ಮಲೆಗಳಲ್ಲಿ ಮದುಮಗಳ ಸಿಂಗರಿಸಿದ ಕವಿಯ ದರ್ಶನ ವಿಶ್ವಮಾನವ ದಿನಾಚರಣೆಯ ಶುಭಾಶಯಗಳು

1
88

ಯಾರ್ಯಾರೋ ಪರಿಚಿತರಾಗುತ್ತಿರುತ್ತಾರೆ..! ಪರಿಚಯದ ಸಂದರ್ಭದಲ್ಲಿ ನಿಮ್ಮ ಊರು ಯಾವುದೆಂದು ಕೇಳೋದು ಸಹಜ. ನಾನು ಹೆಮ್ಮೆಯಿಂದ ಶಿವಮೊಗ್ಗದವನೆಂದು ಪರಿಚಯ ಮಾಡಿಕೊಳ್ಳುತ್ತೇನೆ. ಶಿವಮೊಗ್ಗ ಅಂದೊಡನೆ ಆಗುಂಬೆ, ಮಳೆಗಾಲ, ಹಸಿರ ಸೀರೆಯನ್ನು ಮೈತುಂಬಾ ಹೊದ್ದು ನಿಂತಿರೋ ಕಾಡುಗಳು ನೆನಪಾಗುತ್ತವೆ.
ಆಗ, ನಾವು ಶಿವಮೊಗ್ಗ, ತೀರ್ಥಹಳ್ಳಿ, ಜೋಗಜಲಪಾತ, ಆಗುಂಬೆ ಬಗ್ಗೆ ಕೇಳಿದ್ದೇವೆ. ಆದರೆ ನೋಡಿಲ್ಲ..! ಒಮ್ಮೆ ಬರಬೇಕು ಕಣ್ರೀ ಅಂತ ಹೇಳುತ್ತಾರೆ.ಆಗುಂಬೆಯನ್ನು ನೋಡಿದವರು ಅಲ್ಲಿನ ಪರಿಸರವನ್ನು ವರ್ಣನೆ ಮಾಡ್ತಾರೆ. ಹೀಗೆ ಶಿವಮೊಗ್ಗ ಜಿಲ್ಲೆ, ಆಗುಂಬೆ ಬಗ್ಗೆ ಮಾತಾಡುವಾಗ ಇಡೀ ಮಲೆನಾಡಿನ ಚಿತ್ರಣವೇ ಎಲ್ಲರ ಕಣ್ಣಮುಂದೆ ಹಾಗೇ ಬಂದು ಹೋಗಿಬಿಡುತ್ತದೆ..!
ಹ್ಞಾಂ, ಮಲೆನಾಡಿನ ಚಿತ್ರಣ ಅಂದೊಡನೆ ಆ ಮಲೆನಾಡ ಕವಿಯ ನೆನಪು ಬಂದೇ ಬರುತ್ತದೆ. ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಹೆಮ್ಮೆಯ ಮಲೆನಾಡಿಗ ತೀರ್ಥಹಳ್ಳಿ, ಕುಪ್ಪಳ್ಳಿಯ ಆ ಕವಿ ಕನ್ನಡ ಸಾರಸ್ವತ ಲೋಕದದಿಗ್ಗಜ. ಅವರೇ ನಮ್ಮ ಕುವೆಂಪು.
ಮಲೆನಾಡಿನ ಬಗ್ಗೆ ತಿಳಿಯುವ ಕುತೂಹಲಕ್ಕೆ ಕುವೆಂಪು ಅವರಕೃತಿಗಳು ನೀರೆಯುತ್ತವೆ..! ಮಲೆನಾಡಿನ ಬಗ್ಗೆ ಮಲೆನಾಡಿಗರೇ ತಿಳಿದ ವಿಷಯಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಕುವೆಂಪು. ಮಲೆನಾಡಿನ ಬಗ್ಗೆ ಗೊತ್ತೇ ಇಲ್ಲದವರಿಗೆ ಇವರ ಕೃತಿಗಳು “ಮಲೆನಾಡ ಅರ್ಥಕೋಶ..”! ಮಲೆನಾಡಿಗರೇ ಆಗಿದ್ದರೂ ಅಂದಿನ ಮಲೆನಾಡನ್ನು ಕಾಣದ ನಮ್ಮಂತವರಿಗೆ ಅದು ಬೆಳಕಿನ ದೀವಿಗೆ..! ಹೇಗಿದ್ದ ಮಲೆನಾಡನ್ನು ನೀವು ಹೇಗೆ ಮಾಡಿಬಿಟ್ಟಿದ್ದೀರಪ್ಪಾ ಅಂತ ನನ್ನಂತ ಯುವ ಪೀಳಿಗೆಯ ಮಲೆನಾಡಿಗರಿಗೆ ಕುವೆಂಪು ಕೃತಿಗಳು ಪ್ರಶ್ನೆ ಮಾಡುತ್ತವೆ..! ಅಷ್ಟೇ ಅಲ್ಲ, ಆ ಸುಂದರ ದಿನಗಳನ್ನು, ಆ ಮಲೆನಾಡಿನಲ್ಲಿ ಕಳೆಯುವ ಯೋಗ್ಯತೆ ನಿಮಗಿಲ್ಲ ಅನ್ನೋದನ್ನು ಮತ್ತೆ ಮತ್ತೆ ಹೇಳುತ್ತಾ ಅಣಕಿಸುತ್ತವೆ.
