No menu items!
13.3 C
Munich
Thursday, April 30, 2026

ಎರಡೇ ಎರಡು ರೂಗಳಿಗೆ ವೈದ್ಯಕೀಯ ಚಿಕಿತ್ಸೆ..!

Must read

ಡಾ. ರವೀಂದ್ರ ಕೋಹ್ಲೆ ದಂಪತಿ. ಇವರು ಮಹಾರಾಷ್ಟದ ಬುಡಕಟ್ಟ ಜನರಿಗೆ ಕೇವಲ 2 ರೂಪಾಯಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ಅಪೌಷ್ಠಿಕತೆ ವಿರುದ್ಧವೂ ಹೋರಾಟ ನಡೆಸುತ್ತಿದ್ದಾರೆ. ಆಳುವ ಸರ್ಕಾರಗಳು ಬಡಜನರ ಮಕ್ಕಳ ಆರೋಗ್ಯದ ಕಾಳಜಿ ವಹಿಸಬೇಕೆಂಬುದು ಅವರ ಕಳಕಳಿಯೂ ಹೌದು.

ಮಹಾರಾಷ್ಟ್ರದ ಮೆಲ್ಘಾಟ್ ಅತಿ ಹೆಚ್ಚು ಅಪೌಷ್ಠಿಕತೆಯುಳ್ಳ ಪ್ರದೇಶ. ಅಪೌಷ್ಠಿಕತೆ ಇಲ್ಲಿನ ಮಕ್ಕಳನ್ನಂತೂ ಬೆಂಬಿಡದೆ ಕಾಡುತ್ತಿದೆ. 1989ರಲ್ಲಿ ಈ ಬುಡಕಟ್ಟು ಪ್ರದೇಶಕ್ಕೆ ಡಾ. ರವೀಂದ್ರ ಕೋಹ್ಲೆ ಬಂದಿದ್ದರು. ಅಂದಿನಿಂದ ಇಂದಿನ ವರೆಗೂ ಬಡ ಜನರಲ್ಲಿ ಹೆಚ್ಚುತ್ತಾ ಇರುವ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ.
1989ರ ಸಮಯದಲ್ಲಿ ಮೆಲ್ಘಾಟ್ನಲ್ಲಿ ಶಿಶುಗಳ ಮರಣ ಪ್ರಮಾಣ ನೋಡಿದ್ರೆ ಎಂಥವರೂ ಬೆಚ್ಚಿಬೀಳ್ತಿದ್ರು. 1000 ಮಕ್ಕಳ ಪೈಕಿ 200 ಮಕ್ಕಳು ಸಾವನ್ನಪ್ಪುತ್ತಿದ್ರು. ಆದ್ರೆ ಈಗ ಶಿಶುಗಳ ಮರಣ ಪ್ರಮಾಣ 60ಕ್ಕೆ ಇಳಿದಿದೆ. ಇದಕ್ಕೆ ಕಾರಣ ಡಾ. ರವೀಂದ್ರ ಮತ್ತವರ ಪತ್ನಿ ಸ್ಮಿತಾ ಅವರು ಜನರಲ್ಲಿ ಮೂಡಿಸುತ್ತಿರುವ ಜಾಗೃತಿ. ಬುಡಕಟ್ಟು ಜನಾಂಗದವರ ಅಭ್ಯುದಯವೇ ಈ ವೈದ್ಯ ದಂಪತಿಯ ಜೀವನದ ಗುರಿಯಾಗಿದೆ.
ಮಹಾತ್ಮಾ ಗಾಂಧಿ ಅವರ ಆದರ್ಶವೇ ಡಾ.ರವೀಂದ್ರ ಅವರಿಗೆ ಪ್ರೇರಣೆ. ಕಳೆದ ಮೂರು ದಶಕಗಳಿಂದ ಅವರು ಗಾಂಧಿ ಹಾಕಿಕೊಟ್ಟ ಹಾದಿಯಲ್ಲೇ ಸಾಗುತ್ತಿದ್ದಾರೆ. ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಕನ್ಸಲ್ಟೇಶನ್ ಶುಲ್ಕವೇ ನೂರಾರು ರೂಪಾಯಿ ಇರುತ್ತೆ. ಆದ್ರೆ ಡಾ.ರವೀಂದ್ರ ಅವರು ಇಲ್ಲಿನ ಬಡಜನರಿಂದ ಕೇವಲ 2 ರೂಪಾಯಿ ಕನ್ಸಲ್ಟೇಶನ್ ಶುಲ್ಕ ಪಡೆಯುತ್ತಾರೆ.
ರವೀಂದ್ರ ಅವರ ಸಾಮಾಜಿಕ ಕಳಕಳಿಗೆ ಪತ್ನಿ ಸ್ಮಿತಾ ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ. ಕಾನೂನು ಪದವಿ ಪಡೆದಿರುವ ಸ್ಮಿತಾ, ಮಕ್ಕಳ ತಜ್ಞೆಯೂ ಹೌದು. ತಮ್ಮ ಜೀವನಶೈಲಿಯನ್ನು ಒಪ್ಪಿಕೊಂಡು, ನೆರವಾಗುತ್ತಿರುವ ಇಂತಹ ಪತ್ನಿಯನ್ನು ಪಡೆಯಲು ಅದೃಷ್ಟ ಮಾಡಿದ್ದೆ ಎನ್ನುತ್ತಾರೆ ಡಾ.ರವೀಂದ್ರ.


