ಅವತ್ತು ಚಾರ್ಟೆಡ್ ಅಕೌಂಟೆಂಟ್, ಇವತ್ತು ಕೃಷಿಕ..!

0
775

ಅಬ್ಬಾ, ಸಾಕಪ್ಪ ಸಾಕು..! ಬೆಳಗ್ಗೆ ಎದ್ದೇಳೋದು, ಆಫೀಸಿಗೆ ಹೋಗೋದು, ಮನೆಗೆ ವಾಪಾಸ್ಸಾಗೋದು. ಇದೇ ಜೀವನ ಆಗಿದೆ. ಈ ಯಾಂತ್ರಿಕೃತ ನಗರ ಜೀವನದಲ್ಲಿ ಹಾಳಾದ್ ಟ್ರಾಫಿಕ್‍ಲಿ ಸಿಕ್ಕಾಕ್ಕೊಂಡೇ ನಮ್ ಅರ್ಧ ಜೀವನ ಕಳೀತೀವಿ. ಇಷ್ಟಾದ್ರೂ ಒಳ್ಳೆಯ ದುಡಿಮೇನೂ ಇಲ್ಲ. ದುಡ್ಡು ಇಲ್ಲ, ನೆಮ್ಮದಿಯೂ ಇಲ್ಲ. ಹಾಗಂತ ಹಳ್ಳಿ ಕಡೆ ಹೋಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಒಳ್ಳೆಯ ದುಡಿಮೆ ಜೊತೆಗೆ, ನೆಮ್ಮದಿಯ ಬದುಕು ಸವೆಸೋಕೆ ಪದವಿ, ಸ್ನಾತಕೋತ್ತರ ಪದವಿಯ ಗತ್ತು ಅಡ್ಡಿ!

ಆದರೆ, ನಮ್ ಶೈಕ್ಷಣಿಕ ಅರ್ಹತೆಗೆ ಅಷ್ಟೊಂದು ತಲೆಕೆಡಿಸಿಕೊಳ್ಳದೆ, ಅಹಂಕಾರ ಬಿಟ್ಟು ತೆಪ್ಪಗೆ ಇಷ್ಟ ಬಂದ ವೃತ್ತಿಯಲ್ಲಿ, ಅದರಲ್ಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ್ರೆ ಜೀವನದಲ್ಲಿ ಸಖತ್ ಆಗಿರಬಹುದು! ಇದಕ್ಕೆ ಸಾಕ್ಷಿಯಾಗಿ ನಿಲ್ತಾರೆ 37 ವರ್ಷದ ರಾಜೀವ್ ಕಮಲ್ ಬಿಟು! ಯಾಂತ್ರಿಕ ಜೀವನ ತೊರೆದು ಕೃಷಿ ಕ್ಷೇತ್ರದಲ್ಲಿ ಮುಂದುವರೆಯಲು ನಿರ್ಧರಿಸಿ ಬದುಕು ನಡೆಸುತ್ತಿರುವ ಯುವ ಕೃಷಿಕ.


