ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

0
65

ಇಸ್ಲಾಂ ಮಹಾನ್ ಧರ್ಮ. ಈ ಮಾತನ್ನು ಓವೈಸಿ ಹೇಳಿದ್ದರೇ, `ಬಿಡಪ್ಪಾ.. ಅವ್ರು ಅವರ ಧರ್ಮದ ಬಗ್ಗೆ ಹೇಳುತ್ತಾರೆ’ ಎನ್ನಬಹುದಿತ್ತು. ಆದರೆ ಈ ಮಾತನ್ನು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ. ಮೋದಿ ಮುಸ್ಲೀಮರ ವಿರೋಧಿ ಎಂದು ಸಾಬೀತುಪಡಿಸುವ ಪ್ರಯತ್ನವಾದಷ್ಟು ಅವರು ಮುಸಲ್ಮಾನರಿಗೆ ಹತ್ತಿರವಾಗುತ್ತಿದ್ದಾರೆ. ಸರ್ವಜನರನ್ನು ಪ್ರೀತಿಸುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದ್ದಾರೆ. ಒಂದು ದೇಶದ ಚುಕ್ಕಾಣಿ ಹಿಡಿದ ನಾಯಕನಿಂದ ಪ್ರಜ್ಞಾವಂತರು ನಿರೀಕ್ಷಿಸುವುದು ಇಂತಹ ಸೌಹಾರ್ದ ಬದಲಾವಣೆಗಳೇ ಅಲ್ವೇ..?

ವಿರೋಧಿಗಳಿಗೆ ಟೀಕಿಸುವುದೇ ಜನ್ಮಸಿದ್ಧ ಹಕ್ಕಾಗಿದೆ. ಅವರು ಟೀಕಿಸುತ್ತಿರಲಿ ಬಿಡಿ. ದೇಶ ಬೆಳೆಯಲು, ದೇಶ ಬೆಳೆಸಲು ಯಾರಾದರೇನು..? ಶಾಂತಿಗೆ ಮುಂದಾದರೇ ಮನಮೋಹನ್ ಸಿಂಗು ಇಷ್ಟವಾಗುತ್ತಾರೆ, ನರೇಂದ್ರ ಮೋದಿಯೂ ಇಷ್ಟವಾಗುತ್ತಾರೆ, ನವಾಜ್ ಷರೀಫು ಇಷ್ಟವಾಗುತ್ತಾರೆ. ತಾಪಮಾನದಿಂದ ಭೂಮಿಯೇ ಉಳಿದುಕೊಳ್ಳುವುದು ಕಷ್ಟವಾಗಿರುವಾಗ ಯುದ್ಧ, ದ್ವೇಷಗಳು ಯಾರಿಗೆ ತಾನೇ ಬೇಕಾಗಿದೆ..? ಅಷ್ಟಕ್ಕೂ ಇಸ್ಲಾಂ ಮಹಾನ್ ಧರ್ಮ ಎಂದಿರುವ ಈಗಿನ ನರೇಂದ್ರ ಮೋದಿಗೂ 2002ರ ನರೇಂದ್ರ ಮೋದಿ ಮನಃಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಅವರಲ್ಲಿ ಈಗ ವ್ಯಾಪಕ ಬದಲಾವಣೆಗಳಾಗಿವೆ. ಮೋದಿ ಈ ಹಿಂದೆ ಧಿಡೀರ್ ಎಂದು ಪಾಕಿಸ್ತಾನಕ್ಕೆ ಭೇಟಿ ಕೊಟ್ಟಾಗ, ವಿರೋಧಿಗಳು ಲೆಕ್ಕಾಚಾರದ ಮಾತುಗಳನ್ನು ಆಡಿದರೇ ವಿನಃ ಪ್ರಾಣ ಒತ್ತೆಯಿಟ್ಟು ಉಭಯ ದೇಶಗಳ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಮುನ್ನುಗಿದ್ದ ಅವರ ಛಾತಿಯನ್ನು ಒಪ್ಪಿಕೊಳ್ಳಲಿಲ್ಲ.