ಕುವೆಂಪು ಅವರ ಸಾಹಿತ್ಯಗಳಲ್ಲಿಯೂ ಮುಖ್ಯವಾಗಿ ಮಲೆನಾಡ ಸೌಂದರ್ಯವನ್ನು ಹಿಡಿದಿಟ್ಟಿರುವಂತಹವು `ಕಾನೂರು ಹೆಗ್ಗಡತಿ’ ಮತ್ತು’ಮಲೆಗಳಲ್ಲಿ ಮದುಮಗಳು’ಎಂಬ ಎರಡು ಕಾದಂಬರಿಗಳು..!
ಈ ಎರಡೂ ಕಾದಂಬರಿಗಳು ಕೂಡ ಮಲೆನಾಡಿನ ತೀರ್ಥಹಳ್ಳಿ ಸುತ್ತಮುತ್ತಲೇ ಸಾಗುವ ಕುತೂಹಲಕಾರಿ ಕಥಾನಕಗಳು..! ಈ ಕಾದಂಬರಿಗಳು ಕೇವಲ ಕಾದಂಬರಿಗಳಲ್ಲ ಇವು ಮಲೆನಾಡಿನ ಸುಂದರ ಬದುಕಿನಚಿತ್ರಣವೂ ಹೌದು. ಮಲೆನಾಡಿನ ವಾಸ್ತವ ಬದುಕಿನ ಅಕ್ಷರರೂಪವೇ ಈ ಕಾದಂಬರಿಗಳು.
ಕಾನೂರು ಹೆಗ್ಗಡತಿಯ ಕಾದಂಬರಿಯನ್ನು ಓದುತ್ತಾ ಹೋದಂತೆ ಹರಕೆ, ಮೀನು ಹಿಡಿಯುವುದು, ಕಾಡು ಹಂದಿಯನ್ನು ಬೇಟೆಆಡುವುದು, ಅಲ್ಲಿನ ಜಾತಿ ವ್ಯವಸ್ಥೆ, ಮಾಟಮಂತ್ರ, ಮಂತ್ರಿಸದ ತೆಂಗಿನಕಾಯಿಯ ಪವಾಡ.., ಬಲಿ, ಪಾಲು, ಪಂಚಾಯಿತಿ ಇವೇ ಮೊದಲಾದವುಗಳು ನಮ್ಮ ಕಣ್ಣೆದುರೇ ನಡೆಯುತ್ತಲಿವೆಯೇನೋ ಅನ್ನೋ ಹಾಗೆ ಅಕ್ಷರ ರೂಪದಲ್ಲಿ ಕಾಣುತ್ತವೆ..!
