ನೀನಿದ್ದರೆ ಮಾತ್ರ ಬದುಕು ಎಂಬ ಹುಚ್ಚು ಭ್ರಮೆಯಿಲ್ಲ. ಆದರೆ, ನೀ ಸಿಗದೇ ಬಾಳೊಂದು ಬಾಳೇ?

1
1027

ಮೋಡ ಮುಸುಕಿ ಸೂರ್ಯ ಮರೆಯಾಗಿದ್ದ. ತಂಗಾಳಿಗೆ ಮನ ಕುಣಿಯುತ್ತಿತ್ತು. ಸಾಗರದ ಅಲೆಗಳು ಅಬ್ಬರಿದು ಮನಸಿನ ಪಟಲಕ್ಕೆ ಬಡಿದಂತೆ ಭಾಸವಾಗುತ್ತಿತ್ತು ಭಾವಗಳ ಬೆಸುಗೆಯ ನೆನಪು. ಅಂದು ಒಡೆದ ಕನ್ನಡಿಯ ಚೂರಿನಿಂದ ಪ್ರೀತಿಯ ಪರದೆಯ ಹರಿದವನ ನೆನಪಿನಿಂದ ಆದ ನೋವು ಇನ್ನೂ ಮಾಸಿಲ್ಲ‌. ಮಾಸಲಿ ಎಂದು ಬೇಡುವುದಿಲ್ಲ ಇನ್ನೆಂದಿಗೂ.

ಅವನ ಅಂದಕ್ಕಲ್ಲ ಸೋತಿದ್ದು, ಅವನ ಮಾತಿಗಲ್ಲ ಸೋತಿದ್ದು, ಅವನ ಆ ನೋಟಕ್ಕಲ್ಲ ಸೋತಿದ್ದು,ಅವನ ಆ ಶ್ರೀಮಂತಿಕೆಗಲ್ಲ ಸೋತಿದ್ದು, ಅವನ ಆ ಸುಂದರ ನಗುವಿಗಲ್ಲ ಸೋತಿದ್ದು, ಅವನ ನಡತೆಗೆ, ಅವನು ತೋರಿದ ಕಾಳಜಿಗೆ, ಹಿರಿಯರಿಗೆ ನೀಡುವ ಗೌರವಕ್ಕೆ- ಅಭಿಮಾನಕ್ಕೆ. ಪ್ರತಿಯೊಬ್ಬರಿಗೂ ಪ್ರೀತಿ ಆಗುತ್ತೆ. ಕೆಲವರು ಜೀವನ ಪೂರ್ತಿ ಅವರ ಜೊತೆ ಕಳೆಯಬೇಕೆಂಬ ಆಸೆಯಲ್ಲಿದ್ದರೆ, ಇನ್ನು ಕೆಲವರು ಮನಸಿನ ಖುಷಿಗೆ ಸುಮ್ಮನಾಗುತ್ತಾರೆ. ನನ್ನದು ಎರಡನೆಯ ಆಯ್ಕೆ.
ಪ್ರೀತಿ ಮಾಯೆ ಅಂತಾರೆ. ನೀ ಮಾಯೆಯೋ? ಮಾಯೊಯೊಳಗೆ ನೀನೋ? ಅರ್ಥವಾಗದ ಒಗಟು. ಮಾಯೆಯೊಳು ನಾನೂ ಸೇರಿಬಿಟ್ಟೆ ನಿನ್ನೊಡನೆ. ಪ್ರೀತಿಯೆಂದರೆ ಹಾಗೆ. ಎಲ್ಲಿಂದ ಹುಟ್ಟುತ್ತೋ ಗೊತ್ತಿಲ್ಲ. ಬದುಕುವುದನ್ನು ಕಾಣುತ್ತೇವೆ. ಸೋತು ಸಾಯುವುದನ್ನೂ ಕಂಡಿದ್ದೇವೆ. ಬದುಕು ಪ್ರೀತಿಯ ಒಂದು ಭಾಗವಾಗಿರಬೇಕೆ ಹೊರತು ಪ್ರಿತಿಯೊಂದೇ ಬದುಕಾದಾಗ ಜೀವ-ಜೀವನವೆರಡೂ ಕಷ್ಟಕ್ಕೆ ಸಿಲುಕುತ್ತವೆ. ಚಿಗುರೊಡೆದ ಮೊದಲ ಪ್ರೀತಿಯ ಕಥೆ ಇದು. ಮನಸಿನ ಮೂಲೆಯಲ್ಲೆಲ್ಲೋ ನೆನಪು ಮಾಸಿದಂತೆ ಅನಿಸುತ್ತಿದೆ.

