No menu items!
4 C
Munich
Monday, May 18, 2026

ಹುಬ್ಬಳ್ಳಿಯಲ್ಲೊಂದು ಮನಕಲಕುವ ಘಟನೆ ; ಮಗನ ಜೀವ ಉಳಿಸಲು ಕಿವಿಯೋಲೆ ಮಾರಿದ ತಾಯಿ

Must read

ಹುಬ್ಬಳ್ಳಿ: ಒಂದೆಡೆ ಒಪ್ಪೊತ್ತಿನ ಗಂಜಿಗೂ ಪರದಾಡಬೇಕಾದ ಭೀಕರ ಬಡತನ, ಮತ್ತೊಂದೆಡೆ ಕಣ್ಣೆದುರೇ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ 11 ವರ್ಷದ ಮಗ. ಖಾಸಗಿ ಆಸ್ಪತ್ರೆಗಳ ಲಕ್ಷ ಲಕ್ಷ ಬಿಲ್ ಕಟ್ಟಲು ಕಾಸಿಲ್ಲದೆ, ಕೊನೆಗೆ ತನ್ನ ಕಿವಿಯಲ್ಲಿದ್ದ ಚಿನ್ನದ ಓಲೆಯನ್ನೇ ಮಾರಿ ಮಗನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ ಹೆತ್ತ ತಾಯಿ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಗನ ಜೀವ ಉಳಿಸಲು ಕಣ್ಣೀರಿಡುತ್ತಾ ಈ ತಾಯಿ ಪರದಾಡುತ್ತಿರುವ ದೃಶ್ಯ ಎಂಥವರ ಕಲ್ಲೆದೆಯನ್ನೂ ಕರಗಿಸುವಂತಿದೆ.

ಈ ಕಣ್ಣೀರಿನ ಕಥೆಯ ನಾಯಕಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಸುನಿತಾ ಕೆಂಚಪ್ಪನವರ್. ಇವರ 11 ವರ್ಷದ ಮಗ ಸಾಗರ್ ಹುಟ್ಟಿದಾಗಿನಿಂದ ತುಂಬಾ ಚೆನ್ನಾಗಿಯೇ ಇದ್ದ. ಆದರೆ ಇತ್ತೀಚೆಗೆ ಮಗನಿಗೆ ಅತಿಯಾದ ರಕ್ತದ ಕೊರತೆ ಕಾಣಿಸಿಕೊಂಡು ದಿನದಿಂದ ದಿನಕ್ಕೆ ಆತನ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದೆ. ಗಾಬರಿಯಾದ ಹೆತ್ತವರು ವೈದ್ಯರ ಬಳಿ ಓಡಿದ್ದಾರೆ. ಆದರೆ ಅಲ್ಲಿ ಸಿಕ್ಕ ರಿಸಲ್ಟ್ ಇಡೀ ಕುಟುಂಬದ ತಲೆಯ ಮೇಲೆ ಚಪ್ಪಡಿ ಎಳೆದಂತಾಗಿದೆ. ಬಾಲಕ ಸಾಗರ್ ಭೀಕರ ‘ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್’ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಮಗನ ಪರಿಸ್ಥಿತಿ ನೋಡಿ ಕಂಗಾಲಾದ ತಾಯಿ ಸುನಿತಾ, ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆ, ಜೈನ್ ಆಸ್ಪತ್ರೆ ಸೇರಿದಂತೆ ಸಿಕ್ಕ ಸಿಕ್ಕ ಪ್ರತಿಯೊಂದು ಸರ್ಕಾರಿ ಆಸ್ಪತ್ರೆಗಳ ಮೆಟ್ಟಿಲನ್ನೂ ಮಗನನ್ನು ಎತ್ಕೊಂಡು ಅಲೆದಾಡಿದ್ದಾರೆ. ಆದರೆ ದುರಂತವೆಂದರೆ, ಈ ಮಾರಣಾಂತಿಕ ಕಾಯಿಲೆಗೆ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ವೈದ್ಯರು ಯಾವುದಾದರೂ ದೊಡ್ಡ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ಇವರಿಗೆ ದಾರಿ ತೋರಿಸಿದ್ದಾರೆ.