ಕೇವಲ ಕನ್ಸಲ್ಟೇಶನ್ ಮಾತ್ರವಲ್ಲ, ಕೃಷಿ, ವಿದ್ಯುತ್ ಉತ್ಪಾದನೆ, ಕಾರ್ಮಿಕರ ವೇತನ ವಿಚಾರ ಹೀಗೆ ವಿವಿಧ ಕ್ಷೇತ್ರಗಳಲ್ಲೂ ರವೀಂದ್ರ ದಂಪತಿ ತೊಡಗಿಕೊಂಡಿದ್ದಾರೆ. ಡಾ.ರವೀಂದ್ರ ಕೋಲ್ಹೆ ಹಾಗೂ ಸ್ಮಿತಾ ಜೊತೆಯಾಗಿ ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಮಹಿಳೆಯರಲ್ಲಿ ಕಾಳಜಿ ಮೂಡಿಸುವ ಕೆಲಸ ಮಾಡ್ತಿದ್ದಾರೆ. ವಿಶೇಷ ಅಂದ್ರೆ ತಮ್ಮ ಸಮಾಜ ಸೇವೆಗೆ ಡಾ.ರವೀಂದ್ರ ದಾನಿಗಳಿಂದಾಗ್ಲಿ, ಅಥವಾ ಸರ್ಕಾರದಿಂದಾಗ್ಲೀ ನೆರವು ಪಡೆಯುತ್ತಿಲ್ಲ. ಸ್ವಂತ ಬಲದಿಂದಲೇ ಎಲ್ಲವನ್ನೂ ಮಾಡ್ತಿದ್ದಾರೆ.
ಹತ್ತಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ತಮ್ಮ ತಂದೆ ಇದರಿಂದ ಹೆಮ್ಮೆಪಡ್ತಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಡಾ.ರವೀಂದ್ರ ಕೋಲ್ಹೆ ಪ್ರಶಸ್ತಿ, ಗೌರವಗಳನ್ನು ಸ್ವೀಕರಿಸಿದ್ದಾರೆ. ವಿನಃ ಈ ದಂಪತಿ ಪ್ರಶಸ್ತಿ ಪುರಸ್ಕಾರಗಳಿಂದ ಬಹಳ ದೂರ. ಮಹಾರಾಷ್ಟ್ರದ ಮಾಲ್ಘಾಟ್ನಲ್ಲಿ ಇನ್ನೂ ಕೂಡ ಅಪೌಷ್ಠಿಕತೆ ತಾಂಡವವಾಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಸ್ಥಿತಿಗೆ ಸರ್ಕಾರದ ವ್ಯವಸ್ಥೆಯೇ ಕಾರಣ ಅನ್ನೋದು ಡಾ.ರವೀಂದ್ರ ಅವರ ಅಭಿಪ್ರಾಯ.
ಡಾ.ರವೀಂದ್ರ ಅವರಂತಹ ಸಮಾಜ ಸೇವಕರ ಪರಿಶ್ರಮದ ಜೊತೆಗೆ ಸರ್ಕಾರವೂ ಸಾಥ್ ಕೊಟ್ರೆ ಮಾತ್ರ ಅಪೌಷ್ಠಿಕತೆ ವಿರುದ್ಧದ ಹೋರಾಟದಲ್ಲಿ ಗೆಲುವು ಸಿಗಲು ಸಾಧ್ಯ. ಇನ್ನಾದ್ರೂ ಸರ್ಕಾರ ದೇಶದಲ್ಲಿ ಹೆಚ್ತಾ ಇರೋ ಅಪೌಷ್ಠಿಕತೆಯನ್ನು ಹೊಡೆದೋಡಿಸಲು ಪಣತೊಡಬೇಕಿದೆ. ಅದಕ್ಕೆ ಬೇಕಾದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕಿದೆ.
ಈಗಾಗಲೇ ಹಮ್ಮಿಕೊಂಡಿರುವ ಯೋಜನೆಗಳ ಅನುಷ್ಠಾನಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮಿಸಬೇಕಿದೆ. ಅಪೌಷ್ಠಿಕತೆ ಅನ್ನೋದು ಭಾರತಕ್ಕೆ ಅಂಟಿದ ಕಳಂಕ ಅಂದ್ರೂ ತಪ್ಪಾಗಲಾರದು. ಜಾಗತಿಕ ಮಟ್ಟದಲ್ಲಿ ಭಾರತದ ಪಾಲಿಗೆ ಇದೊಂದು ಕಪ್ಪು ಚುಕ್ಕೆ. ಜೊತೆಗೆ ಅಪೌಷ್ಠಿಕತೆ ಪ್ರತಿನಿತ್ಯ ನೂರಾರು ಮಕ್ಕಳ ಸಾವಿಗೆ ಕಾರಣವಾಗ್ತಿದೆ. ಆ ಅಮಾಯಕ ಮಕ್ಕಳ ಜೀವ ಉಳಿಸುವ ಜವಾಬ್ದಾರಿ ಸರ್ಕಾರದ್ದು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article