ರಾಜೀವ್ ರಾಂಚಿಯವರು. ಚಾರ್ಟೆಡ್ ಅಕೌಂಟ್ ಆಗಿದ್ದ ಇವರಿಗೆ ಒಳ್ಳೆಯ ಸಂಬಳವೂ ಇತ್ತು. ಆದರೆ, ನನಗೆ ಈ ಹುದ್ದೆ ಬೇಕಿಲ್ಲ. ಕೃಷಿ ಕ್ಷೇತ್ರದಲ್ಲಿ ಏನಾದ್ರೂ ಸಾಧನೆ ಮಾಡ್ಬೇಕು ಅಂತ ಡಿಸೈಡ್ ಮಾಡಿ ಕೆಲಸ ಬಿಡ್ತಾರೆ. ಅವರು ಹಾಗೆ ಕೆಲಸ ಬಿಡುವ ದೈರ್ಯ ಮಾಡುವಾಗ ಸಿಕ್ಕಾಪಟ್ಟೆ ಪಿತ್ರಾರ್ಜಿತ ಆಸ್ತಿ, ಜಮೀನೇನು ಇರ್ಲಿಲ್ಲ. ಇದ್ದುದ್ದು ತಲೆಯಲ್ಲೊಂದಿಷ್ಟು ಹೊಸ ಕಲ್ಪನೆಗಳು, ಕನಸುಗಳು ಮಾತ್ರ.
ಕೆಲಸ ಬಿಟ್ಟವರೇ ಸ್ವಂತ ಜಮೀನು ತೆಗೆದುಕೊಂಡು ಕೃಷಿ ಮಾಡಿದ್ರಾ? ಇಲ್ಲ, ಇವರು ಜಮೀನನ್ನು ಗುತ್ತಿಗೆ ಪಡೆದು, ಮಾಲೀಕನಿಗೆ ಇಂತಿಷ್ಟು ಲಾಭವನ್ನು ನೀಡುವುದಾಗಿ ಒಪ್ಪಂದ ಮಾಡಿಕೊಂಡು ಕೃಷಿ ಚಟುವಟಿಕೆ ಆರಂಭಿಸಿದವರು. ಆರಂಭದಲ್ಲಿ 10 ಎಕರೆ ಜಮೀನನ್ನು ಗುತ್ತಿಗೆ ತಗೊಂಡ ರಾಜೀವ್, ಈ ಜಮೀನಲ್ಲಿ ಬರುವ ಲಾಭದಲ್ಲಿ ಶೇ.33ರಷ್ಟನ್ನು ನಿಮಗೆ ಕೊಡ್ತೀನಿ ಅಂತ ಮಾಲೀಕರತ್ರ ಒಪ್ಪಂದ ಮಾಡಿಕೊಂಡರು. ಹಾಗಂತ ಅವರು ಖರೀಧಿಸಿದ್ದ ಭೂಮಿ ಚಿನ್ನದ ಮೊಟ್ಟೆ ಇಡ್ತ ಇರ್ಲಿಲ್ಲ. ಅದು ಫಲವತ್ತಾದ ಭೂಮಿ ಆಗಿರ್ಲಿಲ್ಲ. ಅದೊಂದು ಬರಡು ಭೂಮಿ. ರಾಜೀವ್ ಈ ಬರಡು ಭೂಮಿಯನ್ನು ಉತ್ತಮ ಕೃಷಿಭೂಮಿಯನ್ನಾಗಿ ಮಾಡುವ ಚಾಲೆಂಜ್‍ನಲ್ಲಿ ಕೃಷಿರಂಗಕ್ಕೆ ಪಾದಾರ್ಪಣೆ ಮಾಡಿದ್ರು. ಇವರ ಪರಿಶ್ರಮ, ಆಸಕ್ತಿತ ಭೂಮಿತಾಯಿಗೂ ಇಷ್ಟವಾಯ್ತು ಉತ್ತಮ ಬೆಳೆಗೆ ನೆರವಾದಳು.

ಬರಡು ಭೂಮಿಯನ್ನು ಒಂದೊಳ್ಳೆ ಆಕಾರಕ್ಕೆ ತಂದು ಕೃಷಿಭೂಮಿಯ ರೂಪ ನೀಡಲು ರಾಜೀವ್ ಸುಮಾರು 2.5 ಲಕ್ಷ ರೂ ಬಂಡವಾಳ ಹೂಡಿಕೆ ಮಾಡಿದ್ರಂತೆ. ಆ ಭೂಮಿಯಲ್ಲಿ ಕಲ್ಲಂಗಡಿ, ಹಳದಿ ಕಲ್ಲಂಗಡಿ, ಸೌತೆಕಾಯಿ ಮತ್ತಿತರರ ಬೆಳೆಗಳನ್ನು ಬೆಳೆಯಲು ಶುರುಮಾಡಿದ್ರು. ಆಮೇಲೆ ಅವರೆಂದೂ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
2013ರಲ್ಲಿ ಬರಡು ಭೂಮಿಯನ್ನು ಗುತ್ತಿಗೆ ಪಡೆದು ಕೃಷಿಭೂಮಿಯನ್ನಾಗಿ ಪರಿವರ್ತಿಸಿ ಕೃಷಿಚಟುವಟಿಕೆಯಲ್ಲಿ ತೊಡಗಿದ ರಾಜೀವ್‍ಗೆ 1 ವರ್ಷದಲ್ಲಿ 2014ರಲ್ಲಿ ಅದರ ಫಲ ಸಿಗಲಾರಂಭಿಸಿತು. 2014ರ ಅಂತ್ಯದ ಒಳಗಾಗಿ ಮಾಡಿದ ಕೊಯ್ಲಿನಿಂದ ಸುಮಾರು 19 ಲಕ್ಷ ರೂ ಆದಾಯ ಸಿಕ್ತು. ಅಷ್ಟೇಅಲ್ಲ, ಹಣ್ಣಿನ ಸಗಟು ಕೂಡ ಮಾರಾಟವಾಗಿ ಅದರಿಂದಲೂ ಸುಮಾರು 7.8 ಲಕ್ಷ ರೂ ಹಣ ಬಂತು.


