ಇಂದಿನ ಟಾಪ್ 10 ಸುದ್ದಿಗಳು..! 07.01.2016

0
72

ಜಮ್ಮು-ಕಾಶ್ಮೀರ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ವಿಧಿವಶ

ಶ್ವಾಸಕೋಶ, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ 79 ವರ್ಷದ ಮುಫ್ತಿ ಮೊಹಮ್ಮದ್ ಸಯೀದ್ ರವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಡಿಸೆಂಬರ್ 24ರಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮುಫ್ತಿ ಮೊಹಮ್ಮದ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.

ಮೆಹಬೂಬ ಮುಫ್ತಿ ಜಮ್ಮು-ಕಾಶ್ಮೀರದ ನೂತನ ಸಿಎಂ..?

ಜಮ್ಮು-ಕಾಶ್ಮೀರದ ಮಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ರ ನಿಧನದಿಂದಾಗಿ ಅವರ ಪುತ್ರಿ ಮೆಹಬೂಬ ಮುಫ್ತಿ ಅವರು ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಜಮ್ಮು-ಕಾಶ್ಮೀರ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹಿರಿಮೆಗೆ ಮೆಹಬೂಬ ಮುಫ್ತಿ ಪಾತ್ರರಾಗಿದ್ದಾರೆ. ಜಮ್ಮು-ಕಾಶ್ಮೀರದ ಪಿಡಿಪಿ ಅವಿರೋಧವಾಗಿ ಮೆಹಬೂಬ ಅವರನ್ನು ಆಯ್ಕೆ ಮಾಡುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಾಗಿದೆ ಎಂದು ಪಿಡಿಪಿ ಹಿರಿಯ ನಾಯಕ ಹಾಗೂ ಲೋಕಸಭಾ ಸದಸ್ಯ ಮುಝಾಫರ್ ಹುಸೇನ್ ಬೇಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಾಲಿನ ದರ ಏರಿಕೆ, ಹೆಲ್ಮೆಟ್ ಕಡ್ಡಾಯಕ್ಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಹಾಲಿನ ದರ ಏರಿಕೆ ಹಾಗೂ ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಆದೇಶ ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಹಾಲಿನ ದರ ಏರಿಕೆ, ಹೆಲ್ಮೆಟ್ ಕಡ್ಡಾಯದ ಆದೇಶ ಜನ ವಿರೋಧಿ ನಿಯಮವಾಗಿದ್ದು, ಹಾಲಿನ ದರ ಏರಿಕೆಯಿಂದಾಗಿ ಗ್ರಾಹಕರು ಪರದಾಡುವಂತಾಗಿದೆ. ಕೂಡಲೇ ರಾಜ್ಯ ಸರ್ಕಾರ ಹಾಲಿನ ದರವನ್ನು ಇಳಿಕೆ ಮಾಡಿ, ಹೆಲ್ಮೆಟ್ ಕಡ್ಡಾಯವನ್ನು ಹಿಂಪಡೆಯುಬೇಕು ಎಂದು ಬಿಜೆಪಿ ನಾಯಕರು ಸರ್ಕಾರಕ್ಕೆ ಆಗ್ರಹಿಸಿದರು.

ಪಠಾಣ್ ಕೋಟ್ ದಾಳಿ ಹಿಂದೆ ಐಎಸ್ ಐ ಕೈವಾಡ: ಅಮೆರಿಕ

ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಕೈವಾಡವಿದೆ ಎಂದು ಅಮೆರಿಕದ ವೈಟ್ ಹೌಸ್ ನ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪಠಾಣ್ ಕೋಟ್ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯಾಗಿದ್ದ ಬ್ರೂಸ್ ರೀಡೆಲ್, ಐಎಸ್ ಐ 15 ವರ್ಷಗಳ ಹಿಂದೆ ಜೈಶ್ ಮೊಹಮ್ಮದ್ ಸಂಘಟನೆಯನ್ನು ಸ್ಥಾಪಿಸಿತ್ತು. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ಗೆ ನೀಡಿದ ಅಚ್ಚರಿ ಭೇಟಿಯಿಂದ ಉಭಯ ದೇಶಗಳ ಸಂಬಂಧ ಉತ್ತಮಗೊಳ್ಳುವ ಸಾಧ್ಯತೆ ಇತ್ತು. ಇದನ್ನು ಅಡ್ಡಿ ಪಡಿಸುವ ಉದ್ದೇಶದಿಂದ ಪಠಾಣ್ ಕೋಟ್ ಮತ್ತು ಅಫ್ಗಾನಿಸ್ತಾನದ ಭಾರತೀಯ ರಾಯಭಾರಿ ಕಚೇರಿ ಮೇಲೆ ಪಾಕಿಸ್ತಾನದ ಐಎಸ್ ಐ ದಾಳಿ ನಡೆಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೇತುವೆಯಿಂದ ಕೆಳಗುರುಳಿದ ಬಸ್: 6 ಮಂದಿ ದುರ್ಮರಣ

ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಬಸ್ ಕೆಳಗುರುಳಿದ ಪರಿಣಾಮ ಮಹಿಳೆ ಸೇರಿದಂತೆ 6 ಜನ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತ್ರಿಪುರದಲ್ಲಿ ನಡೆದಿದೆ. ಅಗರ್ತಲಾದಿಂದ ತ್ರಿಪುರಾದ ದಕ್ಷಿಣ ಭಾಗದಲ್ಲಿರುವ ಬೆನೋನಿಯಾಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಸೇತುವೆಯಿಂದ ಹಳ್ಳಕ್ಕೆ ಬಿದ್ದಿದೆ. ಘಟನೆಯಲ್ಲಿ ಸ್ಥಳದಲ್ಲೇ 6 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸದ ಓವೈಸಿಗೆ ಐಸಿಸ್ ಧಮ್ಕಿ..!

