ಕನ್ನಡಿಗ ಪಾಂಡೆಯನ್ನು ಕೈ ಬಿಟ್ಟಿದ್ದಕ್ಕೆ ವಾರ್ನರ್ ಕಿಡಿ!

0
26

: ಸ್ಟಾರ್‌ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಆಡಿಸದೇ ಇರುವುದಕ್ಕೆ ತಂಡದ ಸೆಲೆಕ್ಟರ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ಕ್ಯಾಪ್ಟನ್ ಡೇವಿಡ್‌ ವಾರ್ನರ್ ಆಕ್ರೋಶ ಹೊರಹಾಕಿದ್ದಾರೆ.

ಅನುಭವಿ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆ ಅವರನ್ನು ಕೈಬಿಟ್ಟ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 23 ವರ್ಷದ ಯುವ ಬ್ಯಾಟ್ಸ್‌ಮನ್‌ ವಿರಾಟ್‌ ಸಿಂಗ್‌ ಅವರನ್ನು ಆಡಿಸಿತ್ತು. ಆದರೆ, ಒತ್ತಡದ ರನ್‌ ಚೇಸ್‌ನಲ್ಲಿ ವಿರಾಟ್ ಸಿಂಗ್‌ ಕೇವಲ 4 ರನ್‌ಗಳಿಸಿ ಅವೇಶ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದ್ದರು.

ಪಂದ್ಯದಲ್ಲಿ 160 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಸನ್‌ರೈಸರ್ಸ್‌ ಕೇನ್ ವಿಲಿಯಮ್ಸನ್ ಅವರ ಅಜೇಯ 66 ರನ್‌ಗಳ ಬಲದಿಂದ 159 ರನ್‌ ಮಾತ್ರವೇ ಗಳಿಸಿ ಪಂದ್ಯವನ್ನು ಸೂಪರ್‌ ಓವರ್‌ಗೆ ಕೊಂಡೊಯ್ದಿತ್ತು. ಅಂತಿಮವಾಗಿ ಒತ್ತಡ ನಿಭಾಯಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ಜಯ ದಕ್ಕಿಸಿಕೊಂಡಿತು.

ಪಂದ್ಯದ ಬಳಿಕ ಮಾತನಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಡೇವಿಡ್‌ ವಾರ್ನರ್‌, ಇದೇ ವೇಳೆ ಮನೀಶ್‌ ಪಾಂಡೆ ಅವರನ್ನು ತಂಡದಿಂದ ಕೈಬಿಟ್ಟ ಬಗ್ಗೆ ತಮ್ಮ ಮೌನ ಮುರಿದಿದ್ದಾರೆ. ಇದು ಸಂಪೂರ್ಣ ಸೆಲೆಕ್ಟರ್ಸ್‌ ತೀರ್ಮಾನ ಎಂದು ಅನಸಮಾಧಾನ ಹೊರಹಾಕಿದ್ದಾರೆ.

“ಮನೀಶ್‌ ಆಯ್ಕೆಯ ವಿಚಾರ ಸೆಲೆಕ್ಟರ್ಸ್‌ಗೆ ಬಿಟ್ಟಿದ್ದು. ನನ್ನ ಪ್ರಕಾರ ಇದು ಅತ್ಯಂತ ಕಠೋರ ನಿರ್ಧಾರ. ಈ ಬಗ್ಗೆ ನಾನು ಅವರಿಗೆ ತಿಳಿಸಿಕೊಟ್ಟಿದ್ದೆ ಕೂಡ. ಆದರೆ, ಅಂತಿಮವಾಗಿ ಇದು ಸಂಪೂರ್ಣ ಸೆಲೆಕ್ಟರ್ಸ್‌ ನಿರ್ಧಾರ. ಹಾಗೆಂದು ವಿರಾಟ್ ಸಿಂಗ್‌ ಸಾಮರ್ಥ್ಯವನ್ನು ಇಲ್ಲಿ ಕಡೆಗಣಿಸುತ್ತಿಲ್ಲ. ಆತ ಉತ್ತಮ ಆಟಗಾರ. ಆದರೆ, ಈ ಪಿಚ್‌ನಲ್ಲಿ ಬ್ಯಾಟ್‌ ಮಾಡುವುದು ಅಷ್ಟು ಸುಲಭವಲ್ಲ. ಎದುರಾಳಿ ಬೌಲರ್‌ಗಳು ಇನಿಂಗ್ಸ್‌ ಮಧ್ಯದಲ್ಲಿ ಅದ್ಭುತ ದಾಳಿ ನಡೆಸಿ ರನ್‌ ಗಳಿಸಲು ಸವಾಲೆಸಗಿದರು,” ಎಂದು ವಾರ್ನರ್‌ ಹೇಳಿದ್ದಾರೆ.

ಸನ್‌ರೈಸರ್ಸ್‌ 5 ಪಂದ್ಯಗಳಲ್ಲಿ ಕೇವಲ ಒಂದು ಜಯದೊಂದಿಗೆ 2 ಅಂಕಗಳನ್ನು ಮಾತ್ರವೇ ಗಳಿಸಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಇದೀಗ ಬುಧವಾರ ಚೆನ್ನೈನಲ್ಲಿ ನಡೆಯಲಿರುವ ತನ್ನ ಆರನೇ ಲೀಗ್ ಪಂದ್ಯದಲ್ಲಿ ಅಂಕಪಟ್ಟಿಯ 3ನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ದ ಪೈಪೋಟಿ ನಡೆಸಲಿದ್ದು, ಈ ಪಂದ್ಯದಲ್ಲಿ ಮನೀಶ್ ಪಾಂಡೆ ಕಮ್‌ಬ್ಯಾಕ್‌ ನಿರೀಕ್ಷಿಸಲಾಗಿದೆ.

 

LEAVE A REPLY

Please enter your comment!
Please enter your name here