ಬೆಂಗಾಡಿನ ಹುಡುಗ ಬೆಳ್ಳಿಪರದೆಯಲ್ಲಿ

0
706

ಒಂದು ಪುಟ್ಟ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಹುಟ್ಟಿ, ಮಾಡಲಿಂಗ್ ಕ್ಷೇತ್ರದಲ್ಲಿ ಸದ್ದು ಮಾಡಿ, ಸ್ಯಾಂಡಲ್ ವುಡ್ ನಲ್ಲಿ ನೆಲೆ ನಿಲ್ಲುತ್ತಿರುವ ಕೋಟೆನಾಡಿನ ಕುವರ ಶೀಲಂ ಎಂ ತಿಪ್ಪೇಸ್ವಾಮಿ ಅವರ ಸ್ಟೋರಿ ಇದು.


ಇಷ್ಟಪಟ್ಟಿದ್ದನ್ನು ಕಷ್ಟಪಟ್ಟು ಪಡೆಯಲೇ ಬೇಕು. ಛಲವಿದ್ದರೆ ಏನ್ ಬೇಕಾದ್ರು ಸಾಧಿಸಬಹುದು ಎಂದು ತೋರಿಸಿದ ಬೆಂಗಾಡಿನ ಯುವಕನ‌ ಯಶೋಗಾಥೆ.


ಚಿತ್ರದುರ್ಗದ ಚಿಕ್ಕಗೊಂಡನಹಳ್ಳಿ ಎಂಬ ಹಳ್ಳಿಯ ರೈತ ದಂಪತಿ ಮಂಜುನಾಥ್ ಮತ್ತು ರೇಣುಕಾ. ಇವರ ಹಿರಿಯ ಮಗನೇ ಶೀಲಂ.‌ ಜಾನಕಿ ಇವರ ಪ್ರೀತಿಯ ತಂಗಿ. ಇವರದ್ದು ಅವಿಭಕ್ತ ಕುಟುಂಬ. ತುಂಬು‌ ಕುಟುಂಬದ ಸಹಕಾರ ಕೂಡ ಇವರ ಯಶಸ್ಸಿನಲ್ಲಿ ಮುಖ್ಯ ಪಾತ್ರವಹಿಸಿದೆ ಅಂದ್ರೆ ತಪ್ಪಾಗಲ್ಲ.‌ ತಂದೆ ರೈತಾಪಿ ಕೆಲಸದ ಜೊತೆಗೆ ಪೆಟ್ರೋಲ್ ಬಂಕ್ ಕೂಡ ನಡೆಸ್ತಿದ್ದಾರೆ.

ಹಳ್ಳಿಯಲ್ಲಿ , ರೈತಕುಟುಂಬದಲ್ಲಿ ಹುಟ್ಟಿ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚೋದು ಕಷ್ಟ ಎಂದುಕೊಂಡುವವರಿಗೆ ಶೀಲಂ ಮಾರ್ಗದರ್ಶಿ. ರೈತನ ಮಗನಾಗಿ ದೆಹಲಿಯ ಐಐಟಿಯಲ್ಲಿ ಓದಿದ್ದು ಮತ್ತೊಂದು ಹೆಮ್ಮೆಯ ಸಂಗತಿ.


ಚಿಕ್ಕಗೊಂಡನಹಳ್ಳಿಯಲ್ಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದ ಶೀಲಂ. ದಾವಣಗೆರೆಯ ಎಆರ್ ಜಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಚೇತನ್ ಹೈಟೆಕ್ ನಲ್ಲಿ ಬಿಬಿಎಂ ಮಾಡಿದ್ರು. ನಂತರ ಮಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಎಂಬಿಎ ಮಾಡಿದ್ರು. ಅದಾದ ಬಳಿಕ ನವದೆಹಲಿಯ ಪ್ರತಿಷ್ಠಿತ ಐಐಟಿಯಲ್ಲಿ 6ಸಿಗ್ಮಾ ಪೂರೈಸಿದ್ರು. ರೈತನ ಮಗನಾಗಿ , ಕನ್ನಡ ಮಾಧ್ಯಮ ವಿದ್ಯಾರ್ಥಿಯಾಗಿ ಐಐಟಿಯಲ್ಲಿ ಓದಿದ್ದು ನಿಜಕ್ಕೂ ಸಾಧನೆಯೇ ಸರಿ.  ಶೀಲಂಗೆ ಚಿಕ್ಕಂದಿನಿಂದಲೂ ನಟನಾಗುವ ಆಸೆ. ಸಿನಿರಂಗದಲ್ಲಿ ಬೆಳೆಯುವ ಹಂಬಲ.


ಶಾಲಾ-ಕಾಲೇಜು ದಿನಗಳಲ್ಲಿ ಕಲ್ಚರಲ್ ಆ್ಯಕ್ಟಿವಿಟಿಗಳ ಮುಂದಾಳತ್ವವಹಿಸಿಕೊಳ್ತಿದ್ರು. ಡ್ಯಾನ್ಸ್ ನಲ್ಲಿ ನಂಬರ್ 1. ಸಾಕಷ್ಟು ಪ್ರಶಸ್ತಿಗಳು ಬಂದಿವೆ ಕೂಡ.
ಅಷ್ಟೇಅಲ್ಲ ಈ ಕಾಲೇಜ್ ಡೇಸ್ ನಲ್ಲೇ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಶೀಲಂ ಹತ್ತಾರು ಜಾಹಿರಾತುಗಳಲ್ಲಿ ಮಿಂಚಿದ್ರು.


