ವಯನಾಡ್ ನಲ್ಲಿ ಮತ್ತೆ ಭೂಕುಸಿತ ದುರಂತ; ಇಬ್ಬರು ಕಾರ್ಮಿಕರು ಜೀವಂತ ಸಮಾಧಿ, 30 ಮಂದಿ ನಾಪತ್ತೆ ಆತಂಕ
ತಿರುವನಂತಪುರಂ: ಕೇರಳದ ವಯನಾಡ್ ಜಿಲ್ಲೆಯಲ್ಲಿ ಮತ್ತೆ ಭೂಕುಸಿತ ದುರಂತ ಸಂಭವಿಸಿದ್ದು, ಮೆಪ್ಪಾಡಿ ಸಮೀಪದ ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ಪ್ರದೇಶದಲ್ಲಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ವಯನಾಡಿನ ಮೆಪ್ಪಾಡಿಯ ಮೀನಾಕ್ಷಿ ಸೇತುವೆ ಸಮೀಪ ಸುರಂಗ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ಭಾರೀ ಮಳೆಯ ಪರಿಣಾಮ ಗುಡ್ಡ ಕುಸಿದಿದೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸುಮಾರು 20 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಅಲ್ಲದೆ, ಸುಮಾರು 30 ಮಂದಿ ನಾಪತ್ತೆಯಾಗಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚುವ ಆತಂಕ ಎದುರಾಗಿದೆ.
ದುರಂತದಲ್ಲಿ ಗಾಯಗೊಂಡಿದ್ದ ಆರು ಮಂದಿಯನ್ನು ಸ್ಥಳೀಯರು ರಕ್ಷಿಸಿ ಮೆಪ್ಪಾಡಿಯ ಡಾ. ಮೂಪೆನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳನ್ನು ಹೀರಾ ಸುರೇಶ್, ದಿಲೀಪ್, ಸೂರಜ್, ಸಂಜಯ್ ಥಾಪುರ್, ರಜನೀಶ್ ಹಾಗೂ ತನ್ಮಯ್ ಘೋಷ್ ಎಂದು ಗುರುತಿಸಲಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ಸರ್ಕಾರ ತುರ್ತು ಸಭೆ ನಡೆಸಿದ್ದು, ಮುಖ್ಯಮಂತ್ರಿ ವಿ.ಡಿ. ಸತೀಶನ್ ಇಬ್ಬರು ಸಚಿವರನ್ನು ತಕ್ಷಣವೇ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೇರಳದ ಹಲವು ಭಾಗಗಳಲ್ಲಿ ಸುಮಾರು 26 ಸೆಂ.ಮೀ. ಮಳೆಯಾಗಿದ್ದು, ಅದರ ಪರಿಣಾಮ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚೂರಲ್ಮಲ ಭಾಗಕ್ಕೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಸುರಂಗ ಕಾಮಗಾರಿಯನ್ನು ಸೋಮವಾರದಿಂದಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಭೂಕುಸಿತದ ರಭಸಕ್ಕೆ ಕಾಮಗಾರಿ ಸ್ಥಳದಲ್ಲಿದ್ದ ಹಲವು ವಾಹನಗಳೂ ಮಣ್ಣಿನಡಿ ಸಮಾಧಿಯಾಗಿವೆ. ಅಗ್ನಿಶಾಮಕ ದಳ, ಪೊಲೀಸ್ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಸಿಬ್ಬಂದಿ ಸ್ಥಳದಲ್ಲಿ ನಿರಂತರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಅವಶೇಷಗಳಡಿ ಸಿಲುಕಿರುವವರ ಪತ್ತೆಗೆ ಶ್ರಮಿಸುತ್ತಿದ್ದಾರೆ.



