No menu items!
11.2 C
Munich
Thursday, May 21, 2026

ದಳಪತಿ ವಿಜಯ್ ಬೆನ್ನಲ್ಲೇ ಚುನಾವಣಾ ಕಣಕ್ಕೆ ಖ್ಯಾತ ನಟನ ಪತ್ನಿ ಎಂಟ್ರಿ

Must read

ದಕ್ಷಿಣ ಭಾರತದ ಚಿತ್ರರಂಗ ಮತ್ತು ರಾಜಕೀಯಕ್ಕೆ ತಲೆತಲಾಂತರಗಳಿಂದಲೂ ಬಿಡದ ನಂಟಿದೆ. ಸಿನಿಮಾ ಮಣ್ಣಿನಿಂದ ಬಂದು ಕೋಟ್ಯಂತರ ಜನರ ಆರಾಧ್ಯ ದೈವರಾದ ಎನ್‌ಟಿಆರ್, ಎಂಜಿಆರ್, ಜಯಲಲಿತಾ ಸಾಲಿಗೆ ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಸ್ವಂತ ಪಕ್ಷ ಕಟ್ಟಿ ಸಿಎಂ ಗದ್ದುಗೆ ಏರಿದ ನಟ ದಳಪತಿ ವಿಜಯ್ ಲೇಟೆಸ್ಟ್ ಆಗಿ ಸೇರ್ಪಡೆಯಾಗಿದ್ದಾರೆ.

ಚೆನ್ನೈನಲ್ಲಿ ವಿಜಯ್ ಅವರ ಈ ಐತಿಹಾಸಿಕ ಬಿಗ್ ಸಕ್ಸಸ್ ಪಕ್ಕದ ಆಂಧ್ರಪ್ರದೇಶ್ ಮತ್ತು ತೆಲಂಗಾಣ ಚಿತ್ರರಂಗದಲ್ಲೂ ಭಾರಿ ದೊಡ್ಡ ಚರ್ಚೆಯ ಕಿಡಿ ಹೊತ್ತಿಸಿದೆ. ವಿಜಯ್ ಗೆಲುವಿನ ಬೆನ್ನಲ್ಲೇ ಈಗ ಟಾಲಿವುಡ್‌ನ ಪ್ರಭಾವಿ ಸ್ಟಾರ್ ಕುಟುಂಬವೊಂದು ಸದ್ದಿಲ್ಲದೆ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಡಲು ಕಡಕ್ ಸ್ಕೆಚ್ ಹಾಕಿದೆ.

