ಅಪ್ಪ, ನಾನು ಅವನನ್ನು ತುಂಬಾ ಲವ್ ಮಾಡ್ತಿದೀನಿ…!

1
82
ಅವಳು ಅಪ್ಪನೆದುರು ಮಂಡಿಯೂರಿ ಕೂತಿದ್ಲು. ಕಣ್ಣಲ್ಲಿ ನೀರು ಧರಧರನೆ ಸುರೀತಾನೇ ಇತ್ತು..! `ಅವನು ಅಂದ್ರೆ ನಂಗೆ ಸಖತ್ ಇಷ್ಟ ಅಪ್ಪ, ನಾನು ಅವನನ್ನು ತುಂಬಾ ಲವ್ ಮಾಡ್ತೀನಿ. ಅವನು ಇಲ್ಲ ಅಂದ್ರೆ ನಾನು ಸತ್ತೇ ಹೋಗ್ತೀನಿ, ಪ್ಲೀಸ್ ಮದ್ವೆ ಮಾಡಿಕೊಡಿ’ ಅಂತ ಗೋಗರೀತಾ ಇದ್ಲು..! ಅವಳ ಮಾತಿಗೆ ಕಿವಿಗೊಡದೇ ಅಪ್ಪ ಹೊರಗೆ ಹೋಗಿದ್ದ..!
ಅವಳ ಹೆಸರು ಶಾಶ್ವತ..! ಈಗ ತಾನೇ ಡಿಗ್ರಿ ಮುಗಿಸಿದ್ದಾಳೆ. ಅವಳು ಆ ಆ‍ಏರಿಯಾದ ಸುಂದರಿಯರಲ್ಲೊಬ್ಬಳು. ಅವಳ ಹಿಂದೆ 3 ವರ್ಷದಿಂದ ಸುತ್ತುತಿರೋ ಹುಡುಗ ಶ್ರವಂತ್. ಲವ್ ಶುರುವಾಗಿ 4-5 ತಿಂಗಳಾಗಿದೆ ಅಷ್ಟೆ..! ಅವನು ಕಂಪನಿಯೊಂದರಲ್ಲಿ 25 ಸಾವಿರ ಸಂಬಳ ತಗೊಳೋ ಉದ್ಯೋಗಿ. ಹುಡುಗ ಒಳ್ಳೆಯವನೇ, ಅಪ್ಪ ಅಮ್ಮನೂ ಅಷ್ಟೆ. ಆಸ್ತಿಪಾಸ್ತಿ ಅಂತ ಇಲ್ಲ, ಆದ್ರೂ ಹೃದಯ ಶ್ರೀಮಂತಿಕೆಗೇನು ಕೊರತೆ ಇಲ್ಲ..! ಈ ಕಡೆ ಶಾಶ್ವತನ ಮನೆಯವರು ಆಗರ್ಭ ಅಲ್ಲದಿದ್ರೂ ಶ್ರೀಮಂತರೇ. ಜಯನಗರದಲ್ಲೊಂದು ಸ್ವಂತ ಮನೆ ಇದೆ. ಅವರಪ್ಪ ದೊಡ್ಡ ಕಂಪನಿಯೊಂದರ ಸೀನಿಯರ್ ಆಫೀಸರ್. ಅಮ್ಮನಿಗೂ ಕಂಪನಿಯೊಂದರಲ್ಲಿ ಕೆಲಸ. ಟೋಟಲಿ ದುಡ್ಡಿಗೆ ಕೊರತೆಯಿಲ್ಲದ ಕುಟುಂಬದ ಏಕೈಕ ಪುತ್ರಿ ಈ ಶಾಶ್ವತ..! ಶ್ರವಂತ್ ಎಷ್ಟೇ ಬೆನ್ನು ಬಿದ್ದರೂ ಯಾವತ್ತೂ ಅವನನ್ನು ಎಡಗಣ್ಣಿನ ಅಂಚಲ್ಲೂ ಅವನನ್ನು ನೋಡಿದವಳಲ್ಲ ಶಾಶ್ವತ..! ಅವನು ಆಫೀಸಿಗೆ ಹೋಗೋಕೆ ಮುಂಚೆ ಇವಳನ್ನು ನೋಡೋಕೆ ಬರೋನು, ಸಂಜೆ ಅವಳು ಮನೆಗೆ ಹೋಗೋವರೆಗೂ ಅವಳ ಹಿಂದೆ ಬಿದ್ದಿರೋನು. ಆದ್ರೆ ಹಠ ಬಿಡದ ಶ್ರವಂತ್ ಕೊನೆಗೂ ಅವಳನ್ನು ಪ್ರೀತಿಯಲ್ಲಿ ಬೀಳಿಸೋದ್ರಲ್ಲಿ ಸಕ್ಸಸ್ ಆಗಿದ್ದ..! ಈಗ ನಾಲ್ಕೈದು ತಿಂಗಳಿಂದ ಇವರಿಬ್ಬರ ಲವ್ ಸ್ಟೋರಿಯ ಪುಟಗಳು ಓಪನ್ ಆಗಿವೆ..! ಬೆಂಗಳೂರಿನ ಸಾಕಷ್ಟು ಮಾಲ್ ಗಳು ಇವರಿಬ್ಬರನ್ನು ಸಿಸಿಟಿವಿಯಲ್ಲಿ ಸೆರೆಹಿಡಿದಿವೆ..! ಅವನ ಬೈಕಿನ ಹಿಂದಿನ ಸೀಟಂತೂ ಅವಳು ಕೂರದಿದ್ದರೇ ಬೈಕೇ ಮುಂದೆ ಹೋಗಲ್ಲ ಅನ್ನೋ ಅ‍‍‍‍‍‍‍‍‍ಷ್ಟು ಅವಳಿಗೆ ಅಡಿಕ್ಟ್ ಆಗಿದೆ..! ಪಾರ್ಕ್, ಸಿನಿಮಾ, ಹೋಟೆಲ್ ಅವರ ದಿನನಿತ್ಯ ಜೀವನದ ಅವಿಭಾಜ್ಯ ಅಂಗ..! ಆಫೀಸ್ ಮತ್ತು ಕಾಲೇಜ್ ಹತ್ತಿರವೇ ಇದ್ದಿದ್ರಿಂದ `ಜೊತೆಯಲಿ ಜೊತೆಜೊತೆಯಲಿ..!’
ಹೀಗೇ ಎಷ್ಟು ದಿನ ನಡೆಯುತ್ತೆ..? ಕಾಲೇಜು ಮುಗೀತು, ಇನ್ನು ಮದುವೆ ಮಾಡಿಬಿಡೋಣ ಅಂತ ಅವಳಪ್ಪ ಅಮ್ಮ ಡಿಸೈಡ್ ಮಾಡಿದ್ದಾಯ್ತು. ಆದ್ರೆ ಇವಳು ಒಪ್ಪಬೇಕಲ್ಲಾ..! ನೋ ಚಾನ್ಸ್, ಅವನು ಬೇಡ, ಇವನು ಬೇಡ, ಅವನಿಗೆ ಮೂಗು ಸರಿ ಇಲ್ಲ, ಇವನ ಹೊಟ್ಟೆ ದಪ್ಪ, ಕಲರ್ ಕಡಿಮೆ ಅಂತ ಇಲ್ಲಸಲ್ಲದ ಕಾರಣ ಹೇಳಿ ಮದುವೆ ಮುಂದೆ ಹಾಕ್ತಾನೇ ಇದ್ಲು…! ಅಮ್ಮನಿಗ್ಯಾಕೆ ಡೌಟಾಯ್ತು, `ಶಾಶ್ವತ, ಯಾರನ್ನಾದ್ರೂ ಲವ್ ಮಾಡ್ತಿದೀಯಾ..?’ ಹೌದು ಅಂತ ತಲೆ ಆಡಿಸಿಯೇ ಬಿಟ್ಲು ಶಾಶ್ವತ..! ಅಮ್ಮನಿಗೆ ಶಾಕ್, ಆದ್ರೂ ಮಗಳ ಮನಸ್ಸು ನೋಯಿಸೋದು ಬೇಡ ಅಂತ ಡಿಸೈಡ್ ಮಾಡಿದ್ರು..! ಸರಿ, ನಾಳೆ ನನ್ನ ಆಫೀಸ್ ಹತ್ತಿರ ಅವನನ್ನು ಕರ್ಕೊಂಡ್ ಬಾ, ಮಾತಾಡ್ತೀನಿ. ಈಗ ಮಲಗು ಅಂತ ಅವಳನ್ನು ಮಲಗಿಸಿ ಹೊರಟುಹೋದ್ರು,…!
