ವೈದ್ಯಲೋಕಕ್ಕೇ ಅಚ್ಚರಿಯಾದ ಮಹಿಳೆ.. ಈಕೆಯ ಸಾಧನೆ ಎಂಥಾದ್ದು ಗೊತ್ತಾ?

1
1095

ಬಿಳಿಗಿರಿ ರಂಗನ ಬೆಟ್ಟದ ತಪ್ಪಲಲ್ಲಿ ವಾಹನ ಭರಽನೆ ಸಾಗುತ್ತಿತ್ತು. ಮನಸ್ಸಿನ ಮೂಲೆಯಲ್ಲೂ ಅದೇ ವೇಗದಲ್ಲಿ ಓಡುತ್ತಿರುವ ಪ್ರಶ್ನೆಗಳು. ನಗರದಿಂದ ದೂರ ದೂರ.
ಕಾಡಂಚಿನಲ್ಲಿರೋ ಪುಟ್ಟ ಪುಟ್ಟ ಮನೆಗಳು. ಚಾಮರಾಜನಗರ ಜಿಲ್ಲೆಯ ಇದೇ ಬಿಳಿಗಿರಿ ರಂಗನ ಬೆಟ್ಟದ ತಪ್ಪಲಲ್ಲಿರೋ ಈ ಮಹಿಳೆ ಎಲ್ಲರಂತೆ ನೋಡೋಕೆ ಸೀದಾ ಸಾದಾ. ಆದ್ರೆ ನಗರ ವಾಸಿಗಳು ಹುಬ್ಬೇರುವಂತೆ ಮಾಡಿರೋ ಸಾಧಕಿ. ಇವರೇ ಜಡೆ ಮಾದಮ್ಮ. ಬಿಳಿಗಿರಿರಂಗನ ಬೆಟ್ಟದಲ್ಲಿ ವಾಸಿಸುತ್ತಿರೋ ಇವರು ಮೂಲತಃ ಬುಡಕಟ್ಟು ಜನಾಂಗದ ಸಾಮಾನ್ಯ ಮಹಿಳೆ. ಸುಕ್ಕುಗಟ್ಟಿದ ಮುಖ, ಸಿಂಪಲ್ಲಾಗಿರೋ ಬಟ್ಟೆ, ಜೀವನದ ಅನುಭವಕ್ಕೂ, ನಿತ್ಯ ಜೀವನದ ಕಷ್ಟಕ್ಕೂ ಸಾಕ್ಷಿ.
ಕಷ್ಟದ ಜೀವನ ಮಾದಮ ಮುಖದಲ್ಲಿರೋ ಮಂದಹಾಸ ಮಾಯವಾಗುವಂತೆ ಮಾಡಿಲ್ಲ. ಅದೇ ಇವರ ಜೀವನದ ಸಿರಿವಂತಿಕೆ. ತಮ್ಮ ಪೂರ್ವಜರ ಕಾಲದಿಂದ ಇದೆ ಕಾಡಲ್ಲಿರೋ ಇವರಿಗೆ ನಗರದ ಜೀವನಶೈಲಿ ಅಥವಾ ಅಕ್ಷರದ ಗಂಧ ಗಾಳಿಯೂ ಇಲ್ಲ . ಹಾಗಿದ್ರೂ ಅಕ್ಕಪಕ್ಕದ ಎರಡ್ಮೂರು ಜಿಲ್ಲೆಗಳಲ್ಲಿ ಮನೆ ಮಾತಾಗಿದ್ದಾರೆ ಮಾದಮ್ಮ.
ಹೌದು, ಯಾವುದೇ ಔಷಧಿಯ ಸಹಾಯವಿಲ್ಲದೆ, ಚುಚ್ಚು ಮದ್ದನ್ನೂ ಕೊಡದೇ, ಸರಿ ಸುಮಾರು 2ಸಾವಿರದ 800 ನಾರ್ಮಲ್ ಹೆರಿಗೆ ಮಾಡಿಸಿದ್ದಾರೆ ಮಾದಮ್ಮ. ದೊಡ್ಡಾಸ್ಪತ್ರೆಯ ವೈದ್ಯರಿಗೂ ಸವಾಲೆನ್ನಿಸೋ ಹೆರಿಗೆ ಸಮಸ್ಯೆಗಳಿಗೆ ಇವರು ತಮ್ಮದೇ ಶೈಲಿಯ ಪರಿಹಾರ ಕಂಡುಕೊಂಡಿದ್ದಾರೆ. ಆ ಮೂಲಕ ಸುತ್ತಲಿನ ಊರುಗಳಷ್ಟೇ ಅಲ್ಲ, ಅಕ್ಕಪಕ್ಕದ ಜಿಲ್ಲೆಗಳಲ್ಲೂ ಫೇಮಸ್ಸಾಗಿದ್ದಾರೆ.