ಅಡಿಕೆತೋಟ, ಭತ್ತದ ಗದ್ದೆಯ ಅಕ್ಕ ಪಕ್ಕದಲ್ಲೇ ವಾಸಿಸುವ ಕೂಲಿ ಆಳುಗಳ ಮನೆ. ಅಡಿಕೆ ಸೋಗೆಯ ಗುಡಿಸಲುಗಳು. ಬನಗಳು, ಗಗನಚುಂಬಿ ಮರಗಳು, ಪ್ರಾಣಿ ಪಕ್ಷಿಗಳು ಹೀಗೆ ಸುಂದರವಾದ ಮಲೆನಾಡಿನ ಚೆಲುವನ್ನುಕುವೆಂಪು ವಣರ್ಿಸಿದಷ್ಟು ಸೊಗಸಾಗಿ ಚಿತ್ರಿಸಲು ಯಾರಿಗೂ ಸಾಧ್ಯವೇ ಇಲ್ಲವೇನೋ..!? ವಿಸ್ತಾರವಾದ ಆಕಾಶ, ಪರ್ವತ ಶಿಖರಗಳು, ತುಂಗೆಯ ಝುಳು, ಝುಳು ನಾದ, ಅಂಕು ಡೊಂಕಿನ ಕಿರಿದಾದ ಕಾನನದ ದಾರಿಯಲ್ಲಿ ನದಿಯ ಹರಿವು, ಆ ನದಿಯನ್ನೇ ನೋಡುತ್ತಾ ಖುಷಿಯ ನಗೆ ಬೀರುವ ನೀಲಿ ಆಕಾಶ. ಇಂಥಾ ಸ್ವಚ್ಛಂದದ ಪರಿಸರದಲ್ಲಿ ಪಕ್ಷಿಗಳ ಚಿಲಿಪಿಲಿ. ಇವುಗಳನ್ನೆಲ್ಲಾ ಕುವೆಂಪುರವರು ದೇವರು ರುಜುಮಾಡಿದನು, ರಸವಶನಾಗುತ ಕವಿ ಅದ ನೋಡಿದನು ಅನ್ನುತ್ತಾರೆ..! ನಮಗೆ ಮಲೆನಾಡು ಕೇವಲ ಕಾಡು, ಕಣ್ತಂಪಿನ ತಾಣ..! ಆದರೆ ಕವಿ ಕುವೆಂಪು ಅವರಿಗೆ ಬರಹಕ್ಕೆ ಸ್ಪೂರ್ತಿಯ ಸೆಲೆಯಾಗಿತ್ತು..!
ಕುವೆಂಪು ಕಂಡ ಮಲೆನಾಡಿನಲ್ಲಿ ಇವತ್ತು ಬಹಳಷ್ಟು ಬದಲಾವಣೆಗಳಾಗಿವೆ. ಆಧುನಿಕತೆಗೆ ತೆರೆದುಕೊಂಡಿರೋ ಇವತ್ತಿನ ಮಲೆನಾಡೇ ಬೇರೆ..! ಕುವೆಂಪು ಅವರ ಕೃತಿಗಳನ್ನು ಓದ್ತಾ ಹೋದ್ರೆ ಕೆಲವೊಮ್ಮೆ ನಮ್ಮಂಥವರಿಗೆ ಹೊಟ್ಟೆ ಉರಿಯುತ್ತೆ..! ಛೇ, ನಾವೆಂಥಾ ಪಾಪಿಗಳು. ಅಂಥಾ ಮಲೆನಾಡಿನ ಸೌಂದರ್ಯ ರಾಶಿಯಲ್ಲಿ ಮಿಂದು ಪುಳಕಿತರಾಗುವ ಭಾಗ್ಯ ನಮಗಿಲ್ಲವಲ್ಲ ಅನಿಸುತ್ತೆ..!
ಈಗ ಕುವೆಂಪು ಅವರ ಒಟ್ಟಾರೆ ಸಾಹಿತ್ಯದ ಬಗ್ಗೆ ಸ್ವಲ್ಪ ಗಮನ ಹರಿಸೋಣ. ಏಕೆಂದರೆ ಕುವೆಂಪು ಅವರ ಕೃತಿಗಳು ಕೇವಲ ಮಲೆನಾಡಿನ ಒಳನೋಟ ಮಾತ್ರವಲ್ಲ..! ವಿಶ್ವ ಮಾನವ ಸಂದೇಶ ಸಾರಿದ ಇವರ ಸಾಹಿತ್ಯ ಇಡೀ ವಿಶ್ವ ಸಾಹಿತ್ಯದಲ್ಲಿಯೇ ಎಂದೂ ಅಳಿಸಲಾಗದ ಚಂದದ ಸಾಹಿತ್ಯ ದರ್ಶನ..!
