ಅವಳಿಗಿಂತ ಸಂಬಳ ಕಮ್ಮಿ ಇತ್ತು, ಅದಕ್ಕಾಗಿಯೇ ಮದುವೆ ಆಗಲಾರೆನೆಂದ..!

1
94

ಎಂಬಿಎ ಮುಗಿಯುತ್ತಿದ್ದಂತೆಯೇ ಸ್ವರೂಪ್ ಗೆ ಅಮೇರಿಕಾ ಮೂಲದ ಕಂಪನಿಯೊಂದರಲ್ಲಿ ಒಳ್ಳೆಯ ಕೆಲಸವೂ ಸಿಕ್ಕಿತು. ಬೆಂಗಳೂರು ಬ್ರಾಂಚ್ ನಲ್ಲಿಯೇ ಕೆಲಸ ಮಾಡುತ್ತೇನೆಂದು ಕೇಳಿಕೊಂಡನಾದರೂ ಸ್ವಲ್ಪ ಸಮಯ ಡೆಹರಾಡೂನ್ ನಲ್ಲಿ ಕೆಲಸ ಮಾಡಿ ಅಂತ ಅವನನ್ನು ಡೆಹರಾಡೂನ್ ನಲ್ಲಿನ ಕಂಪನಿಗೆ ಕಳುಹಿಸಿದರು..!
ಹುಟ್ಟಿನಿಂದಲೂ ಅಪ್ಪ ಅಮ್ಮನನ್ನು ಬಿಟ್ಟಿರದ ಸ್ವರೂಪ್ ಗೆ ಡೆಹರಾಡೂನ್ ನಲ್ಲಿ ಇರೋದು ತುಂಬಾನೇ ಕಷ್ಟವಾಯಿತು. ಆದರೂ ಇರಲೇ ಬೇಕಲ್ಲ ಅಂತ ಇದ್ದ. ಎಲ್ಲರೂ ಅವರವರ ಪಾಡಿಗೆ ಕೆಲಸ ಮಾಡಿಕೊಂಡು ಇರೋರು. ಜೊತೆಯಲ್ಲಿ ಕೂತು ಮಾತಾಡುವಾಗಲೂ ಕೆಲಸದ್ದೇ ಮಾತು..! ಬರೀ ಕೆಲಸ ಕೆಲಸ ಕೆಲಸ..!
ಎರಡು ತಿಂಗಳಾದ ಮೇಲೆ ಅವನಿಗೆ ಸ್ವಲ್ಪ ಜೀವ ಬಂದಂಗಾಯ್ತು..! ಕಾರಣ, `ಸಿರಿ’..! ಸಿರಿ ಯಾರೂ ಅಂದ್ರಾ..?! `ಸಿರಿ’ ಹೊಸ ಟೀಂ ಲೀಡರ್. ಕನ್ನಡದವ್ಳು.
ಒಮ್ಮೆ ಕೆಲಸ ಮುಗಿದು ಮನೆಗೆ ಹೋದ್ಮೇಲೆ ಸಿರಿ, ಸ್ವರೂಪ್ ಗೆ ಕಾಲ್ ಮಾಡಿ, ಸಾರ್, ನೀವು ತುಂಬಾ ಟೆಂಕ್ಷನ್ನಲ್ಲಿದ್ದೀರಿ, ಬೇಜಾರಲಿದ್ದೀರಿ ಅಂತ ಕಾಣುತ್ತೆ..? ಅಂತ ಕೇಳಿದ್ಲು.
ಬೇಜರಲಿದ್ರೂ ಬೇಜಾರಲಿದ್ದೀನಿ ಅನ್ನೋಕೆ ಆಗುತ್ತಾ…?! ಹಂಗಾಗಿ ಸ್ವರೂಪ್, `ಹಾಗೇನಿಲ್ಲ ಮೇಡಂ ಅಂದ’..! ಮಾತು ಮುಂದುವರೆಯಿತು. ಮೊದಲೇ ಕನ್ನಡದವ್ರು ಅಂತ ಗೊತ್ತಿತ್ತಲ್ವಾ..?! ಹಂಗಾಗಿ ಕನ್ನಡದಲ್ಲೇ ಮಾತು ಮುಂದುವರೆಸಿದ್ರು..! ಇಂಗ್ಲೀಷ್, ಹಿಂದಿ ಚೆನ್ನಾಗಿ ಬರ್ತಾ ಇದ್ರೂ “ಕನ್ನಡ” ಅವರನ್ನು ತುಂಬಾ ಹತ್ತಿರ ಮಾಡ್ತು..! ಆತ್ಮೀಯಾರಾದ್ರು. ವಯಸ್ಸು ಅಡ್ಡಿ ಬರ್ಲಿಲ್ಲ. ಹುದ್ದೆ ದೊಡ್ಡದು, ಚಿಕ್ಕದು ಅನ್ನೋ ಮಾತೂ ಬರ್ಲಿಲ್ಲ..! ಜಾತಿ ಅಂತೂ ಗೊತ್ತೇ ಆಗ್ಲಿಲ್ಲ..! ಆತ್ಮೀಯತೆ ಬೆಳೀತು, ಪ್ರೀತಿ ಹುಟ್ಟಿತು.
