ನಂದಿನಿ ಹಾಲಿನ ದರ ಮತ್ತೆ ಏರಿಕೆಯಾಗುತ್ತಾ? ಲೀಟರ್ ಗೆ ₹8 ಹೆಚ್ಚಳಕ್ಕೆ ಹಾಲು ಉತ್ಪಾದಕರ ಒಕ್ಕೂಟಗಳ ಪ್ರಸ್ತಾವನೆ
ಬೆಂಗಳೂರು: ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ಮುಂದುವರಿದಿರುವ ಬೆನ್ನಲ್ಲೇ, ಇದೀಗ ನಂದಿನಿ ಹಾಲಿನ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಎದುರಾಗಿದೆ. ಲೀಟರ್ ಹಾಲಿನ ದರವನ್ನು ₹8 ಹೆಚ್ಚಿಸುವಂತೆ ರಾಜ್ಯದ ಹಲವು ಹಾಲು ಉತ್ಪಾದಕರ ಒಕ್ಕೂಟಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಂಡ್ಯ, ಶಿವಮೊಗ್ಗ, ಚಾಮರಾಜನಗರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ಹಾಲು ಉತ್ಪಾದಕರ ಒಕ್ಕೂಟಗಳ ಪ್ರತಿನಿಧಿಗಳು, ಪ್ರತಿ ಲೀಟರ್ ಹಾಲಿನ ದರವನ್ನು ₹8 ಹೆಚ್ಚಿಸುವುದರ ಜೊತೆಗೆ ರೈತರಿಗೆ ನೀಡುವ ಪ್ರೋತ್ಸಾಹ ಧನವನ್ನೂ ₹8ಕ್ಕೆ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಳೆದ ಎಂಟು ತಿಂಗಳಿನಿಂದ ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಒಕ್ಕೂಟಗಳ ಪ್ರತಿನಿಧಿಗಳು ಹೇಳಿದ್ದಾರೆ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಹಾಲಿನ ದರ ಪರಿಷ್ಕರಣೆ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಹಾಲಿನ ದರ ಹೆಚ್ಚಳದ ಬೇಡಿಕೆಯನ್ನು ಸರ್ಕಾರ ಪರಿಗಣಿಸದಿದ್ದರೆ ಮೂರು ದಿನಗಳೊಳಗೆ ವಿಧಾನಸೌಧ ಚಲೋ ನಡೆಸುವುದಾಗಿ ಹಾಲು ಉತ್ಪಾದಕರ ಒಕ್ಕೂಟಗಳು ಎಚ್ಚರಿಕೆ ನೀಡಿವೆ.
ಹಾಲಿನ ದರ ಏರಿಕೆಗೆ ಹಲವು ಕಾರಣಗಳನ್ನು ಒಕ್ಕೂಟಗಳು ಮುಂದಿಟ್ಟಿವೆ. ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಮಳೆಯ ಕೊರತೆಯಿಂದ ಹಸಿರು ಮೇವು ಸೇರಿದಂತೆ ಪಶು ಆಹಾರದ ಸಮಸ್ಯೆ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಶು ಆಹಾರಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳು, ಮೆಕ್ಕೆಜೋಳ, ಇಂಡಿ-ಬೂಸಾ ಸೇರಿದಂತೆ ವಿವಿಧ ವಸ್ತುಗಳ ದರ ಏರಿಕೆಯಾಗಿದೆ. ರಾಸುಗಳಿಗೆ ಬಳಸುವ ನೆಲಹಾಸಿನ ಬೆಲೆಯಲ್ಲೂ ಹೆಚ್ಚಳವಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಪರಿಣಾಮವೂ ಹಾಲು ಉತ್ಪಾದನಾ ವೆಚ್ಚದ ಮೇಲೆ ಬಿದ್ದಿದೆ ಎಂದು ಒಕ್ಕೂಟಗಳು ವಿವರಿಸಿವೆ.
ಮಳೆ ಕೊರತೆ, ಮೇವು ಮತ್ತು ಪಶು ಆಹಾರದ ಬೆಲೆ ಏರಿಕೆ ಸೇರಿದಂತೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವನ್ನು ಪರಿಗಣಿಸಿ ಹಾಲಿನ ದರ ಹೆಚ್ಚಿಸಬೇಕು. ರೈತರಿಗೆ ನೀಡುವ ಪ್ರೋತ್ಸಾಹ ಧನವನ್ನೂ ಹೆಚ್ಚಿಸಬೇಕು ಎಂಬುದು ಹಾಲು ಉತ್ಪಾದಕರ ಒಕ್ಕೂಟಗಳ ಪ್ರಮುಖ ಬೇಡಿಕೆಯಾಗಿದೆ.
ಈ ಪ್ರಸ್ತಾವನೆಗೆ ಸರ್ಕಾರ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ. ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದರೆ ನಂದಿನಿ ಹಾಲಿನ ದರದಲ್ಲಿ ಮತ್ತೊಮ್ಮೆ ಏರಿಕೆಯಾಗುವ ಸಾಧ್ಯತೆ ಇದೆ.



