ಸರ್ಕಾರಕ್ಕೆ ಎಚ್ಚರ..! ಸಾವಿನ ಸಂಖ್ಯೆ 19 ಮೀರಿದೆ; ಇನ್ನೆಷ್ಟಾಗಬೇಕು..?

0
56

 

ಸಂಪೂರ್ಣ ವಿಚಾರವನ್ನು ಚರ್ಚಿಸುವ ಮುನ್ನ, ಮಾದ್ಯಮಲೋಕದ ಅಭಾಸಗಳ ಬಗ್ಗೆ ಹೇಳಲೇಬೇಕು. ಸಮಾಜಮುಖಿ ಚಿಂತನೆ, ಸಾಮಾಜಿಕ ದೃಷ್ಠಿಕೋನ ಹೊಂದಬೇಕಿದ್ದ ಮಾದ್ಯಮ ಇವತ್ತು ಹಲವು ಆರೋಪಗಳಿಗೆ ತುತ್ತಾಗುತ್ತಿವೆ. ಅವಕ್ಕೆ ಕಾರಣ ಯಾವುದೇ ಪಿತೂರಿಯಲ್ಲ. ಅವುಗಳ ಸ್ವಯಂಕೃತಪರಾಧವೇ ಹೆಚ್ಚಿರುತ್ತದೆ. ನಿರ್ದಿಷ್ಟ ಘಟನೆಯನ್ನು ಚರ್ಚಿಸುವುದಕ್ಕಿಂತ, ಜಡ್ಜ್ಮೆಂಟ್ ಕೊಡುವ ಮಟ್ಟಕ್ಕೆ ಮಾದ್ಯಮ ಹದ್ದುಮೀರಿ ಹೋಗಿದೆ. ಸರ್ಕಾರದ ಆಡಳಿತ ಯಂತ್ರದ ಜೊತೆ ಸೇರಿ ಮೀಡಿಯಾ ಎಥಿಕ್ಸ್ ಅನ್ನೇ ಮರೆಯುತ್ತಿದೆ ಎಂದರೇ ಸುಳ್ಳಲ್ಲ. ಅದಕ್ಕೆ ಜೆಎನ್ಯು ಪ್ರಕರಣಕ್ಕಿಂತ ಬೇರೆ ದೃಷ್ಟಾಂತ ಬೇಕಿಲ್ಲ.

ಇನ್ನು ಸುಪ್ರಿಂ ಕೋರ್ಟ್ ಖಂಡಾತುಂಡವಾಗಿ ಕೆಲವು ಪ್ರಬಲ ಸಮುದಾಯಗಳಿಗೆ ಮೀಸಲಾತಿ ಕೊಡಲಾಗುವುದಿಲ್ಲ ಎಂದರೂ, ಈ ದೇಶದಲ್ಲಿ ಮೀಸಲಾತಿ ಹೋರಾಟಗಳು ನಡೆಯುತ್ತಿವೆ. ಹಿಂಸಾತ್ಮಕ ಹೋರಾಟಕ್ಕೆ ಬೇಸತ್ತು ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ಕೊಡುತ್ತದೆ. ಇಂತಹ ಹಲವು ಹೋರಾಟಗಳಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡಿದ್ದು ಹರ್ಯಾಣದ ಜಾಟ್ ಸಮುದಾಯದ ಹೋರಾಟ. ಒಂದು ಹಂತದಲ್ಲಿ ವಿಕೋಪಕ್ಕೆ ಹೋಗಿ ಸಾವುನೋವುಗಳಿಗೆ ಕಾರಣವಾಯಿತು. ನೂರಾರು ಕೋಟಿ ಆಸ್ತಿಪಾಸ್ತಿ ನಷ್ಟವಾಯಿತು.

ಹೀಗಿರುವಾಗ ಜಾಟರ ಹೋರಾಟದ ಸಮಯದಲ್ಲಿ ನಲವತ್ತು ಮಂದಿ ಪುಂಡರು ಹತ್ತು ಮಂದಿ ಮಹಿಳೆಯರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಎಂಬ ಸುದ್ದಿ ದೇಶವನ್ನು ಬೆಚ್ಚಿಬೀಳಿಸಿತ್ತು. ಹೋರಾಟದ ನೆಪದಲ್ಲಿ ಕೆಲವು ಪುಂಡರು ಹೀನಾ ಕೃತ್ಯ ನಡೆಸಿದ್ದು, ಇಡೀ ಹೋರಾಟ ಯೂಟರ್ನ್ ತೆಗೆದುಕೊಂಡಿತ್ತು. ಎಲ್ಲೋ ಒಂದು ಕಡೆ ಜಾಟರ ಹೋರಾಟವನ್ನು ಹತ್ತಿಕ್ಕಲು ಪ್ರಿಪ್ಲಾನ್ ನಡೆದಿದೆಯಾ..? ಅದಕ್ಕೆ ಮಾದ್ಯಮಗಳು ಸಾಥ್ ಕೊಟ್ಟಿವೆಯಾ..? ಎಂಬ ಅನುಮಾನಗಳು ಮೂಡಿತ್ತು. ಅದಕ್ಕೆ ಕಾರಣ ಈ ಹಿಂದೆ ಪಟೇಲರಿಗೆ ಮೀಸಲಾತಿ ಕೊಡುವಂತೆ ಬೀದಿಗಿಳಿದು ಗುಜರಾತ್ನಲ್ಲಿ ಕಿಚ್ಚು ಹತ್ತಿಸಿದ್ದ ಹಾರ್ದಿಕ್ ಪಟೇಲ್ನನ್ನು ಹೆಣ್ಣೊಬ್ಬಳ ವಿಚಾರದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿತ್ತು. ಮಾತು ಕೇಳದವರನ್ನು ಈ ರೀತಿಯಾಗಿ ಸುಮ್ಮನಾಗಿಸೋದು ಸರ್ಕಾರದ ಹುನ್ನಾರ..! ಎನ್ನಲಾಗುತ್ತದೆ.