ಮಾರನೇ ದಿನ ಅಮ್ಮನ ಆಫೀಸಿನ ಹತ್ತಿರದ ಹೋಟೆಲಿನಲ್ಲಿ ಮೂರೂ ಜನರ ಭೇಟಿ, ಶಾಶ್ವತ ಮತ್ತು ಶ್ರವಂತ್ ತಲೆ ಎತ್ತಲೇ ಇಲ್ಲ..! `ಈಗಲೇ ತಲೆ ಎತ್ತದಿದ್ರೆ, ನಾಳೆ ನನ್ನ ಮಗಳನ್ನು ತಲೆ ಎತ್ತಿ ತಿರುಗೋ ಹಾಗೆ ನೋಡ್ಕೊಳೋದು ಹೇಗಪ್ಪಾ..? ಅಂದ್ರು ಅವಳಮ್ಮ..! ಇವನಿಗೆ ಧೈರ್ಯ ಬಂತು, ಮಾತು ಶುರು ಮಾಡ್ದ. ತನ್ನ ಬಗ್ಗೆ ಇರೋ ಬರೋದನ್ನೆಲ್ಲಾ ಹೇಳಿಕೊಂಡ. ಓಪನ್ ಆಗಿ ಎಲ್ಲವನ್ನೂ ಹೇಳಿಬಿಟ್ಟ. ಅವಳಮ್ಮನಿಗೂ ಹುಡುಗ ಇಷ್ಟ ಆದ..! ಬಡವ ಅನ್ನೋದು ಬಿಟ್ರೆ ಮತ್ಯಾವುದ್ರಲ್ಲೂ ಬಡತನ ಇಲ್ಲ ಅನ್ನಿಸ್ತು..! ನಂಗೆ ಓಕೆ, ಆದ್ರೆ ಇವಳಪ್ಪನನ್ನು ಒಪ್ಪಿಸೋದು ಸುಲಭ ಇಲ್ಲ..! ನೋಡೋಣ ಏನಾಗುತ್ತೆ ಅಂತ ಹೇಳಿ, ಒಳ್ಳೇದಾಗ್ಲಿ ಅಂತ ಶುಭ ಹಾರೈಸಿ ಎದ್ದು ಹೋದ್ರು..! ಖುಷಿಯಲ್ಲಿ ಶ್ರವಂತ್ ಹಾಗೂ ಶಾಶ್ವತ ಕುಣಿದಾಡಿದ್ರು..! ಆದ್ರೆ ನಿಜವಾದ ಸವಾಲಿರೋದು ಈಗಲೇ, ಅದೇ ಅವಳಪ್ಪ..! ಅವಳಪ್ಪನ ಕಿವಿಗೆ ಅವರಮ್ಮ ವಿಷಯ ಹಾಕಿದ್ದಾರೆ, ಈಗ ಮನೆಯಲ್ಲಿ ರಾದ್ಧಾಂತ ಶುರುವಾಗಿದೆ. ಅವಳನ್ನು ಕರೆದು ವಿಷಯ ಕೇಳಿದ್ದೇ ತಡ, ಅವಳು ಮಂಡಿಯೂರಿ ಕಣ್ಣೀರು ಹಾಕೋಕೆ ಶುರು ಮಾಡಿದ್ದಾಳೆ…!
