ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

0
98

ರಮೇಶ್ ಆಗ ತಾನೇ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದಿದ್ದ. ಅವನ ಅಪ್ಪ ಅಮ್ಮ ಅವನನ್ನು ಅದೆಷ್ಟು ಕಷ್ಟಪಟ್ಟು ಸಾಕಿದ್ರು, ಓದಿಸಿದ್ರು ಅನ್ನೋದು ಅವನ ಕಣ್ಣಮುಂದೆಯೇ ಇತ್ತು..! ನಾನು ಒಳ್ಳೇ ಕೆಲಸಕ್ಕೆ ಸೇರಬೇಕು, ಚೆನ್ನಾಗಿ ದುಡೀಬೇಕು ಅಂತ ಡಿಸೈಡ್ ಮಾಡಿಕೊಂಡೇ ರಾಜಧಾನಿಗೆ ಕಾಲಿಟ್ಟಿದ್ದ. ಅವನ ಸೀನಿಯರ್ ಒಬ್ಬರ ರೂಮಲ್ಲಿ ಹಂಗೂಹಿಂಗೂ ಸೇರಿಕೊಂಡ. ಈಗ ಅವನಿಗಿರೋ ಟಾರ್ಗೆಟ್, ಒಂದೊಳ್ಳೇ ಕಂಪನಿಯಲ್ಲಿ ಕೆಲಸ ಗಿಟ್ಟಿಸೋದು. ಇಂಜಿನಿಯರಿಂಗ್ ಮುಗಿದಿದೆ, ತಕ್ಕ ಮಟ್ಟಿಗೆ ಒಳ್ಳೆಯ ಮಾರ್ಕ್ಸ್ ಸಹ ಬಂದಿದೆ. ಇಷ್ಟು ದೊಡ್ಡ ಬೆಂಗಳೂರಲ್ಲಿ ನಂಗೊಂದು ಕೆಲಸ ಸಿಗಲ್ವಾ ಅಂತ ಬಹಳ ಆತ್ಮವಿಶ್ವಾಸದಲ್ಲೇ ಇದ್ದ. ಆದ್ರೆ ಮೂರ್ನಾಲ್ಕು ಕಂಪನಿಯ ಇಂಟರ್ ವ್ಯೂ ಮುಗಿಯೋದೊಳಗೆ ಅವನ ಆತ್ಮವಿಶ್ವಾಸ ಕುಗ್ಗಿ ಹೋಗಿತ್ತು..! ಅಪ್ಪ ಜೇಬಲ್ಲಿಟ್ಟು ಕಳಿಸಿದ್ದ ಎರಡು ಸಾವಿರ ರೂಪಾಯಿಯಲ್ಲಿ ಮುನ್ನೂರು ರೂಪಾಯಿ ಮಾತ್ರ ಉಳಿದಿತ್ತು..!
ಮತ್ತೊಬ್ಬ ಸುರೇಶ್, ಧಾರವಾಡದಿಂದ ಬೆಂಗಳೂರಿಗೆ ಬಸ್ಸು ಹತ್ತಿದ್ದ ಅವನೂ ಇಂಜಿನಿಯರಿಂಗ್ ಮುಗಿಸಿದವನೇ, ಅವನದೂ ಬಡಕುಟುಂಬವೇ..! ಆದ್ರೆ ಇವನು ಬರುವಾಗಲೇ ನಿರ್ಧಾರ ಮಾಡಿದ್ದ, ಮೂರ್ನಾಲ್ಕು ಕಂಪನಿಯಲ್ಲಿ ನನ್ನ ಓದಿಗೆ ಸರಿಯಾಗೋ ತರಹದ ಕೆಲಸ ಹುಡುಕ್ತೀನಿ. ಸಿಕ್ಕಿಲ್ಲ ಅಂದ್ರೆ ಬದುಕೋಕೆ, ಸಂಬಳಕ್ಕೆ ಯಾವ ಕೆಲಸ ಆದ್ರೂ ಪರ್ವಾಗಿಲ್ಲ ಮಾಡ್ತೀನಿ ಅಂತ..! ಅವನೂ ಬೆಂಗಳೂರಿಗೆ ಬಂದು ಅಲ್ಲಿ ಇಲ್ಲಿ ಅಡ್ಜಸ್ಟ್ ಮಾಡ್ಕೊಂಡು ಜೀವನ ಶುರು ಮಾಡ್ದ. ಅಲ್ಲಿ ಇಲ್ಲಿ ಇಂಟರ್ ವ್ಯೂ ಅಟೆಂಡ್ ಮಾಡ್ದ. ಆದ್ರೆ ಅವನಿಗೂ ಎಲ್ಲೂ ಕೆಲಸ ಸಿಕ್ಲಿಲ್ಲ..! ಇವನ ಜೇಬಲ್ಲಿ ಈ ಉಳಿದಿರೋದು ಅದೇ ಮುನ್ನೂರು ರೂಪಾಯಿ..!