ಕಂಪನಿಯಲ್ಲಿ ಸ್ವರೂಪ್ ಗೆ ಸಿರಿ ಟೀಂ ಲೀಡರ್. ಕಂಪನಿಯಿಂದಾಚೆ ಗೆಳತಿ..! ಸ್ವಲ್ಪ ಸಮಯದಲ್ಲೇ ಸ್ವರೂಪ್ ಗೆ ಬಡ್ತಿ ಸಿಕ್ಕಿತು..! ಉನ್ನತ ಹುದ್ದೆಯೊಂದಿಗೆ ದೆಹಲಿಗೆ ಹೋದ. ಅವನು ದೆಹಲಿಗೆ ಹೋದ ಕೆಲವೇ ಕೆಲವು ದಿನಗಳ ನಂತರ ಸಿರಿ ಮುಂಬೈಗೆ ಹೋದ್ಲು..! ಸ್ವರೂಪ್ ದೆಹಲಿಯಲ್ಲಿ, ಸಿರಿ ಮುಂಬೈಯಲ್ಲಿ.. ಒಂದು ವರ್ಷ ಕಳೆದ್ರು..! ದೂರ ಇರುವಾಗ ಪ್ರೀತಿ ಹೆಚ್ಚೇ ಆಯ್ತೇ ಹೊರತು ಒಂಚೂರು ಕಡಿಮೆ ಆಗಿರ್ಲಿಲ್ಲ..!
ಆದರೆ ಯಾವಾಗ ಇಬ್ಬರೂ ಆ ಒಂದು ವರ್ಷದ ನಂತರ ಬೆಂಗಳೂರಿಗೆ ಬಂದರೋ.. ಹುಡುಕಾಡಿ ಒಂದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ್ರು ಇಲ್ಲಿಂದ ಶುರುವಾಯ್ತು ನೋಡಿ, ಇವರ ಲವ್ ಸ್ಟೋರಿಯಲ್ಲಿ ಟ್ವಿಸ್ಟ್ ಟ್ವಿಸ್ಟ್ ಟ್ವಿಸ್ಟ್..!
ವಯಸ್ಸು ಮೂವತ್ತು ದಾಟುತ್ತೆ, ಮದ್ವೆ ಆಗು ಅಂತ ಮನೆಯಲ್ಲಿ ತಲೆ ತಿನ್ತಾ ಇದ್ದಾರೆ ಅನ್ನೋ ಚಿಂತೆ ಸಿರಿಗೆ..! ಮದ್ವೆ ಆಗೋಣ ಅಂದ್ರೆ 29 ಸ್ವರೂಪ್ ವರ್ಷದ ಸ್ವರೂಪ್ ಗೆ ದುಡ್ಡು ಮಾಡೋ ಚಿಂತೆ..! ಒಳ್ಳೆಯ ಸಂಬಳವೇನೋ ಸಿಗ್ತಾ ಇತ್ತು..! ಆದರೆ ಸಿರಿಗಿಂತ ಕಡಿಮೆ ಸಂಬಳ ನನಗೆ ಅನ್ನೋ ಯೋಚನೆ ಅವನಿಗೆ..! ನಿನಗಿಂತ ಒಂದು ರೂಪಾಯಿ ಆದ್ರೂ ಜಾಸ್ತಿ ಸಂಬಳ ತಗೋಬೇಕು.. ಆಗಲೇ ನನಗೆ ಬೆಲೆ..! ಇಲ್ಲವಾದ್ರೆ ಗಂಡನಿಗಿಂತ ಹೆಂಡತಿಗೇ ಸಂಬಳ ಜಾಸ್ತಿ ಅಂತ ಯಾರಾದ್ರೂ ಮಾತಾಡೇ ಮಾತಾಡ್ತಾರೆ..ಅಂತ ಅವಳ ಬಳಿ ನೇರವಾಗೇ ಹೇಳಿಬಿಟ್ಟ..!
ಸಿರಿಗೆ ತುಂಬಾ ಬೇಜಾರಾಯ್ತು..! ಕೂಲ್ ಆಗೇ ಹೇಳಿದ್ಲು, “ನೋಡು, ಸ್ವರೂಪ್ ಯಾವತ್ತೂ ನಿನಗೆ ನನಗಿಂತ ಸಂಬಳ ಕಡಿಮೆ ಅಂತ ನಾನು ಯೋಚನೆ ಮಾಡಿಲ್ಲ..ಮಾಡೋದು ಇಲ್ಲ. ನೀನು ನನಗಿಂತ ಚಿಕ್ಕವನು, ಕೆಲಸದ ಅನುಭವದಲ್ಲೂ ಕಿರಿಯ. ಅದಕ್ಕಾಗಿಯೇ ನಿನಗೆ ನನಗಿಂತ ಕಡಿಮೆ ಸಂಬಳವಿದೆ. ನೋಡ್ತಾ ಇರು, ಇನ್ನೊಂದು ವರ್ಷದಲ್ಲೇ ನಿನಗೆ ನನಗಿಂತ ಹೆಚ್ಚು ಸಂಬಳ ಬರುತ್ತೆ..! ನೀನು ಬೆಳೆಯುತ್ತೀಯಾ ಕಣೋ ಅಂತ ಅವನಿಗೆ ಖುಷಿ ಆಗುವಂತೆಯೇ ಮಾತಾಡಿದ್ಲು”..!