ಹಾಗಂತ ಅಲ್ಲಿ ಗ್ಯಾಂಗ್ರೇಪ್ ನಡೆದೇ ಇಲ್ಲ, ಎಲ್ಲವೂ ಸರ್ಕಾರದ ಪ್ರಿಪ್ಲಾನ್ ಎನ್ನಲಾಗುವುದಿಲ್ಲ. ತನಿಖೆ ಸಂಪೂರ್ಣವಾಗಿ ನೈಜ ವರದಿ ಬರುವವರೆಗೂ ಯಾವುದೇ ಅಂಶವನ್ನು ಸತ್ಯ, ಸುಳ್ಳು ಎಂದು ವರ್ಗೀಕರಿಸಲಾಗುವುದಿಲ್ಲ. ಆದರೆ ಎಲ್ಲಕ್ಕೂ ಮುನ್ನ ಹೀಗಾಗಿದ್ದು ನಿಜ ಎಂದು ಬೊಬ್ಬಿರಿಯುವ ಈ ಸಮಾಜದ ದುಷ್ಟ ಶಕ್ತಿಗಳ ಅಹಂಕಾರಕ್ಕೆ ಕೊಡಲಿ ಏಟು ಬೀಳಬೇಕಿದೆ. ಇಲ್ಲವೆಂದರೇ ಈ ದೇಶದಲ್ಲಿ ಕೆಮ್ಮುವುದಕ್ಕೂ ದೇಶದ್ರೋಹದ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆ.

ಇದೀಗ ಜಾಟರು ಸರ್ಕಾರಕ್ಕೆ ಮಾರ್ಚ್ ಹದಿನೆಂಟಕ್ಕೆ ಕೊಟ್ಟ ಗಡುವು ಮುಗಿದಿದೆ. ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ಹಿಂದೆ ನಡೆದಿದ್ದ ಹಿಂಸಾತ್ಮಕ ಹೋರಾಟದಲ್ಲಿ ಹತ್ತೊಂಬತ್ತು ಮಂದಿ ಸಾವಿಗೀಡಾಗಿ, ನೂರಾರು ಕೋಟಿ ಆಸ್ತಿಪಾಸ್ತಿ ನಷ್ಟವಾಗಿತ್ತು. ಹೆದರಿದ ಸರ್ಕಾರ ಜಾಟರ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿತ್ತು. ಹಾಗಾಗಿ ಜಾಟ್ ಸಮುದಾಯದವರು ಸರ್ಕಾರಕ್ಕೆ ಮಾರ್ಚ್ ಹದಿನೆಂಟರ ಗಡುವು ವಿಧಿಸಿತ್ತು. ಆದರೆ ಇದೀಗ ಸರ್ಕಾರ ಮಾತು ತಪ್ಪಿದೆ ಎಂದು ದೊಡ್ಡಮಟ್ಟದ ಹೋರಾಟಕ್ಕೆ ಜಾಟರು ಸಿದ್ದವಾಗಿದ್ದಾರೆ.

