ಅನಿಲ್ ಮತ್ತು ಸಾಕ್ಷಿ ಮೇಲೆ ನಿಂತಿದೆ ಕರಣ್-ಅಶ್ವಿನಿ ಪ್ರೀತಿ ಭವಿಷ್ಯ…!

0
432

ಅವಳು ಅವನ ಮೇಲೆ ಬೆಟ್ಟದಷ್ಟು ಕನಸುಗಳನ್ನಿಟ್ಟುಕೊಂಡಿದ್ದಳು…! ಅವನೇ ತನ್ನ ಸರ್ವಸ್ವ ಅಂದುಕೊಂಡಿದ್ದಳು…! ಹೃದಯಾಂತರಾಳದಲ್ಲಿ ಪ್ರೀತಿ ಇದ್ರೂ, ಇಲ್ಲದಂತೆ ನಟಿಸುತ್ತಿದ್ದಳು…! ಅದ್ಯಾಕೋ ಗೊತ್ತಿಲ್ಲ…!?


ಇತ್ತ ಇವನದ್ದೂ ಅದೇ ಹಣೆಬರಹ…! ಅವಳ ಮೇಲೆ ಗೊತ್ತೊ ಗೊತ್ತಿಲ್ಲದೆ ಪ್ರೀತಿ ಹುಟ್ಟಿತ್ತು, ಅದನ್ನು ನಿವೇಧಿಸಿಕೊಳ್ಳುವ ಧೈರ್ಯ ಅವನಲ್ಲಿರಲಿಲ್ಲ…! ಅಕಸ್ಮಾತ್ ಇಬ್ಬರಲ್ಲಿ ಒಬ್ಬರು ಪ್ರಪೋಸ್ ಮಾಡಿದ್ದರೂ ಕೊನೆಯವರೆಗೂ ಜೊತೆ ಜೊತೆಯಲ್ಲಿ ಬಾಳ್ವೆ ಮಾಡಬಹುದಿತ್ತೇನೋ…? ಈಗ..?


ಅವನು ಮೈಸೂರಿನ ಹುಡುಗ ಕರಣ್, ಅವಳು ಬೆಂಗಳೂರಿನ ಅಶ್ವಿನಿ. ಎಂಬಿಎ ಮುಗಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ ಕರಣ್. ಅದೇ ಕಂಪನಿಗೆ ಹೊಸದಾಗಿ ಜಾಯಿನ್ ಆದವಳು ಅಶ್ವಿನಿ.
ಮೊದ ಮೊದಲು ಅಶ್ವಿನಿ ಯಾರ ಜೊತೆಯೂ ಅಷ್ಟೊಂದು ಕ್ಲೋಸ್ ಇರ್ಲಿಲ್ಲ. ಪಕ್ಕದಲ್ಲೇ ಕುಳಿತಿರುತ್ತಿದ್ದ ಕರಣ್ ಜೊತೆಯೂ ಮಾತಡ್ತಿದ್ದಿದು ತೀರಾ ಕಡಿಮೆ.


ಬರು ಬರುತ್ತಾ ಕರುಣ್ಣೇ ಅವಳನ್ನು ಮಾತನಾಡಲಾರಂಭಿಸಿದ, ಕೆಲವು ದಿನಗಳಲ್ಲಿ ಟೀ, ಕಾಫಿಗೆ ಒಟ್ಟಿಗೆ ಹೋಗುವಷ್ಟು ಕ್ಲೋಸ್ ಆದ್ರು. ಮತ್ತೊಂದಿಷ್ಟು ದಿನ ಕಳೆದ ಮೇಲೆ ಕರಣ್ ರೂಮ್ ನಲ್ಲಿ ಅಡುಗೆ ಮಾಡಿಕೊಳ್ಳೋದು, ಹೊರಗಡೆ ಹೋಟೆಲ್ ಊಟ ಮಾಡೋದು ತಪ್ಪಿತು…! ರಾತ್ರಿಯ ಹೊಟ್ಟೆ ಪೂಜೆ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ರೆ ಸಾಕಿತ್ತು…! ಬೆಳಗ್ಗೆ ಮತ್ತು ಮಧ್ಯಾಹ್ನಕ್ಕೆ ಅಶ್ವಿನಿಯೇ ತೆಗೆದುಕೊಂಡು ಬರ್ತಿದ್ಲು…!