ಈಗಿನ ಆಧುನಿಕ ಕಾಲದಲ್ಲಿ ಸಿಜರೀನ್ ಹೆರಿಗೆಯೇ ಸಾಮಾನ್ಯ. ಒಂದು ವೇಳೆ ನಾರ್ಮಲ್ ಹೆರಿಗೆ ಆದರೆ ಅದು ಒಂದು ಅದೃಷ್ಟವೇ ಸರಿ. ಇಂತಹ ಕಾಲದಲ್ಲಿ ತಮ್ಮ ಹಿರಿಯರು ಹೇಳಿಕೊಟ್ಟಂತಹ ಒಂದು ವಿಶಿಷ್ಟ ಪದ್ದತಿ ಅಳವಡಿಸಿಕೊಂಡು ಹೆರಿಗೆ ಮಾಡಿಸುತ್ತ ಬಂದಿದ್ದಾರೆ ಮಾದಮ್ಮ.
ಜಡೆ ಮಾದಮ್ಮನವರ ಕುಟುಂಬದಲ್ಲಿ ಇದು ಮೂರು ತಲೆಮಾರುಗಳಿಂದ ಬಂದಿರೋ ಬಳುವಳಿ. ಅವರೇ ಹೇಳುವ ಪ್ರಕಾರ ಈ ಪದ್ದತಿಯನ್ನು ಅವರ ತಾಯಿಗೆ ಅವರ ಅಜ್ಜಿ ಹೇಳಿಕೊಟ್ಟಿದ್ರಂತೆ. ಮತ್ತು ಮಾದಮ್ಮನೋರಿಗೆ ಇವರ ತಾಯಿ ಹೇಳಿಕೊಟ್ಟಿದ್ದಾರಂತೆ. ಅದೇ ಪದ್ದತಿಯ ಪ್ರಕಾರ ಹೆರಿಗೆ ಮಾಡಿಸುತ್ತಿದ್ದಾರೆ. ತಮಗೆ ಗೊತ್ತಿರುವಂತೆ ಗರ್ಭಿಣಿಯರಿಗೆ ಸೂಕ್ತ ಸಲಹೆಗಳನ್ನು ನೀಡುತ್ತಾರೆ. ಹೆರಿಗೆ ಸಂದರ್ಭದಲ್ಲಿ ತಮ್ಮ ಕರ್ತವ್ಯ ನಿಭಾಯಿಸುತ್ತಾರೆ. ಹೀಗೇ ಮಾಡಿದರೆ ಸಾಮಾನ್ಯ ಹೆರಿಗೆಯಾಗುತ್ತೆ ಅನ್ನೋದು ಅನುಭವದಿಂದ ಇವರಿಗೆ ಸಿದ್ಧಹಸ್ತವಾಗಿದೆ.
ಅಕ್ಕಪಕ್ಕದ ಊರಿನ ವೈದ್ಯರುಗಳು ಕೂಡ ಕೆಲವೊಂದು ಸಲ ಇವರನ್ನು ಹೆರಿಗೆ ಮಾಡಲು ನೆರವಿಗೆ ಕರೆಯುತ್ತಾರೆ. ಯಾರು ಯಾವ ಹೊತ್ತಿಗೆ ಕರೆದರೂ ಆಗಲ್ಲ ಅನ್ನೋದಿಲ್ಲ. ತಕ್ಷಣ ಹೊರಡುತ್ತಾರೆ. ತಮ್ಮ ಕೊನೆಯ ಉಸಿರಿರೋವರೆಗೂ ಜನರಿಗೆ ಸಹಾಯ ಮಾಡುತ್ತ ಸಾಗಿದ್ದಾರೆ. ಸಾಮಾನ್ಯ ಹೆರಿಗೆಗಳನ್ನು ಮಾಡಿಸುವುದೇ ಇವರ ಜೀವನದ ಗುರಿಯಂತೆ.
ಗರ್ಭಿಣಿಯಾದ ಮಹಿಳೆಯರು ಸುರಕ್ಷಿತವಾಗಿ ಒಂದು ಮುದ್ದಾದ ಮಗುವಿಗೆ ಜನ್ಮ ನೀಡೋದು ಅಂದ್ರೆ, ಮರುಜನ್ಮ ಪಡೆದಂತೆ. ಅದಕ್ಕಾಗಿ ಉಳ್ಳೋರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದೊಡ್ಡ ದೊಡ್ಡ ಆಸ್ಪತ್ರೆ ಮೊರೆ ಹೋಗುತ್ತಾರೆ. ಆದ್ರೆ ಜಡೆ ಮಾದಮ್ಮ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿರೋ ಅದೇ ಕಾರ್ಯ ನಿಜಕ್ಕೂ ಗ್ರೇಟ್ ಅಲ್ವ..!

1 COMMENT

LEAVE A REPLY

Please enter your comment!
Please enter your name here