ನೇರವಾಗಿ ಮೀಸಲಾತಿಯ ವಿಚಾರಕ್ಕೆ ಬರುವುದಾದರೇ, ದೇಶದಲ್ಲಿ ಪ್ರಬಲ ಸಮುದಾಯಗಳಾದ, ಮೀಸಲಾತಿಗಾಗಿ ಬೀದಿಗಿಳಿದಿರುವ ಪಟೇಲ್, ಕಾಪು, ಗುಜ್ಜರ್, ಜಾಟ್- ಇವರ್ಯಾರು ತೀರಾ ಹಿಂದುಳಿದವರಲ್ಲ. ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆ. ಆದರೂ ಅವರಿಗೆ ಮಿಸಲಾತಿ ಬೇಕು. ಇಂತಹ ಒಬಿಸಿ ಮಹತ್ವಾಕಾಂಕ್ಷೆಗಳು ಅವರಲ್ಲಿ ಮೊಳಕೆಯೊಡೆಯುವುದಕ್ಕೆ ಕಾರಣ ರಾಜಕಾರಣ. ಎಲ್ಲಾ ಪಕ್ಷಗಳು ಅಧಿಕಾರಕ್ಕಾಗಿ ಒಂದಲ್ಲ ಒಂದು ಸಂದರ್ಭದಲ್ಲಿ ಮೀಸಲಾತಿ ಭರವಸೆಗಳ ಸುರಿಮಳೆಯನ್ನೇ ಸುರಿಸಿ ಅಧಿಕಾಕ್ಕೇರಿದ ನಂತರ ಸುಮ್ಮನಾದರು. ಅದರ ಪರಿಣಾಮವೇ ಪ್ರತಿಭಟನೆ, ಹೋರಾಟ, ಹಿಂಸಾಪ್ರವೃತ್ತಿ. ಈ ದೇಶ ಸುಧಾರಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲ.

ಅಷ್ಟಕ್ಕೂ ಯಾವ ಕಾರಣಕ್ಕಾಗಿ ಮೀಸಲಾತಿ ಕೊಡಬೇಕು ಎಂಬ ಸರ್ಕಾರದ ಪ್ರಶ್ನೆಗೆ ಇವರ್ಯಾರ ಬಳಿಯೂ ಉತ್ತರವಿಲ್ಲ. ಮೀಸಲಾತಿ ನೀಡಿ ತಮ್ಮ ಸಮುದಾಯವನ್ನು ಮೇಲೆತ್ತಬೇಕಾದ ಸನ್ನಿವೇಶ ವರ್ತಮಾನದಲ್ಲಿ ಇದೆಯೇ ಎಂಬ ಪ್ರಶ್ನೆಗೂ ಅವರು ಉತ್ತರ ಕೊಡುವ ಸ್ಥಿತಿಯಲ್ಲಿಲ್ಲ. ತಮ್ಮ ಜನಬಲವನ್ನು, ಹಣಬಲವನ್ನು ಮುಂದಿಟ್ಟುಕೊಂಡು ಅವರು ಸರ್ಕಾರವನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾರಾ..? ಖಡಾಖಂಡಿತವಾಗಿ ಹೌದು ಎಂದು ಹೇಳೋದು ಕಷ್ಟ. ಆದರೆ ಮೇಲ್ವರ್ಗದ ಈ ಚಳುವಳಿಯ ಹಿಂದೆ ರಾಜಕಿಯ ದುರುದ್ದೇಶವಿದೆ ಎಂಬುದೇ ಹಕೀಕತ್ತಾಗಿದೆ. ಗುಟ್ಟಾಗಿ ಕೆಲ ಪ್ರಬಲ ಸಂಘಟನೆಗಳು ಬೆಂಬಲ ನೀಡುತ್ತಿರುವುದು ಮಾಧ್ಯಮಗಳಲ್ಲೇ ಚರ್ಚೆಯಾಗುತ್ತಿವೆ. ಹಾಗಿದ್ದರೇ ಮೀಸಲಾತಿ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿ, ಕಟ್ಟಕಡೆಗೆ ಯಾರಿಗೂ ಮೀಸಲಾತಿ ಬೇಡ ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದು ರಾಜಕಾರಣದ ಉದ್ದೇಶವಾ..? ಅದೂ ಅನಿಚ್ಚಳ. ಅವರ ಅಂತಿಮ ಗುರಿ, ಸಾಮಾಜಿಕ ನ್ಯಾಯವನ್ನು ಇಲ್ಲವಾಗಿಸುವುದಾ..? ಖಾತ್ರಿಯಿಲ್ಲ. ಮೇಲ್ವರ್ಗಕ್ಕೂ ಮೀಸಲಾತಿ ನೀಡಿದ ಬಳಿಕ, ದಲಿತರಿಗೆ ನೀಡುವ ಮೀಸಲಾತಿಗೆ ಏನರ್ಥ ಉಳಿಯುತ್ತೆ ಹೇಳಿ..?

ಮೇಲ್ನೋಟಕ್ಕೆ ಇದೊಂದು ತುಳಿತಕ್ಕೊಳಗಾದವರ ಚಳುವಳಿಯಂತೆ ಭಾಸವಾದರೂ, ಆಳದಲ್ಲಿ ತುಳಿತಕ್ಕೊಳಗಾದವರ ವಿರುದ್ಧ ನಡೆಯುತ್ತಿರುವ ಚಳುವಳಿ ಎನ್ನಬಹುದು. ಒಂದೆಡೆ ದೇಶಾದ್ಯಂತ ದಲಿತರ ಮೇಲೆ, ಶೋಷಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿವೆ. ಮೀಸಲಾತಿ ದಲಿತರಿಗೆ ನ್ಯಾಯ ಕೊಡುತ್ತಿಲ್ಲ ಎನ್ನುವ ಕೂಗು ಜೋರಾಗಿದೆ. ಇದರ ಬೆನ್ನಿಗೇ ಇರುವ ಮೀಸಲಾತಿಯನ್ನೇ ತೆಗೆದು ಹಾಕಿ ಅವರನ್ನ ಇನ್ನಷ್ಟು ಅತಂತ್ರರನ್ನಾಗಿಸುವ, ಅವರ ಧ್ವನಿಯನ್ನು ಸಂಪೂರ್ಣ ಅಡಗಿಸುವ ಭಾಗವಾಗಿ, ಮೇಲ್ವರ್ಗದ ಜನ ಮೀಸಲಾತಿಗಾಗಿ ಬೀದಿಗಿಳಿದಿರಬಹುದಾ..? ಇದೊಂದು ಮಗ್ಗಲಿನ ಸಂಶಯವಷ್ಟೇ.