ದಿನಗಳು ಕಳೆದಂತೆ ಅಶ್ವಿನಿಗೆ ಸಿನಿಮಾ, ಶಾಪಿಂಗ್ ಎಲ್ಲದಕ್ಕೂ ಕರಣ್ ಬೇಕಿತ್ತು. ಅಶ್ವಿನಿ ಜೊತೆ ಸುತ್ತುವುದೆಂದ್ರೆ ಕರಣ್ ಗೂ ಖುಷಿ. ಇವರನ್ನು ನೋಡ್ತಿದ್ದವರೆಲ್ಲಾ ಇಬ್ಬರ ನಡುವೆ ಏನೋ ಇದೆ ಅಂತ ಗುಸುಗುಸು ಪಿಸುಪಿಸು ಮಾತಾಡಲಾಂಭಿಸಿದ್ರು. ಇವೆಲ್ಲ ಅವರಿಬ್ಬರ ಗಮನಕ್ಕೆ ಬಂದರೂ ಬರದಂತೆ ಜೊತೆ ಜೊತೆಯಲೇ ಇದ್ದರು.


ಅದೊಂದು ಭಾನುವಾರ ಸಂಜೆ ಫ್ರೆಂಡ್ ಮನೆಗೆ ಹೋಗಿ ಬರ್ತೀನಿ ಅಂತ ಮನೆಯಿಂದ ಹೇಳಿ ಹೊರಟಿದ್ದ ಅಶ್ವಿನಿ ಯನ್ನು ಅವಳಣ್ಣ ಅನಿಲ್ ನೋಡಿದ…! ಆಕೆ, ಕರಣ್ ಜೊತೆ ಓರಾಯನ್ ಮಾಲ್ ನಲ್ಲಿದ್ದಳು. ಅವಳನ್ನು ನೋಡಿಯೂ ನೋಡದವನಂತೆ ಅಲ್ಲಿಂದ ಕಾಲ್ಕಿತ್ತ ಅನಿಲ್. ಅವನ ಜೊತೆ ಅವನವಳು ಸಾಕ್ಷಿ ಕೂಡ ಇದ್ದಳು…!


ರಾತ್ರಿ ಸುಮಾರು 10 ಗಂಟೆ ಹೊತ್ತಿಗೆ ಅಶ್ವಿನಿ ಮನೆಗೆ ಬಂದಳು. ಅಷ್ಟರಲ್ಲೇ ಅನಿಲ್ ಅಶ್ವಿನಿ ಕರಣ್‍ನೊಡನೆ ಸುತ್ತುತ್ತಿರೋದನ್ನು ಅಪ್ಪ-ಅಮ್ಮನಿಗೆ ಹೇಳಿಬಿಟ್ಟಿದ್ದ.


ಅಪ್ಪ-ಅಮ್ಮ ಅವಳನ್ನು ವಿಚಾರಿಸಿದ್ರು, ಹ್ಞೂಂ, ನಾನು ಫ್ರೆಂಡ್ ಮನೆಗೆ ಅಂತ ಹೇಳಿ ಹೋಗಿದ್ದು ನಿಜ. ಅದೇ ಫ್ರೆಂಡ್ ಜೊತೆ ಸಿನಿಮಾ ನೋಡಕೆ ಮಾಲ್ ಗೆ ಹೋಗಿದ್ದೂ ಸತ್ಯ. ಅದರಲ್ಲೇನಿದೆ..? ಹುಡುಗ ಸ್ನೇಹಿತನಾಗಿರಬಾರದ..? ಅಂತ ಆರಾಮಾಗಿ ಪ್ರಶ್ನಿಸಿದ್ಲು.
ಮುಂದುವರೆದು, ನಿಮಗೆ ಈ ವಿಷ್ಯವನ್ನು ಹೇಳಿದ್ದು, ಅಣ್ಣ ಅಂತ ಚೆನ್ನಾಗಿ ಗೊತ್ತು…! ಅವ್ನು ಯಾರ್ ಜೊತೆ ಅಲ್ಲಿಗೆ ಬಂದಿದ್ದ ಅಂತ ಸ್ವಲ್ಪ ಕೇಳಿ..!? ನಾನು ಅವನನ್ನು ನೋಡಿ, ಬಳಿ ಬಂದು ಕರಣ್ ನನ್ನು ಪರಿಚಯ ಮಾಡಿಕೊಡಬೇಕು ಎನ್ನುವಷ್ಟರಲ್ಲಿ, ಮಾಯವಾಗಿದ್ದ…! ನನ್ನ ನೋಡಿದಾಗ ಬಂದು ಮಾತಾಡಬಹುದಿತ್ತಲ್ಲ…? ಒಟ್ಟಿಗೆ ಸಿನಿಮಾ ನೋಡ್ಕೊಂಡು ಬರಬಹುದಿತ್ತು…! ಅಷ್ಟಕ್ಕೂ ಅವನ ಜೊತೆ ಇದ್ದ ಹುಡುಗಿ ಕರಣ್ ತಂಗಿ…ಸಾಕ್ಷಿ…! ಎಂದು ಹೇಳಿದ್ಲು.


