No menu items!
12.4 C
Munich
Wednesday, April 29, 2026

ಅಪ್ಪು ನಿಧನದ ನೋವು ಇರುವಾಗಲೇ ಇದೆಲ್ಲಾ ಬೇಕಾ: ಸುಮಲತಾ

Must read

ನಟ ಪುನೀತ್​ ರಾಜ್​ಕುಮಾರ್​ ಅಗಲಿಕೆ ನೋವು ಇನ್ನೂ ಹಸಿಯಾಗೆ ಇದೆ. ಅಪ್ಪು ನಿಧನದ ಬಳಿಕ ಅವರ ಹೆಸರಿನಲ್ಲಿ ಅಭಿಮಾನಿಗಳು ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ತಮ್ಮೂರಿನ ರಸ್ತೆ, ಸರ್ಕಲ್​ಗಳಿಗೆ ಅಪ್ಪು ಹೆಸರನ್ನು ಇಡುತ್ತಿದ್ದಾರೆ.

ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನೂ ಘೋಷಣೆ ಮಾಡಲಾಗಿದ್ದು, ಪದ್ಮಶ್ರೀ ಪ್ರಶಸ್ತಿಗೂ ಪುನೀತ್​ ಹೆಸರನ್ನು ಶಿಫಾರಸು ಮಾಡುವಂತೆ ಆಗ್ರಹ ಕೇಳಿಬಂದಿದೆ. ಇದೀಗ ದಿವಂಗತ ಅಂಬರೀಷ್​ ಅವರಿಗೂ ಇಂಥ ಗೌರವ ಸಲ್ಲಬೇಕು. ಅದಕ್ಕಾಗಿ ಹೋರಾಟದ ಹಾದಿ ತುಳಿಯುವುದಾಗಿ ಅಂಬಿ ಫ್ಯಾನ್ಸ್​ ಹೇಳಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಸುಮಲತಾ ಅಂಬರೀಷ್​​ ಬೇಸರ ವ್ಯಕ್ತಪಡಿಸಿದ್ದಾರೆ. ಅಂಬಿ ಅಭಿಮಾನಿಗಳಿಗೆ ಬಹಿರಂಗ ಪತ್ರವನ್ನೂ ಬರೆದಿದ್ದಾರೆ. ಅದರ ವಿವರ ಹೀಗಿದೆ.
‘ನಮ್ಮ ಪ್ರೀತಿಯ ಡಾ. ಅಂಬರೀಷ್ ಅವರನ್ನು ಆರಾಧ್ಯ ದೈವದಂತೆ ಪ್ರೀತಿಸಿ, ಅವರ ನೆನಪನ್ನು ಚಿರಸ್ಥಾಯಿಯಾಗಿ ಬೆಳಗಿಸುತ್ತಿರುವ ನೆಚ್ಚಿನ ಅಭಿಮಾನಿ ಸಂಘಗಳು ಹಾಗೂ ಇನ್ನಿತರ ಸಂಘಟನೆಗಳು ಇಂದು ಅಂಬರೀಷ್ ಅವರ ಸ್ಮಾರಕ ಅಭಿವೃದ್ಧಿಗೊಳಸುವುದು, ಅವರ ಹೆಸರಿನಲ್ಲಿ ರಸ್ತೆಗಳನ್ನು ನಾಮಕರಣ ಮಾಡುವುದು ಮತ್ತು ಇನ್ನಿತರ ಬೇಡಿಕೆಗಳನ್ನು ಒತ್ತಾಯಿಸಿ ಹೋರಾಟ ಮಾಡುವುದಾಗಿ ಹೇಳಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಗಮನಕ್ಕೆ ಬಂದಿದೆ