ಇದರಿಂದ ಸ್ಪೂರ್ತಿ ಪಡೆದ ರಾಜೀವ್ ಮತ್ತೆ ವಾರ್ಷಿಕ ತಲಾ 8ಸಾವಿರ ರೂಗಳಿಗೆ 13 ಎಕರೆ ಗುತ್ತಿಗೆ ಪಡೆದರು. ಕೃಷಿಯಲ್ಲಿ ರಾಜೀವ್ ಅವರ ಪರಿಣಿತಿ ಕಂಡು ಜನ ತಾಮುಂದು-ನಾಮುಂದು ಅಂತ ಗುತ್ತಿಗೆಗೆ ಜಮೀನು ಕೊಟ್ರು. ರಾಜೀವ್ ಪರಿಶ್ರಮ, ಆಸಕ್ತಿಗೆ ಯಶಸ್ಸು ಅವರ ಹಿಂದೆ ಹುಡುಕಿಕೊಂಡು ಬಂತು. ಹೆಚ್ಚು ಹೆಚ್ಚು ಜಮೀನನ್ನು ಗುತ್ತಿಗೆ ಪಡೆದು ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.
ಕಲ್ಲಂಗಡಿ, ಸೌತೆಕಾಯಿಯಿಂದ ರೈತಾಪಿ ಕೆಲಸ ಆರಂಭಿಸಿದ ರಾಜೀವ್ ಚೆರ್ರಿ, ಟೊಮ್ಯಾಟೊ , ಆಲೂಗೆಡ್ಡೆ, ಜೋಳ ಬೆಳೆಯಲಾರಂಭಿಸಿದರು. ಚಿನ್ನದಂತಹ ಬೆಳೆ ಬಂತು. ಇದೀಗ ಸುಮಾರು 40-50 ಲಕ್ಷ ರೂ ಲಾಭಗಳಿಸುತ್ತಿದ್ದಾರಂತೆ. ಜೊತೆಗೆ 2 ಎಕರೆ ಜಮೀನನ್ನೂ ಖರೀದಿಸಿ ತನ್ನ ಇಷ್ಟದ ಕೃಷಿ ಪ್ರಯೋಗಗಳನ್ನು ಮಾಡ್ತಾ ಇದ್ದಾರೆ. ಇವತ್ತು ಸುಮಾರು 60 ಜನ ನಿರುದ್ಯೋಗಿಗಳಿಗೆ ತಮ್ಮ ಜಮೀನನಲ್ಲಿ ಕೆಲಸ ನೀಡಿದ್ದಾರೆ. ಇವರ ಲೆಕ್ಕ ವ್ಯಹಾರಗಳನ್ನು ಗೆಳೆಯರಾದ ಶಿವಕುಮಾರ್ ಹಾಗೂ ದೇವರಾಜ್ ಬಾರಕ್ ನೋಡಿಕೊಳ್ತಾ ಇದ್ದಾರೆ.


ಚಾರ್ಟೆಡ್ ಅಕೌಂಟೆಂಟ್ ಆಗಿ ಕೈ ತುಂಬಾ ಸಂಬಳ ಎಣಿಸಿಕೊಂಡು, ಐಷಾರಾಮಿ ಜೀವನ ನಡೆಸಬಹುದಾಗಿದ್ದ ರಾಜೀವ್ ಕೃಷಿಯತ್ತ ಮುಖಮಾಡಿ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಇಟ್ಟಿರೋದು ನಿಜಕ್ಕೂ ಶ್ಲಾಘನೀಯ. ನಗರ ಜೀವನದಲ್ಲೇ ಬದುಕು ಇರೋದು ಎಂಬ ಭ್ರಮೆಯಲ್ಲಿರೋರಿಗೆ ಇವರು ಮಾರ್ಗದರ್ಶಿ.

LEAVE A REPLY

Please enter your comment!
Please enter your name here