ಹೌದು, ಖ್ಯಾತ ತೆಲುಗು ನಟ ಮಂಚು ಮನೋಜ್ ಅವರ ಪತ್ನಿ ಭೂಮಾ ಮೌನಿಕಾ ಮುಂಬರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅದ್ಧೂರಿಯಾಗಿ ಸ್ಪರ್ಧಿಸಲಿದ್ದಾರೆ. ಈ ವಿಷಯವನ್ನು ಸ್ವತಃ ಮಂಚು ಮನೋಜ್ ಅವರೇ ಅಧಿಕೃತವಾಗಿ ಘೋಷಿಸಿದ್ದಾರೆ. ಮೇ 20 ರಂದು ತಮ್ಮ ಜನ್ಮದಿನದ ವಿಶೇಷ ಅಂಗವಾಗಿ ಮಾಧ್ಯಮಗಳ ಮುಂದೆ ಬಂದಿದ್ದ ನಟ ಮನೋಜ್, ಪತ್ನಿಯ ಪೊಲಿಟಿಕಲ್ ಎಂಟ್ರಿ ಕುರಿತು ಅತ್ಯಂತ ಆಸಕ್ತಿದಾಯಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಇವರ ಈ ಹೇಳಿಕೆ ಈಗ ಇಡೀ ಆಂಧ್ರ ಪಾಲಿಟಿಕ್ಸ್ ಹಾಗೂ ಟಾಲಿವುಡ್ ಅಂಗಳದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಹುಟ್ಟುಹಬ್ಬದ ದಿನದಂದೇ ಸಮಾಜ ಸೇವೆಗೆ ಹೊಸದೊಂದು ಮುನ್ನುಡಿ ಬರೆದಿರುವ ಮಂಚು ಮನೋಜ್, ‘ಐಕ್ಯ ಧೈರ್ಯ ಸೇನಾ ಸಮಿತಿ’ ಹೆಸರಿನಲ್ಲಿ ಹೊಸದೊಂದು ಟ್ರಸ್ಟ್ ಸ್ಥಾಪಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಇದು ಯಾವುದೇ ರಾಜಕೀಯ ಪಕ್ಷವಲ್ಲ, ಬದಲಿಗೆ ಕೇವಲ ಜನರ ಸೇವೆಗಾಗಿ ಸ್ಥಾಪಿಸಲಾದ ಸಾರ್ವಜನಿಕ ಟ್ರಸ್ಟ್ ಅಷ್ಟೇ. ಅನಾಥ ಮಕ್ಕಳ ದತ್ತು ಸ್ವೀಕಾರ, ರಕ್ತದಾನ ಶಿಬಿರ ಮತ್ತು ಬಡವರಿಗಾಗಿ ಸಾಮಾಜಿಕ ಸೇವೆಗಳಂತಹ ಮಹತ್ತರ ಕಾರ್ಯಕ್ರಮಗಳನ್ನು ಈ ಟ್ರಸ್ಟ್ ಮೂಲಕ ನಾವು ದಂಪತಿಗಳು ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ಇದೇ ವೇದಿಕೆಯಲ್ಲಿ, ನಾವು ಈಗಾಗಲೇ ಸಾರ್ವಜನಿಕ ಜೀವನದಲ್ಲಿದ್ದೇವೆ. ನನ್ನ ಪತ್ನಿ ಮೌನಿಕಾ ಮುಂಬರುವ ಚುನಾವಣಾ ಕಣಕ್ಕೆ ಇಳಿಯುವುದು ನೂರಕ್ಕೆ ನೂರು ಖಚಿತ ಎಂದಿದ್ದಾರೆ ಮಂಚು ಮನೋಜ್. ಹಾಗೇ ನೋಡಿದರೆ ಭೂಮಾ ಮೌನಿಕಾ ಅವರ ರಕ್ತದಲ್ಲೇ ರಾಜಕೀಯ ಹರಿಯುತ್ತಿದೆ ಎಂದರೆ ತಪ್ಪಾಗಲ್ಲ. ಆಂಧ್ರ ರಾಜಕಾರಣದಲ್ಲಿ ದಶಕಗಳ ಕಾಲ ಪ್ರಾಬಲ್ಯ ಸಾಧಿಸಿದ್ದ ಹಿರಿಯ ಧುರಂಧರ ನಾಯಕರಾದ ಭೂಮಾ ನಾಗಿರೆಡ್ಡಿ ಮತ್ತು ಶೋಭಾ ನಾಗಿರೆಡ್ಡಿ ಅವರ ಪ್ರೀತಿಯ ಪುತ್ರಿಯೇ ಈ ಭೂಮಾ ಮೌನಿಕಾ.

