ಸ್ಯಾಂಡಲ್ ವುಡ್ ಮೋನಾಲಿಸ , ಚಾರ್ ಮಿನಾರ್ ಬೆಡಗಿ ಮೇಘನಾ ಗಾಂವ್ಕರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಕನ್ನಡದ ಬಹುಬೇಡಿಕೆಯ ನಟಿಯರ ಸಾಲಿನಲ್ಲಿಂದು ಮುಂಚೂಣಿಯಲ್ಲಿರುವ ಇವರು ಚಿತ್ರರಂಗದ ಯುವ ಅದ್ಭುತ ಕಲಾವಿದೆ ಮಾತ್ರವಲ್ಲ, ಅತ್ಯುತ್ತಮ ನೃತ್ಯಗಾರ್ತಿಯೂ ಹೌದು.
ಮೇಘನಾ ಹುಟ್ಟಿದ್ದು ಗುಲ್ಬರ್ಗದಲ್ಲಿ. ಶರಣ ಬಸವೇಶ್ವರ ವಸತಿ ಶಾಲೆಯಲ್ಲಿ ಆರಂಭಿಕ ಹಂತದ ಶಿಕ್ಷಣವನ್ನು ಪಡೆದರು. ಬೆಂಗಳೂರಿನ ಮಹಾವೀರ ಜೈನ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಹಾಗೂ ಬೆಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ (ಇಂಗ್ಲಿಷ್) ಪಡೆದಿದ್ದಾರೆ.
ಓದಿನ ಕಡೆ ಆಸಕ್ತಿ ಇದ್ದರೂ ಮನಸೆಳೆದಿದ್ದು ಚಿತ್ರರಂಗದ ಕಡೆಗೆ.
2003ರಲ್ಲಿ ಮಿಸ್ ಗಾರ್ಡನ್ ಸಿಟಿ ಬೆಂಗಳೂರು, ಮಿಸ್ ಬ್ಯುಟಿಫುಲ್ ಸ್ಮೈಲ್ ಕಿರೀಟವನ್ನು ಮುಡಿಗೇರಿಸಿಕೊಂಡ ಮೇಘನಾ ಹಂತ ಹಂತವಾಗಿ ಕಲಾಭೂಮಿಯಲ್ಲಿ ತನ್ನ ಛಾಪು ಮೂಡಿಸುತ್ತಾ ಬಂದಿದ್ದಾರೆ.
ಒಳ್ಳೆಯ ಭರತನಾಟ್ಯ ಕಲಾವಿದೆ ಸಹ ಆಗಿರುವ ಮೇಘನಾ ಕನ್ನಡ ಚಾನಲ್ ಗಳಲ್ಲಿ ಕಾರ್ಯಕ್ರಮಗಳ ನಿರೂಪಕಿಯಾಗಿ ಆರಂಭದ ದಿನಗಳಲ್ಲಿ ಗುರುತಿಸಿಕೊಂಡರು. ಕುಣಿಯೋಣ ಬಾರ, ಸ್ಟಾರ್ ಡಿಶ್ ಡಿಶುಂ , ಪ್ರೀತಿಯ ಕನ್ನಡಿಗ ಮೊದಲಾದ ಶೋ ಗಳು ಇವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟವು.
ಚಿತ್ರರಂಗ ಪ್ರವೇಶಿಸುವ ಮೊದಲು ರಂಗಶಂಕರ, ಅಲಯನ್ಸ್ ಫ್ರಾಂಚೈಸ್ ಗಳಲ್ಲಿ ಅನೇಕ ಇಂಗ್ಲಿಷ್ ಮತ್ತು ಕನ್ನಡ ನಾಟಕಗಳಲ್ಲಿ ಅಭಿನಯಿಸಿದ ಅನುಭವದ ಬುತ್ತಿ ಕೂಡ ಇವರೊಡನೆ ಇತ್ತು.
2010 ರಲ್ಲಿ ‘ನಮ್ ಏರಿಯಾಲಿ ಒಂದಿನ’ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಇವರು ವಿನಾಯಕ ಗೆಳಯರ ಬಳಗ, ತುಘಲಕ್, ಭಕ್ತ ಶಂಕರ, ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ ಚಿತ್ರಗಳಲ್ಲಿ ನಟಿಸಿದ್ದಾರೆ. ಚಾರ್ ಮಿನಾರ್ ಸಿನಿಮಾ ಇವರ ಜನಪ್ರಿಯತೆ ,ಕೀರ್ತಿಯನ್ನು ಹೆಚ್ಚಿಸಿದ ಸಿನಿಮಾ. ಈ ಮೂಲಕ ಮೇಘನಾ ಚಾರ್ ಮಿನಾರ್ ಬೆಡಗಿ ಎಂದೇ ಹೆಸರಾಗಿದ್ದಾರೆ. ಚೆಲುವಿನಿಂದ ಕನ್ನಡದ, ಸ್ಯಾಂಡಲ್ ವುಡ್ ನ ಮೋನಾಲಿಸಾ ಎಂಬ ಬಿರುದನ್ನು ಅಭಿಮಾನಿಗಳಿಂದ ಸಂಪಾದಿಸಿದ್ದಾರೆ.
ಇವತ್ತು ಇವರ ಹುಟ್ಟುಹಬ್ಬ…..ಜನ್ಮದಿನದ ಶುಭಾಶಯಗಳು ಮೇಘನ…..