No menu items!
18 C
Munich
Friday, July 3, 2026

ಸಾಮಾನ್ಯ ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ; ಪೆಟ್ರೋಲ್, ಗ್ಯಾಸ್ ಬಳಿಕ ಅಕ್ಕಿ ದರದಲ್ಲೂ ಭಾರೀ ಹೆಚ್ಚಳ

Must read

ಸಾಮಾನ್ಯ ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ; ಪೆಟ್ರೋಲ್, ಗ್ಯಾಸ್ ಬಳಿಕ ಅಕ್ಕಿ ದರದಲ್ಲೂ ಭಾರೀ ಹೆಚ್ಚಳ

ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ತರಕಾರಿ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ವಿವಿಧ ತಳಿಯ ಅಕ್ಕಿಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ದಿನನಿತ್ಯದ ಖರ್ಚಿನ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ.
ಮಾರುಕಟ್ಟೆಯಲ್ಲಿ ಅಕ್ಕಿಗೆ ಬೇಡಿಕೆ ಹೆಚ್ಚಾಗಿರುವುದರ ಜೊತೆಗೆ ಪೂರೈಕೆ ಪ್ರಮಾಣ ಕಡಿಮೆಯಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಇದಲ್ಲದೆ, ವಿವಿಧ ದೇಶಗಳಿಗೆ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿರುವ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕುಸಿದಿದ್ದು, ದರ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.
ಪ್ರಸ್ತುತ ವಿವಿಧ ತಳಿಯ ಅಕ್ಕಿಗಳ ಬೆಲೆಯಲ್ಲಿ ಕೆ.ಜಿಗೆ 10 ರಿಂದ 20 ರೂಪಾಯಿವರೆಗೆ ಹೆಚ್ಚಳ ದಾಖಲಾಗಿದೆ. ಸ್ಟೀಮ್ ರೈಸ್ ಬೆಲೆ ಕೆ.ಜಿಗೆ 42 ರೂಪಾಯಿಯಿಂದ 56 ರೂಪಾಯಿಗೆ ಏರಿಕೆಯಾಗಿದೆ. ರಾ ರೈಸ್ ದರ 50 ರೂಪಾಯಿಯಿಂದ 62 ರೂಪಾಯಿಗೆ ಹೆಚ್ಚಳವಾಗಿದ್ದು, ಕೋಲಂ ರೈಸ್ 68 ರೂಪಾಯಿಯಿಂದ 80 ರೂಪಾಯಿಗೆ ತಲುಪಿದೆ. ಅದೇ ರೀತಿ ಕೋಲಂ ಸ್ಟೀಮ್ ಅಕ್ಕಿಯ ಬೆಲೆ 55 ರೂಪಾಯಿಯಿಂದ 65 ರೂಪಾಯಿಗೆ ಏರಿಕೆಯಾಗಿದೆ.
ವ್ಯಾಪಾರಿಗಳ ಪ್ರಕಾರ, ಹೊಸ ಅಕ್ಕಿ ಬೆಳೆ ನವೆಂಬರ್ ವೇಳೆಗೆ ಮಾರುಕಟ್ಟೆಗೆ ಆಗಮಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಪೂರೈಕೆ ಕೊರತೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಅಕ್ಕಿ ದರ ಮತ್ತಷ್ಟು ಏರಿಕೆಯಾಗುವ ಆತಂಕವೂ ವ್ಯಕ್ತವಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕುಟುಂಬದ ಖರ್ಚು ನಿರ್ವಹಿಸುವುದು ಕಷ್ಟಕರವಾಗಿರುವ ಸಂದರ್ಭದಲ್ಲಿ ಅಕ್ಕಿ ದರದಲ್ಲಿನ ಏರಿಕೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ದಿನನಿತ್ಯದ ವೆಚ್ಚಗಳನ್ನು ನಿಭಾಯಿಸುವುದೇ ಸವಾಲಾಗಿದ್ದು, ಸರ್ಕಾರ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

- Advertisement -spot_img

More articles

- Advertisement -spot_img

Latest article