ಅವತ್ತಿನ ದಿನವನ್ನೇ ತೆಗೆದುಕೊಳ್ಳಿ. ಯಾವ ಶತ್ರು ರಾಷ್ಟ್ರದ ವಿರುದ್ಧ ಯುದ್ಧದ ಮಾತನಾಡಿದ್ದರೋ, ಯಾವ ಶತ್ರು ರಾಷ್ಟ್ರದವರ ತಲೆಯನ್ನು ತರುವುದಾಗಿ ಹೇಳಿದ್ದರೋ.. ಅಂತಹ ಮೋದಿ ತೀರಾ ಪಾಕ್ ಪ್ರಧಾನಿ ನವಾಜ್ ಷರೀಫ್ಗೆ ಹುಟ್ಟುಹಬ್ಬದ ಶುಭಾಶಯ ಕೋರುವುದಕ್ಕೆ, ಅವರ ಮೊಮ್ಮಗಳ ಮದುವೆಗೆ ಹೋಗಿ ಬರುತ್ತಾರಂದ್ರೆ ಅದು ಸಣ್ಣ ಮಾತಾಗಿರಲಿಲ್ಲ. ಯಾವುದೋ ರಾಜಕಾರಣಕ್ಕೆ ಸಂಬಂಧಿಸಿದ, ದೇಶಕ್ಕೆ ಸಂಬಂಧಿಸಿದ ವಿಚಾರದ ಅಮೂಲಾಗ್ರ ಚರ್ಚೆಗೆ ಹೋಗುವುದಾದರೇ ಬೇರೆ ಮಾತು. ಆದರೆ ಅದು ತೀರಾ ಪರ್ಸನಲ್ ಭೇಟಿಯಾಗಿತ್ತು. ಪಾಕಿಸ್ತಾನದಂತ ರಾಷ್ಟ್ರಗಳ ಜೊತೆಗ ಹನ್ನೆರಡು ವರ್ಷಗಳ ನಂತರ, ಕೆಟ್ಟು ಹೋದ ಪರಿಸ್ಥಿತಿಯಲ್ಲಿ ಇಂಥ ಭೇಟಿಗಳನ್ನು ಊಹಿಸಿಕೊಳ್ಳಲು ಸಾಧ್ಯವೇ..? ಅದರಲ್ಲೂ ನರೇಂದ್ರ ಮೋದಿಯಂತ ವ್ಯಕ್ತಿ ಇಂಥ ನಿರ್ಧಾರಕ್ಕೆ ಬರುತ್ತಾರಂದ್ರೆ ಅದಕ್ಕಿಂತ ಅಚ್ಚರಿಯೇನಿತ್ತು..?

ಯಾರೋ ಕೆಲ ಉಭಯ ದೇಶಗಳ ಉಗ್ರ ಪ್ರತಾಪಿಗಳು ಬೊಬ್ಬಿರಿಯೋದು ಬಿಟ್ಟರೇ ಬಹುತೇಕರಿಗೆ ಬೇಕಿರುವುದು ಶಾಂತಿ. ಇಡೀ ವಿಶ್ವವೇ ಶಾಂತಿಗಾಗಿ ಪ್ರಯತ್ನಿಸುತ್ತಿದೆ. ಹೀಗಿರುವಾಗ ಪಾಕ್ ವಿಚಾರದಲ್ಲಿ ಮೋದಿ ನಿಲುವನ್ನು ಪ್ರಶಂಸಿಸಲೇಬೇಕು. ವಿರೋಧಿಸುವವರಿಗೆ ಬಿಡಿ, ಅದು ಅವರ ಕೆಲಸ. ಅದನ್ನು ಅವರು ಮಾಡಲಿ. ಮೋದಿಯ ನಿಲುವನ್ನು ಜಗತ್ತೆ ಕೊಂಡಾಡುತ್ತಿದೆ. ಅಷ್ಟು ಸಾಕು. ಎರಡು ದೇಶಗಳ ನಡುವಿನ ಎಲ್ಓಸಿ, ಕಾಶ್ಮೀರ ಸಮಸ್ಯೆಗಳು ಬಗೆಹರಿಯದಷ್ಟು ವ್ಯಾಪಕವಾಗಿದೆ. ಅದಕ್ಕಾಗಿ ದಶಕಗಳಿಂದ ಎರಡೂ ದೇಶಗಳು ನೆಮ್ಮದಿ ಕೆಡಿಸಿಕೊಂಡಿವೆ. ಅದನ್ನು ಒರೆಗೆ ಹಚ್ಚಿ ಮಿಕ್ಕಿದ್ದರ ಬಗ್ಗೆ ಚಿಂತಿಸುವ ಕೆಲಸವಾಗಬೇಕಿದೆ. ಅದೇನೇ ಹೇಳಿದರೂ ಇವತ್ತಿಗೆ ಕಾಣಿಸುತ್ತಿರುವುದು ಗುಜರಾತಿನ ಮೋದಿಯಲ್ಲ, ಶಾಂತಿಪ್ರಿಯ ಮೋದಿ..! ಮೋದಿ ಬದಲಾದರಾ..? ಬದಲಾದರೇ ಅದಕ್ಕಿಂತ ದೊಡ್ಡ ಸಂತಸವೇನಿದೆ..!