ಆರೋಗ್ಯ ಇಲಾಖೆಯ ಈ ನಿಯಮಗಳು ಮತ್ತು ಖಾಸಗಿ ಆಸ್ಪತ್ರೆಯ ಖರ್ಚು ಕೇಳಿ ಈ ಬಡ ಕುಟುಂಬಕ್ಕೆ ಪ್ರಾಣವೇ ಹೋದಂತಾಗಿದೆ. ಮಗನ ಆಪರೇಷನ್ ಮತ್ತು ಚಿಕಿತ್ಸೆಗೆ ಬರೋಬ್ಬರಿ 20 ರಿಂದ 26 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಖಾಸಗಿ ಆಸ್ಪತ್ರೆಗಳಲ್ಲಿ ಹೇಳಿದ್ದಾರೆ. ದಿನವಿಡೀ ಕೂಲಿ ಕೆಲಸ ಮಾಡಿ, ಸಂಜೆ ತರುವ ನೂರು ಇನ್ನೂರು ರೂಪಾಯಿಯಲ್ಲಿ ಸಂಸಾರ ನಡೆಸುವ ಈ ದಂಪತಿಗೆ ಅಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸುವುದು ಅಸಾಧ್ಯದ ಮಾತಾಗಿತ್ತು.

ಸದ್ಯ ಹೆತ್ತವರ ನಿರಂತರ ಹೋರಾಟದ ನಂತರ ‘ಆರೋಗ್ಯ ಭಾಗ್ಯ ಸಂಜೀವಿನಿ’ ಯೋಜನೆಯಡಿ ಮಗನ ಚಿಕಿತ್ಸೆಗೆ ಸರ್ಕಾರದಿಂದ ಮಂಜೂರಾತಿ ಏನೋ ಸಿಕ್ಕಿದೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ತಕ್ಷಣಕ್ಕೆ ಆರಂಭಿಸಲು ಕನಿಷ್ಠ 2 ಲಕ್ಷ ರೂಪಾಯಿ ನಗದು ಹಣದ ತುರ್ತು ಅವಶ್ಯಕತೆ ಇತ್ತು. ಕೈಯಲ್ಲಿ ಒಂದು ರೂಪಾಯಿಯೋ ಇಲ್ಲದಿದ್ದಾಗ, ಆ ಹೆತ್ತ ತಾಯಿಗೆ ಮಗನ ಜೀವದ ಮುಂದೆ ಮತ್ಯಾವ ಒಡವೆನೂ ದೊಡ್ಡದಾಗಿ ಕಾಣಿಸಲಿಲ್ಲ. ತಕ್ಷಣವೇ ತನ್ನ ಕಿವಿಯಲ್ಲಿದ್ದ ಚಿನ್ನದ ಓಲೆಯನ್ನು ಮಾರಿ, ಸಿಕ್ಕ ಹಣ ಹಿಡಿದುಕೊಂಡು ಹುಬ್ಬಳ್ಳಿ ಕಿಮ್ಸ್‌ಗೆ ಮಗನನ್ನು ಕರೆದುಕೊಂಡು ಓಡಿ ಬಂದಿದ್ದಾರೆ.

ಇದೇ ಸಮಯದಲ್ಲಿ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರ ಮುಂದೆ ತಾಯಿ ಸುನಿತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಗನ ಜೀವ ಉಳಿಸಲು ತಾಯಿ ಪಡುತ್ತಿರುವ ಕಷ್ಟ ಮತ್ತು ಕಿವಿಯೋಲೆ ಮಾರಿದ ಕಥೆಯನ್ನು ಕೇಳಿ ನಾಗಲಕ್ಷ್ಮಿ ಚೌದರಿ ಅವರ ಮನ ಕರಗಿದೆ. ತಕ್ಷಣವೇ ಸ್ಪಂದಿಸಿದ ಅವರು, ಚಿಕಿತ್ಸೆ ಆರಂಭಿಸಲು ಬೇಕಾಗಿರುವ ಆ ತುರ್ತು 2 ಲಕ್ಷ ರೂಪಾಯಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಸದ್ಯ 11 ವರ್ಷದ ಅಮಾಯಕ ಬಾಲಕ ಸಾಗರ್ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಬೆಡ್ ಮೇಲೆ ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾನೆ. ಮಗನನ್ನು ಬದುಕಿಸಿಕೊಳ್ಳಲು ಆ ಬಡ ಹೆತ್ತವರು ಸಿಕ್ಕವರ ಕಾಲಿಗೆ ಬೀಳುತ್ತಿದ್ದಾರೆ. ಸರ್ಕಾರ ಕೇವಲ ಭರವಸೆ ನೀಡದೇ, ತಕ್ಷಣವೇ ಕಡತಗಳನ್ನು ವಿಲೇವಾರಿ ಮಾಡಿ ಬಾಲಕನ ಚಿಕಿತ್ಸೆಗೆ ಸಂಪೂರ್ಣ ಹಣ ಬಿಡುಗಡೆ ಮಾಡುವ ಮೂಲಕ ಆ ತಾಯಿಯ ಕರುಳಿನ ಹೋರಾಟಕ್ಕೆ ನ್ಯಾಯ ಒದಗಿಸಬೇಕಿದೆ.

- Advertisement -spot_img

More articles

- Advertisement -spot_img

Latest article