ಲೋಕಾಯುಕ್ತ ಭರ್ಜರಿ ಕಾರ್ಯಾಚರಣೆ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ, ಲಕ್ಷಾಂತರ ನಗದು ಪತ್ತೆ
ದಾವಣಗೆರೆ: ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಮುಂಜಾನೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಕುರಿತು ಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ದಾವಣಗೆರೆ, ಕಲಬುರಗಿ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ದಾವಣಗೆರೆಯಲ್ಲಿ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಮೂರು ಅಧಿಕಾರಿಗಳನ್ನೊಳಗೊಂಡ 12 ತಂಡಗಳು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿವೆ. ಹುಬ್ಬಳ್ಳಿಯ ಕೆಎಸ್ಆರ್ಟಿಸಿ (ವಾಯವ್ಯ) ವಿಭಾಗದ ಮುಖ್ಯ ಮೆಕ್ಯಾನಿಕ್ ಸಿದ್ದೇಶ್ವರ ಹೆಬ್ಬಾಳ್ ಅವರಿಗೆ ಸೇರಿದ ದಾವಣಗೆರೆಯ ಆಂಜನೇಯ ಬಡಾವಣೆಯ ನಿವಾಸ, ಹುಬ್ಬಳ್ಳಿ ಕಚೇರಿ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಅವರ ಮನೆಯಿಂದ ಸುಮಾರು 40 ಲಕ್ಷ ರೂಪಾಯಿ ನಗದು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಇದೇ ವೇಳೆ ಚಿತ್ರದುರ್ಗ ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೃಷ್ಣ ನಾಯ್ಕ್ ಅವರಿಗೆ ಸೇರಿದ ದಾವಣಗೆರೆ ಮತ್ತು ಚಿತ್ರದುರ್ಗದ ಮನೆ ಹಾಗೂ ಕಚೇರಿ ಸೇರಿ ಐದು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಅಲ್ಲದೆ, ಬೆಳಗಾವಿಯ ಕೆಆರ್ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಅವರಿಗೆ ಸೇರಿದ ಚಿತ್ರದುರ್ಗ, ದಾವಣಗೆರೆ ಹಾಗೂ ಬೆಳಗಾವಿಯ ವಿವಿಧ ಆಸ್ತಿಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲೂ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರ ಆರೋಪದಡಿ ಪರಿಶೀಲನೆ ನಡೆಸಿದ್ದಾರೆ. ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಸೂಪರಿಂಟೆಂಡಿಂಗ್ ಇಂಜಿನಿಯರ್ ಅವರಿಗೆ ಸೇರಿದ ನಗರದ ಗೋದುತಾಯಿ ನಗರ ನಿವಾಸ ಸೇರಿದಂತೆ ಐದು ಸ್ಥಳಗಳಲ್ಲಿ ದಾಳಿ ನಡೆದಿದೆ. ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದಲ್ಲಿರುವ ಮನೆ, ಹುಮ್ನಾಬಾದ್ನ ಎರಡು ವಾಣಿಜ್ಯ ಸಂಕೀರ್ಣಗಳು ಹಾಗೂ ತೋಟದ ಮನೆಯನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಚಿಕ್ಕಮಗಳೂರಿನಲ್ಲೂ ಲೋಕಾಯುಕ್ತ ಅಧಿಕಾರಿಗಳು ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮೋಹನ್ ಅವರಿಗೆ ಸೇರಿದ ಮನೆ ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ತಿರುಮಲೇಶ್ ನೇತೃತ್ವದ ತಂಡ ಕಡೂರಿನಲ್ಲಿ ಇರುವ ಅವರ ಸಂಬಂಧಿಕರ ನಿವಾಸದಲ್ಲಿಯೂ ಪರಿಶೀಲನೆ ನಡೆಸಿದ್ದು, ಅಕ್ರಮ ಆಸ್ತಿ ಗಳಿಕೆ ಸಂಬಂಧ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
ಲೋಕಾಯುಕ್ತ ಅಧಿಕಾರಿಗಳ ಈ ಕಾರ್ಯಾಚರಣೆಯಿಂದ ಸಂಬಂಧಿತ ಅಧಿಕಾರಿಗಳ ಆಸ್ತಿ-ಪಾಸ್ತಿಗಳ ದಾಖಲೆಗಳು, ಹಣಕಾಸು ವ್ಯವಹಾರಗಳು ಹಾಗೂ ಅಕ್ರಮ ಆಸ್ತಿ ಸಂಪಾದನೆ ಕುರಿತ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ. ತನಿಖೆಯ ಬಳಿಕ ಹೆಚ್ಚಿನ ವಿವರಗಳು ಹೊರಬೀಳುವ ಸಾಧ್ಯತೆ ಇದೆ.



