No menu items!
5.1 C
Munich
Friday, April 24, 2026

ಪದೇ ಪದೇ ಸಿಹಿ ತಿನ್ನಬೇಕು ಎಂದು ಅನಿಸುವುದಕ್ಕೆ ಕಾರಣವಿದೆ! ಈ ಕಾರಣಗಳು ತಿಳಿಯಲೇಬೇಕು

Must read

ಪದೇ ಪದೇ ಸಿಹಿ ತಿನ್ನಬೇಕು ಎಂದು ಅನಿಸುವುದಕ್ಕೆ ಕಾರಣವಿದೆ! ಈ ಕಾರಣಗಳು ತಿಳಿಯಲೇಬೇಕು

ಕೆಲವರಿಗೆ ಸಿಹಿತಿಂಡಿಗಳನ್ನು ತಿನ್ನುವುದು ಎಂದರೆ ಅಪಾರ ಇಷ್ಟ. ದಿನನಿತ್ಯದ ಊಟ–ತಿಂಡಿಗಿಂತಲೂ ಹೆಚ್ಚಾಗಿ ಸಿಹಿಯಾದ ಆಹಾರಗಳನ್ನು ಸೇವಿಸಬೇಕು ಎಂಬ ಬಯಕೆ ಇರುತ್ತದೆ. ಈ ಹಂಬಲ ಕ್ರಮೇಣ ಅಭ್ಯಾಸವಾಗಿ, ದೈನಂದಿನ ಅಗತ್ಯದಂತೆಯೇ ಆಗಿಬಿಡುತ್ತದೆ. ಕೆಲವೊಮ್ಮೆ ಊಟದ ನಂತರವಾಗಲಿ ಅಥವಾ ಊಟಕ್ಕೂ ಮುನ್ನವಾಗಲಿ, ಸಮಯದ ಪರಿವಿಲ್ಲದೆ ಸಿಹಿ ತಿನ್ನಬೇಕು ಎಂದು ಅನಿಸುವುದು ಸಾಮಾನ್ಯ. ಆರಂಭದಲ್ಲಿ ಇದು ದೊಡ್ಡ ವಿಷಯವೆನಿಸದಿದ್ದರೂ, ಪದೇಪದೇ ಈ ರೀತಿ ಬಯಕೆ ಉಂಟಾಗತೊಡಗಿದರೆ ಅದು ಕಳವಳಕಾರಿಯಾಗಿದೆ.

ಸಿಹಿತಿಂಡಿಗಳನ್ನು ಸೇವಿಸುವುದರಿಂದ ತಾತ್ಕಾಲಿಕವಾಗಿ ಮನಸ್ಸಿಗೆ ಶಾಂತಿ ಮತ್ತು ಶಕ್ತಿ ಸಿಗುತ್ತದೆ. ಅದಕ್ಕಾಗಿಯೇ ಹೆಚ್ಚು ದಣಿವಾದಾಗ ಅಥವಾ ಒತ್ತಡದಲ್ಲಿದ್ದಾಗ ಹಲವರು ಸಿಹಿಯತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಆದರೆ ಅತಿಯಾದ ಸಿಹಿ ಸೇವನೆ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು. ಹಾಗಾದರೆ ಸಿಹಿತಿಂಡಿ ಹೆಚ್ಚು ತಿನ್ನುವ ಅಭ್ಯಾಸದಿಂದ ಯಾವ ಸಮಸ್ಯೆಗಳು ಉಂಟಾಗುತ್ತವೆ? ಈ ಬಯಕೆಯನ್ನು ನಿಯಂತ್ರಿಸುವುದು ಹೇಗೆ? ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಹೆಚ್ಚೆಚ್ಚು ಸಿಹಿತಿಂಡಿ ತಿನ್ನಬೇಕೆಂಬ ಬಯಕೆಗೆ ಕಾರಣವೇನು?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಡಾ. ಎಲ್.ಎಚ್. ಘೋಟೇಕರ್ ಅವರ ಪ್ರಕಾರ, ಪದೇಪದೇ ಸಿಹಿತಿಂಡಿ ತಿನ್ನಬೇಕೆಂಬ ಬಯಕೆ ಕೇವಲ ರುಚಿಗೆ ಮಾತ್ರ ಸೀಮಿತವಲ್ಲ. ಇದು ವ್ಯಕ್ತಿಯ ಜೀವನಶೈಲಿ ಮತ್ತು ದಿನಚರಿಯೊಂದಿಗೆ ನೇರ ಸಂಬಂಧ ಹೊಂದಿರುತ್ತದೆ. ಅನಿಯಮಿತ ಆಹಾರ ಪದ್ಧತಿ, ದೀರ್ಘಕಾಲ ಹಸಿವಿನಿಂದಿರುವುದು, ಜಂಕ್ ಫುಡ್‌ಗಳ ಅಧಿಕ ಸೇವನೆ ಈ ಬಯಕೆಗೆ ಕಾರಣವಾಗಬಹುದು. ಜೊತೆಗೆ ಒತ್ತಡ, ನಿದ್ರೆಯ ಕೊರತೆ ಮತ್ತು ಮಾನಸಿಕ ಆಯಾಸವೂ ಸಿಹಿ ತಿನ್ನಬೇಕೆಂಬ ಆಸೆಯನ್ನು ಹೆಚ್ಚಿಸುತ್ತವೆ. ದಣಿವಾದಾಗ ಸಿಹಿ ತಿನ್ನುವ ಅಭ್ಯಾಸ ಕಾಲಕ್ರಮೇಣ ನಿತ್ಯದ ರೂಢಿಯಾಗಿ ಮಾರ್ಪಡುತ್ತದೆ.