ಈಗ ನನಗೆ ನಾನೇ ಪ್ರಶ್ನೆ ಹಾಕಿಕೊಳ್ಳಬೇಕಿದೆ.
ತೊರೆದು ಜೀವಿಸಬಹುದೆ? ಸೋತು ಶರಣಾದ ಮೇಲೂ.
ಜೊತೆ ಬರುವೆಯಾ ಇಂದು? ಬಾಳ ಬೆಳಗುವೆಯಾ ಎಂದೂ. ಕಾಣದ ಹಾದಿಗೆ ಬೆಳಕ ತೋರು ನೀನು, ಕೊನೆಯುಸಿರಿರುವವರೆಗೂ ಕೈ ಹಿಡಿವೆ ನಾನು.
ಹೇಳಲು ಸಾವಿರಾರಿದೆ ಸಾಲು.
ಒಮ್ಮೆ ಬಂದು ಎದುರಿಗೆ ನಿಲ್ಲು ಸಾಕು.
ನೀ ತೊರೆದ ಹಾದಿಯಲಿ ರೂಪು ಪಡೆದಿದೆ ನನ್ನ ಹೆಜ್ಜೆಯಾ ಗುರುತು.
ಪ್ರತಿ ಹೆಜ್ಜೆಯೂ ವಿಚಾರಿಸಿದೆ ಕಿರುಬೆರಳು ನಿನ್ನ ಸಲುಗೆಯಾ ಕುರಿತು .
ಇಂದೇ ನಿರ್ಧರಿಸಿದ್ದೇನೆ.‌ ಸೋತು ತಲೆಬಾಗುವುದಿಲ್ಲ. ನೀನಿಲ್ಲದೆ ಬದುಕುವ ಧೈರ್ಯ ನನ್ನಲ್ಲಿದೆ.
ನೀನಿದ್ದರೆ ಮಾತ್ರ ಬದುಕು ಎಂಬ ಆಶಯ ಬಿಟ್ಡಿದ್ದೇನೆ.

ನೀನು ನನಗಿಷ್ಟ ಅನ್ನೋದು ಸತ್ಯ. ನಿನ್ನ ವರ್ತನೆ ಇಷ್ಟ. ಆದರೆ ನೀನೇ ಬದುಕು ಎಂದು ಗಾಢವಾಗಿ ಪ್ರೀತಿಸಿಲ್ಲ. ಅಥವಾ ಪ್ರೀತಿಸೋಕೆ ಸ್ವತಃ ನನಗೆ ನಾನೇ ಅವಕಾಶ ಮಾಡಿ ಕೊಟ್ಟಿಲ್ಲ.
ಅದೇನೇ ಇದ್ದರೂ ನಿನ್ನ ಹೆಸರು ನನ್ನ ಕಚ್ಚಾ ಪಟ್ಟಿಯ ಕೊನೆಯ ಹಾಳೆಯಲ್ಲಿದೆ. ಬರುವೆಯೋ, ಬಿಡುವೆಯೋ, ಸಿಗುವೆಯೋ, ದೂರ ಸರಿಯುವೆಯೋ… ಕಾಲ ನಿರ್ಧರಿಸಲಿ.

-ಇಂತಿ ನಿನ್ನವಳು
ಶೃತಿ ಹೆಗಡೆ. ಹುಳಗೋಳ

1 COMMENT

LEAVE A REPLY

Please enter your comment!
Please enter your name here