ನಮ್ಮ ಕುಟುಂಬದೊಂದಿಗೆ ಅತಿ ಹೆಚ್ಚು ಒಡನಾಟ ಹೊಂದಿದ್ದ ಹಾಗೂ ನಮ್ಮ ಮನೆ ಮಗನಂತಿದ್ದ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ಆಘಾತಕಾರಿ ಘಟನೆಯಿಂದ ನನಗಾಗಿರುವ ನೋವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಅಪ್ಪು ಅಗಲಿಕೆ ಚಿತ್ರರಂಗ, ಅಭಿಮಾನಿಗಳು ಹಾಗೂ ಕರ್ನಾಟಕ ರಾಜ್ಯದ ಜನತೆಗೆ ತುಂಬಲಾರದಂತ ನಷ್ಟ ಉಂಟಾಗಿದ್ದು, ಈ ಸಮಯದಲ್ಲಿ ತಾವುಗಳು ಹೋರಾಟ ಮಾಡುವ ನಿರ್ಧಾರ ಮಾಡಿರುವುದು ಎಲ್ಲರ ಹೃದಯದ ಮೇಲೆ ಆಗಿರುವ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಇಂತಹ ಸಮಯದಲ್ಲಿ ಈ ವಿಷಯ ಪ್ರಸ್ತಾಪಿಸುವುದು ಸಮಂಜಸವಲ್ಲ.

ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪಿಸುವುದರಿಂದ ಅಂಬರೀಷ್ ಅವರ ಘನತೆ ಹಾಗೂ ಗೌರವಕ್ಕೆ ಧಕ್ಕೆಯಾಗುತ್ತದೆ. ಯಾವುದೇ ಪ್ರಶಸ್ತಿಯಾದರು ಕೇಳಿ ಪಡೆಯುವುದು ಅತಿಶಯೋಕ್ತಿಯಾಗಬಾರದು. ಎಲ್ಲ ಪ್ರಶಸ್ತಿಗಳನ್ನು ಮೀರಿದಂತಹ ಪ್ರೀತಿ ಮತ್ತು ಅಭಿಮಾನವನ್ನು ನೀವುಗಳು ನಮ್ಮ ಕುಟುಂಬಕ್ಕೆ ನೀಡಿದ್ದೀರಿ. ಅಂಬರೀಷ್ ಅವರು ತಮ್ಮ ಜೀವನದಲ್ಲಿ ಯಾವ ಪ್ರಶಸ್ತಿ, ಹುದ್ದೆ ಅಥವಾ ಸನ್ಮಾನವನ್ನೂ ಬಯಸಿದವರಲ್ಲ. ಹೀಗಾಗಿ ಅಂಬರೀಷ್​ ಅವರ ಅಭಿಮಾನಿಗಳಾಗಿ ತಾವುಗಳು ಸಹ ಅವರ ಹಾದಿಯಲ್ಲಿ ನಡೆಯಬೇಕು ಎನ್ನುವುದು ನನ್ನ ಆಶಯ. ಆದುದರಿಂದ, ಈ ಸಮಯದಲ್ಲಿ ಪ್ರಶಸ್ತಿ ಕೋರಿ ಹೋರಾಟ ಅಥವಾ ಪ್ರತಿಭಟನೆ ನಡೆಸುವುದು ಅಂಬರೀಷ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಷಯವಾಗಿದೆ.

ಆದ್ದರಿಂದ, ತಮ್ಮೆಲ್ಲರ ಅಭಿಮಾನ ಮತ್ತು ಪ್ರೀತಿ-ವಾತ್ಸಲ್ಯಗಳನ್ನು ಗೌರವಿಸುತ್ತಾ ಹಾಗೂ ನಿಮ್ಮೆಲ್ಲರ ಆಸೆಯನ್ನು ಮುಂದಿನ ದಿನಗಳಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಈಡೇರಿಸುತ್ತದೆ ಎಂದು ಮಾನ್ಯ ಮುಖ್ಯಮಂತ್ರಿಗಳ ಮೇಲೆ ಭರವಸೆಯನ್ನು ಇಡುತ್ತಾ, ತಾವು ತೆಗೆದುಕೊಂಡಿರುವ ಈ ಹೋರಾಟದ ನಿರ್ಧಾರವನ್ನು ಹಿಂಪಡೆದು ನವೆಂಬರ್ 24ನೇ ತಾರೀಖಿನಂದು ಅಂಬರೀಷ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯನ್ನು ಶಾಂತಿಯುತವಾಗಿ ನೆರವೇರಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ’.
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
ಸುಮಲತಾ ಅಂಬರೀಷ್

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article