ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಜಾಮೀನಿಗಾಗಿ ಮತ್ತೆ ಸುಪ್ರೀಂ ಮೊರೆ ಹೋದ ನಟ ದರ್ಶನ್
ನವದೆಹಲಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಜಾಮೀನು ಕೋರಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರ ಕಚೇರಿ ಮೂಲಕ ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಲಾಗಿದ್ದು, ಮೇ 4ರಂದು ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. ಜೈಲು ಸೇರಿದ ಎಂಟು ತಿಂಗಳ ಬಳಿಕ ಈ ಅರ್ಜಿ ಸಲ್ಲಿಸಲಾಗಿದೆ.
ಜಾಮೀನು ಅರ್ಜಿಯಲ್ಲಿ, ಪ್ರಕರಣದ ಟ್ರಯಲ್ ಪ್ರಾರಂಭವಾಗಿದ್ದರೂ ಸಾಕ್ಷಿಗಳ ವಿಚಾರಣೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಎಂಟು ತಿಂಗಳು ಕಳೆದರೂ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿಲ್ಲ. ಈ ವಿಳಂಬ ಮುಂದುವರಿದರೆ ಪ್ರಕರಣ ಮುಕ್ತಾಯಕ್ಕೆ ಇನ್ನೂ ಹಲವು ವರ್ಷಗಳು ಬೇಕಾಗಬಹುದು ಎಂದು ವಾದಿಸಲಾಗಿದೆ.
ದರ್ಶನ್ ಪರವಾಗಿ, ಟ್ರಯಲ್ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿ, ಜಾಮೀನು ಮಂಜೂರು ಮಾಡುವಂತೆ ಏಪ್ರಿಲ್ ಎರಡನೇ ವಾರದಲ್ಲಿ ಮನವಿ ಮಾಡಲಾಗಿದೆ.
ಪ್ರಕರಣದಲ್ಲಿ ಒಟ್ಟು 273 ಸಾಕ್ಷಿಗಳಿದ್ದು, ಟ್ರಯಲ್ ಆರಂಭವಾದ ಬಳಿಕ ಇದುವರೆಗೆ ಕೇವಲ 15 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ರೇಣುಕಾಸ್ವಾಮಿ ಅವರ ತಂದೆ-ತಾಯಿ ಹೊರತುಪಡಿಸಿ ಬಹುತೇಕ ಮಹಜರು ಸಾಕ್ಷಿಗಳ ವಿಚಾರಣೆಯಷ್ಟೇ ನಡೆದಿರುವುದಾಗಿ ತಿಳಿದುಬಂದಿದೆ.
ಇದೇ ವೇಳೆ, ಟ್ರಯಲ್ ಅವಧಿಯಲ್ಲಿ ಆರೋಪಿಗಳ ಪರವಾಗಿ ಹಲವು ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿದ್ದು, ವಿಚಾರಣೆಯಲ್ಲಿ ವಿಳಂಬಕ್ಕೆ ಕಾರಣವಾಗಿವೆ. ಹಾಸಿಗೆ-ದಿಂಬು ಸೌಲಭ್ಯ, ಮನೆ ಊಟ, ಓಪನ್ ಕೋರ್ಟ್ ಹಾಜರು, ಕುಟುಂಬ ಸದಸ್ಯರೊಂದಿಗೆ ಪ್ರತ್ಯೇಕ ಭೇಟಿಗೆ ಅವಕಾಶ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಅರ್ಜಿಗಳನ್ನು ಸಲ್ಲಿಸಲಾಗಿದೆ.
ಈ ಹಿಂದೆ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ಆರೋಪಿಗಳ ಜಾಮೀನು ರದ್ದುಪಡಿಸಿ ತಕ್ಷಣ ಶರಣಾಗುವಂತೆ ಸೂಚಿಸಿತ್ತು. ಅದರಂತೆ ಜೈಲು ಸೇರಿದ್ದ ದರ್ಶನ್, ಇದೀಗ ಮಧ್ಯಂತರ ಜಾಮೀನು ಕೋರಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ.



