No menu items!
14.3 C
Munich
Saturday, August 22, 2026

ಕರ್ನಾಟಕದಲ್ಲಿ ಕೃತಕ ಪನೀರ್ ಮಾರಾಟಕ್ಕೆ ಒಂದು ವರ್ಷದ ನಿಷೇಧ; ಸರ್ಕಾರದಿಂದ ಮಹತ್ವದ ಆದೇಶ

Must read

ಕರ್ನಾಟಕದಲ್ಲಿ ಕೃತಕ ಪನೀರ್ ಮಾರಾಟಕ್ಕೆ ಒಂದು ವರ್ಷದ ನಿಷೇಧ; ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು: ರಾಜ್ಯಾದ್ಯಂತ ‘ಪನೀರ್’ ಹೆಸರಿನಲ್ಲಿ ಮಾರಾಟವಾಗುತ್ತಿರುವ ಕೃತಕ ಅಥವಾ ಅನಲಾಗ್ ಪನೀರ್ನ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಹಾಗೂ ಮಾರಾಟಕ್ಕೆ ಕರ್ನಾಟಕ ಸರ್ಕಾರ ಒಂದು ವರ್ಷದ ಅವಧಿಗೆ ನಿಷೇಧ ಹೇರಿದೆ. ಸಾರ್ವಜನಿಕ ಆರೋಗ್ಯ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗ ಈ ಆದೇಶ ಹೊರಡಿಸಿದೆ.
ಆಗಸ್ಟ್ 17ರಂದು ಹೊರಡಿಸಿರುವ ಅಧಿಸೂಚನೆಯಂತೆ, ಅನಲಾಗ್ ಅಥವಾ ನಾನ್-ಡೈರಿ ಪನೀರ್ನ ಉತ್ಪಾದನೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ವಿತರಣೆ, ಸಾಗಣೆ, ಸಗಟು ಮತ್ತು ಚಿಲ್ಲರೆ ಮಾರಾಟ, ಮಾರಾಟಕ್ಕಾಗಿ ಪ್ರದರ್ಶನ ಹಾಗೂ ಸರ್ಕಾರಿ ಪೂರೈಕೆಯನ್ನು ಕರ್ನಾಟಕ ರಾಜ್ಯಾದ್ಯಂತ ಒಂದು ವರ್ಷದ ಅವಧಿಗೆ ನಿಷೇಧಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಕಲಂ 30(2)(a), 18 ಮತ್ತು 29ರ ಅಡಿಯಲ್ಲಿ ಈ ಆದೇಶವನ್ನು ಜಾರಿಗೊಳಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ ನಿಯಮಗಳು 2011ರ Regulation 2.1.16ರ ಪ್ರಕಾರ, ಪನೀರ್ ಎಂಬುದು ಹಾಲಿನಿಂದ ತಯಾರಿಸಲಾದ ಪ್ರಮಾಣೀಕೃತ ಆಹಾರ ಉತ್ಪನ್ನವಾಗಿದೆ.
ಪನೀರ್ನಲ್ಲಿ ಹಾಲಿನ ಕೊಬ್ಬು ಪ್ರಮುಖ ಅಂಶವಾಗಿದ್ದು, ಅದರ ಬದಲಿಗೆ ಅಥವಾ ಅದರೊಂದಿಗೆ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರೆ ನಾನ್-ಡೈರಿ ಪದಾರ್ಥಗಳನ್ನು ಬಳಸಲು ಅನುಮತಿ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಕರ್ನಾಟಕದಲ್ಲಿ ಹಲವು ಮಾದರಿಯ ಪನೀರ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ ಯಾವುದೇ ಕಲಬೆರಕೆ ಕಂಡುಬಂದಿಲ್ಲ ಎಂದು ಇಲಾಖೆ ತಿಳಿಸಿದೆ. ಆದಾಗ್ಯೂ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕೃತಕ ಪನೀರ್ ಉತ್ಪನ್ನಗಳನ್ನು ಬಳಸುವುದು, ಸಂಗ್ರಹಿಸುವುದು, ಸರಬರಾಜು ಮಾಡುವುದು, ಮಾರಾಟ ಮಾಡುವುದು ಅಥವಾ ಸಾಗಣೆ ಮಾಡುವುದನ್ನು ತಡೆಯುವ ಉದ್ದೇಶದಿಂದ ಈ ನಿಷೇಧ ಜಾರಿಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಹಾಲಿನ ಕೊಬ್ಬು ಅಥವಾ ಹಾಲಿನ ಘನಾಂಶವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು ಅಥವಾ ಇತರೆ ನಾನ್-ಡೈರಿ ಪದಾರ್ಥಗಳಿಂದ ಬದಲಾಯಿಸಿ ಪನೀರ್ನಂತೆ ತಯಾರಿಸುವ ಉತ್ಪನ್ನವನ್ನು ಅನಲಾಗ್ ಅಥವಾ ನಾನ್-ಡೈರಿ ಪನೀರ್ ಎಂದು ಪರಿಗಣಿಸಲಾಗುತ್ತದೆ. ಇಂತಹ ಉತ್ಪನ್ನವನ್ನು ‘ಪನೀರ್’ ಎಂಬ ಹೆಸರಿನಲ್ಲಿ ಮಾರಾಟ ಮಾಡುವುದು ಅಥವಾ ಗ್ರಾಹಕರಿಗೆ ಪನೀರ್ ಎಂದು ಬಿಂಬಿಸುವಂತಿಲ್ಲ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಆದರೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಗದಿಪಡಿಸಿರುವ ಪ್ರತ್ಯೇಕ ಗುಣಮಟ್ಟದ ಮಾನದಂಡಗಳನ್ನು ಹೊಂದಿರುವ ಹಾಗೂ ಪ್ರಮಾಣೀಕರಿಸಲಾದ ಆಹಾರ ಉತ್ಪನ್ನಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ. Frozen Dessert, Processed Cheese ಮತ್ತು Mixed Fat Spread ಸೇರಿದಂತೆ ಈಗಾಗಲೇ ಪ್ರತ್ಯೇಕ ಮಾನದಂಡಗಳನ್ನು ಹೊಂದಿರುವ ಪ್ರಮಾಣೀಕೃತ ಆಹಾರ ಉತ್ಪನ್ನಗಳು ಈ ಆದೇಶದ ವ್ಯಾಪ್ತಿಗೆ ಬರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಅಲ್ಲದೆ, ಯಾವುದೇ ಆಹಾರ ವ್ಯವಹಾರ ಸಂಸ್ಥೆಯು ಕೃತಕ ಅಥವಾ ಅನಲಾಗ್ ಪನೀರ್ ಅನ್ನು ಇತರೆ ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುವುದು, ಸಂಗ್ರಹಿಸುವುದು, ಪೂರೈಸುವುದು ಅಥವಾ ಮಾರಾಟ ಮಾಡುವುದನ್ನೂ ನಿಷೇಧಿಸಲಾಗಿದೆ.
ಆದೇಶವನ್ನು ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ಹಾಗೂ ಆಹಾರ ವ್ಯವಹಾರ ನಿರ್ವಾಹಕರು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಹಾರ ಸುರಕ್ಷತೆ ವಿಭಾಗದ ಆಯುಕ್ತರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

- Advertisement -spot_img

More articles

- Advertisement -spot_img

Latest article