ನಿಮಗೆ ಗೊತ್ತೇ..? ಕುವೆಂಪು ಸಾಹಿತ್ಯ ಲೋಕಕ್ಕೆ ಪರಿಚಿತರಾಗಿದ್ದು ಕನ್ನಡದ ಮೂಲಕ ಅಲ್ಲ..! ಇಂಗ್ಲೀಷ್ ಭಾಷೆಯ ಮೂಲಕ ಸಾಹಿತ್ಯ ಕೃಷಿ ಆರಂಭಿಸಿದವರು..! ನಮ್ಮ ಕನ್ನಡದ ಪಂಪ, ರನ್ನ, ಕುಮಾರ ವ್ಯಾಸ ಮೊದಲಾದ ಕನ್ನಡ ಸಾರಸ್ವತ ಲೋಕದ ಅಪ್ರತಿಮರು ಪ್ರಭಾವ ಬೀರೋ ಮೊದಲೇ “ಷೇಕ್ಸಿಪಿಯರ್” ಮನಸ್ಸಿನಲ್ಲಿ ಅಚ್ಚಾಗಿ ಬಿಟ್ಟಿದ್ದರು..! ಅದೂ ಪ್ರೌಡಶಾಲೆಯಲ್ಲಿ ಕಲಿಯುತ್ತಿರುವಾಗಲೇ..! ಅವರೇ “ನೆನಪಿನ ದೋಣಿಯಲ್ಲಿ” ಹೇಳಿರುವಂತೆ ಷೇಕ್ಸ್ಪಿಯರ್ರಂಥಾ ಮಹಾನ್ ಬರಹಗಾರರ ಬರಹಗಳನ್ನು ಅರ್ಥಮಾಡಿಕೊಳ್ಳುತ್ತಿದ್ದರಂತೆ..!
ಬಿಎ ಪದವಿಗೆ ಪ್ರವೇಶ ಮಾಡೋ ಹೊತ್ತಿಗೇ ಇಂಗ್ಲೀಷ್ ಸಾಹಿತ್ಯ ಹಾಗೂ ಅನುವಾದದ ಮೂಲಕ ರಷ್ಯನ್, ಫ್ರೆಂಚ್, ಜರ್ಮನಿ, ಇಟಾಲಿಯನ್ ಮತ್ತು ಸಂಸ್ಕೃತ ಭಾಷೆಯ ಸಾಹಿತ್ಯಗಳನ್ನೂ ಓದಿ ಅರ್ಥಮಾಡಿಕೊಂಡಿದ್ದರು. ಇದು ಅವರ ಸಾಹಿತ್ಯ ಕೃಷಿ ಮತ್ತು ವಿಕಸನಕ್ಕೆ ನೀರೆರೆಯಿತು.
ಕುವೆಂಪುರ ಕೃತಿಗಳನ್ನು ನೆನಪು ಮಾಡಿಕೊಳ್ಳುತ್ತಿರೋ ಈ ಹೊತ್ತಲ್ಲಿಅವರ ನಾಟಕಗಳ ಬಗ್ಗೆ ಹೇಳಲೇ ಬೇಕಿದೆ. ಏಕೆಂದರೆ ಅವರ ಸಾಹಿತ್ಯ ಸೃಷ್ಟಿ ಇದೆಯಲ್ಲಾ ಅದು ಗಟ್ಟಿಯಾಗಿ ಬೇರೂರಿದ್ದು ಅವರು ಬರದೆ 14 ನಾಟಗಳಿಂದ ಎಂಬುದು ಒಪ್ಪಲೇ ಬೇಕಾದ ಅಂಶ. ಕುವೆಂಪು ಅವರ ನಾಟಕಗಳಲ್ಲಿ `ಶೂದ್ರ ತಪಸ್ವಿ’, ಬೆರಳ್ಗೆ ಕೊರಳ್, ಬಲಿದಾನ ಅತ್ಯಂತ ಪ್ರಮುಖವಾದವೆಂಬುದು ನನ್ನ ಅನಿಸಿಕೆ. ಈ ನಾಟಕಗಳು ಮಾನವೀಯ ಅಂತಃಕರಣದ ವೈಚಾರಿಕ ನಿಲುವುಗಳನ್ನೇ ಕೇಂದ್ರವನ್ನಾಗಿಟ್ಟು ಕೊಂಡಿರುವ ನಾಟಕಗಳು..! ಪ್ರಧಾನ ಸಂಸ್ಕೃತಿಗೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡಿರೋ ಪರ್ಯಾಯ ಸಂಸ್ಕೃತಿ ಮತ್ತು ಅದರ ರಚನಾತ್ಮಕ ನಿರ್ಮಾಣವೇ ಈ ನಾಟಕಗಳ ಆಕರ್ಷಣೀಯ ಹಾಗೂ ಮುಖ್ಯವಾದ ಬೆಳವಣಿಗೆ.
