‘ಕೆಜಿಎಫ್ 2’ ಬಳಿಕ ಮತ್ತೆ ರಾಕಿಂಗ್ ಸ್ಟಾರ್ ಹವಾ; ‘ಟಾಕ್ಸಿಕ್’ ಮುಂಗಡ ಬುಕಿಂಗ್ʼನಲ್ಲಿ ಹೊಸ ದಾಖಲೆ, ಪ್ರತಿ ಗಂಟೆಗೆ 21 ಸಾವಿರಕ್ಕೂ ಹೆಚ್ಚು ಟಿಕೆಟ್ ಸೇಲ್!
‘ಕೆಜಿಎಫ್ 2’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ತೆರೆಗೆ ಬರುತ್ತಿದ್ದು, ಈಗಾಗಲೇ ಸಿನಿಮಾದ ಕ್ರೇಜ್ ಮುಂಗಡ ಬುಕಿಂಗ್‌ನಲ್ಲೇ ಜೋರಾಗಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ದೇಶಾದ್ಯಂತ ಆರಂಭವಾಗಿರುವ ಮುಂಗಡ ಟಿಕೆಟ್ ಬುಕಿಂಗ್‌ಗೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
‘ಟಾಕ್ಸಿಕ್’ ಚಿತ್ರದ ಮುಂಗಡ ಬುಕಿಂಗ್ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಹಾಗೂ ಸಿನಿಪ್ರಿಯರು ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದಿದ್ದಾರೆ. ಬುಕ್‌ಮೈಶೋನಲ್ಲಿ ಪ್ರಸ್ತುತ ಪ್ರತಿ ಗಂಟೆಗೆ 21.71 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗುತ್ತಿವೆ ಎನ್ನಲಾಗಿದೆ.
ಸಿನಿಮಾ ಬಿಡುಗಡೆಯಾಗಲು ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗಲೇ ಈ ಪ್ರಮಾಣದ ಮುಂಗಡ ಬುಕಿಂಗ್ ನಡೆಯುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆ ಎಷ್ಟಿದೆ ಎಂಬುದನ್ನು ತೋರಿಸುತ್ತಿದೆ. ಹೀಗಾಗಿ ‘ಟಾಕ್ಸಿಕ್’ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪಡೆಯುವ ನಿರೀಕ್ಷೆ ಮೂಡಿದೆ.
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್‌ಗೆ ಜೋಡಿಯಾಗಿ ಮಾತ್ರವಲ್ಲದೆ ಪ್ರಮುಖ ಪಾತ್ರಗಳಲ್ಲಿ ಹಲವು ಖ್ಯಾತ ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ನಯನತಾರಾ, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ವೆಂಕಟ ಕೆ. ನಾರಾಯಣ ಹಾಗೂ ಯಶ್ ಜಂಟಿಯಾಗಿ ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಕೆಜಿಎಫ್’ ಸರಣಿಯ ಮೂಲಕ ಯಶ್ ಸಿನಿಮಾಗಳಿಗೆ ಸಂಗೀತ ನೀಡಿದ್ದ ರವಿ ಬಸ್ರೂರ್ ‘ಟಾಕ್ಸಿಕ್’ಗೂ ಸಂಗೀತ ಸಂಯೋಜಿಸಿದ್ದಾರೆ.
‘ಟಾಕ್ಸಿಕ್’ ಚಿತ್ರದ ಟೀಸರ್ ಹಾಗೂ ಪೋಸ್ಟರ್‌ಗಳು ಬಿಡುಗಡೆಯಾದಾಗಲೇ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಇದೀಗ ಮುಂಗಡ ಬುಕಿಂಗ್‌ನಲ್ಲೂ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಆಗಸ್ಟ್ 26ರಂದು ‘ಟಾಕ್ಸಿಕ್’ ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಯಶ್ ಅವರ ಬಹುನಿರೀಕ್ಷಿತ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.



