ಕಣ್ಣಂಚಿನ ಆ ಮಾತಲಿ ಏನೇನೋ ಅಡಗಿತ್ತು!

0
603

ಅಂದು ಹೇಳಿ ಕೇಳಿ ಶನಿವಾರ. ಶನಿ ಮಹಾತ್ಮ ಎಲ್ಲರನ್ನು ಬಿಟ್ಟು ಏರಿ ಕುಳಿತುಕೊಳ್ಳಲು ನನ್ನ ಹೆಗಲನ್ನೇ ಆರಿಸಿಕೊಂಡಿದ್ದ ಅಂತ ಕಾಣಿಸುತ್ತೆ. ನನ್ನ ಪ್ರೀತಿಯ ಹುಡುಗಿ ನಾನು ಮನಸ್ಸು ಕೊಟ್ಟಿದ್ದ ಹುಡುಗಿ ‘ಬಾರೋ ಎಲ್ಲಾದ್ರೂ ಸುತ್ತಾಡ್ಕೊಂಡು ಬರೋಣ’ ಅಂತ ಪೇಟೆ ಸುತ್ತಾಟಕ್ಕೆ ಆಹ್ವಾನ ಕೊಟ್ಟಿದ್ದಳು. ಆಗಿನ್ನು ಬೈಕ್ ತಗೊಂಡಿರಲಿಲ್ಲ ಹಾಗಾಗಿ ಒಳ್ಳೆಯ ಬಟ್ಟೆ ಧರಿಸಿ ಅವಳು ಹೇಳಿದ ಜಾಗಕ್ಕೆ ನಡೆದುಕೊಂಡೇ ಹೋಗಿ ಫೋನ್ ಮಾಡಿದೆ. ಎಷ್ಟೇ ಆದರೂ ಹುಡುಗಿ ಅಲ್ವೇ, ಹೇಳಿದ ಸಮಯಕ್ಕಿಂತ 20 ನಿಮಿಷ ತಡವಾಗಿ ಬಂದಳು. ಬಂದವಳೇ ಪಾಪ ಏನೂ ಅರಿಯದವಳಂತೆ ಎಷ್ಟೊತ್ತಾಯ್ತು ಬಂದು ಅಂತ ಮಾಮೂಲಿ‌ ಪ್ರಶ್ನೆ ಕೇಳುವುದನ್ನು ಮರೆಯಲಿಲ್ಲ. ಮನಸ್ಸಿನಲ್ಲಿ ಬಾಯಿತುಂಬಾ ಬೈಬೇಕು ಎನ್ನುವ ಹಂಬಲ ಇತ್ತಾದರೂ ಬೈಯಲು ಅವಳ ಮುಂಗುರುಳು, ಜುಮುಕಿಗಳು, ಹೊಳೆಯುತ್ತಿದ್ದ ಕಣ್ಣುಗಳೇಕೋ ಒಪ್ಪಿಗೆ ಕೊಡಲಿಲ್ಲ, ಮನಸ್ಸು ನಿಜ ಹೇಳುವ ಯೋಚನೆಯಲ್ಲಿದ್ದರೆ ಬಾಯಿ ತಾನಾಗಿಯೇ ‘ಇಲ್ಲ ಈಗಷ್ಟೇ ಬಂದೆ’ ಅಂತ ಹೇಳಿಬಿಟ್ಟಿತ್ತು.

ಹಾಗೇ ಪೇಟೆಯಲ್ಲಿ ನೆಡೆದುಕೊಂಡು ಹೋಗುವಾಗ ಹೆಗಲೇರಿದ್ದ ಶನಿ ತನ್ನ ಕೆಲಸ ಮಾಡಲು ಆರಂಭಿಸಿ ಬಿಟ್ಟಿದ್ದ. ಕೆಂಪು ಬಣ್ಣದ ಟಾಪು, ಕಪ್ಪು ಬಣ್ಣದ ಪ್ಯಾಂಟೊಂದನ್ನ ಧರಿಸಿ ಎದುರಿನಿಂದ ನೆಡೆದು ಬರುತ್ತಿದ್ದ ಚೆಲುವೆ ನಮ್ಮ ಮನೆಯ ಹಿತ್ತಲ ಗಿಡಕ್ಕಿಂತ (ನನ್ನ ಹುಡುಗಿ) ಸುಂದರವಾಗಿ ಕಂಡು ಬಿಟ್ಟಳು! ಬರಗೆಟ್ಟ ಗಂಡು ಜನ್ಮದ ಕಣ್ಣು ಒಂದೆರೆಡು ಬಾರಿ ಅವಳನ್ನೇ ತಿರುಗಿ ತಿರುಗಿ ನೋಡಿತ್ತು, ಇನ್ನೇನು ಮೂರನೇ ಬಾರಿ ನೋಡಬೇಕು ಎಂದು ತಿರುಗುವಷ್ಟರಲ್ಲಿ ಪೇಟೆಯ ಮಧ್ಯದಲ್ಲೇ ಬೆನ್ನಿಗೊಂದು ಏಟು ಬಿತ್ತು. ತಿರುಗಿ ನೋಡಿದರೆ ನನ್ನ ಹುಡುಗಿ ರಣಚಂಡಿಯಂತೆ ಬುಸುಗುಟ್ಟುತ್ತಾ ಹೊಳಪು ಕಣ್ಣುಗಳನ್ನು ದೊಡ್ಡದಾಗಿ ಅರಳಿಸಿ ‘ನಾನು ಪಕ್ಕದಲ್ಲಿದ್ದಾಗಲೇ ಇನ್ನೊಬ್ಬಳು ಬೇಕೇನೋ’ ಎಂದು ಕೂಗುತ್ತಿದ್ದಳು. ಶಾಲೆಗೆ ಹೋಗಲಾರೆನೆಂದು ಹಠ ಮಾಡುವ ಮಗನ ಕೈ ಹಿಡಿದು ದರ ದರನೆ ಎಳೆದೊಯ್ಯುವಂತೆ, ನನ್ನನ್ನು ಎಳೆದುಕೊಂಡು ಹೋದ ರೀತಿಯನ್ನು ನಾನಿನ್ನೂ ಮರೆತಿಲ್ಲ. ಮರುಮಾತನಾಡದೆ ಶಿಸ್ತಾಗಿ ಹಿಂದೆಯೇ ಹೋದೆ.

ಮಾಮೂಲಿನಂತೆ ಅವಳಿಗೆ ಬೇಕಾದ್ದನ್ನೆಲ್ಲಾ ಖರೀದಿಸಿ ಮುಗಿದರೂ ಮಾತಿಲ್ಲ ಕಥೆಯಿಲ್ಲ. ಜ್ಯೂಸ್ ಸೆಂಟರ್ ಒಂದಕ್ಕೆ ಕರೆದುಕೊಂಡು ಹೋಗಿ ಕೋಪ ತಣ್ಣಗಾಗಲೆಂದು ಮೂಸಂಬಿ ಜ್ಯೂಸ್ ಕೊಡಿಸಿದರೂ ಮೈಮೇಲೆ ಬಂದಿದ್ದ ಚಂಡಿ ಇಳಿದು ಹೋಗಲಿಲ್ಲ. ಅವಳ ಕಣ್ಣಂಚಿನ ಆ ಮಾತುಗಳಲ್ಲಿ ನೂರಾರು ಅರ್ಥಗಳಿದ್ದವು. ಅಬ್ಬಾ! ಅಷ್ಟು ದಿನ ಒಲವಿನ ಸವಿ ಮುತ್ತುಗಳನ್ನ ಉದುರಿಸುತ್ತಿದ್ದ ಆ ಹೊಳಪು ಕಣ್ಣುಗಳು ಅಂದೇಕೋ ನನ್ನನ್ನು ಸೀಳಿಬಿಡುವಂತೆ ನೋಡುತ್ತಿದ್ದವು. ಜ್ಯೂಸ್ ಖಾಲಿಯಾಗಿತ್ತು ಬೈಗುಳಗಳ ಪೂಜೆ ಮಾಡಲು ಅವಳ ಮನದಾಳದಲ್ಲಿ ಪದಪುಂಜಗಳು ತಯಾರಾಗುತ್ತಿದ್ದವು, ಆ ಮಂಗಳಾರತಿಯನ್ನು ಸ್ವೀಕರಿಸಲು ನಾನೂ ತಯಾರಾಗಿ ಕುಳಿತಿದ್ದೆ. ಯಾವುದಕ್ಕೂ ಇರಲಿ ಅಂತ ಒಂದು ಕ್ಷಮೆ ಕೇಳಿಬಿಟ್ಟೆ. ಬೆಣ್ಣೆಯ ಮನಸಿನ ಬೆಡಗಿ ನನ್ನ ತಪ್ಪನ್ನು ಕ್ಷಮಿಸಿ ಹೋಗಲಿ ಬಿಡು ಅಂದುಬಿಟ್ಟಳು. ಅಂತೂ ದೊಡ್ಡ ಗಂಡಾಂತರದಿಂದ ಬಚಾವಾಗಿದ್ದೆ!