ಅನಿಲ್ ತಡವರಿಸಿದ್ದಷ್ಟೇ… ಮತ್ತೇನು ಮಾತಾಡಕ್ಕೆ ಆಗಲಿಲ್ಲ. ಕೊನೆಗೆ ತಾನು ಸಾಕ್ಷಿಯನ್ನು ಪ್ರೀತಿಸ್ತ ಇರೋ ವಿಷ್ಯ ತಿಳಿಸಿದ. ಅಪ್ಪ-ಅಮ್ಮ ಅದನ್ನು ಕೂಲ್ ಆಗಿ ತಗೊಂಡ್ರು. ಸಾಕ್ಷಿಯನ್ನು ತಮ್ಮ ಮನೆಯ ಸೊಸೆ ಮಾಡಿಕೊಳ್ಳಲು ಒಪ್ಪಿದ್ರು.


ಇತ್ತ ಕರಣ್ ಮನೆಗೆ ಬಂದವನು ಸಾಕ್ಷಿ ಹತ್ತಿರ ಕೇಳಿದ, `ನಿನ್ನ ಜೊತೆ ಮಾಲ್‍ಗೆ ಬಂದಿದ್ದನ್ನಲ್ಲ ಯಾರವನು..? ಅದಕ್ಕವಳು ಅವನು ನನ್ನ ಫ್ರೆಂಡ್, ನಿನ್ನ ಜೊತೆ ಬಂದ ಹುಡ್ಗಿ ಯಾರು? ಎಂದು ಮರು ಪ್ರಶ್ನಿಸಿದ್ಲು. ‘ಓಹೋ, ಹಾಗಾದ್ರೆ ನನ್ನ ನೋಡಿಯೂ ನೋಡದೆ ಇರೋರಂತೆ ವಾಪಸ್ಸು ಬಂದಿದ್ಯಾ ಅಂತ ಆಯ್ತು…! ನಾನು ಮತ್ತು ನನ್ನ ಜೊತೆಗಿದ್ದ ಗೆಳತಿ ಅಶ್ವಿನಿ ನೀವಿದ್ದಲ್ಲಿಗೆ ಬರಬೇಕು ಎನ್ನುವಷ್ಟರಲ್ಲಿ ನೀವು ಅಲ್ಲಿಂದ ಎಸ್ಕೇಪ್ ಆಗಿದ್ರಿ…! ಬಂದು ಮಾತಾಡಿಸಿ, ನಿನ್ನ ಫ್ರೆಂಡ್ ಅನ್ನು ಪರಿಚಯ ಮಾಡಿಕೊಡಬಹುದಿತ್ತಲ್ಲ? ಅಂದ. ಅಷ್ಟೊತ್ತಿಗೆ ಸಾಕ್ಷಿ ಮೌನಕ್ಕೆ ಶರಣಾಗಿದ್ದಳು…!