ಹರ್ಯಾಣ, ರಾಜಸ್ತಾನ ಒಟ್ಟು ಒಂಬತ್ತು ರಾಜ್ಯಗಳಲ್ಲಿ ಪ್ರಬಲವಾಗಿರುವ ಜಾಟರು ಸರ್ಕಾರಿ ಹುದ್ದೆ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಕೆಲ ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಹರ್ಯಾಣದಲ್ಲಿ ಐದು ಸಾವಿರಕ್ಕೂ ಹೆಚ್ಚು ಯುವಕರು ಬೀದಿಗಿಳಿದಿದ್ದರು. ಅದು ಹಿಂಸಾರೂಪಕ್ಕೆ ತಿರುಗಿದ್ದು, ಹತ್ತೊಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದರು. ಅವತ್ತು ಹರ್ಯಾಣದಲ್ಲಿ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ, ಸರ್ಕಾರ ಪ್ರತಿಭಟನಾ ನಿರತರ ಜೊತೆ ಸಂಧಾನಕ್ಕೆ ಮುಂದಾಗಿತ್ತು. ಅದು ವರ್ಕೌಟ್ ಆಗಲಿಲ್ಲ. ಪೊಳ್ಳು ಭರವಸೆಗಳನ್ನು ನಂಬುವ ಸ್ಥಿತಿಯಲ್ಲಿ ನಾವಿಲ್ಲ ಎಂದರು. ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಸರ್ಕಾರ ಇಂಟರ್ನೆಟ್ ಮತ್ತು ಎಸ್ಎಮ್ಎಸ್ ಸೇವೆಗಳನ್ನು ನಿರ್ಬಂಧಿಸಿತ್ತು. ಇದರಿಂದ ಕೆಂಡಮಂಡಲನಾದ ಜಾಟ್ ಹೋರಾಟ ಸಮಿತಿ ಅಧ್ಯಕ್ಷ ಯಶ್ಪಾಲ್ ಮಲಿಕ್ ಮುಖ್ಯಮಂತ್ರಿ ಮನೋಹರ್ ಕಟ್ಟರ್ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ, ನಮ್ಮ ಬೇಡಿಕೆ ಈಡೇರಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಇದಾದ ಬೆನ್ನಿಗೆ ಅಗ್ರೋ ಮಾಲ್ನ ಆವರಣಕ್ಕೆ ಘೋಷಣೆ ಕೂಗುತ್ತಾ ಆಗಮಿಸಿದ ಪ್ರತಿಭಟನಾಕಾರರು ಅಲ್ಲಿದ್ದ 15ಕ್ಕೂ ಹೆಚ್ಚು ಕಾರ್ಗಳನ್ನು ಜಖಂಗೊಳಿಸಿದ್ದರು. ಬಳಿಕ ಸಾರಿಗೆ ಸಂಸ್ಥೆಗೆ ಸೇರಿದ 3 ಬಸ್ಗಳಿಗೆ ಬೆಂಕಿ ಹಚ್ಚಿದ್ದರು. ಜಾಝುರ್ನ ಪೊಲೀಸ್ ಠಾಣೆಗೆ ಬೆಂಕಿಯಿಟ್ಟು ಹಲವು ವಾಹನಗಳಿಗೆ ಕಲ್ಲು ತೂರಿದ್ದರು. ಇದಾದ ಮೇಲೆ ಸಚಿವ ಕ್ಯಾಪ್ಟನ್ ಅಭಿಮನ್ಯು ನಿವಾಸಕ್ಕೆ ಕಲ್ಲು ತೂರಿ, ಬೆಂಕಿ ಹಚ್ಚಿದರು. ಸಚಿವರು ಸೇರಿದಂತೆ ಅವರ ಕುಟುಂಬ ಸದಸ್ಯರು ಮನೆಯಲ್ಲಿರಲಿಲ್ಲವಾದ ಕಾರಣ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ. ಮತ್ತೊಂದೆಡೆ ಬಿಜೆಪಿ ಶಾಸಕ ಮನೀಸ್ ಕುಮಾರ್ ಗ್ರೋವರ್ ಕಚೇರಿ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು ಅಲ್ಲೂ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ರೋಹ್ಟಕ್ನ ಐಜಿಪಿ ನಿವಾಸದ ಮೇಲೂ ಕಲ್ಲು ತೂರಾಟ ನಡೆಸಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ ಪರಿಣಾಮ ಮೂವರು ಮೃತಪಟ್ಟಿದ್ದರು. ಒಟ್ಟು ಸಾವಿನ ಸಂಖ್ಯೆ ಹತ್ತೊಂಬತ್ತಕ್ಕೇರಿತ್ತು. ಇಷ್ಟು ಮಾತ್ರವಲ್ಲ. ರಸ್ತೆ ರಸ್ತೆಗಳಲ್ಲಿ ಕಲ್ಲು ತೂರಾಟ ನಡೆಸುತ್ತ ದಾಂಧಲೆ ಎಬ್ಬಿಸಿದ ಪ್ರತಿಭಟನಾಕಾರರು ಬಂದೂಕು ಕಾರ್ಖಾನೆಗೆ ನುಗ್ಗಿ ಬಂದೂಕುಗಳನ್ನು ಹೊತ್ತೊಯ್ದಿದ್ದರು. ಪರಿಸ್ಥಿತಿ ಕೈ ಮೀರಿದ ಹಿನ್ನೆಲೆಯಲ್ಲಿ ಸರ್ಕಾರ ಗಲಭೆ ನಿಯಂತ್ರಣಕ್ಕೆ ಸೇನೆಗೆ ಮನವಿ ಮಾಡಿ, ರೋಹ್ಟಕ್, ಜಾಝುರ್ ಸೇರಿ ಪ್ರಮುಖ 9 ಜಿಲ್ಲೆಗಳಲ್ಲಿ ಸೇನೆ ನಿಯೋಜಿಸಿತ್ತು. ರೋಹ್ಟಕ್ ಮತ್ತು ಭೀವಾನಿಯಲ್ಲಿ ಕರ್ಫ್ಯೂ ಜಾರಿಗೊಳಿಸಿ ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿತ್ತು.

ಪರಿಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ್ಸಿಂಗ್, ಮನೋಹರ್ ಪರಿಕ್ಕರ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಹರ್ಯಾಣಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸುವ ಕುರಿತು ಚರ್ಚಿಸಿದ್ದರು. ವಿಪರ್ಯಾಸವೆಂದರೇ, ಇಷ್ಟೆಲ್ಲಾ ಆದಮೇಲೆ ಬೆದರಿರುವ ಸರ್ಕಾರ ಜಾಟ್ ಸಮುದಾಯದ ಬೇಡಿಕೆಗೆ ಭರವಸೆ ನೀಡಿತ್ತು. ಮುಂದಿನ ಅಧಿವೇಶನದಲ್ಲಿ ಈ ಕುರಿತಾದ ಮಸೂದೆ ಜಾರಿಗೊಳಿಸುವುದಾಗಿ ಸಿಎಂ ಮನೋಹರ ಲಾಲ್ ಖಟ್ಟರ್ ಹೇಳಿದ್ದರು. ಆದ್ದರಿಂದ ಜಾಟರು ಮಾರ್ಚ್ ಹದಿನೆಂಟರವರೆಗೆ ಗಡುವು ನೀಡಿದ್ದರು.

ಇನ್ನು ಹಿಂದುಳಿದವರು ಎಂದು ನಿರ್ಧರಿಸಲು ಜಾತಿಯು ಒಂದು ಪ್ರಮುಖ ಅಂಶ ಎನ್ನುವುದು ನಿಜವೇ ಆದರೂ, ಅದೊಂದೇ ಅಂಶ ಈ ಕುರಿತ ನಿರ್ಧಾರಕ್ಕೆ ಮುಖ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಜಾಟ್ ಸಮುದಾಯವನ್ನು ಹಿಂದುಳಿದ ವರ್ಗವೆಂದು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಯುಪಿಎ ಸರ್ಕಾರ 2014ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗೆ ಸ್ವಲ್ಪವೇ ಮುನ್ನ ಜಾಟ್ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವ ಆದೇಶವನ್ನು ಹೊರಡಿಸಿತ್ತು. ಆಶ್ಚರ್ಯಕರವೆಂಬಂತೆ ಮೋದಿ ಸರ್ಕಾರ ಕೂಡ ಯುಪಿಎ ಸರ್ಕಾರದ ಈ ನಿರ್ಧಾರವನ್ನು ಬೆಂಬಲಿಸಿ ಜಾಟ್ ಸಮುದಾಯಕ್ಕೆ ಮೀಸಲಾತಿಯನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಿತ್ತು. ಒಟ್ಟು ಒಂಬತ್ತು ರಾಜ್ಯಗಳಲ್ಲಿ ಜಾಟ್ ಸಮುದಾಯದವರ ಪ್ರಾಬಲ್ಯವಿತ್ತು. 2014ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರವನ್ನು ಮುಂದುವರಿಸುವ ಉದ್ದೇಶದಿಂದ, ಲೋಕಸಭೆ ಚುನಾವಣೆಗೂ ಮುನ್ನ ಜಾಟರಿಗೆ ಒಬಿಸಿಯಡಿ ಮೀಸಲಾತಿ ಕೊಡುವುದಾಗಿ ಭರವಸೆ ನೀಡಿತ್ತು. ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಜಾಟರಿಗೆ ಯುಪಿಎ ಸರ್ಕಾರ ಆಶ್ವಾಸನೆ ನೀಡಿದ ಬೆನ್ನಿಗೆ, ನರೇಂದ್ರ ಮೋದಿ ಕೂಡ ಜಾಟರಿಗೆ ನಾವೂ ಮೀಸಲಾತಿ ಕೊಡೋಕೆ ರೆಡಿ ಎಂದರು. ಈ ಹಂತದಲ್ಲಿ ಕೆಲವರು ಜಾಟರಿಗೇಕೆ ಮೀಸಲಾತಿ ಕೊಡಬೇಕು ಎಂದು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದರು. ಸುಪ್ರಿಂ ಕೋರ್ಟ್, ಜಾಟರನ್ನು ಹಿಂದುಳಿದ ವರ್ಗವೆಂದು ಪರಿಗಣಿಸುವುದಿಲ್ಲ ಎಂದಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೀಸಲಾತಿಯ ಬಗ್ಗೆ ಮುಗುಮ್ಮಾಯಿತು. ಜಾಟರ ಮೀಸಲಾತಿ ನಿರೀಕ್ಷೆಗಳು ಈಡೇರಲಿಲ್ಲ. ಹೋರಾಟ, ಪ್ರತಿಭಟನೆಗಳು ನಡೆಯತೊಡಗಿದವು.

ಮೊದಲೇ ಹೇಳಿದಂತೆ, ನೆಮ್ಮದಿಯಿಂದಿರುವ ಸಮುದಾಯಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದೇ ಈ ರಾಜಕಾರಣಿಗಳು. ಇವರು ಅಧಿಕಾಕ್ಕೇರಲು ಸೂಕ್ಷ್ಮ ಭರವಸೆಗಳ ಬೀಜವನ್ನು ಬಿತ್ತಿ, ಇಡೀ ಸಮುದಾಯವನ್ನು ರೊಚ್ಚಿಗೇಳುವಂತೆ ಮಾಡುತ್ತಾರೆ. ಇನ್ನೇನು ದಲಿತರಂತೆ ಹಲವು ಸದುಪಯೋಗಪಡೆದುಕೊಳ್ಳಬಹುದು. ಉದ್ಯೋಗ, ಶಿಕ್ಷಣವನ್ನು ಬಡಿದು ಬಾಯಿಗೆ ಹಾಕಿಕೊಳ್ಳಬಹುದು ಎಂದು ನಿರ್ಧರಿಸಿದವರಿಗೆ ಸಹಜವಾಗಿಯೇ ಭ್ರಮನಿರಸನವಾಗಿತ್ತು. ರಾಜಕಾರಣ ಕೇವಲ ಜಾಟರ ಮೇಲೆ ಮಾತ್ರವಲ್ಲ, ಪಟೇಲರು, ಗುಜ್ಜರರು, ಕಾಪು ಸಮುದಾಯದವರ ಮೇಲೂ ಪಗಡೆಯಾಡಿ ಎದ್ದುಹೋಗಿವೆ.