ಇಷ್ಟಾದ ಮೇಲೂ ಹೆಗಲೇರಿದ್ದ ಶನಿಗೆ ಆಗಿದ್ದ ಒಂದು ಅನಾಹುತ ಸಾಲದು ಎನಿಸಿತೋ ಏನೋ? ಸುಮಾರು ವರ್ಷಗಳ ಕಾಲ ಕಣ್ಣಿಗೆ ಕಂಡಿರದ ಹಳೆ ಗೆಳತಿಯೊಬ್ಬಳು ನಾವಿದ್ದ ಜ್ಯೂಸ್ ಸೆಂಟರಿಗೆ ಗೆಳತಿಯರೊಡನೆ ಬಂದು ಒಕ್ಕರಿಸಿದಳು. ಎಷ್ಟಾದರೂ ಹಳೆಯ ಸ್ನೇಹಿತೆಯಲ್ಲವೆ ಕೂತಲ್ಲಿಯೇ ನಗುವೊಂದನ್ನು ಚೆಲ್ಲಿಬಿಟ್ಟೆ. ಪುಣ್ಯಾತ್ಗಿತ್ತಿ ಸೀದಾ ಬಂದು ತಬ್ಬಿಕೊಂಡು ‘ ಹೇಯ್ ಏನೋ ಮತ್ತೆ ಹೇಗಿದ್ಯೋ, ಫುಲ್ ಚೇಂಜ್ ಆಗಿದ್ದೀಯಲ್ಲೋ, ಸ್ಕೂಲಲ್ಲಿ ಹೇಗಿದ್ದೆ ನೀನು, ಆಗ್ಲೇ ಲವ್ ಪ್ರಪೋಸ್ ಮಾಡಿದ ಕಿಲಾಡಿ ನೀನು’ ಅಂತೆಲ್ಲಾ ಹೇಳಿ, ಒಂದಿಷ್ಟು ಮಾತಾಡಿ ಕಿಸಕ್ಕನೆ ನಕ್ಕು ಅಲ್ಲಿಂದ ಹೊರಟಳು. ಬೀಸೋ ದೊಣ್ಣೆಯಿಂದ ಆಗಷ್ಟೇ ತಪ್ಪಿಸಿಕೊಂಡಿದ್ದ ನನ್ನ ತಲೆಯನ್ನು ಕೊಡಲಿಯ ಬಾಯಿಗೆ ಇಟ್ಟು ಹೊರಟಿದ್ದಳು. ಮತ್ತೆ ಅದೇ ದೊಡ್ಡ ಕಣ್ಣುಗಳ ಅಂಚಿನಲ್ಲಿ ನೂರಾರು ಮಾತುಗಳು ಕಂಡವು, ಬಿಲ್ ಕೊಟ್ಟು ಹೊರನೆಡೆದೆವು. ಸಂಜೆ ಫೋನಿನಲ್ಲಿ ಅವಳ ಕಣ್ಣಂಚಿನ ಆ ಮಾತುಗಳು ಏನೆಂದು ಅರ್ಥವಾಯಿತು. ಆಹಾ ಅದೆಂಥಾ ಬೈಗುಳ… ಕೇಳಿದ ಕಿವಿಗಳೇ ಧನ್ಯ. ಅಂದೇ ನನಗೂ ಅರ್ಥವಾಗಿದ್ದು ಹಳೆ ಗೆಳತಿ ಕೆಮ್ಮಿದರೆ ಪ್ರಳಯ ಗ್ಯಾರೆಂಟಿ ಎಂದು ಭಟ್ಟರು ಯಾಕೆ ಬರೆದರು ಅಂತ.

ಅಭಿರಾಮ್ ಶರ್ಮ, ಕೊಪ್ಪ

LEAVE A REPLY

Please enter your comment!
Please enter your name here