ಮಾಧ್ಯಮದಲ್ಲಿ ಪ್ರಜ್ವಲಿಸುತ್ತಿರುವ ಸೂರ್ಯ ‘ರಾಘವ’

0
205

ನಾನು ಹೀಗೆ ಆಗಬೇಕು, ಇದೇ ಕೆಲಸವನ್ನು ಮಾಡಬೇಕು, ಅವರಂತೆ-ಇವರಂತೆ ಬೆಳೆಯಬೇಕು ಅಂತ ಕನಸುಕಾಣುತ್ತಾ, ಹತ್ತಿರದವರಲ್ಲಿ ಅವುಗಳ ಬಗ್ಗೆ ಪದೇ ಪದೇ ಮಾತಾಡ್ತಿದ್ರೆ ಪ್ರಯೋಜನವಿಲ್ಲ…! ಕಂಡ ಕನಸುಗಳನ್ನು ನನಸಾಗಿಸಿಕೊಳ್ಳುವ ಒಂದು ಕೀ ನಮ್ಮ ಬಳಿಯೇ ಇದೆ…! ಅದೇ ಪ್ರಯತ್ನ…! ಪ್ರಯತ್ನಪಟ್ಟರೆ ಯಾವುದೂ ಅಸಾಧ್ಯವಲ್ಲ…! ಕಷ್ಟಪಟ್ಟರೆ ಖಂಡಿತಾ ನಮ್ಮಿಷ್ಟದ ಕ್ಷೇತ್ರದಲ್ಲಿ ಪ್ರಜ್ವಲಿಸಬಹುದು…!  ಹೀಗೆ ಚಿಕ್ಕಂದಿನಲ್ಲಿ ಕಂಡ ಕನಸನ್ನು ನನಸು ಮಾಡಿಕೊಂಡು ಮಾಧ್ಯಮದಲ್ಲಿ ಪ್ರಜ್ವಲಿಸುತ್ತಿರುವವರು ರಾಘವ ಸೂರ್ಯ…!


ಇವರು ಹುಟ್ಟಿದ್ದು, ಹಾವೇರಿ ಜಿಲ್ಲೆಯ “ಬ್ಯಾಡಗಿ” ತಾಲೂಕಿನ ಕಾಗಿನೆಲೆ ಬಳಿಯ “ಕುಮ್ಮೂರು”. ತಂದೆ ಸಿ.ಎಚ್ .ದಸರಾ,ತಾಯಿ ಗೋಪಮ್ಮ.ತಂದೆ ಸರ್ಕಾರಿ ಉದ್ಯೋಗಿ ಆಗಿದ್ದರಿಂದ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿದ್ದರು. ಆದ್ದರಿಂದ ರಾಘವ ಸೂರ್ಯ ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಪಿಯುಸಿ ವಿದ್ಯಾಭ್ಯಾಸವನ್ನು ಮಲೆನಾಡಿನ ಸಾಗರದಲ್ಲಿ ಪಡೆದರು.


ಚಿಕ್ಕಂದಿನಿಂದಲೂ ಇವರಿಗೆ ಮಿಮಿಕ್ರಿ ಮಾಡೋದು, ಬೇರೆಯವರನ್ನು ಅನುಕರಿಸೋದು (ಇಮಿಟೇಟ್) ಅಂದ್ರೆ ತುಂಬಾ ಇಷ್ಟ. ಆಕಾಶವಾಣಿಯಲ್ಲಿ ಪ್ರದೇಶ ಸಮಾಚಾರ, ವಾರ್ತೆಗಳನ್ನು ಕೇಳಿ ಅದನ್ನು ಮಿಮಿಕ್ರಿ ಮಾಡ್ತಾ ಬೆಳೆದವರು.! ನಟ-ನಟಿಯರನ್ನು ಅನುಕರಣೆ ಮಾಡೋದು ಕೂಡ ಚಿಕ್ಕಂದಿನಿಂದ ಬಂದ ಹವ್ಯಾಸ.! ಹಾಡುವುದು ಅಂದ್ರೆ ಅಚ್ಚುಮೆಚ್ಚು. ಮಿಮಿಕ್ರಿ, ಗಾಯನದಲ್ಲಿ ರಾಜ್ಯಮಟ್ಟದಲ್ಲಿ ನಾನಾ ಬಹುಮಾನಗಳನ್ನು ಪಡೆದಿದ್ದಾರೆ.