ಸಂಜೆ ಅಪ್ಪ ಮನೆಗೆ ಬಂದವರೇ ಮಗಳ ಜೊತೆ ಮಾತಿಗೆ ಕೂತ್ರು..! ಅವನು ನಿನ್ನ ಚೆನ್ನಾಗಿ ನೋಡ್ಕೋತಾನೆ ಅಂತ ನಿನಗೆ ಅನ್ಸುತ್ತಾ..? ಅವನ ಜೊತೆ ಮದುವೆ ಮಾಡಿಕೊಟ್ರೆ ನೀನು ಖುಷಿಯಾಗಿರ್ತೀಯಾ..? ಹೀಗೆ ಏನೇ ಕೇಳಿದ್ರೂ ಹೌದು ಹೌದು ಅಂತ ತಲೆ ಆಡಿಸ್ತಾ ಇದ್ಲು ಶಾಶ್ವತ! ಮಗಳು ಇಷ್ಟಪಟ್ಟ ಮೇಲೆ ಇನ್ನೇನಿದೆ? ಅವಳ ಸಂತೋಷವೇ ನಮ್ಮ ಸಂತೋಷ ಅಂತ ಮದುವೆಗೆ ಸಿದ್ಧತೆ ಮಾಡಿಕೊಂಡ್ರು..! ಅದಾಗಿ ತಿಂಗಳೋಳಗೆ ಅವರಿಬ್ಬರ ಮದುವೆಯಾಗಿತ್ತು..! ಇನ್ನು ಅವರ ಸಂಸಾರ ನೌಕೆ ಆರಂಭವಾಯ್ತು..! ಪ್ರೀತಿಯಲ್ಲಿದ್ದ ದಿನಗಳಿಗೂ, ಮದುವೆಯಾದ ಮೇಲಿನ ದಿನಗಳಿಗೂ ತುಂಬಾ ವ್ಯತ್ಯಾಸ ಇದೆ ಅಂತ ಆಗಲೇ ಅವರಿಬ್ಬರಿಗು ಗೊತ್ತಾಗಿದ್ದು..! ಬೈಕಲ್ಲಿ ಸುತ್ತೋದು ಈಗ ಅಷ್ಟು ಸುಲಭವಲ್ಲ. ಈಗ ಗಂಡ ಕೆಲಸಕ್ಕೆ ಹೋಗಬೇಕು, ಮನೆಯಲ್ಲೇ ಕೂತಿದ್ರೆ ತಿನ್ನೋದೇನು..? ಬರೋದು 25 ಸಾವಿರ ಸಂಬಳ..! ಅಪ್ಪನ ಹತ್ತಿರ ಕೇಳೋಕೆ ಸ್ವಾಭಿಮಾನ ಅಡ್ಡ ಬರುತ್ತೆ..! ಅಡ್ಜಸ್ಟ್ ಮಾಡಿಕೊಳ್ಳೋಣ ಅಂದ್ರೆ ಈ ಅಡ್ಜಸ್ಟ್ ಮೆಂಟ್ ಜೀವನ ಅವಳಿಗೆ ಗೊತ್ತಿಲ್ಲ..! ಹೀಗೇ ಎಷ್ಟು ದಿನ ನಡೆಯುತ್ತೆ..? ಸಣ್ಣಪುಟ್ಟ ವಿಚಾರಗಳಿಗೂ ಜಗಳ ಶುರುವಾಯ್ತು. ಅವನು ಎಷ್ಟೇ ಬಿಡಿಸಿ ಹೇಳಿದ್ರೂ ಅವಳು ತನ್ನ ಈಗಿನ ಜೀವನವನ್ನು ತನ್ನ ಮನೆಗೆ ಕಂಪೇರ್ ಮಾಡೋಕೆ ಶುರು ಮಾಡಿದ್ಲು..! ಕ್ರಮೇಣ ಮನೆಯ ವಾತಾವರಣವೂ ಹಾಳಾಗ್ತಾ ಹೋಯ್ತು..! ಪ್ರತಿದಿನ ಇವಳನ್ನು ಹೊರಗೆ ಸುತ್ತಿಸೋದು ಅವನಿಗೆ ಸಾಧ್ಯವಿರಲಿಲ್ಲ. ಅವಳಿಗೆ ಒಳ್ಳೆಯ ಜೀವನ ಕೊಡಬೇಕು ಅನ್ನೋ ಕಾರಣಕ್ಕೆ ಸಿಕ್ಕಸಿಕ್ಕ ಕೆಲಸವನ್ನೆಲ್ಲಾ ಮಾಡೋನು. ಆದ್ರೆ ಅವಳಿಗೆ ಇದ್ಯಾವುದೂ ಅರ್ಥ ಆಗ್ತಿರಲಿಲ್ಲ..! ಗಂಡ ಜೊತೆಗೇ ಇರಬೇಕು ಅಂತ ಎಕ್ಸ್ ಪೆಕ್ಟ್ ಮಾಡೋಳು, ಆದ್ರೆ ಜೊತೆಗಿದ್ದಾಗ್ಲೆಲ್ಲಾ ಅವನನ್ನು ಅವರಪ್ಪನ ಜೊತೆ ಕಂಪೇರ್ ಮಾಡಿ ಇರಿಟೇಟ್ ಮಾಡೋಳು..! ಅವನು ಎಷ್ಟೇ ಹೇಳಿದ್ರೂ ಅವಳಿಗೆ ಕೇಳುವ ವ್ಯವಧಾನವೂ ಇರಲಿಲ್ಲ..! ಹೀಗೇ ಎಷ್ಟು ದಿನ ನಡೆಯುತ್ತೆ.? ಕೊನೆಗೊಂದು ದಿನ ಹೀಗೇ ಇರಿಟೇಟ್ ಆಗಿ ಆಗಿ ತಾಳ್ಮೆ ಕಳೆದುಕೊಂಡ ಶ್ರವಂತ್ ಅವಳ ಕೆನ್ನೆಗೆ ಬಾರಿಸಿಬಿಟ್ಟ..! ಅದಕ್ಕೆ ಆಗಲೇ ಕ್ಷಮೆಯೂ ಕೇಳ್ದ. ಆದ್ರೆ ಅವಳು ಅದನ್ನು ಕೇಳೋಕೆ ರೆಡಿ ಇರಲಿಲ್ಲ..! ಇದನ್ನೆಲ್ಲಾ ನೊಡಿ ಅವನ ಅಪ್ಪಅಮ್ಮ ಸಹ ಬೇಸತ್ತು ಹೋದ್ರು..! ಅವಳು ತನ್ನೆಲ್ಲಾ ಬಟ್ಟೆ ಪ್ಯಾಕ್ ಮಾಡಿಕೊಂಡು ಮನೆಯಿಂದ ಆಟೋ ಹತ್ತಿ ಹೊರಟೇ ಬಿಟ್ಲು..! ಮತ್ತೆ ಬರಲೇ ಇಲ್ಲ…! ಇವನು ತುಂಬಾ ಅಪ್ ಸೆಟ್ ಆದ, ಅವಳಿಗೆ ನೂರು ಸಲ ಫೋನ್ ಮಾಡಿದ್ರು ಅವಳು ಎತ್ತಲೇ ಇಲ್ಲ..! ಅವಳ ಮನೆಗೆ ಹೋದ್ರೆ ಅವಳ ಅಪ್ಪ ಅಮ್ಮ ಇವನಿಗೇ ಬಯ್ದು ಕಳಿಸಿಬಿಟ್ರು..! ಇನ್ನು ಸುಮ್ಮನೇ ಕೂರೋದು ಬೇಡ ಅಂತ ಡಿಸೈಡ್ ಮಾಡಿದವನೇ ಹಠಕ್ಕೆ ಬಿದ್ದು ದುಡಿದ..! ರಾತ್ರಿ ಹಗಲು ದುಡಿದ..! ಇವತ್ತು ಅವನ ಬಳಿ ಎಲ್ಲವೂ ಇದೆ, ಆದ್ರೆ ಅವಳಿಲ್ಲ..! ಅವಳ ಬಳಿಯೂ ಎಲ್ಲವೂ ಇದೆ, ಆದ್ರೆ ಅವನಿಲ್ಲ..! ದುಡ್ಡಿಲ್ಲ ಅಂತ ಹೋದವಳನ್ನು ಕರ್ಕೊಂಡ್ಬರಬೇಕಾ ಅಂತ ಶ್ರವಂತ್ ಯೋಚನೆ ಮಾಡಿದ್ರೆ, ದುಡ್ಡಿಲ್ಲದಾಗ ಬಿಟ್ಟು ಬಂದವಳು ಈಗ ವಾಪಸ್ ಹೋದ್ರೆ ಮರ್ಯಾದೆ ಇರುತ್ತಾ ಅಂತ ಶಾಶ್ವತ ಯೋಚನೆ ಮಾಡ್ತಿದ್ದಾಳೆ..! ಇಬ್ಬರ ಈಗೋ ಅವರಿಬ್ಬರನ್ನೂ ದೂರ ಮಾಡಿದೆ..!  ಸುಖದಲ್ಲಿದ್ದವರು ಮದುವೆಯಾದ ಮೇಲೆ ಕೆಲವು ಸುಖಗಳನ್ನು ಸ್ವಲ್ಪ ದಿನ ಕಳ್ಕೋಬೋದು. ಆದ್ರೆ ಅದೇ ಶಾಶ್ವತ ಅಲ್ಲ.. ಸ್ವಲ್ಪ ದಿನ ಸಪೋರ್ಟ್ ಮಾಡಿನೋಡಿ.. ನೆಮ್ಮದಿಯ ನಾಳೆಗಳು ನಿಮ್ಮದಾಗುತ್ತೆ..! ಪ್ರೀತಿಸೋ ಲೈಫೇ ಬೇರೆ, ಮ್ಯಾರೀಡ್ ಲೈಫೇ ಬೇರೆ..!  ಪ್ರೀತಿಸೋ ಟೈಮಲ್ಲಿ ನಿಮಗೆ ಗಂಡನಾಗುವವನ ಕಮಿಂಟ್ ಮೆಂಟ್ ಗಳು ಗೊತ್ತಿರೋದಿಲ್ಲ, ಆದ್ರೆ ಮದುವೆಯಾದಮೇಲೆ ನೀವೂ ಅದೆಲ್ಲದರ ಜೊತೆಗೇ ಇರ್ತೀರಿ..! ಜೊತೆಯಾಗಿರಿ, ಖುಷಿಯಾಗಿರಿ..! ಲೈಫ್ ಸಹ ಖುಷಿಖುಷಿಯಾಗಿರುತ್ತೆ..! ಪ್ರೀತಿಸಿ ಮದುವೆಯಾದಮೇಲೆ ನಿಮ್ಮ ಲೈಫ್ ಸಹ ಶ್ರವಂತ್, ಶಾಶ್ವತ ತರ ಆಗದಿರಲಿ…! ಹ್ಯಾಪಿ ಮ್ಯಾರೀಡ್ ಲೈಫ್…!
– ಕೀರ್ತಿ ಶಂಕರಘಟ್ಟ

1 COMMENT

LEAVE A REPLY

Please enter your comment!
Please enter your name here