ಅದಕ್ಕೆ ಅವನು, ” ಸಿರಿ, ನಿಂಗೆ ಅರ್ಥ ಆಗಲ್ಲ ಬಿಡು, ಹ್ಞಾಂ ಇನ್ನೊಂದು ವರ್ಷದೊಳಗೆ ನನಗೆ ನಿನಗಿಂತ ಸಂಬಳ ಜಾಸ್ತಿ ಬರುತ್ತಲ್ಲಾ..? ಆಗಲೇ ಮದುವೆ ಆಗೋಣ..! ಅಲ್ಲಿ ತನಕ ಕಾಯಿ, ನಿನಗೆ ಅರ್ಜೆಂಟ್ ಇದ್ರೆ ಬೇರೆ ಯಾರನ್ನಾದ್ರೂ ಮದ್ವೆ ಆಗು” ಅಂತ ಖಾರವಾಗಿಯೇ ಹೇಳಿದ..!
ಸ್ವರೂಪ್ ಎಷ್ಟೇ ಚುಚ್ಚಿ ಮಾತಾಡಿದ್ರೂ.. ಸಿರಿ ಅವನ ಮನಸ್ಸಿಗೆ ನೋವಾಗುವಂತೆ ಜೋರಾಗಿ ಮಾತೇ ಆಡ್ತಾ ಇರ್ಲಿಲ್ಲ..! ಕಾರಣ, ಅವನು ತನಗಿಂತಾ ಚಿಕ್ಕವನು, ಅವನಂತೆ ತಾನೂ ಮಾತಾಡಿದ್ರೆ ಜಗಳ ಜೋರಾಗುತ್ತೆ..! ನಮ್ಮ ಪ್ರೀತಿ ಖಂಡಿತಾ ಸಾಯುತ್ತೆ. ಬೇಜಾರು ಮಾಡ್ಕೊಂಡು ಸುಮ್ಮನೇ ಇರ್ತಾ ಇದ್ಲು..! ಅವಳು ಬೇಜಾರಾಗಿದ್ದಾಳೆಂದು ಅರ್ಥವಾದಾಗ, ಸ್ವರೂಪ್ ಅವಳ ಬಳಿ ಹೋಗಿ, ಕ್ಷಮೆ ಕೇಳೋನು..! ಅವನಿಗೆ ಅವಳಿಗಿಂತ ಸಂಬಳ ಜಾಸ್ತಿ ಬೇಕು ಅನ್ನೋ ಆಸೆ ಸ್ವಾರ್ಥವಾಗಿರ್ಲಿಲ್ಲ..! ಅವಳ ಕುರಿತ ಹೊಟ್ಟೆ ಕಿಚ್ಚು ಆಗಿರ್ಲಿಲ್ಲ..! ಆದರೆ ಗಂಡನಿಗಿಂತ ಹೆಂಡತಿ ಸಂಬಳ ಜಾಸ್ತಿ ಅಂದ್ರೆ ಸರಿ ಇರೋಲ್ಲ ಅನ್ನೋ ಭಾವನೆ..!
ಇಡೀ ಸಮಾಜದಲ್ಲೇ ಇರೋ ಈ ತಪ್ಪು ಕಲ್ಪನೆಯೇ ಸ್ವರೂಪ್ ಗೆ ಸಿರಿ ಮೇಲೆ ಕೋಪ ತರಿಸ್ತಾ ಇತ್ತು..!
ವರ್ಷ ಕಳೆಯಿತು ಸ್ವರೂಪ್ ಗೆ ಸಂಬಳವೂ ಹೆಚ್ಚಿತು, ಹುದ್ದೆಯಲ್ಲಿ ಮತ್ತೊಂದು ಹಂತಕ್ಕೂ ಏರಿದ..! ಜತೆಗೆ ಸಿರಿಗೂ ಸಂಬಳ ಜಾಸ್ತಿ ಆಗಿ, ಅವಳೂ ಉನ್ನತ ಹುದ್ದೆಯನ್ನು ಪಡೆದಳು..! ಕಂಪನಿ ಬದಲಾಯಿಸಲಿದರೂ ಅಷ್ಟೇ..! ಇಬ್ಬರು ಬೇರೆ ಬೇರೆ ಕಂಪನಿಯಲ್ಲಿ ಕೆಲಸ ಮಾಡಿದ್ರು..! ಆಗಲೂ ಸ್ವರೂಪ್ ಪ್ರೊಫೈಲ್ ಗಿಂತ ಸಿರಿಯ ಪ್ರೋಫೈಲ್ ಚೆನ್ನಾಗಿತ್ತು..! ಸಂಬಳವೂ ಅವಳಿಗೇ ಜಾಸ್ತಿ..! ಆದ್ದರಿಂದ ಸಿರಿ ಮದ್ವೆ ವಿಚಾರ ಮಾತಾಡೋ ಹಾಗೆಯೇ ಇಲ್ಲದಾಯ್ತು..!