ನಿಜಕ್ಕೂ ದೇಶದಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಯಾರಿಗೂ ಒಬಿಸಿ ಪಟ್ಟಿಯಲ್ಲಿ ಸೇರುವ ಅರ್ಹತೆಗಳಿಲ್ಲ. ದಲಿತರಂತೆ ಅವರ್ಯಾರು ಹಿಂದುಳಿದ ವರ್ಗಕ್ಕೆ ಸೇರುವುದಿಲ್ಲ. ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಬಲಿಷ್ಠರಾಗಿದ್ದಾರೆ. ನಮಗೆ ಮೀಸಲಾತಿ ಸಿಗದಿದ್ದರೂ ಪರ್ವಾಗಿಲ್ಲ, ಸಧ್ಯ ಮೀಸಲಾತಿಯ ಪ್ರಯೋಜನ ಪಡೆಯುತ್ತಿರುವವರು ಅದರಿಂದ ವಂಚಿತರಾಗಬೇಕೆಂಬ ಉದ್ದೇಶ ಅವರಲ್ಲಿ ಅಡಕವಾಗಿರಬಹುದು. ಸೂಕ್ಷ್ಮವಾಗಿ ಇವನ್ನು ಅವಲೋಕಿಸಿದಾಗ, ಇವರ ಹೋರಾಟಗಳ ಉದ್ದೇಶ ಈ ರೀತಿಯಾಗಿ ಸ್ಪಷ್ಟವಾಗುತ್ತದೆ. ಈ ಹಿಂದೆ ಪಟೇಲ್ ಸಮುದಾಯ ತಮ್ಮ ಸಮುದಾಯವನ್ನು ಒಬಿಸಿ ಕೆಟಗರಿ ಅಡಿ ಸೇರಿಸಬೇಕು ಎಂದು ಬೀದಿಗಿಳಿದಿತ್ತು. ಆದರೆ ಮೀಸಲಾತಿಯ ಅರ್ಥ ಮತ್ತು ವ್ಯಾಪ್ತಿ, ಆಶಯ ಉದ್ದೇಶವೇ ಈ ಸಮುದಾಯಕ್ಕೆ ಇದ್ದಂತಿರಲಿಲ್ಲ. ಈ ಹೋರಾಟದ ನೇತೃತ್ವವಹಿಸಿರೋ ಹಾರ್ದಿಕ್ ಪಟೇಲ್ಗೂ ಅರ್ಥವಾದಂತಿಲ್ಲ. ತಮಗೆ ಮೀಸಲಾತಿಯನ್ನು ಒಬಿಸಿ ಕೆಟಗರಿಯಲ್ಲಿ ನೀಡಲು ಸಾಧ್ಯವಿಲ್ಲದಿದ್ದರೆ, ಜಾತಿ ಆಧಾರಿತ ಮೀಸಲಾತಿಯನ್ನೇ ರದ್ದುಗೊಳಿಸಿ ಎಂಬ ತರ್ಕರಹಿತವಾದವನ್ನು ಹೋರಾಟಗಾರರು ಮುಂದಿಟ್ಟಿದ್ದರು. ಗುಜರಾತ್ ಸಿಎಂ ಆನಂದಿ ಬೆನ್ ಪಟೇಲ್, ಪಟೇಲ್ರನ್ನು ಒಬಿಸಿ ಕೆಟಗರಿಗೆ ಸೇರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲೇಖಿಸಿದ್ದರು. ಸುಪ್ರೀಂ ಕೋರ್ಟ್ 1992ರಲ್ಲಿ ನೀಡಿರೋ ನಿರ್ದೇಶನದಂತೆ ಯಾವುದೇ ರಾಜ್ಯ ನೀಡುವ ಮೀಸಲಾತಿ ಪ್ರಮಾಣ ಶೇಕಡಾ ಐವತ್ತನ್ನು ಮೀರುವಂತಿಲ್ಲ. ಈಗಾಗಲೇ ಗುಜರಾತ್ನಲ್ಲಿ ಒಬಿಸಿ ಶೇ 27, ಎಸ್ಸಿ ಶೇ 15, ಎಸ್ಟಿಗೆ ಶೇ 7ರಷ್ಟು ಮೀಸಲಾತಿ ನೀಡಲಾಗಿದ್ದು ಪಟೇಲ್ ಸಮುದಾಯವನ್ನು ಒಬಿಸಿಯಡಿ ಸೇರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆನಂತರ ಹಾರ್ದಿಕ್ ಪಟೇಲ್ ಮೇಲೆ ಬಾಣ ಪ್ರಯೋಗಕ್ಕೆ ಕೇಂದ್ರ ಸರ್ಕಾರ ಮುಂದಾಗಿತ್ತು.

ಇತ್ತೀಚೆಗಷ್ಟೇ ಆಂಧ್ರ ಪ್ರದೇಶದಲ್ಲಿ ಮೀಸಲಾತಿಗಾಗಿ ಕಾಪು ಜನಾಂಗ ತೀವ್ರ ತೆರನಾದ ಹೋರಾಟ ನಡೆಸಿತ್ತು. ಅದನ್ನು ಹತ್ತಿಕ್ಕುವಲ್ಲಿ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಯಶಸ್ವಿಯಾದರೂ ಭರವಸೆಯನ್ನು ಕೊಟ್ಟಿದ್ದಾರೆ. ಈ ಕಾಪು ಸಮುದಾಯದಲ್ಲಿ ತೆಲಗ, ಬಲಿಜ, ಒಂಟರಿ, ಮುನ್ನೂರು ಕಾಪು, ತುಪರ್ು ಕಾಪು ಅಂತ ಒಟ್ಟು ಐದು ಉಪಜಾತಿಗಳಿವೆ. ಆಂಧ್ರಪ್ರದೇಶ ಏಕೀಕರಣದ ಸಂದರ್ಭದಲ್ಲಿ ಕಾಪುಗಳಿಗೆ ಮುಂದುವರೆದ ಜಾತಿಯ ಸ್ಥಾನಮಾನ ನೀಡಲಾಗಿತ್ತು. 1921ರ ಜಾತಿ ಗಣತಿಯ ದತ್ತಾಂಶಗಳನ್ನು ಆಧರಿಸಿ ಕಾಪುಗಳನ್ನು ಮುಂದುವರೆದ ಜಾತಿ ಎಂದು ಗುರುತಿಸಲಾಗಿತ್ತು. ಇದೇ ದತ್ತಾಂಶಗಳನ್ನು ಆಧರಿಸಿ ತೆಲಗ ಮತ್ತು ಬಲಿಜ ಕಾಪುಗಳಿಗೆ ಮಾತ್ರ ಹಿಂದುಳಿದ ಜಾತಿಗಳ ಸ್ಥಾನಮಾನ ನೀಡಲಾಗಿತ್ತು. ತಮಗೆ ಮೀಸಲಾತಿ ನೀಡಬೇಕು ಎಂದು ಅಂದಿನಿಂದಲೂ ಕಾಪು ಸಮುದಾಯದ ಇತರ ಒಳಜಾತಿಗಳು ಹೋರಾಟ ನಡೆಸುತ್ತಲೇ ಇವೆ.