ಅಷ್ಟಕ್ಕೂ ಆರು ದಶಕಗಳ ದುಬಾರಿ ಶತೃತ್ವವದು. ದೇಶವನ್ನು ವಿಭಜಿಸಿಹೋದ ಬ್ರಿಟೀಷರು, ಎರಡು ದೇಶಗಳ ನಡುವೆ ಶಾಶ್ವತ ವಿಷಬೀಜವನ್ನು ಬಿತ್ತುವುದರಲ್ಲಿ ಯಶಸ್ವಿಯಾಗಿದ್ದರು. ಇಲ್ಲಿಯವರೆಗೂ ಭಾರತ ಪಾಕಿಸ್ತಾನದ ನಡುವಿನ ಸಂಬಂಧದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಎರಡು ರಾಷ್ಟ್ರಗಳ ನಡುವೆ ಇಲ್ಲಿಯವರೆಗೆ ಮೂರು ಯುದ್ಧಗಳು ನಡೆದಿವೆ. ಎರಡು ದೇಶಗಳ ನಡುವೆ ಸಾಕಷ್ಟು ಬಾರಿ ಮಾತುಕತೆ ನಡೆದು ಮುರಿದುಬಿದ್ದಿದೆ. ಇತ್ತೀಚೆಗಷ್ಟೆ ಪರ್ವೇಜ್ ಮುಷರ್ರಫ್ ಭಾರತವನ್ನು ಯುದ್ಧಕ್ಕೆ ಆಹ್ವಾನಿಸಿದ್ದರು. ಆದರೂ ಭಾರತ ತಾಳ್ಮೆಯಿಂದಿದೆ. ಅದಕ್ಕೆ ಕಾರಣ ಪಾಕಿಸ್ತಾನವನ್ನು ಹೊಡೆದುರುಳಿಸುವುದು ಕಷ್ಟ ಎಂದೇನಲ್ಲ. ಅದು ಭಾರತಕ್ಕೆ ದೊಡ್ಡ ವಿಚಾರವೂ ಅಲ್ಲ. ಹಾಗೆಯೇ ಪಾಕಿಸ್ತಾನವನ್ನು ತೀರಾ ದುರ್ಬಲ ಎನ್ನುವಂತಿಲ್ಲ. ಅವರಲ್ಲೂ ಅಣ್ವಸ್ತ್ರಗಳಿವೆ. ಯುದ್ಧದಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು, ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಇದು ಭಾರತದ ಚಿಂತನೆ.

