SSLC ಪೂರಕ ಪರೀಕ್ಷೆ ವೇಳೆ ಸಾರಿಗೆ ಮುಷ್ಕರ ಬೇಡ: ನೌಕರರ ಸಂಘಗಳಿಗೆ ಹೈಕೋರ್ಟ್ ತಾಕೀತು
ಬೆಂಗಳೂರು: ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಸಾರಿಗೆ ನೌಕರರ ಮುಷ್ಕರ ಸರಿಯಾದ ಕ್ರಮವಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಮುಷ್ಕರಕ್ಕೆ ಅನುಮತಿ ನೀಡಲು ನಿರಾಕರಿಸಿದೆ.
ಸಾರಿಗೆ ನೌಕರರ ಮುಷ್ಕರ ಹಿಂಪಡೆಯುವಂತೆ ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರಿನ ಮನೆ ಕೆಲಸಗಾರ್ತಿ ಸಿ. ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಹೆಚ್.ವಿ. ಶ್ರೀಧರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಮತ್ತು ನ್ಯಾಯಮೂರ್ತಿ ಕೆ. ಮನ್ಮಧರಾವ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ವಿಚಾರಣೆ ವೇಳೆ ನ್ಯಾಯಪೀಠ, “ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಜಗಳದಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗಬಾರದು. ವಿಶೇಷವಾಗಿ ಪರೀಕ್ಷಾ ಅವಧಿಯಲ್ಲಿ ಮುಷ್ಕರ ನಡೆಸುವುದು ಸೂಕ್ತವಲ್ಲ” ಎಂದು ಅಭಿಪ್ರಾಯಪಟ್ಟಿತು.
ಇದಲ್ಲದೆ, ಸರ್ಕಾರ ಮತ್ತು ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳ ನಡುವೆ ರಾಜಿ-ಸಂಧಾನ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಮುಷ್ಕರ ನಡೆಸುವುದು ಸರಿಯಾದ ಕ್ರಮವಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ವಿಚಾರಣೆ ಆರಂಭವಾದಾಗ ಸರ್ಕಾರದ ಪರ ವಕೀಲರು, “ಬಹುತೇಕ ಸಾರಿಗೆ ಸಂಘಟನೆಗಳು ವೇತನ ಏರಿಕೆಯನ್ನು ಒಪ್ಪಿಕೊಂಡಿವೆ. ಈಗ ಮುಷ್ಕರಕ್ಕೆ ಕರೆ ನೀಡಿರುವ ಸಂಘಗಳು ಎಲ್ಲಾ ಸಾರಿಗೆ ಕಾರ್ಮಿಕರನ್ನು ಪ್ರತಿನಿಧಿಸುವುದಿಲ್ಲ. ಕಾರ್ಮಿಕ ಆಯುಕ್ತರ ರಾಜಿ-ಸಂಧಾನ ಸಭೆ ಮೇ 25ಕ್ಕೆ ನಿಗದಿಯಾಗಿದೆ” ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಎರಡೂ ಪಕ್ಷಗಳ ವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೆ ಮುಷ್ಕರ ನಡೆಸದಂತೆ ವಿಧಿಸಿದ್ದ ನಿರ್ಬಂಧವನ್ನು ವಿಸ್ತರಿಸಿದೆ.
ಅರ್ಜಿಯಲ್ಲಿ, ರಾಜ್ಯದ ಸಾರ್ವಜನಿಕ ಬಸ್ಗಳಲ್ಲಿ ಪ್ರತಿದಿನ ಸುಮಾರು 1.20 ಕೋಟಿ ಮಂದಿ ಸಂಚಾರ ಮಾಡುತ್ತಿದ್ದು, ಇವರಲ್ಲಿ ಶೇ.60ರಷ್ಟು ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಮೇ 20ರಿಂದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ಅರೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸಾರ್ವಜನಿಕ ಬಸ್ಗಳನ್ನೇ ಅವಲಂಬಿಸಿರುವುದರಿಂದ ಮುಷ್ಕರದಿಂದ ಅವರಿಗೆ ತೊಂದರೆಯಾಗಲಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಅಲ್ಲದೆ, ದಿನಗೂಲಿ ಕಾರ್ಮಿಕರು, ರೋಗಿಗಳು, ಹಿರಿಯ ನಾಗರಿಕರು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದ ಜನರು ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿರುವುದರಿಂದ ಮುಷ್ಕರದಿಂದ ಸಾರ್ವಜನಿಕ ಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
2023 ಮತ್ತು 2025ರಲ್ಲಿ ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ಸಾರಿಗೆ ನೌಕರರು ಮುಷ್ಕರ ಹಿಂಪಡೆದಿದ್ದರು. 2025ರಲ್ಲಿ ನ್ಯಾಯಾಲಯದ ಆದೇಶದ ಹೊರತಾಗಿಯೂ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದ ಹಿನ್ನೆಲೆಯಲ್ಲಿ 17,200 ಶೋಕಾಸ್ ನೋಟಿಸ್ಗಳನ್ನು ಜಾರಿ ಮಾಡಬೇಕಾಯಿತು ಎಂದು ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿದೆ.
ರಾಜ್ಯ ಸರ್ಕಾರ ಈಗಾಗಲೇ ಸಾರಿಗೆ ಸಿಬ್ಬಂದಿಯ ವೇತನದಲ್ಲಿ ಶೇ.12.5ರಷ್ಟು ಏರಿಕೆ ಮಾಡಿದ್ದು, ₹1,271.92 ಕೋಟಿ ಅನುದಾನ ಮಂಜೂರು ಮಾಡಿದೆ. ಮೊದಲ ಹಂತದಲ್ಲಿ ₹450 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದಕ್ಕೂ ಮಧ್ಯೆ ಕೈಗಾರಿಕಾ ವಿವಾದ ಕಾಯ್ದೆಯ ಸೆಕ್ಷನ್ 22(1)(a) ಪ್ರಕಾರ ಮುಷ್ಕರಕ್ಕೆ ಕನಿಷ್ಠ 14 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಆದರೆ ಈ ಪ್ರಕರಣದಲ್ಲಿ ಕೇವಲ ಐದಾರು ದಿನಗಳ ಮುಂಚಿತವಾಗಿ ನೋಟಿಸ್ ನೀಡಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.