ಎಂಐಎಂ ಪಕ್ಷದ ನಾಯಕ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿಗೆ ಐಸಿಸ್ ನಿಂದ ಬೆದರಿಕೆ ಬಂದಿದೆ. ಐಸಿಸಿಸ್ ಉಗ್ರಗಾಮಿ ಸಂಘಟನೆ ಟ್ವೀಟರ್ ಮೂಲಕ ತನಗೆ ಬೆದರಿಕೆ ಹಾಕಿದ್ದು, ಬಾಯಿಮುಚ್ಚಿಕೊಂಡಿರುವಂತೆ ಎಚ್ಚರಿಕೆ ನೀಡಿರುವುದಾಗಿ ಓವೈಸಿ ದೂರಿದ್ದಾರೆ. ನಿನಗೆ ಸತ್ಯ ಗೊತ್ತಿಲ್ಲದಿದ್ದರೆ ಐಸಿಸ್ ಕುರಿತಂತೆ ನೀನು ಬಾಯಿಮುಚ್ಚಿಕೊಂಡಿರುವುದೇ ಒಳ್ಳೆಯದು. ಇಸ್ಲಾಮಿಕ್ ಸ್ಟೇಟ್ ಶೀಘ್ರವೇ ಭಾರತಕ್ಕೆ ಪ್ರವೇಶಿಸಲಿದೆ ಎಂದು @abotalout  ಎಂಬ ಹೆಸರಿನ ಟ್ವೀಟರ್ ಮೂಲಕ ಓವೈಸಿಗೆ ಎಚ್ಚರಿಕೆ ನೀಡಲಾಗಿದೆ.

 

ಚೀನಾ ಎಫೆಕ್ಟ್: ಮುಂಬಯಿ ಷೇರುಪೇಟೆ 554 ಅಂಕ ಕುಸಿತ

ಚೀನ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಭಾರೀ ಪ್ರಮಾಣದ ಷೇರು ಮಾರಾಟದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಮುಂಬಯಿ ಷೇರು ಪೇಟೆ ಗುರುವಾರದ ಆರಂಭಿಕ ವಹಿವಾಟಿನಲ್ಲಿ 554 ಅಂಕಗಳ ಕುಸಿತವನ್ನು ಕಂಡಿತಲ್ಲದೆ ತದನಂತರ 25,000 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಜಾರುವ ಮೂಲಕ ಹೂಡಿಕೆದಾರರಲ್ಲಿ ತೀವ್ರವಾದ ಆತಂಕವನ್ನು ಸೃಷ್ಟಿಸಿದೆ. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು ತೀವ್ರ ಕುಸಿತಕ್ಕೆ ಗುರಿಯಾಗಿ 7,600 ಅಂಕಗಳಿಗಿಂತ ಕೆಳಗಿನ ಮಟ್ಟಕ್ಕೆ ಕುಸಿದಿದೆ.

ಎಫ್ ಟಿಐಐ ಮತ್ತೆ ರಣಾಂಗಣ; ಚೌಹಾಣ್ ವಿದ್ಯಾರ್ಥಿಗಳ ಪ್ರತಿಭಟನೆ

ಪ್ರತಿಷ್ಠಿತ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಅಧ್ಯಕ್ಷರಾಗಿ ನೇಮಕವಾಗಿದ್ದ ಗಜೇಂದ್ರ ಚೌಹಾಣ್ ಗುರುವಾರ ಅಧಿಕಾರ ಸ್ವೀಕರಿಸುವ ನಿಟ್ಟಿನಲ್ಲಿ ಪುಣೆಯ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದರು. ಇದರಿಂದ ಎಫ್ ಟಿಐಐ ಆವರಣ ಮತ್ತೆ ರಣಾಂಗಣವಾಗಿದೆ. ವಿದ್ಯಾರ್ಥಿಗಳ ವಿರೋಧ, ಪ್ರತಿಭಟನೆ ನಡುವೆಯೇ ಚೌಹಾಣ್ ಸುಮಾರು 7 ತಿಂಗಳ ಬಳಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಅಂತಾರಾಷ್ಟ್ರೀಯ ಕಿಡ್ನಿ ಮಾರಾಟ ಜಾಲ ಪತ್ತೆ, ನಾಲ್ವರ ಸೆರೆ

ತೆಲಂಗಾಣದ ನಲ್ಲಗೊಂಡ ಪೊಲೀಸರು ಅಂತಾರಾಷ್ಟ್ರೀಯ ಕಿಡ್ನಿ ಮಾರಾಟ ಜಾಲವನ್ನು ಭೇದಿಸಿದ್ದಾರೆ. ಒಬ್ಬ ಏಜಂಟ್ ಹಾಗೂ ದಾನಿಗಳು ಸೇರಿದಂತೆ ಒಟ್ಟು ನಾಲ್ವರನ್ನು ಈ ಸಂಬಂಧ ಬಂಧಿಸಿದ್ದಾರೆ. ಆರೋಪಿ ಕೆ ಸುರೇಶ್ ಎಂಬಾತ 2014ರಲ್ಲಿ ತನ್ನ ಕಿಡ್ನಿಯನ್ನು ಮಾರಾಟ ಮಾಡಿದ್ದ. ಈಗ ಕಿಡ್ನಿ ಮಾರಾಟದ ಏಜೆಂಟ್ ಆಗಿರುವ ಆತನನ್ನು ಬಂಧಿಸಲಾಗಿದೆ. ಆತನ ಜೊತೆ, ತಮ್ಮ ಕಿಡ್ನಿ ಮಾರಾಟಗೈದ ಮೂವರು ದಾನಿಗಳಾದ ಅಬ್ದುಲ್ ಹಾಫೀಜ್, ಪಿ. ಮಹೇಶ್ ಮತ್ತು ಕೆ. ನರೇಶ್ ಎಂಬವರನ್ನೂ ಪೊಲೀಸರು ಬಂಧಿಸಿದ್ದಾರೆ.

ವಿಶ್ವಬ್ಯಾಂಕ್ 2016 ರ ಮುನ್ನೋಟದಲ್ಲಿ ಜಾಗತಿಕ ಬೆಳವಣಿಗೆ ಶೇ.2 .9 ಕ್ಕೆ ಇಳಿಕೆ

2016 ನೇ ಸಾಲಿನ ಜಾಗತಿಕ ಬೆಳವಣಿಗೆ ಮುನ್ನೋಟವನ್ನು ವಿಶ್ವಬ್ಯಾಂಕ್ ಶೇ.2 .9 ಕ್ಕೆ ಕಡಿತಗೊಳಿಸಿದೆ. ಮಾರುಕಟ್ಟೆಗಳಲ್ಲಿ ಕ್ಷೀಣಿಸಿರುವ ಅಭಿವೃದ್ಧಿಯು ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಲಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ. 2015 ರ ಜೂನ್ ನಲ್ಲಿ ವಿಶ್ವಬ್ಯಾಂಕ್ ಮಂಡಿಸಿದ್ದ ಮುನ್ನೋಟಕ್ಕಿಂತಲೂ ಪ್ರಸಕ್ತ ಸಾಲಿನ ಮುನ್ನೋಟ ಶೇ.0 .4 ರಷ್ಟು ಕಡಿಮೆ ಇದ್ದು, ಶೇ 2 .9 ರಷ್ಟು ಮಾತ್ರ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿದೆ. ಅಭಿವೃದ್ಧಿಶೀಲ ಆರ್ಥಿಕತೆ ಇರುವ ರಾಷ್ಟ್ರಗಳಲ್ಲಿ ಶೇ.4 .8 ರಷ್ಟು ಬೆಳವಣಿಗೆ ದಾಖಲಾಗುವ ಸಾಧ್ಯತೆ ಇದ್ದು, ಅಭಿವೃದ್ಧಿ ಹೊಂದಿರುವ ಆರ್ಥಿಕತೆ ಇರುವ ರಾಷ್ಟ್ರಗಳಲ್ಲಿ ಶೇ.2 .1 ರಷ್ಟು ಮಾತ್ರ ಬೆಳವಣಿಗೆ ನಿರೀಕ್ಷಿಸಲಾಗಿದೆ.

ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹಾಶೀಂ ಆಮ್ಲಾ

ದಿಢೀರ್ ಬೆಳವಣಿಗೆಯಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ನಾಯಕ ಹಾಶೀಂ ಆಮ್ಲಾ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಬುಧವಾರ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯ ಡ್ರಾ ಕಂಡ ಬಳಿಕ ಆಮ್ಲಾ ಸ್ವತಃ ಈ ನಿರ್ಧಾರ ಪ್ರಕಟಿಸಿದರು. ಕಳೆದ ವರ್ಷ ಸಾಕಷ್ಟು ನಿರಾಸೆ ಅನುಭವಿಸಿದ್ದ ಆಮ್ಲಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸೋತಿತ್ತು. ಆದರೆ 2ನೇ ಟೆಸ್ಟ್ ನಲ್ಲಿ ಆಮ್ಲಾ ದ್ವಿಶತಕ ದಾಖಲಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಇನ್ನು ಟೆಸ್ಟ್ ತಂಡದ ಸಾರಥ್ಯವನ್ನು ಸದ್ಯಕ್ಕೆ ಎಬಿ ಡಿವಿಲಿಯರ್ಸ್ ಗೆ ವಹಿಸಲಾಗಿದೆ

LEAVE A REPLY

Please enter your comment!
Please enter your name here