ಜವಾಹರ್ ಲಾಲ್ ನೆಹರೂ – ಲಿಯಾಖತ್ ಆಲಿ ಖಾನ್ ಅವರಿಂದ ಹಿಡಿದು ಮನಮೋಹನ್ ಸಿಂಗ್ – ಯೂಸುಫ್ ರಾಜಾ ಗಿಲಾನಿ, ಷರೀಫ್- ಮೋದಿಯವರೆಗೂ ಎರಡೂ ದೇಶಗಳ ನಾಯಕರು ಕಳೆದ ಆರು ದಶಕಗಳಿಂದಲೂ ಸಂಬಂಧ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೂ ದಕ್ಷಿಣ ಏಷ್ಯಾದ ಎರಡು ದೇಶಗಳ ನಡುವಿನ ವೈಷಮ್ಯ ಅಳಿದಿಲ್ಲ, ಸ್ನೇಹಯುತ ಸಹಬಾಳ್ವೆ ಸಾಧ್ಯವಾಗಿಲ್ಲ. ಧರ್ಮದ ಆಧಾರದ ಮೇಲಿನ ದೇಶವಿಭಜನೆಯ ಭೀಕರ ನರಹತ್ಯೆ, ಧಾರುಣ ನೆನಪುಗಳು, ಲಕ್ಷಾಂತರ ಜನರ ವಲಸೆ, ಕಾಶ್ಮೀರ ಯುದ್ಧಗಳಿಂದಾಗಿ ವೈರತ್ವವನ್ನು ಮೈಗೂಡಿಸಿಕೊಂಡು ಭಾರತ ಮತ್ತು ಪಾಕಿಸ್ತಾನಗಳು ಅಸ್ತಿತ್ವಕ್ಕೆ ಬಂದು ಇನ್ನೇನು ಆರೂವರೆ ದಶಕಗಳಾಗುತ್ತಿವೆ. ಈ ದೀರ್ಘ ಆವಧಿಯಲ್ಲಿ ಎರಡೂ ದೇಶಗಳ ನಡುವೆ ಸತತವಾಗಿ ಮುಂದುವರೆಯುತ್ತಿರುವ ವೈಷಮ್ಯಕ್ಕೆ ಧರ್ಮದ್ವೇಷವೇ ಕಾರಣ ಎನ್ನಲಾಗುತ್ತಿದೆ. ಈ ವಾದದಲ್ಲಿ ಹುರುಳಿಲ್ಲ. ಈ ದ್ವೇಷದ ಹಿಂದಿರುವುದು ಎರಡೂ ದೇಶಗಳ ನಡುವಿನ ಗಡಿಯ ಸ್ವರೂಪ ಮಾತ್ರ..!

ಅದೇನೇ ಗುಪ್ತ ಮಾತುಕತೆ, ದಿಢೀರ್ ಭೇಟಿಗಳು ನಡೆದರೂ ಆರು ದಶಕಗಳಿಂದ ದುಪ್ಪಟ್ಟಾಗಿರುವ ಸಮಸ್ಯೆಯನ್ನು ಶಾಶ್ವತವಾಗಿ ತೊಡೆದು ಹಾಕುವುದು ಸಾಧ್ಯವಿಲ್ಲದ ಮಾತಾಗಿದೆ. ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಅದೇನೆ ಸಮಸ್ಯೆಗಳು ಬಂದರೂ ಮಾತುಕತೆಯಾಡಿ ಎಂದೇ ಹೇಳುತ್ತಿವೆ. ಮದ್ಯಸಿಕೆ ವಹಿಸಿ ಸಮಸ್ಯೆಯನ್ನು ಪರಿಹರಿಸುವ ಮನಸು ಮಾಡುತ್ತಿಲ್ಲ. ದೊಡ್ಡವರ ಉದ್ದೇಶಗಳು ಅಷ್ಟು ಸುಲಭಕ್ಕೆ ಅರ್ಥವಾಗುವಂತದ್ದಲ್ಲ. ವಾಸ್ತವದಲ್ಲಿ ಇಡೀ ಜಗತ್ತು ಉಗ್ರರ ಹಾವಳಿಯಿಂದ ನರಳುತ್ತಿದೆ. ಅದರಲ್ಲೂ ಇತ್ತೀಚೆಗೆ ಪ್ಯಾರಿಸ್ನಲ್ಲಿ ನಡೆದ ದಾಳಿಯಿಂದ ಸಿಡಿದು ನಿಂತಿರುವ ಜಗತ್ತಿನ ಆಲ್ಮೋಸ್ಟ್ ರಾಷ್ಟ್ರಗಳು ಉಗ್ರರ ಅಡಗುದಾಣವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿವೆ. ಈ ಹಂತದಲ್ಲಿ ಭಾರತಕ್ಕೆ ಉಪಟಳ ಕೊಡುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ಯಾವ ಕ್ಷಣದಲ್ಲಾದರೂ ಸಿಡಿದುಬೀಳುವ ಸಾಧ್ಯತೆಯಿದೆ. ಹೀಗಾಗಿ ಸಂಬಂಧ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಪಾಕಿಸ್ತಾನವೇ ಮುಂದೆ ಬಂದಿದೆ ಎಂದರೇ ತಪ್ಪಾಗುವುದಿಲ್ಲ.

