ದರ್ಶನ್ ಸಂಕಷ್ಟ ದೂರವಾಗಲಿ ಎಂದು ಒಟಿಸಿ ರಸ್ತೆಯ ದರ್ಗಾ ಮೊರೆ ಹೋದ ವಿಜಯಲಕ್ಷ್ಮಿ
ಬೆಂಗಳೂರು: ನಟ ದರ್ಶನ್ ಎದುರಿಸುತ್ತಿರುವ ಸಂಕಷ್ಟಗಳು ದೂರವಾಗಲಿ ಎಂದು ಅವರ ಪತ್ನಿ ವಿಜಯಲಕ್ಷ್ಮಿ ದರ್ಗಾ ಮೊರೆ ಹೋಗಿದ್ದಾರೆ. ಬೆಂಗಳೂರಿನ ಒಟಿಸಿ ರಸ್ತೆಯಲ್ಲಿರುವ ದರ್ಗಾಕ್ಕೆ ಭೇಟಿ ನೀಡಿದ ಅವರು, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದಾರೆ.
ದರ್ಶನ್ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅವರ ಬಿಡುಗಡೆಗಾಗಿ ವಿಜಯಲಕ್ಷ್ಮಿ ಹಲವು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದೀಗ ದರ್ಗಾಕ್ಕೂ ತೆರಳಿ ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿರುವುದು ಗಮನ ಸೆಳೆದಿದೆ.
ದರ್ಶನ್ ವಿಚಾರದಲ್ಲಿ ವಿಜಯಲಕ್ಷ್ಮಿ ಮೌನ
ವಿಡಿಯೋ ಕಾಲ್ನಲ್ಲಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಹಾಗೂ ಪವಿತ್ರಾ ಗೌಡ ಮಾತನಾಡಿಕೊಂಡಿದ್ದ ವಿಚಾರ ಬಹಿರಂಗವಾದ ಬಳಿಕ ವಿಜಯಲಕ್ಷ್ಮಿ ಸಾರ್ವಜನಿಕವಾಗಿ ಮೌನವಾಗಿದ್ದರು ಎನ್ನಲಾಗಿದೆ. ಇದೀಗ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿರುವುದು ಚರ್ಚೆಗೆ ಕಾರಣವಾಗಿದೆ.
ಧನ್ವೀರ್ ಜೊತೆಗಿನ ವಿವಾದದ ನಡುವೆಯೇ ಭೇಟಿ
ಇತ್ತೀಚೆಗೆ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವೆ ವಾಗ್ವಾದ ನಡೆದಿತ್ತು. ಇಬ್ಬರ ನಡುವಿನ ಜಟಾಪಟಿ ಮತ್ತು ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಧನ್ವೀರ್ ವಿರುದ್ಧ ಮೂರು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿದ್ದವು.
ಈ ಪ್ರಕರಣದಲ್ಲಿ ಧನ್ವೀರ್ಗೆ ಕರ್ನಾಟಕ ಹೈಕೋರ್ಟ್ನಿಂದ ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ ಮೂರು ಎಫ್ಐಆರ್ಗಳ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ವಿಜಯಲಕ್ಷ್ಮಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿರುವುದು ಇದೀಗ ಸುದ್ದಿಯಾಗಿದೆ.