ಸಿರಿ ಮನೆಯಲ್ಲಿ ಮದುವೆಗೆ ಒತ್ತಡ ಹೆಚ್ಚಾಯ್ತು..! “ನಾನು ಕೆಲಸವನ್ನು ಬಿಡುತ್ತೇನೆ..! ನೀನೊಬ್ಬನೇ ಕೆಲಸ ಮಾಡು, ಓಕೆನಾ..? ನಾನು ಮನೆಯಲ್ಲೇ ಇರ್ತೀನಿ.. ಮದ್ವೆ ಆಗೋಣ ಕಣೋ.. ನನ್ನೂ ಸ್ವಲ್ಪ ಅರ್ಥ ಮಾಡ್ಕೋ.. ಮನೆಯಲ್ಲಿ ಮದುವೆಗೆ ಒತ್ತಾಯ ಮಾಡ್ತಾ ಇದ್ದಾರೆ..! ನಮ್ಮ ಮನೆಯಲ್ಲೇನು ನಿನ್ನ ಸ್ಯಾಲರಿ ಸ್ಲಿಪ್ ಕೇಳಲ್ಲ..! ನನಗಿಂತ ಜಾಸ್ತಿ ಸಂಬಳವೇ ಹೇಳು ಅಂತ ಪರಿಪರಿ ಬೇಡಿಕೊಳ್ತಾಳೆ”..! ಅದಕ್ಕೂ ಕೇಳದ ಸ್ವರೂಪ್,
” ನಿನ್ನ ಕೆಲಸ ಬಿಡಿಸಿ ನಾನು ಮದ್ವೆ ಆದೆ ಅಂತ ಜನ ಮಾತಾಡಿಕೊಳ್ಳಲಿ ಅಂತಾನಾ..?! ಅಥವಾ ನಿಮ್ಮ ಮನೇಲಿ ಸುಳ್ಳು ಹೇಳು ಅಂದ್ರೆ..? ನಿನಗಿಂತ ಜಾಸ್ತಿ ಸಂಬಳ ತಗೋಳ ಯೋಗ್ಯತೆ ನನಗಿಲ್ಲ ಅಂತಾನಾ..?! ಅಂತ ಮತ್ತೆ ಚುಚ್ಚುತ್ತಾನೆ”..!
ಬೇರೆ ಯಾರಾದ್ರೂ ಆಗಿದ್ರೆ ನೀನು ಮದುವೆ ಆಗೋದೆ ಬೇಡ ಸಾಯಿ ಅಂತ ಕೈ ಮುಗಿದು ಹೋಗಿ ಬಿಡ್ತಿದ್ರೇನೋ..? ಆದ್ರೆ ಸಿರಿ ಹಾಗೇ ಮಾಡ್ಲಿಲ್ಲ..! ಅವನಿಗೆ ಗೊತ್ತೇ ಆಗದಂತೆ ಒಂದು ಕೆಲಸ ಮಾಡಿದ್ಲು..! ತಾನೇ ಯಾರ್ಯಾರನ್ನೋ ಕಂಡು, ಅವನಿಗೆ ಬೇರೊಂದು ಕಂಪನಿಯಲ್ಲಿ ತನಗಿಂದ ಒಳ್ಳೆಯ ಹುದ್ದೆ ಮತ್ತು ಸಂಬಳ ಸಿಗುವಂತೆ ಮಾಡಿದ್ಲು..! ಅದೃಷ್ಟವೋ ಏನೋ ಅವಳ ಪ್ಲಾನ್ ಸಕ್ಸಸ್ ಆಯ್ತು..! ಅವನೀಗ ಅವಳಿಗಿಂತ ಹೆಚ್ಚು ಸಂಬಳ ತಗೋಳ್ತಾ ಇದ್ದಾನೆ..! ಅವಳನ್ನು ಮದುವೆಯೂ ಆಗಿದ್ದಾನೆ..! ಇಬ್ಬರೂ ಚೆನ್ನಾಗಿಯೇ ಇದ್ದಾರೆ ಅನ್ನೋದು ಖುಷಿ ವಿಚಾರ. ಈಗ ಕೆಲಸ ಬಿಟ್ಟು ಸ್ವಂತ ಕಂಪನಿ ಮಾಡೋ ಯೋಚನೆಯಲ್ಲಿದ್ದಾರೆ..! ಅವರಿಗೆ ಶುಭವಾಗಲಿ.
ಅವನು ಅವಳಿಗಿಂತ ಸಂಬಳ ಜಾಸ್ತಿ ಬೇಕು ಅಂತ ಹಠ ಹಿಡಿದು ಮದುವೆಗೆ ಕಾಯಿಸಿದ್ದು ಸರಿಯೋ ತಪ್ಪೋ, ಅದನ್ನು ನೀವೇ ಹೇಳಿ..! ನನ್ನ ಪ್ರಕಾರ ಸಿರಿ ತುಂಬಾ ಗ್ರೇಟ್, ಅವನ ಚುಚ್ಚು ಮಾತನೆಲ್ಲಾ ಕೇಳಿಕೊಂಡು ತಾಳ್ಮೆಯಿಂದ ಇದ್ದಿದ್ದಲ್ಲದೇ ಅವಳೇ ಹುಡುಕಾಡಿ ಅವಳಿಗಿಂತಲೂ ಹೆಚ್ಚಿನ ಸಂಬಳ ಸಿಗೋ ಒಳ್ಳೆಯ ಕೆಲಸವನ್ನೂ ಕೊಡಿಸಿದ್ಲಲ್ಲ..! ಸೂಪರ್.. ಏನಂತೀರಾ..?!

