No menu items!
12.8 C
Munich
Tuesday, July 21, 2026

ಚೆನ್ನಮ್ಮ ಇಂದು ಪಂಚಭೂತಗಳಲ್ಲಿ ಲೀನ; 30 ಸಾವಿರ ಜನರಿಗೆ ವ್ಯವಸ್ಥೆಯೊಂದಿಗೆ ಅಂತಿಮ ವಿಧಿವಿಧಾನಕ್ಕೆ ಸಕಲ ಸಿದ್ಧತೆ

Must read

ಚೆನ್ನಮ್ಮ ಇಂದು ಪಂಚಭೂತಗಳಲ್ಲಿ ಲೀನ; 30 ಸಾವಿರ ಜನರಿಗೆ ವ್ಯವಸ್ಥೆಯೊಂದಿಗೆ ಅಂತಿಮ ವಿಧಿವಿಧಾನಕ್ಕೆ ಸಕಲ ಸಿದ್ಧತೆ

ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರು ನಿಧನರಾಗಿದ್ದು, ಅವರ ಪಾರ್ಥಿವ ಶರೀರವನ್ನು ಹೊಳೆನರಸೀಪುರ ಪಟ್ಟಣದಲ್ಲಿರುವ ಶಾಸಕ ಎಚ್.ಡಿ. ರೇವಣ್ಣ ಅವರ ನಿವಾಸಕ್ಕೆ ತರಲಾಗಿದೆ. ಸಾರ್ವಜನಿಕರು ಹಾಗೂ ಗಣ್ಯರು ಅಂತಿಮ ದರ್ಶನ ಪಡೆಯುತ್ತಿರುವ ಹಿನ್ನೆಲೆ ಇಂದು ಮಧ್ಯಾಹ್ನ 2 ಗಂಟೆಯ ನಂತರ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಸಮೀಪದ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.
ಚೆನ್ನಮ್ಮ ಅವರು ದೇವೇಗೌಡರ ಕುಟುಂಬದ ಹಿರಿಯ ಯಜಮಾನಿಯಾಗಿ, ಸರಳತೆ, ಸೌಜನ್ಯ ಮತ್ತು ಆತಿಥ್ಯದಿಂದ ಜನಮನ ಗೆದ್ದಿದ್ದರು. ಮನೆಗೆ ಬಂದವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವುದು, ಊಟ ಮಾಡಿಸದೆ ಯಾರನ್ನೂ ಕಳುಹಿಸದ ಗುಣದಿಂದ ಅವರು ಅನೇಕರ ಪಾಲಿಗೆ ‘ಅನ್ನಪೂರ್ಣೆ’ಯಾಗಿದ್ದರು. ರಾಜಕೀಯ ಕುಟುಂಬದ ಸದಸ್ಯೆಯಾಗಿದ್ದರೂ ಗ್ರಾಮೀಣ ಬದುಕಿನ ಸರಳತೆ, ಮಾನವೀಯತೆ ಮತ್ತು ಬಾಂಧವ್ಯವನ್ನು ಜೀವನದುದ್ದಕ್ಕೂ ಉಳಿಸಿಕೊಂಡಿದ್ದರು.
ಚೆನ್ನಮ್ಮ ಅವರ ಅಂತ್ಯಸಂಸ್ಕಾರವನ್ನು ಹೊಳೆನರಸೀಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲಿರುವ ಜಮೀನಿನಲ್ಲಿ ನೆರವೇರಿಸಲಾಗುತ್ತಿದೆ. ಸ್ಥಳದಲ್ಲಿ ಬೃಹತ್ ಜರ್ಮನ್ ಟೆಂಟ್ ನಿರ್ಮಿಸಲಾಗಿದ್ದು, ಸುಮಾರು 30 ಸಾವಿರ ಜನರು ಕುಳಿತುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ವಾಸ್ತು ತಜ್ಞ ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಸ್ಥಳವನ್ನು ಗುರುತಿಸಲಾಗಿದ್ದು, ಜೆ.ಪಿ.ನಗರದ ಕನಕಗಿರಿ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಕಣ್ಣನ್ ಸ್ವಾಮಿ ನೇತೃತ್ವದಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ವಿಧಿವಿಧಾನಗಳು ಆರಂಭವಾಗಲಿವೆ. ಸಂಜೆ 4.30ರೊಳಗೆ ಅಂತ್ಯಕ್ರಿಯೆ ಪೂರ್ಣಗೊಳಿಸುವ ಯೋಜನೆ ರೂಪಿಸಲಾಗಿದೆ.
ಚೆನ್ನಮ್ಮ ಅವರ ಅಂತ್ಯಕ್ರಿಯೆಗೆ ಬೆಟ್ಟದ ರಂಗನಾಥಸ್ವಾಮಿ ತಪ್ಪಲನ್ನು ಆಯ್ಕೆ ಮಾಡಿರುವುದಕ್ಕೂ ವಿಶೇಷ ಕಾರಣವಿದೆ. ಅವರು ದೀರ್ಘಕಾಲ ಹೊಳೆನರಸೀಪುರ ಭಾಗದಲ್ಲಿ ವಾಸವಿದ್ದು, ಹಳೆಕೋಟೆ, ಮುತ್ತಿಗೆಹಿರೀಹಳ್ಳಿ, ಹರದನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ಕುಟುಂಬ ಸದಸ್ಯರ ಒಮ್ಮತದ ಮೇರೆಗೆ ಈ ಸ್ಥಳವನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇದೇ ಸ್ಥಳದಲ್ಲಿ ಚೆನ್ನಮ್ಮ ಅವರ ಸ್ಮಾರಕ ನಿರ್ಮಾಣ ಮಾಡುವ ಚಿಂತನೆಯೂ ಇದೆ ಎಂದು ಸಂಸದ ಹಾಗೂ ಅವರ ಅಳಿಯ ಡಾ. ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

- Advertisement -spot_img

More articles

- Advertisement -spot_img

Latest article