ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ; ವಿಶೇಷ ಪೂಜೆ ಸಲ್ಲಿಕೆ
ಉಡುಪಿ:ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಶುಕ್ರವಾರ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯಕ್ಕೆ ಆಗಮಿಸಿದ ವಿಜಯ್ ಅವರಿಗೆ ದೇವಸ್ಥಾನದ ಅರ್ಚಕರು ಆತ್ಮೀಯ ಸ್ವಾಗತ ಕೋರಿದರು. ದೇವಾಲಯದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರು ಪೂಜಾ ವಿಧಿಗಳನ್ನು ನೆರವೇರಿಸಿ ಸಂಕಲ್ಪ ಮಾಡಿಸಿದರು. ಬಳಿಕ ಅರ್ಚಕರು ಮುಖ್ಯಮಂತ್ರಿ ವಿಜಯ್ ಅವರ ಕೈಗೆ ರಕ್ಷಾ ದಾರವನ್ನು ಕಟ್ಟಿದರು.
ಪೂಜಾ ಕಾರ್ಯಕ್ರಮದ ವೇಳೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಸೇರಿದಂತೆ ದೇವಸ್ಥಾನದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ದೇವಸ್ಥಾನಕ್ಕೆ ಆಗಮಿಸಿದ ತಮಿಳುನಾಡು ಮುಖ್ಯಮಂತ್ರಿಯನ್ನು ಅರ್ಚಕರು ಬೊಕ್ಕೆ ನೀಡಿ ಬರಮಾಡಿಕೊಂಡರು. ರಾಜ್ಯ ಸರ್ಕಾರದ ಪರವಾಗಿ ಕುಂದಾಪುರ ಉಪ ವಿಭಾಗಾಧಿಕಾರಿ (ಎಸಿ) ರಶ್ಮಿ ಅವರು ಸಹ ವಿಜಯ್ ಅವರನ್ನು ಸ್ವಾಗತಿಸಿ ದೇವಸ್ಥಾನಕ್ಕೆ ಕರೆತಂದರು.
ಮೂಕಾಂಬಿಕಾ ದೇವಿಯ ದರ್ಶನ ಪಡೆದ ಬಳಿಕ ವಿಜಯ್ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು, ಅವರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.