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಮಾನವೀಯತೆಯ ಪಾಠ ಹೇಳಿದ ಡಾಬಾ ಮಾಲೀಕ..!

ರಾಷ್ಟ್ರಗೀತೆಗೆ ಗೌರವ ಕೊಡಬೇಕ ಅಂತ ಕೇಳೋರು ದಯವಿಟ್ಟು ಈ ವೀಡಿಯೋ ನೋಡಬೇಡಿ..!

ಶಿಕ್ಷಣವೇ ಜೀವನದಲ್ಲಿ ಎಲ್ಲವೂ ಅಲ್ಲ..!

ವಿಶ್ವಕಪ್ ಗೆದ್ದ ತಂಡದ ಸದಸ್ಯ ಕಚೋರಿ ಮಾರುತ್ತಿದ್ದಾನೆ..! ಮುಂಬರುವ ಏಷ್ಯಾ ಕಪ್ ಗೂ ಆತನೇ ನಾಯಕ..!

ವೈ-ಫೈ ಗಿಂತ ೧೦೦ ಪಟ್ಟು ವೇಗವಾಗಿ ಅಂತರ್ಜಾಲವನ್ನು ಒದಗಿಸೋ ಲಿ-ಫೈ

ಭಿಕ್ಷೆ ಬೇಡ್ತಾ ಇದ್ದ ಅಜ್ಜಿಗೆ ತಿನ್ನಲು ಕೊಡುವಾಗ, ವ್ಯಾಪಾರಿ ಕೊಡಬೇಡಿ ಅಂದಿದ್ದೇಕೆ..?!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..!

ಇಡೀ ಜೀವನವನ್ನೇ ತಮ್ಮಂದಿರಿಗಾಗಿ ಮುಡಿಪಾಗಿಟ್ಟ ಅಣ್ಣ..!

1 COMMENT

LEAVE A REPLY

Please enter your comment!
Please enter your name here