ಇವರ ತಂದೆ-ತಾಯಿ ಇಬ್ಬರೂ ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಡಿಪಿ (TDP) ಪಕ್ಷಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿ ಗುರುತಿಸಿಕೊಂಡವರು. ಇಷ್ಟೇ ಅಲ್ಲ, ಮೌನಿಕಾ ಅವರ ಸ್ವಂತ ಸಹೋದರಿ ಭೂಮಾ ಅಖಿಲಪ್ರಿಯಾ ಈಗಾಗಲೇ ಆಂಧ್ರದಲ್ಲಿ ಟಿಡಿಪಿ ಪಕ್ಷದ ಪ್ರಭಾವಿ ಶಾಸಕಿಯಾಗಿದ್ದಾರೆ. ಹೀಗಾಗಿ ಭೂಮಾ ಕುಟುಂಬದ ಮತ್ತೊಬ್ಬ ವಾರಸುದಾರೆ ಈಗ ಅಧಿಕೃತವಾಗಿ ರಾಜಕೀಯಕ್ಕೆ ಅಡಿಯಿಡುತ್ತಿರುವುದು ಆಂಧ್ರ ಪಾಲಿಟಿಕ್ಸ್‌ನಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಆದರೆ, ಈಗ ಇಡೀ ಆಂಧ್ರ ರಾಜಕೀಯದ ಪಡಸಾಲೆಯಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿರುವ ಅಸಲಿ ಯಕ್ಷಪ್ರಶ್ನೆ ಎಂದರೆ, ಭೂಮಾ ಮೌನಿಕಾ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂಬುದು. ಯಾಕಂದರೆ, ಇಲ್ಲಿ ಎರಡು ಪ್ರಭಾವಿ ರಾಜಕೀಯ ಕುಟುಂಬಗಳ ಬ್ಯಾಕ್‌ಗ್ರೌಂಡ್ ಅಡ್ಡಬರುತ್ತಿದೆ. ಒಂದು ಕಡೆ ಮಂಚು ಮನೋಜ್ ಅವರ ಮಂಚು ಫ್ಯಾಮಿಲಿ ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಅತ್ಯಂತ ನಿಕಟ ಮತ್ತು ಆಪ್ತ ಸಂಬಂಧ ಹೊಂದಿದೆ. ಆದರೆ, ಮತ್ತೊಂದೆಡೆ ಮೌನಿಕಾ ಅವರ ಭೂಮಾ ಕುಟುಂಬ ಮೊದಲಿನಿಂದಲೂ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷದ ಜೊತೆ ಗಟ್ಟಿಯಾಗಿ ಗುರುತಿಸಿಕೊಂಡಿದೆ.

ಇವೆಲ್ಲದರ ನಡುವೆ ಕಳೆದೆರಡು ವರ್ಷಗಳ ಹಿಂದೆ ನಟ ಮಂಚು ಮನೋಜ್ ಅವರು ಪವರ್ ಸ್ಟಾರ್ ಪವನ್ ಕಲ್ಯಾಣ್ ನೇತೃತ್ವದ ‘ಜನಸೇನಾ’ ಪಕ್ಷವನ್ನು ಸೇರಲಿದ್ದಾರೆ ಎಂಬ ಬಿಸಿಬಿಸಿ ಸುದ್ದಿಗಳು ಕೂಡ ಹರಿದಾಡಿದ್ದವು. ಹೀಗಾಗಿ, ಜಗನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಲೋಕವೋ, ಅಕ್ಕ ಇರುವ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಕೋಟೆಯೋ ಅಥವಾ ಡೆಪ್ಯುಟಿ ಸಿಎಂ ಪವನ್ ಕಲ್ಯಾಣ್ ಅವರ ಜನಸೇನಾ ಪಡೆಯೋ? ಮೌನಿಕಾಗೆ ಯಾವ ಪಕ್ಷದಿಂದ ಬಿಗ್ ಟಿಕೆಟ್ ಸಿಗಬಹುದು ಎಂಬುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಒಟ್ಟಾರೆಯಾಗಿ, ದಳಪತಿ ವಿಜಯ್ ಅವರ ಪೊಲಿಟಿಕಲ್ ಎಂಟ್ರಿ ಹಾಗೂ ಸಕ್ಸಸ್ ಇತ್ತ ತೆಲುಗು ಚಿತ್ರರಂಗದ ಸ್ಟಾರ್‌ಗಳಿಗೂ ಹೊಸ ಇಂಜೆಕ್ಷನ್ ನೀಡಿದಂತಾಗಿದೆ. ಸಿನಿಮಾ ಸ್ಟೈಲ್‌ನಲ್ಲೇ ಮಂಚು-ಭೂಮಾ ಕುಟುಂಬಗಳ ಈ ಹೊಸ ರಾಜಕೀಯ ನಡೆ ಮುಂಬರುವ ದಿನಗಳಲ್ಲಿ ಆಂಧ್ರಪ್ರದೇಶದ ಚುನಾವಣಾ ಕಣವನ್ನು ಮತ್ತಷ್ಟು ರಂಗೇರಿಸುವುದಂತೂ ಗ್ಯಾರಂಟಿ.

- Advertisement -spot_img

More articles

- Advertisement -spot_img

Latest article