ಸಿನಿಮಾ ಪ್ರೇಕ್ಷಕರಿಗೆ ಬಿಗ್ ಶಾಕ್; ಟಿಕೆಟ್ ದರದ ಮೇಲೆ ಶೇ.2 ಹೆಚ್ಚುವರಿ ಸೆಸ್
ಬೆಂಗಳೂರು: ರಾಜ್ಯದ ಸಿನಿಮಾ ಪ್ರೇಕ್ಷಕರಿಗೆ ಹೆಚ್ಚುವರಿ ಹೊರೆ ಬೀಳುವಂತಹ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇನ್ಮುಂದೆ ಸಿನಿಮಾ ಟಿಕೆಟ್ಗಳ ಮೇಲೆ ಶೇ.2ರಷ್ಟು ಹೆಚ್ಚುವರಿ ಸೆಸ್ ವಿಧಿಸಲಾಗುತ್ತಿದ್ದು, ಈ ಹೊಸ ನಿಯಮ ಸೆಪ್ಟೆಂಬರ್ 30ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.
ರಾಜ್ಯ ಸರ್ಕಾರ 2024ರಲ್ಲಿ ಮಂಡಿಸಿದ್ದ ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ’ ಇದೀಗ ಜಾರಿಗೆ ಬರುತ್ತಿದೆ. ಈ ಕಾಯ್ದೆಯಡಿ ಸಿನಿಮಾ ಟಿಕೆಟ್ಗಳ ಮೇಲೆ ಸೆಸ್ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಮಸೂದೆಗೆ 2024ರ ಸೆಪ್ಟೆಂಬರ್ 23ರಂದು ಕರ್ನಾಟಕದ ರಾಜ್ಯಪಾಲರು ಅಂಕಿತ ಹಾಕಿದ್ದರು. ಬಳಿಕ ಸೆಪ್ಟೆಂಬರ್ 24ರಂದು ಸರ್ಕಾರದ ವಿಶೇಷ ರಾಜ್ಯಪತ್ರದಲ್ಲಿ (ಗೆಜೆಟ್) ಕಾಯ್ದೆಯನ್ನು ಪ್ರಕಟಿಸಲಾಗಿತ್ತು. ಇದೀಗ ಸುಮಾರು ಎರಡು ವರ್ಷಗಳ ಬಳಿಕ ಈ ಅಧಿನಿಯಮವನ್ನು ಜಾರಿಗೆ ತರಲಾಗುತ್ತಿದೆ.
ಹೊಸ ನಿಯಮದ ಪ್ರಕಾರ, ಮಲ್ಟಿಪ್ಲೆಕ್ಸ್ ಸೇರಿದಂತೆ ಸಿನಿಮಾ ಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವ ಪ್ರೇಕ್ಷಕರು ಟಿಕೆಟ್ನ ಮೂಲ ದರದ ಜೊತೆಗೆ ಶೇ.2ರಷ್ಟು ಸೆಸ್ ಪಾವತಿಸಬೇಕಾಗುತ್ತದೆ.
ಉದಾಹರಣೆಗೆ, ₹200 ಮುಖಬೆಲೆಯ ಸಿನಿಮಾ ಟಿಕೆಟ್ ಖರೀದಿಸಿದರೆ, ಅದರ ಮೇಲೆ ಹೆಚ್ಚುವರಿಯಾಗಿ ₹4 ಸೆಸ್ ಪಾವತಿಸಬೇಕಾಗುತ್ತದೆ.
ಸಿನಿಮಾ ಟಿಕೆಟ್ಗಳ ಮೂಲಕ ಸಂಗ್ರಹವಾಗುವ ಈ ಸೆಸ್ ಹಣವನ್ನು ಸಿನಿಮಾ ಕಾರ್ಮಿಕರ ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಯೋಜನೆಗಳಿಗೆ ಮಾತ್ರ ಬಳಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರ ಕಲ್ಯಾಣ, ಸಾಮಾಜಿಕ ಭದ್ರತೆ ಹಾಗೂ ವಿವಿಧ ಕ್ಷೇಮಾಭಿವೃದ್ಧಿ ಚಟುವಟಿಕೆಗಳಿಗೆ ಈ ನಿಧಿಯನ್ನು ಬಳಸುವ ಉದ್ದೇಶವನ್ನು ಕಾಯ್ದೆಯಲ್ಲಿ ಹೊಂದಲಾಗಿದೆ.
ಸೆಪ್ಟೆಂಬರ್ 30ರಿಂದ ಹೊಸ ನಿಯಮ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ, ಸಿನಿಮಾ ಟಿಕೆಟ್ ಖರೀದಿಸುವ ಪ್ರೇಕ್ಷಕರಿಗೆ ಇನ್ನು ಮುಂದೆ ಟಿಕೆಟ್ ದರದೊಂದಿಗೆ ಹೆಚ್ಚುವರಿ ಶೇ.2 ಸೆಸ್ ಪಾವತಿಸುವುದು ಅನಿವಾರ್ಯವಾಗಲಿದೆ.