ನೋಡು, ಫ್ರೆಂಡ್ ಆಗಿದ್ರೆ ಕದ್ದುಮುಚ್ಚಿ ಓಡೋಡೋದು ಏನಿರುತ್ತೆ. ಪ್ರೇಮಿಗಳಾಗಿದ್ರೂ ತಪ್ಪಿಲ್ಲ…! ಸತ್ಯ ಹೇಳು, ನಿನ್ನ ಜೊತೆ ಇದ್ದ ಹುಡುಗ ನನ್ನ ಫ್ರೆಂಡ್ ಅಶ್ವಿನಿಯ ಅಣ್ಣ…ಎಂದು ಹೇಳಿದ ಕರಣ್…! ಆ ನಾವಿಬ್ಬರು ಒಬ್ಬರನೊಬ್ಬರು ಪ್ರೀತಿಸ್ತಾ ಇದ್ದೀವಿ ಅಂತ ಸತ್ಯ ಹೇಳಿದ್ಲು ಸಾಕ್ಷಿ.


ಅಶ್ವಿನ್, ಕರಣ್ ಮರುದಿನ ಭೇಟಿಯಾದ್ರು. ಅನಿಲ್ ಮತ್ತು ಸಾಕ್ಷಿ ಬಗ್ಗೆ ಮಾತುಕತೆ ನಡೆಸಿದ್ರು. ನಮ್ ಮನೇಲಿ ಒಪ್ಪಿದ್ದಾರೆ ಅಂತ ಅಶ್ವಿನಿ ಹೇಳಿದ್ಲು. ನಮ್ ಮನೇಲಿ ನಾನೇ ಒಪ್ಪಿಸ್ತೀನಿ ಅಂದ ಕರಣ್. ಕೊನೆಗೆ ಅನಿಲ್ ಮತ್ತು ಸಾಕ್ಷಿ ಮದುವೆಯೂ ಆಯ್ತು.
ಇವೆಲ್ಲಕ್ಕಿಂತ ಹೆಚ್ಚಾಗಿ ಅಶ್ವಿನಿ ಮತ್ತು ಕರಣ್ ನಡುವೆ ಪ್ರೀತಿ ಹುಟ್ಟಿತ್ತು. ಒಬ್ಬರ ಮೆಸೇಜ್ ಗೆ ಇನ್ನೊಬ್ಬರು ಕಾಯೋದು. ಒಂದೇ ಒಂದು ಫೋನ್ ಕರೆಗಾಗಿ ಚಡಪಡಿಸೋದು, ಭೇಟಿ ಆಗೋ ತುಡಿತ ಇಬ್ಬರಲ್ಲೂ ಇತ್ತು. ಆದ್ರೆ, ಇಬ್ಬರು ಹೀಗಾಗ್ತಿದೆ ‘ನನ್ನೊಳಗೆ’ ಅಂತ ಹೇಳಿಕೊಳ್ಳಲಿಲ್ಲ.


ಮನೆಯಲ್ಲಿ ಮದುವೆ ಪ್ರಸ್ತಾಪ ಎತ್ತಿದ್ರೆ ಇಬ್ಬರೂ ಇಷ್ಟು ಬೇಗ ಬೇಡ ಬೇಡ ಅಂತ ಮುಂದೂಡತ್ತಾ ಬಂದಿದ್ರು. ಅನಿಲ್ ಮತ್ತು ಸಾಕ್ಷಿ ಮೂಲಕ ಕರಣ್ ಮತ್ತು ಅಶ್ವಿನಿಯನ್ನು ‘ನಿಮ್ಮಬ್ಬರ ನಡುವೆ ಪ್ರೀತಿ ಇದೆಯೇ ಎಂದು ವಿಚಾರಿಸಿಯೂ ಆಯ್ತು…! ಆದ್ರೆ, ಅಶ್ವಿನಿಗೆ ನಾಚಿಕೆ+ಸಂಕೋಚ+ ಅನಿಲ್ ಏನ್ ಅಂದುಕೊಳ್ತಾನೋ ಎಂಬ ಭಯ. ಹಾಗಾಗಿ ಹಾಗೇನು ಇಲ್ಲ ನಾವಿಬ್ಬರು ಫ್ರೆಂಡ್ಸ್ ಅಷ್ಟೇ ಎಂದು ಬಿಟ್ಟಳು. ಈಕಡೆ ಅನಿಲ್ ಕೂಡ ಅಶ್ವಿನಿಯನ್ನು ಪ್ರೀತಿಸ್ತಿದ್ದೀನಿ ಎಂದು ಹೇಳವ ಧೈರ್ಯ ಮಾಡಲಿಲ್ಲ.