ಪಿಯುಸಿ ಬಳಿಕ ಬೆಂಗಳೂರಿಗೆ ಬಂದು ಬಿಇ ಪದವಿಗೆ ಸೇರಿದ್ರು, ಆದ್ರೆ ಇದ್ಯಾಕೋ ತನಗೆ ಸರಿಬರಲ್ಲ ಅಂತ ಅನ್ಕೊಂಡು ಅದಕ್ಕೊಂದು ಸಾಷ್ಟಾಂಗ ನಮಸ್ಕಾರ ಮಾಡಿ ಬಿಬಿಎಂ ಪದವಿ ಪಡೆದರು. ನಂತರ ಯಾವುದೋ ಕಂಪನಿ ಸೇರಿಕೊಳ್ಳೋದಕ್ಕಿಂತ ನನ್ನಿಷ್ಟದ ಮಾಧ್ಯಮ ಕ್ಷೇತ್ರದಲ್ಲೇ ನಾನು ಬೆಳೆಯಬೇಕು. ಏನಾದರೂ ಮಾಡಿ ಮಾಧ್ಯಮದಲ್ಲಿ ಕೆಲಸ ಗಿಟ್ಟಿಸಿಕೊಂಡೇ ಕೊಳ್ಳುತ್ತೇನೆಂದು ಹಠಕ್ಕೆ ಬಿದ್ರು. ಇವರ ಪ್ರಯತ್ನಕ್ಕೆ ಸೋಲಾಗಲಿಲ್ಲ…! ದೂರದರ್ಶನದಲ್ಲಿ ಉದ್ಯೋಗ ಸಿಕ್ಕಿತು.


ಅದು 2006, ದೂರದರ್ಶನದ ಮೂಲಕ ತನ್ನ ವೃತ್ತಿ ಜೀವನವನ್ನು ಆರಂಭಿಸಿದ್ರು. 2007ರಲ್ಲಿ ಉದಯ ಟಿವಿಯಿಂದ ಒಂದೊಳ್ಳೆ ಆಫರ್ ಬಂತು. ಉದಯ ಟಿವಿಯಲ್ಲಿ 2009ರವರೆಗೆ ನಿರೂಪಕರಾಗಿ ಸೇವೆ ಸಲ್ಲಿಸಿ ಟಿವಿ9 ಕಡೆಗೆ ಮುಖ ಮಾಡಿದ್ರು. 2012ರವರೆಗೆ ಟಿವಿ9ನಲ್ಲಿ ಕೆಲಸ ಮಾಡಿ, 2012ಕ್ಕೆ ಪಬ್ಲಿಕ್ ಟಿವಿಗೆ ಪ್ರವೇಶಿಸಿದ್ರು. 2014ರಲ್ಲಿ ಪಬ್ಲಿಕ್ ಟಿವಿಯಿಂದ ಸಮಯ ಬಳಗ ಸೇರಿದ್ರು. ಅಲ್ಲೊಂದು 8 ತಿಂಗಳು ಕೆಲಸ ಮಾಡಿ ತದ ನಂತರ ಮಾಧ್ಯಮ ಕ್ಷೇತ್ರದಿಂದ ತಾತ್ಕಾಲಿಕ ದೂರಸರಿದರು.


ಹಿಪ್ನೊಟಿಸಂ (ಸಂಮೋಹನ ವಿದ್ಯೆ) ಕೂಡ ಬಲ್ಲ ಇವರು 2.5 ವರ್ಷಗಳ ಕಾಲ ಈ ವಿದ್ಯೆಯನ್ನು ಬಳಸಿಕೊಂಡು ರಾಜ್ಯದ ನಾನಾ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿದ್ರು. ಮಕ್ಕಳಲ್ಲಿ ಕೀಳರಿಮೆ,ಭಯ ದೂರ ಮಾಡುವಲ್ಲಿ, ಶಿಕ್ಷಕರಿಗೆ ತರಬೇತಿ ನೀಡುವುದು ಇವರ ಕಾಯಕವಾಗಿತ್ತು. ಹಿಪ್ನೋ ಥೆರಪಸ್ಟ್ ,ಲೈಫ್ ಕೋಚ್ ಆಗಿಯೂ ಬ್ಯುಸಿ ಆಗಿದ್ರು.


ಹೀಗಿರುವಾಗ ವಾಸ್ತವದ ಪ್ರತಿರೂಪ ‘ಟಿವಿ 5’ ಮೂಲಕ ಮಾಧ್ಯಮಕ್ಕೆ ರೀ ಎಂಟ್ರಿ ಕೊಡುವ ಅವಕಾಶ ಸಿಕ್ತು. ಈ ವರ್ಷ ಹೊಸದಾಗಿ ಉದಯಿಸಿರುವ ಟಿವಿ5 ನಲ್ಲಿ ಈಗ ಆ್ಯಂಕರ್ ಚೀಫ್. ಟಿವಿ ೫ ವಾಹಿನಿಯಲ್ಲಿ Political debate Program “TOP STORY” ಕಾರ್ಯಕ್ರಮದ ನಿರೂಪಣಾ ನಿರ್ವಹಣೆ ಇವರದ್ದು.


ಇವರೇ ಹೇಳುವಂತೆ ಇವರಿಗೆ ನಿರೀಕ್ಷೆಗಳು ಕಡಿಮೆ. ಆದ್ದರಿಂದ ಖುಷಿ ಖುಷಿಯಾಗಿದ್ದಾರೆ. ಧ್ಯಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡ್ತಾರೆ. ನಿತ್ಯ ಪ್ರಾಣಯಾಮ ಮಾಡೋದನ್ನು ಮರೆಯಲ್ಲ. ಜಾತಿ, ದೇವರ ಬಗ್ಗೆ ಆಗಾಗ್ಗೆ ಚರ್ಚೆಗಳನ್ನು, ಚಿಂತನೆಗಳನ್ನು ಮಾಡ್ತಿರ್ತಾರೆ. ಆಧ್ಯಾತ್ಮ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯ. ಅಗೋಚರ ಶಕ್ತಿಗಳ ಬಗ್ಗೆ ತಪ್ಪುಕಲ್ಪನೆಗಳಿರುವುದು ಸರಿಯಲ್ಲ ಎನ್ನುವುದು ರಾಘವ ಸೂರ್ಯ ಅವರಲ್ಲಿನ ಪ್ರಬಲ ನಂಬಿಕೆ.


ಇವರಿಗೆ ಸ್ಮರಣ ಶಕ್ತಿ ತುಂಬಾನೇ ಇದೆ. ಏಕಕಾಲದಲ್ಲಿ 500 ವಸ್ತುಗಳು ಅಥವಾ ಆಬ್ಜೆಕ್ಟೀವ್ಸ್ ಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಇವರಿಗಿದೆ.ಕಾಲೇಜು ದಿನಗಳಲ್ಲಿ “ಚೆಸ್ ಚಾಂಪಿಯನ್” ಆದವರು ಹಾಗೂ ಮೆದುಳಿಗೆ ಕಸರತ್ತು ಕೊಡುವ”ರೂಬಿ ಕ್ಯೂಬ್” ಬಿಡಿಸುವುದು ಇವರಿಗೆ ಅಚ್ಚುಮೆಚ್ಚು… ಕದಂಬ, ಮಾಧ್ಯಮ ರತ್ನ (2ಬಾರಿ) ಪ್ರಶಸ್ತಿ ಸೇರಿದಂತೆ ಅನೇಕ “ಬೆಸ್ಟ್ ನ್ಯೂಸ್ ಪ್ರೆಸೆಂಟರ್ ” ಹೀಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಹಲವಾರು ಸಂಘ-ಸಂಸ್ಥೆಗಳು ಸನ್ಮಾನಿಸಿವೆ.


ಇವರ ಪ್ರಕಾರ ಮಾಧ್ಯಮಕ್ಕೆ ಬರುವವರು ಸಮಾಜದ ಬಗ್ಗೆ ಕಾಳಜಿಯನ್ನಿಟ್ಟುಕೊಂಡು ಬರಬೇಕು. ಕೆಲಸವನ್ನು, ವೃತ್ತಿ ಬದುಕಿನ ಜರ್ನಿಯನ್ನು ಎಂಜಾಯ್ ಮಾಡಬೇಕು. ಕೆಲಸದಲ್ಲಿ ನೆಮ್ಮದಿ ಕಾಣಬೇಕು. ಅಹಂಕಾರವನ್ನು ಹತ್ತಿರ ಸುಳಿಯಲು ಬಿಡದೇ ಇದ್ದಲ್ಲಿ, ತಪ್ಪುಗಳನ್ನು ಒಪ್ಪಿಕೊಳ್ಳುವ ಗುಣಗಳಿದ್ದರೆ ಖಂಡಿತಾ ಬೆಳೆಯಬಹುದು.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

10 ನವೆಂಬರ್ 2017 : ಈಶ್ವರ್ ದೈತೋಟ

11 ನವೆಂಬರ್ 2017 : ಭಾವನ

12  ನವೆಂಬರ್ 2017 : ಜಯಶ್ರೀ ಶೇಖರ್

13 ನವೆಂಬರ್ 2017 : ಶೇಷಕೃಷ್ಣ

14 ನವೆಂಬರ್ 2017 : ಶ್ರೀಧರ್ ಶರ್ಮಾ

15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

16 ನವೆಂಬರ್ 2017 : ಅರವಿಂದ ಸೇತುರಾವ್

17 ನವೆಂಬರ್ 2017 : ಲಿಖಿತಶ್ರೀ

18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

19 ನವೆಂಬರ್ 2017 : ಅಪರ್ಣಾ

20 ನವೆಂಬರ್ 2017 :  ಅಮರ್ ಪ್ರಸಾದ್

21 ನವೆಂಬರ್ 2017 :   ಸೌಮ್ಯ ಮಳಲಿ

22 ನವೆಂಬರ್ 2017 :  ಅರುಣ್ ಬಡಿಗೇರ್

23ನವೆಂಬರ್ 2017 :  ರಾಘವ ಸೂರ್ಯ

LEAVE A REPLY

Please enter your comment!
Please enter your name here