ಈ ಎರಡೂ ಕಥೆಗಳು ಈಗ ಅರ್ಧಕ್ಕೆ ನಿಂತಿವೆ. ಮುಂದೆ ಇವರಿಬ್ಬರೂ ಏನು ಮಾಡ್ತಾರೆ ಅನ್ನೋದೇ ಅವರವರ ಜೀವನ ನಿರ್ಧರಿಸೋದು. ಈಗ ಸದ್ಯಕ್ಕೆ ಅವರ ಕಥೆ ಮುಂದುವರಿಸ್ತೀನಿ.
ರಮೇಶ್ ಜೇಬಲ್ಲಿ ಉಳಿದಿರೋ ಮುನ್ನೂರು ರೂಪಾಯಿ ಭಯ ಹುಟ್ಟಿಸಿತ್ತು. ಇದಾದ ಮೇಲೆ ಊಟ ಹೇಗೆ ಮಾಡ್ಲಿ..? ಬಸ್ ಪಾಸಿಗೆ ಹೇಗೆ ದುಡ್ಡು ಹೊಂಚಲಿ..? ಎಷ್ಟು ದಿನ ಅಂತ ಸೀನಿಯರ್ ರೂಮಲ್ಲಿ ಇರಲಿ..? ಅಪ್ಪ ಅಮ್ಮಂಗೆ ಮತ್ತೆ ದುಡ್ಡು ಕಳ್ಸಿ ಅಂದ್ರೆ ಬೇಜಾರು ಮಾಡ್ಕೋತಾರೆ..! ಹೀಗೆ ಅವನ ಮನಸ್ಸಲ್ಲಿ ಬರೀ ನಕಾರಾತ್ಮಕ ಯೋಚನೆಗಳೇ ಬರ್ತಿತ್ತು..! ಈ ಕಡೆ ಸುರೇಶ್ ಜೇಬಲ್ಲಿಂದ ಮುನ್ನೂರು ರೂಪಾಯಿ ನೋಡಿ, `ಅರೆ, ಇನ್ನು ಕೈಲಿ ಇರೋದೇ ಇಷ್ಟಾ..? ಇನ್ನು ಈ ಇಂಜಿನಿಯರ್ ಕೆಲಸ ಹುಡ್ಕೊಂಡ್ ಕೂತ್ರೆ ಇದೂ ಖಾಲಿಯಾಗಿಬಿಡುತ್ತೆ. ಅಪ್ಪಅಮ್ಮನಿಗೆ ಮತ್ತೆ ದುಡ್ಡು ಕೇಳದೇ ನಾನೇ ಸ್ವಲ್ಪ ದುಡ್ಡು ದುಡಿಯೋಕೆ ಯಾವ್ದಾದ್ರೂ ಕೆಲಸಕ್ಕೆ ಸೇರ್ಕೋಬೇಕು ಅಂತ ಡಿಸೈಡ್ ಮಾಡ್ದ..! ಅವನ ಬುದ್ಧಿವಂತ ತಲೆಯಲ್ಲಿ ಏನೇನೋ ಯೋಚನೆ ಬಂತು. ಅವನು ಹೋಗ್ತಿದ್ದ ದಾರಿಯಲ್ಲಿ ಒಂದು ದೊಡ್ಡ ಹೋಟೆಲ್ ಎದುರಿಗೆ ಒಂದು ಬೋರ್ಡ್ ಕಾಣಿಸ್ತು. ` ಸಪ್ಲೈಯರ್ ಕೆಲಸ ಖಾಲಿ ಇದೆ’ ಅಷ್ಟೆ ಹಿಂದೆಮುಂದೆ ನೋಡದೇ ಹೋಟೆಲ್ ಒಳಗೆ ಎಂಟ್ರಿ ಕೊಟ್ಟ. ತನ್ನ ಇಂಜಿನಿರಿಂಗ್ ಬಗ್ಗೆ ಏನೂ ಹೇಳಿಕೊಳ್ಳದೇ ಆ ಕೆಲಸ ಗಿಟ್ಟಿಸಿಕೊಂಡ. ತಿಂಗಳಿಗೆ ಹತ್ತು ಸಾವಿರ ಸಂಬಳ. ಹೋಟೆಲಲ್ಲಿ ಕೆಲಸ ಮಾಡೋರಿಗೆ ಊಟ ಫ್ರೀ, ರಾತ್ರಿ ಮಲಗೋಕೆ ಜಾಗಾನೂ ಫ್ರೀ..! ಇನ್ನೇನು ಬೇಕು..? ಅಷ್ಟೆ ಸುರೇಶ್ ಅವತ್ತಿಂದಲೇ ಕೆಲಸ ಶುರು ಮಾಡಿಕೊಂಡ..! ಒಂದು ತಿಂಗಳು ಸಪ್ಲೈಯರ್ ಕೆಲಸ ಮಾಡಿದ. ಹತ್ತು ಸಾವಿರ ಸಂಬಳ ಬಂತು, ದಿನವೂ ಬರ್ತಿದ್ದ ಟಿಪ್ಸ್ ಅವನ ಖರ್ಚಿಗೆ ಸಾಲ್ತಿತ್ತು..! ಬಂದ ಹತ್ತು ಸಾವಿರದಲ್ಲಿ 5 ಸಾವಿರ ಅಪ್ಪ ಅಮ್ಮನಿಗೆ ಕಳಿಸ್ದ..! ಕೆಲಸ ಸಿಕ್ಕಿದೆ ಅಂತ ಹೇಳಿ ಅಪ್ಪಅಮ್ಮನಿಗೂ ಖುಷಿಪಡಿಸ್ದ..! ಇರೋ ಐದು ಸಾವಿರದಲ್ಲಿ ವಾರದಲ್ಲಿ ಒಂದು ರಜಾದ ದಿನ ರೆಡಿಯಾಗಿ ಆ ಕಂಪನಿ, ಈ ಕಂಪನಿ ಅಂತ ತನ್ನ ವಿದ್ಯಾಭ್ಯಾಸಕ್ಕೆ ಸರಿಹೊಂದೋ ಕೆಲಸ ಹುಡುಕಿದ. ಕೊನೆಗೊಂದು ದಿನ ಅವನಿಗೆ ಯೋಗ್ಯ ಕೆಲಸವೂ ಸಿಕ್ತು.! ಅವನೀಗ ಕಂಪನಿಯೊಂದರಲ್ಲಿ ಇಂಜಿನಿಯರ್..!
ಈ ಕಡೆ ರಮೇಶ್, ಊರು ಸೇರಿ ತಿಂಗಳಾಗಿದೆ.! ಮುನ್ನೂರು ರೂಪಾಯಿ ಉಳಿದಿರೋದು ನೋಡಿ ಕಂಗಾಲಾಗಿದ್ದ ರಮೇಶ್, ಇದೂ ಖಾಲಿಯಾದ್ರೆ ಊರಿಗೆ ಹೋಗೋಕೂ ದುಡ್ಡಿರಲ್ಲ ಅಂತ ಅವತ್ತು ರಾತ್ರಿಯೇ ಮತ್ತೆ ಊರಿಗೆ ಪ್ರಯಾಣ ಬೆಳೆಸಿದ್ದ. ಅವನಪ್ಪ ಅಮ್ಮನಿಗೆ ಅಷ್ಟು ಓದಿಸಿದ್ರೂ ಮಗನಿಗೆ ಕೆಲಸ ಸಿಕ್ಲಿಲ್ಲ ಅನ್ನೋ ನೋವು. ಇವನು ಊರ ಕಟ್ಟೆಯ ಮೇಲೆ ತನ್ನ ಬೆಂಗಳೂರು ಅನುಭವ ಹೇಳಿಕೊಂಡು ಹರಟೆ ಹೊಡೆಯೋದ್ರಲ್ಲಿ ನಿರತನಾಗಿದ್ದಾನೆ..!