ಬೆಳ್ಳಿತೆರೆಗೆ ಬರುವ ಆಸೆ ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಸಿನಿಮಾ ಮೂಲಕ ಈಡೇರಿತು. ಈ ಸಿನಿಮಾದಲ್ಲಿ ಹೀರೋಯಿನ್ನನ್ನು ಮದ್ವೆ ಆಗೋ ಹುಡುಗನ ಪಾತ್ರ ಶೀಲಂ ನಿಭಾಯಿಸಿದ್ರು. ಚಿಕ್ಕಪಾತ್ರವಾದ್ರು ತನ್ನೊಳೊಬ್ಬ ಕಲಾವಿದ ಇದ್ದಾನೆ ಎಂಬುದನ್ನು ತೋರಿಸಿದ್ರು.
ನಂತರ ಅಪರೇಷನ್ ಅಲಮೇಲಮ್ಮದಲ್ಲಿ ಪ್ರಮುಖಪಾತ್ರದಲ್ಲಿ ನಟಿಸಿದರು (ರಾಹುಲ್). ಬಳಿಕ ಚಮಕ್ ನಲ್ಲಿ ಮದುಮಗನಾಗಿ ಕಾಣಿಸಿಕೊಂಡರು.


ಶೀಘ್ರದಲ್ಲೇ ತೆರಕಾಣಲಿರುವ ‘ ಅಳಿದು-ಉಳಿದವರು’ ‘ಬಜಾರ್’ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಜಿಮ್ನಾಸ್ಟಿಕ್, ಡ್ಯಾನ್ಸ್ , ಸಂಗೀತವನ್ನು ಕರಗತ ಮಾಡಿಕೊಂಡಿರೋ ಶೀಲಂ ಸಿಂಗಾಪುರದ ಎಚ್ ಸಿ ಎಸಿಯಲ್ಲಿ ಆ್ಯಕ್ಟಿಂಗ್ ತರಬೇತಿ ಸಹ ಪಡೆದಿದ್ದಾರೆ. ನಟನಾಗಿ ಗಟ್ಟಿಯಾಗಿ ನಿಲ್ಲುವ ಆಸೆ ಇವರದ್ದು.


ಮಾಡಲಿಂಗ್ ಲೋಕದ ಜನಪ್ರಿಯ ಕೋ ಆರ್ಡಿನೇಟರ್ ಪ್ರಸಾದ್ ಬಿಡ್ಡಪ್ಪ ಅವರ ಏಜೆನ್ಸಿಯಲ್ಲಿ ಕೆಲಸ ಮಾಡಿದ್ದಾರೆ ಶೀಲಂ
ಡೈರೆಕ್ಟರ್ ಸುನೀ ಅವರು ನೀಡಿದ ಅವಕಾಶ , ಪ್ರೋತ್ಸಾಹ ಸ್ಮರಿಸೋ ಇವರು ಅಶುಬೇದ್ರ ಅವರನ್ನು ಕೂಡ ನೆನೆಯುತ್ತಾರೆ.


ಸರ್ಕಾರ ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವಾಗ ಶೀಲಂ ಅವರನ್ನು ಮಾಡಲ್ ಆಗಿ ತೆಗೆದುಕೊಂಡಿತ್ತು.


ಸದ್ಯ ಎಚ್ ಪಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ಸಿನಿಮಾ ಮತ್ತು ಉದ್ಯೋಗ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿರುವ ಇವರು ಶೀಘ್ರದಲ್ಲೇ ಸಂಪೂರ್ಣ ಸಿನಿ ರಂಗಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳಲಿದ್ದಾರೆ.ಮೊದಲ ಬಾರಿಗೆ ಸಿಲ್ವರ್ ಸ್ಕ್ರೀನ್ ನಲ್ಲಿ ತಮ್ಮನ್ನು ತಾವು ನೋಡಿದ್ದು, ದೆಹಲಿ ಹೋದಾಗ ಟಿವಿಯಲ್ಲಿ ಜಾಹಿರಾತಲ್ಲಿ ತನ್ನನ್ನು ತಾನು ಕಂಡಿದ್ದು ತುಂಬಾ ಖುಷಿಕೊಟ್ಟ ವಿಚಾರ ಎಂದು ಹೇಳುವ ಶೀಲಂ ಅವರಿಗೆ ದೊಡ್ಡ ಯಶಸ್ಸು ಸಿಕ್ಕು ಸದಾ ಖುಷಿಯಾಗಿರಲಿ….

-ಶಶಿಧರ್ ಎಸ್ ದೋಣಿಹಕ್ಲು

(ಸ್ನೇಹಿತರೇ, ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿರುವವರ , ಚಿತ್ರರಂಗಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿರುವ ಯುವಕ/ಯುವತಿಯರ ಪರಿಚಯ ಮಾಡಿಕೊಡುವ ಕಿರುಪ್ರಯತ್ನ ನಮ್ಮದು.
ನಿಮಗೆ ಯಾರಾದರು ಯುವ ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಪರಿಚಯವಿದ್ದಲ್ಲಿ ನಮಗೆ ತಿಳಿಸಿ. ಹೊಸಮುಖಗಳ ಕಿರುಪರಿಚಯ ಮಾಡಿಕೊಡುವ ಮೂಲಕ‌ ಪ್ರೋತ್ಸಾಹ ನೀಡೋಣ.
ಧನ್ಯವಾದಗಳು)

LEAVE A REPLY

Please enter your comment!
Please enter your name here