ಗುಪ್ತ ಮಾತುಕತೆಯಾಗಲೀ, ಮೋದಿ ಪಾಕಿಸ್ತಾನಕ್ಕೆ ಹೋಗಿಬಂದಿದ್ದರಿಂದಾಗಲೀ ಇಷ್ಟು ದಶಕದ ಸಮಸ್ಯೆಗೆ ಪರಿಹಾರ ಸಿಗುವುದು ಸುಲಭವಲ್ಲ. ಆದರೂ ವಾಸ್ತವದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಚಾಣಾಕ್ಷತನವನ್ನು ಪಾಕಿಸ್ತಾನ ಮಾಡಬಹುದು. ಇನ್ನೊಂದು ಬದಿಯಲ್ಲಿ ಭಾರತಕ್ಕೂ ಯುದ್ಧ ಬೇಕಾಗಿಲ್ಲ. ಹಾಗಾಗಿ ಭಾರತವೂ ಆದಷ್ಟು ಶಾಂತಿ ಮಾತುಕತೆಗೆ ಪ್ರಯತ್ನಿಸುತ್ತಿದೆ. ಅಕಸ್ಮಾತ್ ಪಾಕಿಸ್ತಾನಕ್ಕೆ ಈ ಬಾರಿ ಬುದ್ಧಿ ಕಲಿಸಿಯೇ ಸಿದ್ದ ಎಂದು ಭಾರತ ಏನಾದರೂ ಮೈ ಕೊಡವಿ ನಿಂತರೇ, ಭಾರತವನ್ನು ವಿಶ್ವದ ಪ್ರಮುಖ ರಾಷ್ಟ್ರಗಳು ಪ್ರಶ್ನಿಸುವುದಿಲ್ಲ. ಉಗ್ರವಾದದ ವಿರುದ್ಧ ಮೊಟ್ಟ ಮೊದಲ ಬಾರಿಗೆ ಜಗತ್ತು ಒಟ್ಟಾಗಿರುವುದರಿಂದ ಭಾರತದ ಕೈ ಮೇಲಾಗುವ ಸಾಧ್ಯತೆಗಳೇ ಹೆಚ್ಚಿದೆ. ಆ ಕಾರಣಕ್ಕೆ ಪಾಕಿಸ್ತಾನಕ್ಕೆ ತಾತ್ಕಾಲಿಕವಾಗಿಯಾದರೂ ಭಾರತದ ಆಲಿಂಗನ ಬೇಕಿದೆ. ಅದಕ್ಕಾಗಿ ಹುಟ್ಟುಹಬ್ಬ, ಮೊಮ್ಮಗಳ ಮದ್ವೆಯ ಗುಪ್ತ ಆಮಂತ್ರಣ ಕೊಟ್ಟಿರಬಹುದು. ಪಾಕಿಸ್ತಾನವನ್ನು ನಂಬಿಹೋದ ಮೋದಿ ಗುಂಡಿಗೆಯೇ ಇಲ್ಲಿ ಪ್ರಮುಖವೆನಿಸುತ್ತದೆ.

