ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?!

1
989

ಯುವನ್ (ಹೆಸರು ಬದಲಾಯಿಸಲಾಗಿದೆ) ಆಗಷ್ಟೇ ಕಾಲೇಜು ಜೀವನ ಮುಗಿಸಿದ್ದ. ಬೆಂಗಳೂರಿನಲ್ಲಿ ಕೆಲಸವಾಗಿತ್ತು. ಹೊಸ ಜೀವನಕ್ಕಾಗಿ, ಹೊಸ ಆಸೆ, ಕನಸುಗಳೊಂದಿಗೆ ಬೆಂಗಳೂರಿಗೆ ಬಂದಿದ್ದ. ಊರಿನಲ್ಲಿ ತುಂಡು ಬಟ್ಟೆಯನ್ನೋ ಹರಿದ ಪ್ಯಾಂಟನ್ನೋ ಹಾಕುತ್ತಿದ್ದ ಅವನಿಗೆ ಬೆಂಗಳೂರಿನಲ್ಲಿ ಮೊದಲು ಕಣ್ಣು ಕೋರೈಸಿದ್ದು ಹೊಸ ಬಟ್ಟೆ, ಹೊಸ ಚಪ್ಪಲು, ಹೊಸ ಸ್ಟೈಲುಗಳ ಯಂಗ್ ಆ್ಯಂಡ್ ಎನರ್ಜಿಟಿಕ್ ಹುಡುಗರು. ಅವರ ಜಿಮ್ ದೇಹ ಮತ್ತು ಅದಕ್ಕೆ ಫಿಟ್ ಆಗುವ ಬಟ್ಟೆಗಳು.

ಕಾಲೇಜಿನಲ್ಲಿ ಒಂದು ಪ್ರೀತಿ ನಿಂತು ಹೋಗಿದ್ದರಿಂದ ಹುಡುಗಿಯರು ಅವನಿಗೆ ಆಕರ್ಷಕರಾಗಿ ಕಾಣಲಿಲ್ಲ. ಸಿಕ್ಕಿದ ಕಂಪನಿ ಕೆಲಸ, ಬೆಂಗಳೂರಿನ ಮೊದಲಷ್ಟು ತಿಂಗಳುಗಳಲ್ಲಿ ಒಳ್ಳೆಯ ಸಂಪಾದನೆ ನೀಡಿತು‌. ಒಳ್ಳೆಯ ಬಟ್ಟೆ ಬರೆ, ತಿಂಡಿ ತಿನಿಸು ತಿರುಗಾಟ ಸಾಗುತ್ತಿತ್ತು. ಮನೆಗೆ ಅವನ ಹಣದ ಅವಶ್ಯಕತೆ ಇರಲಿಲ್ಲ. ಆದರೂ ಹೊಸ ಉದ್ಯೋಗದ ಹುರುಪಿನಲ್ಲಿ ಹಣ ಕಳಿಸಿಕೊಡುತ್ತ, ಜವಾಬ್ದಾರಿ ಮೆರೆಯುತ್ತಿದ್ದ.

ಆದರೆ ಇದೇ ನಿಯತ್ತು ಬಹಳ ಕಾಲ ಉಳಿಸಿಕೊಳ್ಳಲಾಗಲಿಲ್ಲ. ಊರಲ್ಲಿ ಮೈತುಂಬಾ ಬಟ್ಟೆ ಹೊದ್ದ ಹುಡುಗಿಯರು ಮಾತಿಗೂ ಬರುವುದಿಲ್ಲ, ನೋಟಕ್ಕೂ ಸಿಗುವುದಿಲ್ಲ. ಇಲ್ಲಿ ಹಾಗಲ್ಲ. ಹುಡುಗಿಯರೊಂದಿಗೆ ಮಾತನಾಡಲು, ಸ್ನೇಹ ಮಾಡಿಕೊಳ್ಳಲು ಏನೂ ತೊಂದರೆ ಇಲ್ಲ. ಅವನಿಗೆ ಇದಿಷ್ಟೇ ಯೋಚನೆ ಸಾಕಿತ್ತು. ಮತ್ತೊಂದು ದಾರಿ ಹಿಡಿದುಕೊಳ್ಳಲು.

ಹೊಸ ಹುಡುಗಿಯರು, ಅವರ ಉಡುಗೆ ತೊಡುಗೆ ನಡಿಗೆಗಳಲ್ಲಿ ತುಂಬಿ ತುಳುಕಾಡುವ ಸೌಂದರ್ಯ ಪ್ರಜ್ಞೆ. ಅವರೊಡನೆ ಸ್ಟೈಲಾಗಿ ಮಾತಾಡುವ ಯುವಕರು. ಇದನ್ನು ನೋಡಿ ಯುವನ್ ಗೂ ತಡೆಯಲಾಗಲಿಲ್ಲ.

ಹೊಸ ಹುಡುಗಿಯೊಬ್ಬಳ ಸ್ನೇಹ ಯುವನ್ ಗೆ ಆಯಿತು. ಇವನು ಆಗಷ್ಟೆ ಪಟ್ಟಣ ನೋಡಿದವ. ಅವಳು ಮುಂಬೈ ಮಹಾನಗರದಿಂದ ಬೆಂಗಳೂರಿಗೆ ಬಂದ ಬೆಡಗಿ. ಸಿನಿಮಾ ನಟಿಯರಂತೆ ಬಿಳಿ ವರ್ಣ, ತೆಳು ಬಣ್ಣದ ಮೆತ್ತನೆಯ ಅಂಗಿ, ಮೊಣಕಾಲ ಕೆಳಗಿಳಿಯದ ಬಟ್ಟೆ ತೊಟ್ಟಿರುತ್ತಿದ್ದಳು. ಆದರೂ ಕನ್ನಡ ಕಲಿಕೆ ಎಂಬ ನೆಪ ಅವರಿಬ್ಬರನ್ನೂ ಜೊತೆಯಾಗಿಸಿತು.

ಮೂರ್ನಾಲ್ಕು ಭೇಟಿ ಹೀಗೆ ಸಹಜವಾಗಿ ಕಳೆಯಿತು. ಅದೊಂದು ಶನಿವಾರ‌, “ಮಗಾ ನೀವಿಬ್ರು ಜೊತೆಗಿದ್ದು ಒಂದೂ ವೀಕೆಂಡ್ ಪಾರ್ಟಿ ಮಾಡಿಲ್ವಲ್ಲ” ಎಂದು ಗೆಳೆಯರು ಯುವನ್ ನ ಹಂಗಿಸಿದರು. ಪ್ರತೀ ಬಾರಿಯೂ ಹಾಗೇ ಉಳಿಯುವುದು ಅವನಿಗೂ ಸಾಕೆನಿಸಿತ್ತು. ಈ ಸಲ ಹೆದರದೆ ವೀಕೆಂಡ್ ಪಾರ್ಟಿಗೆ ಕೇಳಿಯೇ ಬಿಟ್ಟ. ಅವಳು ಅತಿ ಸರಳವಾಗಿ ಒಪ್ಪಿಕೊಂಡಳು.

ಆ ರಾತ್ರಿ ಎಮ್.ಜಿ. ರಸ್ತೆಯ ಬಳಿ ಅವರು ಭೇಟಿಯಾದರು. ಇವನು ಕೇಳುವ ಮೊದಲು ಅವಳೇ ಇಂತಿಂಥ ಸ್ಥಳ ಚೆನ್ನಾಗಿದೆ. ಅಲ್ಲಿಗೇ ಹೋಗೋಣ ಎಂದಳು. ಇಬ್ಬರೂ ನೈಟ್ ಔಟ್ ಗೆ ಮಬ್ಬುಗತ್ತಲೆಯ ರೆಸ್ಟೋರೆಂಟ್ ಒಂದರ ಒಳ ಹೊಕ್ಕರು. “ನೈಸ್ ಪ್ಲೇಸ್ ಇಸಂಟ್ ಇಟ್. ಐ ಲೈಕ್ ದಿಸ್ ಪ್ಲೇಸ್ ವೆರಿ ಮಚ್” ಅಂದಳು. ತಣ್ಣಗೆ ಕುಳಿತಳು. ವೈಟರ್ ನ ಕರೆದು ಆಪಲ್ ಜ್ಯೂಸ್ ಆರ್ಡರ್ ಮಾಡಿದಳು.‌ ಯುವನ್ ಗೆ ತಲೆಕೆಳಗಾದಷ್ಟು ಆಶ್ಚರ್ಯವಾಯಿತು. “ಹುಡ್ಗೀರೇ ಕುಡೀತಾರೆ ನೀನು ಅದೂ ಇದೂ ಅನ್ಬೇಡ.. ಯಾವ್ದಾದ್ರು ದೊಡ್ಡ ಡ್ರಿಂಕೇ ಆರ್ಡರ್ ಮಾಡು” ಎಂದು ಗೆಳೆಯರು ಕಳಿಸಿಕೊಟ್ಟಿದ್ದರು. ಇಲ್ಲಿ ಹಾಗೇನೂ ಆಗುತ್ತಿಲ್ಲ. ತಡಬಡಾಯಿಸಿ “ನಂಗೂ ಜ್ಯೂಸ್” ಎಂದು ಹೇಳಿಬಿಟ್ಟ. ತೀರಾ ಹೆಚ್ಚಿನದನ್ನು ಕಲ್ಪಿಸಿ ಬಂದಿದ್ದ ಯುವನ್ ಗೆ ಏನಿದು.. ಇಷ್ಟೆನಾ ಅಂತನಿಸಿತು.