ಈ ಎರಡೂ ಸ್ಟೋರಿಗಳಲ್ಲಿ ಎರಡು ಬೇರೆಯದೇ ಪಾತ್ರಗಳಿವೆ, ಭಾವನೆಗಳಿದೆ..! ಇಬ್ಬರ ಪರಿಸ್ಥಿತಿ ಒಂದೇ ಆದರೂ ಇಬ್ಬರ ದಾರಿ ಒಂದೇ ಆಗಿರಲಿಲ್ಲ, ಇಬ್ಬರ ಆಲೋಚನೆ ಒಂದೇ ಆಗಿರಲಿಲ್ಲ..! ಮುಂದಿನ ಕಷ್ಟಕ್ಕೆ ಹೆದರಿ ರಮೇಶ್ ಸೋಲೊಪ್ಪಿಕೊಂಡು ವಾಪಸ್ ಹೋದ್ರೆ, ಈಗ ಕಷ್ಟಪಟ್ರೆ ಮುಂದೆ ಸುಖ ಸಿಕ್ಕೇಸಿಗುತ್ತೆ ಅಂತ ಗೆದ್ದು ಬೀಗಿದವನು ಸುರೇಶ್..!
ಈ ಬದುಕು ನಮಗೆ ಎಲ್ಲವನ್ನೂ ಕಲಿಸುತ್ತೆ. ಆದ್ರೆ ಕಲಿಯೋ ಮನಸ್ಸಿರಬೇಕು ಅಷ್ಟೆ..! ಮುನ್ನೂರು ರೂಪಾಯಿ ಜೇಬಲ್ಲಿದ್ದಾಗ ಇಬ್ಬರೂ ಯೋಚಿಸಿದ ರೀತಿಯೇ ಅವರ ಬದುಕಿನ ಪಥ ಬದಲಿಸಿದ್ದು, ರಮೇಶ್ ಯೋಚಿಸಿದಂತೆ ಸುರೇಶ್ ಸಹ ಯೋಚಿಸಿದ್ರೆ ಇವತ್ತು ಅವನೂ ಊರಿನ ಕಟ್ಟೆಮೇಲೆ ಹರಟೆ ಹೋಡಿತಿರ್ತಿದ್ದ. ನಿಮಗೆ ಬದುಕುವ ಛಲವಿದ್ದರೆ ಮಾತ್ರ ಸಾಲದು, ಅದಕ್ಕೆ ಅದೆಂಥದ್ದೇ ಅಡೆತಡೆಗಳು ಬಂದ್ರೂ ನುಗ್ಗುವ ಬಲವಿರಬೇಕು. ನಾನು ಇಂಜಿನಿಯರಿಂಗ್ ಓದಿ ಹೋಟೆಲ್ ಸಪ್ಲೇಯರ್ ಆಗಬೇಕ ಅಂತ ಯೋಚಿಸೋರು ಅದೆಷ್ಟೋ ಜನ.! ಗೆಳೆಯರೇ, ಬೆಂಗಳೂರಿನ ಯಾವುದೇ ಫುಡ್ ಜಾಯಿಂಟ್, ಡೆಲಿವರಿ ಬಾಯ್ಸ್ ಮಾತಾಡಿಸಿ, ಹತ್ತರಲ್ಲಿ ಕನಿಷ್ಟ ಮೂರು ಜನ ಇಂಜಿನಿಯರಿಂಗ್ ಮುಗಿಸಿ ಬಂದಿರ್ತಾರೆ. ಇವತ್ತು ಐಟಿ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸೋದು ಸುಲಭವಿಲ್ಲ.. ಇದ್ದರೂ ಕೈತುಂಬಾ ಸಂಬಳ ಸಿಗೋದು ಕಷ್ಟ. ಇವತ್ತು ಒಬ್ಬ ಫ್ರೆಶರ್ ಇಂಜಿನಿಯರ್ ದುಡಿಯೋದಕ್ಕಿಂತ ಹೆಚ್ಚು ಸಂಬಳವನ್ನು ಒಬ್ಬ ಡೆಲವರಿ ಬಾಯ್ ದುಡೀತಾನೆ. ಹೌದು, ಭಾರತದಲ್ಲಿ `ಡಿಗ್ನಿಟಿ ಆಫ್ ಲೇಬರ್’ ಇಲ್ಲದಿರೋದೇ ವಿದ್ಯಾವಂತರಾದವರು ಹಾಗೆಲ್ಲಾ ಯೋಚಿಸೋಕೆ ಕಾರಣ. ಆದ್ರೆ ಓದಿಗೂ, ಕೆಲಸಕ್ಕೂ ಸಂಬಂಧವೇ ಇಲ್ಲದ ಹಾಗೆ ಬದುಕ್ತಾ ಇರೋರು ಅದೆಷ್ಟೋ ಜನ..! ಇದು ನಾನು ಮಾಡ್ಬೇಕಾ..? ಇದು ನನ್ನ ಎಜುಕೇಶನ್ ಲೆವೆಲ್ಲಿಗೆ ಸೆಟ್ ಆಗುತ್ತಾ ಅಂತೆಲ್ಲಾ ಯೋಚಿಸೋದು ಬಿಡಿ..! ಜೀವನ ಚೆನ್ನಾಗಿರಬೇಕು, ಕಷ್ಟಪಟ್ಟು ಓದಿಸಿದ ಅಪ್ಪಅಮ್ಮನನ್ನು ಖುಷಿಯಾಗಿಡಬೇಕು ಅಂತ ಯೋಚಿಸೋರು ಸುರೇಶನ ಸೂತ್ರ ಪಾಲಿಸಿ. ಇಲ್ಲ ಅಂತಾದ್ರೆ ರಮೇಶನಂತೆ ಹೆತ್ತವರಿಗೆ ಹೊರೆಯಾಗಿ..!
ನಿಮ್ಮ ವಿದ್ಯಾಭ್ಯಾಸಕ್ಕೆ ತಕ್ಕ ಕೆಲಸ ಖಂಡಿತ ಸಿಗಬೇಕು..! ಹಾಗಂತ ಅದರ ಹಿಂದೆ ಬಿದ್ದು ಇಷ್ಟು ದಿನ ನಿಮಗೆ ವಿಧ್ಯಾಭ್ಯಾಸ ಕೊಡಿಸಿದ ನಿಮ್ಮ ಅಪ್ಪಅಪ್ಪನ ಶ್ರಮ ವ್ಯರ್ಥವಾಗಬಾರದು..! `ಕೆಲಸ ಮಾಡ್ಕೊಂಡೇ ಕೆಲಸ ಹುಡುಕಿ..!’ ಆದ್ರೆ ಯಾವ ಕೆಲಸವೂ ಮಾಡದೇ `ಅದೇ’ ಕೆಲಸವನ್ನು ಹುಡುಕಬೇಡಿ..!

  •  ಕೀರ್ತಿ ಶಂಕರಘಟ್ಟ

ಮನೆಯಿಂದ ಹೊರಗಡೆ ಕಾಲಿಡಲ್ಲ.. ಆದ್ರೆ ಕೋಟಿ ಕೋಟಿ ದುಡೀತಾನೆ..! ಯೂಟ್ಯೂಬ್ ಪ್ರಪಂಚದಲ್ಲಿ ಇವನೇ ಸಖತ್ ಶ್ರೀಮಂತ..!

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ಇವರು ದಿನನಿತ್ಯ 100 ಮಂದಿಗೆ ಅನ್ನ ನೀಡುವ ಮಹಾದಾನಿ..! ಹಸಿದವರ ಹಸಿವನ್ನು ನೀಗಿಸೋ ಅನ್ನದಾತ ಅಜರ್..!

ಈ ಕನ್ನಡತಿ ಆಟೋ ಓಡಿಸುತ್ತಲೇ ಐಎಎಸ್ ಗೆ ತಯಾರಿ ನಡೆಸುತ್ತಿದ್ದಾರೆ..!

LEAVE A REPLY

Please enter your comment!
Please enter your name here