ಭಾರತದ ಸಂವಿಧಾನ ಮೀಸಲಾತಿ ಕುರಿತಾಗಿ ಸ್ಪಷ್ಟತೆಗಳನ್ನು ನೀಡಿದೆ. ಸಂವಿಧಾನದ ವಿಧಿಗಳು ಮೀಸಲಾತಿಯನ್ನು ಯಾರಿಗೆ ಮತ್ತು ಯಾವ ಕಾರಣಕ್ಕೆ ನೀಡಬೇಕು ಎನ್ನುವುದನ್ನು ಸ್ಪಷ್ಟಪಡಿಸಿದೆ. ಈಗ ಪಟೇಲ್, ಗುಜ್ಜರ್, ಕಾಪು, ಜಾಟ್ ಸಮುದಾಯದವರು ಕೇಳುತ್ತಿರುವ ಬೇಡಿಕೆ ಸಂವಿಧಾನ ನಿಗಧಿಪಡಿಸಿರುವ ಮೀಸಲಾತಿಯ ಆಶಯಕ್ಕೆ ವಿರುದ್ದವಾದದ್ದು. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನಾಂಗಕ್ಕೆ ಮೀಸಲಾತಿ ಸಿಗಬೇಕು ಎಂದು ಸಂವಿಧಾನದಲ್ಲಿ ವಿವರಿಸಲಾಗಿದೆ. ಶತಶತಮಾನಗಳಿಂದ ತುಳಿತಕ್ಕೆ ಒಳಗಾಗಿ, ಸರ್ಕಾರಿ ಹುದ್ದೆಗಳನ್ನು ಒಳಗೊಂಡಂತೆ ಶೈಕ್ಷಣಿಕವಾಗಿ ಮೇಲೆತ್ತುವ ಉದ್ದೇಶ ಇದರ ಹಿಂದಿದೆ. ಇಂದಿಗೆ ಮೀಸಲಾತಿ ಕಾರಣಕ್ಕೆ ಹಲವು ಜನಾಂಗ ಕೆಲವೊಂದಾದರೂ ಹಕ್ಕನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ. ಆದರೆ ಬಲಿಷ್ಠವರ್ಗದವರೆಲ್ಲ ಮೀಸಲಾತಿಗಾಗಿ ಬೀದಿಗಿಳಿದಿರುವುದು ನಿಜಕ್ಕೂ ಅರ್ಥಹೀನ..!

  • ರಾ ಚಿಂತನ್.

POPULAR  STORIES :

ಪತ್ರಿಕೋದ್ಯಮದ ಭೀಷ್ಮ..! ಬರವಣಿಗೆ ನಿಲ್ಲಿಸುತ್ತಾರಾ ರವಿ ಬೆಳಗೆರೆ..?

ಶಿವಣ್ಣನ ಜೊತೆಗೆ ಬಿಬಿಸಿ ರೇಡಿಯೋ ನಡೆಸಿದ ಸಂದರ್ಶನ ಇಲ್ಲಿದೆ.. ಕೇಳಿ..!

ಇಲ್ಲಿ ಮುಚ್ಚಿಕೊಂಡರು.. ಅಲ್ಲಿ ಬಿಚ್ಚಿಕೊಂಡರು..!! ಏನಿದೆಲ್ಲಾ ದೀಪಿಕಾ..?

ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?

ಹೆಂಗಿದ್ದ ಹೆಂಗಾದ ಗೊತ್ತಾ ಅಂಬಾನಿ ಪುತ್ರ..! ಐಪಿಎಲ್ ವೇಳೆ ಅಚ್ಚರಿಗೊಳ್ಳಲು ಸಿದ್ಧರಾಗಿ..!

ದ್ವಾರಕೆಯ ದೋಸೆ ಮತ್ತವಳ ನೆನಪು..!

ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video

`ಆ್ಯಮ್ ಸಾರೀ ಗೇಲ್’ ಅಂದ ಬಿಗ್ಬಿ ಅಮಿತಾಬ್..!? ಅಮಿತಾಬ್ ಮಾಡಿದ ತಪ್ಪೇನು..?

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?

LEAVE A REPLY

Please enter your comment!
Please enter your name here