ಅಣ್ಣ, ಅತ್ತಿಗೆಯಿಂದ ಈ ಪ್ರಸ್ತಾಪ ಬಂದಾಗ ಅಶ್ವಿನಿ ಅನಿಲ್ ನ ಬಾಯಿ ಬಿಡಿಸಲು, ‘ನಮ್ ಮನೇಲಿ ಹುಡುಗನ್ನ ನೋಡ್ತಿದ್ದಾರೆ. ಏನ್ ಮಾಡ್ಲಿ..?’ ಅಂತ ಕರಣ್ ನ ಕೇಳಿದ್ಲು. ಕರಣ್, ಒಳ್ಳೆಯ ಹುಡ್ಗ ಅಂತಾದ್ರೆ ಮದ್ವೆ ಆಗಿಬಿಡು ಅಂದುಬಿಟ್ಟ… ಒಲ್ಲದ ಮನಸ್ಸಿನಿಂದ… ಆಗ ಅವನೊಳಗೆ ಆಗ್ತಿದ್ದ ಸಂಕಟ ಅವನಿಗೆ ಮಾತ್ರ ಗೊತ್ತು…! ಅಶ್ವಿನಿಗೆ ಆ ಕ್ಷಣದಲ್ಲಿ ದುಃಖವಾದ್ರು ತಡೆದುಕೊಂಡ್ಲು. ಕರಣ್ ನನ್ನ ಪ್ರೀತಿಸ್ತಿಲ್ಲ ಎಂದು ಭಾವಿಸಿದ್ಲು.


ಅಶ್ವಿನಿಯ ಮದುವೆ ಫಿಕ್ಸ್ ಆಗಿದೆ. ಹುಡುಗ ಅಶ್ವಿನಿಯನ್ನು ಮೆಚ್ಚಿಕೊಂಡಿದ್ದಾನೆ. ಅವಳೂ ಕಷ್ಟದಿಂದಲೇ ಇಷ್ಟ ಎಂದು ಮುಖವಾಡ ಧರಿಸಿ ಒಪ್ಪಿಗೆ ಸೂಚಿಸೋ ನಾಟಕೀಯ ಕಿರುನಗೆ ಬೀರಿದ್ದಾಳೆ…! ಮೊದಲಿನಂತೆ ಕರಣ್ ಜೊತೆ ಸುತ್ತಾಡಲು, ಅವನನ್ನು ಭೇಟಿ ಮಾಡಲು ಆಗ್ತಿಲ್ಲ. ಅವಳಿಗೂ ಬೇಜಾರಿದೆ…! ಕರಣ್ ತುಂಬಾ ನೋವು ಅನುಭವಿಸ್ತಿದ್ದಾನೆ. ಹೆಚ್ಚುಕಡಿಮೆ ಇಬ್ಬರು ಸಂಪೂರ್ಣ ಮಾತು ಬಿಟ್ಟುಬಿಟ್ಟಿದ್ದಾರೆ…! ಅಶ್ವಿನಿಗೆ ಈ ಸಂಕಟ, ನಾಟಕ ಅನಿವಾರ್ಯ ಏಕೆಂದರೆ ಮದುವೆ ಆಗುತ್ತಿದ್ದಾಳೆ…! ಕರಣ್, ನಾನು ಪ್ರೀತಿಸುವ ವಿಷಯ ಮುಚ್ಚಿಟ್ಟು ತಪ್ಪು ಮಾಡಿದ್ದಾಗಿದೆ, ಇನ್ನು ಹೇಳು ಕಾಲ ಮೀರಿದೆ…! ಅವಳು ಸುಖವಾಗಿರಲಿ ಎಂದು ದೂರವಾಗಿದ್ದಾನೆ…!


ಅನಿಲ್ ಮತ್ತು ಸಾಕ್ಷಿಗೆ ಸೂಕ್ಷ್ಮವಾಗಿ ಈ ವಿಚಾರ ಗೊತ್ತಾಗಿದೆ…! ಮುಂದೇನಾಗುತ್ತೋ…?

 

LEAVE A REPLY

Please enter your comment!
Please enter your name here