾರು ಬಿದ್ದು ತಾಯಿ-ಮಗ ದಾರುಣ ಸಾವು
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಲ್ಲನಘಟ್ಟ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಬೆಂಗಳೂರಿನ ದೇವನಹಳ್ಳಿಯ ನಿವಾಸಿಗಳಾದ ಮಂಜುನಾಥ್ ಕುಟುಂಬಸ್ಥರು ಹಾಗೂ ಸಂಬಂಧಿಕರೊಂದಿಗೆ KA-02-MT-2690 ನೋಂದಣಿ ಸಂಖ್ಯೆಯ ಸ್ವಿಫ್ಟ್ ಕಾರಿನಲ್ಲಿ ಧರ್ಮಸ್ಥಳಕ್ಕೆ ತೆರಳಿ ವಾಪಸ್ ಆಗುತ್ತಿದ್ದರು. ಈ ವೇಳೆ ಮಲ್ಲನಘಟ್ಟ ಗ್ರಾಮದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಹೇಮಾವತಿ ನಾಲೆಗೆ ಬಿದ್ದಿದೆ.ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಪ್ರಿಯಾಂಕ (30) ಮತ್ತು ಅವರ ಪುತ್ರ ವೈಭವ್ (ಒಂದೂವರೆ ವರ್ಷ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅಪಘಾತದಲ್ಲಿ ಮಂಜುನಾಥ್ ಸೇರಿದಂತೆ ಸಂಬಂಧಿಗಳಾದ ಚಂದನ್, ದಿಲೀಪ್ ಮತ್ತು ದೇವರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕಾರನ್ನು ನಾಲೆಯಿಂದ ಮೇಲಕ್ಕೆತ್ತಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