ಜ್ಯೂಸ್ ಕುಡಿಯುತ್ತಾ ಒಂದಷ್ಟು ಮಾತುಗಳಾದವು. ಅವಳೇ ಮಾತನಾಡುತ್ತಿದ್ದಳು. ಯಾವುದೋ ಸಮಯಕ್ಕೆ ಕಾದವನಂತೆ ಯುವನ್ ಚಡಪಡಿಸಿದ‌. ಅದೊಮ್ಮೆಗೆ ಚಕ್ಕನೆ ಕಿಸೆಯಿಂದ ಸಿಗರೇಟು ತೆಗದು ತುಟಿಗಿಟ್ಟ. ಲೈಟರ್ ಮೇಲೆತ್ತಿ ಟಕ್ಕೆಂದು ಬೆಂಕಿ ತಾಗಿಸಿಬಿಟ್ಟ. ಹೊಸದೇನೋ ಸಾಧಿಸಿದ, ಹೊಸ ಭಾವದ ಸುಳಿವು ಮುಖದ ಮೇಲೆ ತೇಲಿಹೋಯಿತು. ಪ್ರತಿಕ್ರಿಯೆಯಾಗಿ ಮೆಲ್ಲನೆ ಅವಳ ಮುಖ ನೋಡಿದ‌.

“ಹೆಲೊ ಮಿಸ್ಟರ್ ಯುವನ್!” ಎಂದು ಮೇಜು ಕುಟ್ಟಿ ನೋಡಿದಳು. “ಡೋಂಟ್ ಯು ನೊ ಹೌ ಟು ಬಿಹೇವ್ ವಿದ್ ಗರ್ಲ್ಸ್, ಐ ಥಾಟ್ ಇಟ್ ಈಸ್ ಸೇಫ್ ಟು ಹ್ಯಾಂಗ್ ಔಟ್ ವಿದ್ ಯು” ಎಂದು ಸರಸರನೆ ಇಂಗ್ಲೀಷ್ ಬಿಟ್ಟಳು. ಯುವನ್ ಗೆ ಗಾಬರಿಯಾಗಿ, ಸಿಗರೇಟು ಕಿತ್ತೆಸೆದು “ಐಮ್ ಸಾರಿ” ಎಂದು ನಾಲ್ಕಾರು ಬಾರಿ ಮೆತ್ತಗೆ ಹೇಳಿದ. ಅವಳು ಕುಳಿತಳು. ತನ್ನ ಕೆಲಸ ಹೇಗೆ ಸಮರ್ಥಿಸಿಕೊಳ್ಳಲಿ ಎಂದು ಯುವನ್ ಗೆ ತಿಳಿಯದೇ ಹೋಯಿತು. “ಏನಂಥಾ ತಪ್ಪು ಮಾಡ್ದೆ” ಎಂದು ಸಿಡುಕಿದ, ಮರುಗಿದ. “ಹುಡುಗಿ ಎದುರು ಹೇಳ್ದೆ ಕೇಳ್ದೆ ಸಿಗರೇಟು ಸೇದೋದು ಇಷ್ಟವಿಲ್ಲ” ಎಂದು ಸ್ವತಃ ಯುವನ್ ಕಲಿಸಿದ ಕನ್ನಡದಲ್ಲಿ ಜಾಳು ಜಾಳಾಗಿ ಹೇಳಿದಳು. ಅರ್ಧಕ್ಕೇ ಹೊರನಡೆದಳು!

ಯುವನ್ ಮೆಟ್ರೊ ಪ್ರಯಾಣದಲ್ಲಿ ನನಗೆ ಸಿಕ್ಕಾಗ, “ಅಲ್ಲ ಅವಳೇ ಆ ಮಬ್ಬುಗತ್ತಲ ರೆಸ್ಟೋರೆಂಟ್ ಗೆ ಹೋಗೋಣ ಅಂದು ಕೊನೆಗೆ ಹೀಗಂದ್ಲು. ಈ ಹುಡುಗಿಯರನ್ನ ಹೇಗೆ ಅರ್ಥ ಮಾಡ್ಕೊಬೇಕು ಅಂತನೇ ಗೊತ್ತಾಗಲ್ಲ” ಎಂದ‌. “ಇದು ಕೇವಲ ಆ ವಿಷ್ಯ ಅಲ್ಲ ಯುವನ್‌. ಹುಡುಗಿಯರನ್ನ ಹೇಗೆ ಕಾಣಬೇಕು, ಹೇಗೆ ತಿಳಿಯಬೇಕು, ಹೇಗೆ ಗೌರವಿಸಬೇಕು ಎಂಬ ಬಗ್ಗೆ ಇದೊಂದು ಪಾಠ. ಮೊದ್ಲು ಅದನ್ನ ತಿಳ್ಕೊ. ಮುಂದೆ ಯಾವತ್ತೂ ಹೀಗೆ ಸಲುಗೆ ದುರುಪಯೋಗ ಮಾಡೋಕೆ ಹೋಗಬೇಡ” ಅಂದೆ. ಹೌದು, ನಿಜ ಎಂದು ಅವನಿಗೂ ಅನಿಸಿತ್ತು.

– ನಾಗೇಶ್ ಭಿನ್ನ

1 COMMENT

LEAVE A REPLY

Please enter your comment!
Please enter your name here