`ಶೂದ್ರ ತಪಸ್ವಿ’ಯಲ್ಲಿ ಪ್ರತಿಭಟನಾತ್ಮಕ ನೆಲೆ ಅರ್ಥಗರ್ಭಿತವಾಗಿ ರೂಪುಗೊಂಡಿದೆ..! ಹೊಸದಾದ ಸಾಮಾಜಿಕ ಮೌಲ್ಯಗಳನ್ನು ಸಮಕಾಲೀನ ವಿದ್ಯಮಾನಗಳಿಗೆ ಹೋಲಿಸಿ ನೋಡಿದ್ದಾರೆ ಕುವೆಂಪು ಅನೇಕ ಅರ್ಥಗಳನ್ನು ಹೊರಡಿಸಬಲ್ಲ ಈ ಶೀರ್ಷಿಕೆ `ಶೂದ್ರ’ ಮತ್ತು ‘ತಪಸ್ವಿ’ ಎಂಬ ಎರಡು ಪದಗಳಿಂದ ಕೂಡಿದ ಹೊಸಬಗೆಯ ಹೊಸದಾದ, ಹೊಸ ಸಾಮಾಜಿಕ ಮೌಲ್ಯವನ್ನು ಎತ್ತಿ ಹಿಡಿಯುವ ಪದವಾಗಿದ್ದು ಕುವೆಂಪು ಅವರೊಳಗಿನ ಸೃಜನಶೀಲ ಬರಹಗಾರನನ್ನು ಪರಿಚಯಿಸುತ್ತದೆ.
ಕುವೆಂಪು ಅವರ ಬರಹಗಳನ್ನೆಲ್ಲಾ ಒಟ್ಟುಗೂಡಿಸಿ ಚರ್ಚಿಸುತ್ತಾ ಹೋದರೆ ಬಹುಶಃ ಚರ್ಚೆಗೆ ಪೂರ್ಣವಿರಾಮ ಇಡುವುದು ಕಷ್ಟಸಾದ್ಯ. ಮಲೆನಾಡಿನ ಅಂದಿನ ವಾಸ್ತವ, ಇಂದಿನ ಸ್ಥಿತಿ, ಮಲೆನಾಡುಮಾತ್ರವಲ್ಲದೇ ಇಡೀ ವ್ಯವಸ್ಥಿತ ಸಮಾಜದಲ್ಲಿ ವ್ಯವಸ್ಥಿತವಾಗಿ ವ್ಯವಸ್ಥೆಯೊಡನೇ ಗಟ್ಟಿಯಾಗಿ ತಳವೂರಿರುವ ಜಾತಿವ್ಯವಸ್ಥೆ ಮತ್ತು ಆ ಜಾತಿ ಚೌಕಟ್ಟು ಮುರಿದು ಹೊರ ಬರುತ್ತಿರುವ ಸಕರಾತ್ಮಕ ಚಿಂತನೆಯ ಆಧುನಿಕ ಸಮಾಜ ಎಲ್ಲವೂ ಕುವೆಂಪುರವರ ಬರಹಗಳಲ್ಲಿ ಓದುಗರಿಗೆ ಸನಿಹ ಅನಿಸುವಷ್ಟರ ಮಟ್ಟಿಗೆ ಅವರದ್ದೇ ಸರಳ ಮತ್ತು ಸ್ವೀಕೃತ ಭಾಷಾ ಪರಿಧಿಯೊಳಗೆ ಸೊಗಸಾಗಿ ಚಿತ್ರಣಗೊಂಡಿದೆ.
ಮಲೆನಾಡನ್ನು ಚಿತ್ರಿಸುವುದರ ಜೊತೆಜೊತೆಗೇನೇ ಸಾಮಾಜಿಕ ವ್ಯವಸ್ಥೆಯ ಮಜಲುಗಳನ್ನೂ ಚಿತ್ರಿಸಿರುವ ಕುವೆಂಪು ಅವರ ಜನ್ಮದಿನ(ಡಿ29). ಸ್ವರ್ಗದಲ್ಲಿರೋ ಜಗದ ಕವಿ ಕುವೆಂಪು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

1 COMMENT

LEAVE A REPLY

Please enter your comment!
Please enter your name here