ರೇಣುಕಾಸ್ವಾಮಿ ಕೊಲೆ ಕೇಸ್ʼಗೆ ಬಿಗ್ ಟ್ವಿಸ್ಟ್; ಆರೋಪಿ ಪಟ್ಟಿಯಿಂದ ಪ್ರದೋಷ್ ಹೆಸರು ಡಿಲೀಟ್, ಇನ್ಮುಂದೆ ಪ್ರಾಸಿಕ್ಯೂಷನ್ ಸಾಕ್ಷಿ!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್ ರಾವ್ ಇನ್ನು ಮುಂದೆ ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿ ವಿಚಾರಣೆ ಎದುರಿಸಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ಶೀಟ್ನಲ್ಲಿ ಪ್ರದೋಷ್ ಅವರನ್ನು 14ನೇ ಆರೋಪಿಯಾಗಿ ಹೆಸರಿಸಲಾಗಿತ್ತು. ಆದರೆ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅವರಿಗೆ ಷರತ್ತುಬದ್ಧ ಕ್ಷಮಾದಾನ ನೀಡಿ ಪ್ರಾಸಿಕ್ಯೂಷನ್ ಸಾಕ್ಷಿಯಾಗಲು ಅವಕಾಶ ನೀಡಿದೆ.
ಇದರ ಬೆನ್ನಲ್ಲೇ ಚಾರ್ಜ್ಶೀಟ್ನ ಆರೋಪಿಗಳ ಪಟ್ಟಿಯಲ್ಲಿ ಪ್ರದೋಷ್ ಹೆಸರನ್ನು ತೆಗೆದುಹಾಕುವಂತೆ ಅವರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಪ್ರದೋಷ್ಗೆ ಮಾಫಿ ಸಾಕ್ಷಿ ಸ್ಥಾನಮಾನ ದೊರೆತಿರುವುದರಿಂದ, ಇನ್ನು ಮುಂದೆ ಅವರನ್ನು ಆರೋಪಿ ಬದಲಾಗಿ ಪ್ರಾಸಿಕ್ಯೂಷನ್ ವಿಟ್ನೆಸ್ ಆಗಿ ಪರಿಗಣಿಸುವ ಪ್ರಕ್ರಿಯೆ ನಡೆಯುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ತಿಳಿದಿರುವ ಸಂಪೂರ್ಣ ಹಾಗೂ ಸತ್ಯ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಬೇಕು ಎಂಬ ಷರತ್ತಿನೊಂದಿಗೆ ಪ್ರದೋಷ್ಗೆ ಕ್ಷಮಾದಾನ ನೀಡಲಾಗಿದೆ.
ಒಂದು ವೇಳೆ ಸಾಕ್ಷ್ಯ ನೀಡುವಾಗ ಮಹತ್ವದ ವಿಚಾರಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟರೆ, ಸುಳ್ಳು ಸಾಕ್ಷ್ಯ ನೀಡಿದರೆ ಅಥವಾ ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ ಮತ್ತೆ ಆರೋಪಿ ಸ್ಥಾನಮಾನ ಎದುರಾಗುವ ಸಾಧ್ಯತೆಯೂ ಇದೆ.
ಹೀಗಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈವರೆಗೆ A14 ಆಗಿದ್ದ ಪ್ರದೋಷ್, ಇದೀಗ ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿ ಬದಲಾಗಿರುವುದು ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.



