No menu items!
4 C
Munich
Monday, May 18, 2026

ಗೇಲಿ ಮಾಡಿದ್ದ ಪಂಜಾಬ್‌ಗೆ ಗೋಲಿ ಹೊಡೆದ ಆರ್‌ಸಿಬಿ, ನಮ್ಮ ಹತ್ರ ಬೇಡ ಮರಿ-ಖಡಕ್ ಎಚ್ಚರಿಕೆ

Must read

ಐಪಿಎಲ್ 2026ರ ಲೀಗ್ ಹಂತದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ರಸಕ್ತ ಟೂರ್ನಿಯಲ್ಲಿ 18 ಅಂಕಗಳನ್ನು ಗಳಿಸಿ, ಅಧಿಕೃತವಾಗಿ ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತ ಈ ಸೋಲಿನಿಂದಾಗಿ ಪಂಜಾಬ್ ಕಿಂಗ್ಸ್ ತಂಡದ ಪ್ಲೇಆಫ್ ಹಾದಿ ದುರ್ಗಮವಾಗಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಮೈದಾನದಲ್ಲಿ ನಿನ್ನೆ (ಮೇ17) ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ, ನಿಗದಿತ 20 ಓವರ್‌ಗಳಲ್ಲಿ 222 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಪಂಜಾಬ್ ಪರ ಶಶಾಂಕ್ ಸಿಂಗ್ (56), ಕೋಪರ್ ಕೊನೋಲಿ (37) ಮತ್ತು ಮಾರ್ಕಸ್ ಸ್ಟಾಯ್ನಿಸ್ (37) ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಸೋಶಿಯಲ್ ಮೀಡಿಯಾ ವಿವಾದ:

ಈ ಪಂದ್ಯವು ಉಭಯ ತಂಡಗಳ ಅಭಿಮಾನಿಗಳ ನಡುವೆ ತೀವ್ರ ಕುತೂಹಲ ಮೂಡಿಸಿತ್ತು. ಕಳೆದ ಐಪಿಎಲ್ 2025ರ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಆರ್‌ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹೀಗಾಗಿ, ಈ ಬಾರಿಯ ಟೂರ್ನಿಯ ಆರಂಭದಲ್ಲಿ ಸತತ 6 ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಪಂಜಾಬ್ ತಂಡಕ್ಕೆ ಆರ್‌ಸಿಬಿ ಅಭಿಮಾನಿಗಳು ಕೂಡ ಬೆಂಬಲ ನೀಡಿದ್ದರು.

ಆದರೆ, ಏಪ್ರಿಲ್ 28 ರಂದು ನಡೆದಿದ್ದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮೊದಲ 4.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿತ್ತು. ಈ ಸ್ಕೋರ್ ಕಾರ್ಡ್ ಅನ್ನು ಪಂಜಾಬ್ ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿತ್ತು. ಈ ಪೋಸ್ಟ್ ಮೂಲಕ 2017ರ ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ ತಂಡ 49 ರನ್‌ಗಳಿಗೆ ಆಲೌಟ್ ಆಗಿದ್ದ ಹಳೆಯ ಕಹಿ ಘಟನೆಯನ್ನು ಪರೋಕ್ಷವಾಗಿ ಗೇಲಿ ಮಾಡಲಾಗಿತ್ತು. ಇದು ಆರ್‌ಸಿಬಿ ಅಭಿಮಾನಿಗಳ ತೀವ್ರ ಕೆಂಗಣ್ಣಿಗೆ ಗುರಿಯಾಗಿತ್ತು.

ಪಂಜಾಬ್ ತಂಡಕ್ಕೆ ಸತತ ಸೋಲಿನ ಆಘಾತ:

ಅಚ್ಚರಿಯ ಸಂಗತಿಯೆಂದರೆ, ಆರ್‌ಸಿಬಿ ತಂಡವನ್ನು ಗೇಲಿ ಮಾಡಿ ಪೋಸ್ಟ್ ಹಾಕಿದ ದಿನದಿಂದಲೇ ಪಂಜಾಬ್ ಕಿಂಗ್ಸ್ ತಂಡದ ಪ್ರದರ್ಶನ ಕುಸಿತ ಕಂಡಿತು. ಅಲ್ಲಿಯವರೆಗೆ ಅಜೇಯವಾಗಿ ಮುನ್ನುಗ್ಗುತ್ತಿದ್ದ ಪಂಜಾಬ್, ಆ ವಿವಾದಾತ್ಮಕ ಪೋಸ್ಟ್ ಬಿದ್ದ ಬಳಿಕ ಸತತ ಆರು ಪಂದ್ಯಗಳಲ್ಲಿ ಹೀನಾಯವಾಗಿ ಸೋಲು ಕಂಡಿತು. ಪ್ರಸ್ತುತ 13 ಪಂದ್ಯಗಳಿಂದ 13 ಅಂಕಗಳನ್ನು ಹೊಂದಿರುವ ಪಂಜಾಬ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೂ, ಅದರ ಪ್ಲೇಆಫ್ ಭವಿಷ್ಯ ಈಗ ಇತರ ತಂಡಗಳ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ.

ಬ್ಯಾಟ್ ಹಾಗೂ ಪೋಸ್ಟ್ ಮೂಲಕ ಆರ್‌ಸಿಬಿ ತಿರುಗೇಟು:

ಭಾನುವಾರದ ಪಂದ್ಯದಲ್ಲಿ (ಮೇ 17) ಪಂಜಾಬ್ ತಂಡವನ್ನು ಮಣಿಸಿದ ಬೆನ್ನಲ್ಲೇ ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪಂಜಾಬ್ ತಂಡಕ್ಕೆ ತಕ್ಕ ತಿರುಗೇಟು ನೀಡಿದೆ. ಆರ್‌ಸಿಬಿ ಹಂಚಿಕೊಂಡ ಮೊದಲ ಪೋಸ್ಟ್‌ನಲ್ಲಿ, ನಾವು 6 ಓವರ್‌ಗಳಲ್ಲಿ 49 ರನ್ ನೀಡಿ ಪಂಜಾಬ್‌ನ 3 ಪ್ರಮುಖ ವಿಕೆಟ್ ಉರುಳಿಸಿದ್ದೇವೆ ಎಂದು ಬರೆಯಲಾಗಿದೆ.

ತನ್ನ ಎರಡನೇ ಪೋಸ್ಟ್‌ನಲ್ಲಿ, ನಿಮ್ಮ ವಿರುದ್ಧ 23 ರನ್‌ಗಳಿಂದ ಗೆದ್ದಿದ್ದೇವೆ. ಆಗಿದ್ದು ಆಯ್ತು, ಮತ್ತೊಮ್ಮೆ ಹೀಗೆ ಮಾಡಬೇಡಿ ಎಂದು ಬರೆಯುವ ಮೂಲಕ ಪಂಜಾಬ್ ಫ್ರಾಂಚೈಸಿಗೆ ಖಡಕ್ ಸಂದೇಶ ರವಾನಿಸಿದೆ. ಆರ್‌ಸಿಬಿ ನೀಡಿದ ಈ ಪ್ರತ್ಯುತ್ತರ ಪ್ರಸ್ತುತ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

- Advertisement -spot_img

More articles

- Advertisement -spot_img

Latest article