ಆದರೆ ಭಾರತ ಯಥಾಪ್ರಕಾರ ಶಾಂತಿಯ ಮಾತುಕತೆಯಲ್ಲಿ ಕಾಲ ತಳ್ಳಿದರೇ ಎರಡು ದೇಶಗಳ ನಡುವಿನ ವೈಷಮ್ಯಕ್ಕೆ ಅಂತ್ಯ ಸಿಗುವುದೇ ಇಲ್ಲ. ಈ ವಿಚಾರದಲ್ಲಿ ಭಾರತ ತಾಳುವ ನಿರ್ಧಾರಗಳು ಶಾಶ್ವತ ಪರಿಹಾರವನ್ನು ದೊರಕಿಸುವಂತಿರಬೇಕು. ಅತ್ತ ಪಾಕಿಸ್ತಾನಕ್ಕೆ ಚಿತಾವಣೆ ನೀಡುತ್ತಿರುವ ಹಲವು ದೇಶಗಳಿಗೂ ಉಗ್ರವಾದದ ಬಿಸಿ ತಟ್ಟಿರುವುದರಿಂದ ಪಾಕಿಸ್ತಾನ ಅವರಿಂದ ಸಹಾಯ ನಿರೀಕ್ಷಿಸುವಂತಿಲ್ಲ. ಒಟ್ಟಿನಲ್ಲಿ ಕೈ ಕಟ್ಟಿ ಹಾಕಿದ ಪರಿಸ್ಥಿತಿಯಲ್ಲಿರುವ ಪಾಕಿಸ್ತಾನ ಜಾಣ್ಮೆಯಿಂದ ಬಚಾವಾಗುವ ತಂತ್ರಗಳನ್ನು ಹೆಣೆಯುತ್ತಿದೆ. ಇದನ್ನು ಮೋದಿ ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಏಕೆಂದರೇ ಲಾಭವಿಲ್ಲದೆ ಕಪಟಿ ಪಾಕಿಸ್ತಾನ ಯಾವುದೇ ತೀಮರ್ಾನಕ್ಕೂ ಬರುವುದಿಲ್ಲ.

ಒಟ್ಟಿನಲ್ಲಿ ಮೋದಿ ಇಸ್ಲಾಂ ವಿರೋಧಿಯಲ್ಲ. ಇಸ್ಲಾಂ ಹೆಸರಿನಲ್ಲಿ ಭಯೋತ್ಪಾಧನೆ ನಡೆಸುವವರ ವಿರೋಧಿ ಎಂದು ಅವರೇ ಸ್ಪಷ್ಟನೆ ನೀಡಿದ್ದಾರೆ. ಪಾಕಿಸ್ತಾನದಂತ ಶತ್ರುಗಳ ಜೊತೆಗೆ ಶಾಂತಿ ಮಾತುಕತೆಗೆ ಮುಂದಾಗುವ ಮೋದಿ, ನಮ್ಮ ದೇಶದ ಮುಸಲ್ಮಾನರನ್ನು ದ್ವೇಷಿಸುತ್ತಾರೆ ಎಂಬ ವಾದದಲ್ಲಿ ಹುರುಳಿಲ್ಲ. ಯಾವ ಪಕ್ಷವಾದರೇನು..? ಯಾವ ಧರ್ಮವಾದರೇನು..? ಬೇಕಿರೋದು ಸಹಬಾಳ್ವೆ. ನಾಯಕರು ಎನಿಸಿಕೊಂಡವರಿಂದ ದೇಶದಲ್ಲಿ ನೆಮ್ಮದಿ ನೆಲೆಸುತ್ತದೆ. ಏಕೆಂದರೇ ನಾಯಕನ ಅಣತಿಯನ್ನು ಪ್ರಜೆಗಳು ಮೀರಲಾರರು. ಜೈಹಿಂದ್.. ಜೈ ಭಾರತ್ ಮಾತಾಕೀ…!

  • ರಾ ಚಿಂತನ್.

POPULAR  STORIES :

ಪಾಕ್ ನಲ್ಲೂ ಹೋಳಿ, ದೀಪಾವಳಿಗೆ ಸಾರ್ವತ್ರಿಕ ರಜೆ..!

ಸ್ವಲ್ಪ ನಿದ್ರೆಭಾಗ್ಯವನ್ನೂ ಕರುಣಿಸಿ, ಪ್ಲೀಸ್…!

ಥರ್ಡ್ ವರ್ಲ್ಡ್ ವಾರ್ ಗೆ ಕೊರಿಯ ಫೌಂಡೇಶನ್..!?

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಅಬ್ಬಾ ಜಸ್ಟ್ ಮಿಸ್..! ಈ ಮಹಿಳೆಯರ ಅದೃಷ್ಟ ನೆಟ್ಟಗಿತ್ತು..! ಇಲ್ದೇ ಹೋಗಿದ್ರೆ?

ನಾಯಿ, ಬೆಕ್ಕುಗಳು ಮತ್ತು ಇಸ್ಲಾಂ ರಾಷ್ಟ್ರ..!?

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

 

LEAVE A REPLY

Please enter your comment!
Please enter your name here