ಪದೇಪದೇ ಸಿಹಿತಿಂಡಿ ಸೇವನೆ ಮಾಡುವುದರಿಂದ ಉಂಟಾಗುವ ಸಮಸ್ಯೆಗಳು

ಅತಿಯಾದ ಸಿಹಿತಿಂಡಿ ಸೇವನೆಯಿಂದ ದೇಹದಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ತೂಕ ಹೆಚ್ಚಳ, ಬೊಜ್ಜುತನ ಪ್ರಮುಖ ಸಮಸ್ಯೆಯಾಗಿದ್ದು, ರಕ್ತದಲ್ಲಿನ ಸಕ್ಕರೆಯ ಮಟ್ಟ ಅಸಮತೋಲನಗೊಂಡು ಮಧುಮೇಹದ ಅಪಾಯವೂ ಹೆಚ್ಚಾಗುತ್ತದೆ. ಇದಲ್ಲದೆ ಹಲ್ಲುಗಳಲ್ಲಿ ಹುಳುಕು, ದೌರ್ಬಲ್ಯ, ಆಯಾಸ, ಜೀರ್ಣಕ್ರಿಯೆ ತೊಂದರೆಗಳು ಮತ್ತು ಚರ್ಮದ ಸಮಸ್ಯೆಗಳೂ ಕಾಣಿಸಬಹುದು. ಈ ಅಭ್ಯಾಸ ದೀರ್ಘಕಾಲ ಮುಂದುವರಿದರೆ ಹೃದಯ ಆರೋಗ್ಯಕ್ಕೂ ಹಾನಿಕಾರಕವಾಗಬಹುದು.

ಈ ಅಭ್ಯಾಸವನ್ನು ತಡೆಯುವುದು ಹೇಗೆ?

ಸಿಹಿತಿಂಡಿಗಳ ಹಂಬಲವನ್ನು ನಿಯಂತ್ರಿಸಲು ಸಮತೋಲಿತ ಆಹಾರ ಸೇವನೆ ಅತ್ಯಂತ ಮುಖ್ಯ. ಸಮಯಕ್ಕೆ ಸರಿಯಾಗಿ ಊಟ–ತಿಂಡಿ ಮಾಡಿ, ಹೆಚ್ಚು ಹೊತ್ತು ಹಸಿವಿನಿಂದ ಇರಬೇಡಿ. ದಿನಕ್ಕೆ ಸಾಕಷ್ಟು ನೀರು ಕುಡಿಯುವುದು ಮತ್ತು ಉತ್ತಮ ನಿದ್ರೆ ಪಡೆಯುವುದು ಸಹ ಅಗತ್ಯ. ಒತ್ತಡವನ್ನು ಕಡಿಮೆ ಮಾಡಲು ಯೋಗ, ಧ್ಯಾನ ಅಥವಾ ಲಘು ವ್ಯಾಯಾಮವನ್ನು ಅಭ್ಯಾಸ ಮಾಡಿ. ಸಿಹಿತಿಂಡಿಗಳ ಬದಲಿಗೆ ಹಣ್ಣುಗಳು, ಒಣಹಣ್ಣುಗಳು ಅಥವಾ ಆರೋಗ್ಯಕರ ತಿಂಡಿಗಳನ್ನು ಆಯ್ಕೆ ಮಾಡಿಕೊಳ್ಳಿ. ಸಿಹಿತಿಂಡಿಗಳ ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬಂದರೆ, ಈ ಅಭ್ಯಾಸವನ್ನು ಸುಲಭವಾಗಿ ನಿಯಂತ್ರಿಸಬಹುದು.

- Advertisement -spot_img

More articles

- Advertisement -spot_img

Latest article