No menu items!
11.9 C
Munich
Wednesday, May 20, 2026

9 ತಿಂಗಳ ನಂತರ ಜಾಮೀನಿನ ಮೇಲೆ ಜೈಲಿಂದ ರಿಲೀಸ್‌ – ಅತ್ಯಾಚಾರ ಆರೋಪಿಗೆ ಹೂವಿನ ಹಾರ ಹಾಕಿ ಅದ್ದೂರಿ ಮೆರವಣಿಗೆ

Must read

ಅತ್ಯಾಚಾರದಂತಹ ಭೀಕರ ಆರೋಪ ಹೊತ್ತು ಜೈಲು ಸೇರಿದ್ದ ಕಾಮುಕನೊಬ್ಬ ಜಾಮೀನಿನ ಮೇಲೆ ಆಚೆ ಬಂದರೆ, ಆತನಿಗೆ ಆರತಿ ಎತ್ತಿ, ಹೂವಿನ ಹಾರ ಹಾಕಿ, ಮೆರವಣಿಗೆ ಮಾಡುವ ವಿಕೃತ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಎಲ್ಎಲ್‍ಬಿ (LLB) ವಿದ್ಯಾರ್ಥಿನಿಯ ಮೇಲೆ ರೇಪ್ ಮಾಡಿದ ಆರೋಪ ಎದುರಿಸುತ್ತಿರುವ ಹಿಂದೂ ಯುವ ವಾಹಿನಿಯ ಮಾಜಿ ನಾಯಕ ಸುಶೀಲ್ ಪ್ರಜಾಪತಿ ಜೈಲಿನಿಂದ ರಿಲೀಸ್ ಆಗಿದ್ದು, ಆತನಿಗೆ ಬೆಂಬಲಿಗರು ರಾಜಮರ್ಯಾದೆ ನೀಡಿರೋ ನಾಚಿಕೆಗೇಡಿನ ವಿಡಿಯೋ ಈಗ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಇಡೀ ಸಮಾಜವೇ ತಲೆ ತಗ್ಗಿಸುವಂತಿರೋ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ. ವಕೀಲರಿಗೆ ಪರಿಚಯ ಮಾಡಿಕೊಡುತ್ತೇನೆ ಎಂದು ನಂಬಿಸಿ, ಕಾನೂನು ಓದುತ್ತಿದ್ದ ಯುವತಿಯನ್ನು ಫ್ಲಾಟ್‌ವೊಂದಕ್ಕೆ ಕರೆದುಕೊಂಡು ಹೋಗಿ ಸುಶೀಲ್ ಪ್ರಜಾಪತಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಕಳೆದ ವರ್ಷವೇ ಪೊಲೀಸರು ಈತನನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದರು. ಸುಮಾರು 9 ತಿಂಗಳುಗಳ ಕಾಲ ಕಂಬಿ ಎಣಿಸಿದ್ದ ಈ ಅತ್ಯಾಚಾರ ಆರೋಪಿಗೆ ಇತ್ತೀಚೆಗಷ್ಟೇ (ಮೇ 17) ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

ಈತ ಜೈಲಿನಿಂದ ಹೊರಗಡೆ ಬರುತ್ತಿದ್ದಂತೆ ಆತನ ಬೆಂಬಲಿಗರು ನಡೆದುಕೊಂಡ ರೀತಿ ಮಾತ್ರ ಅಸಹ್ಯ ಹುಟ್ಟಿಸುವಂತಿತ್ತು. ಜೈಲಿನ ಗೇಟ್‌ನಿಂದ ಆಚೆ ಬರುತ್ತಿದ್ದಂತೆ ಸುಶೀಲ್ ಪ್ರಜಾಪತಿಗೆ ದೊಡ್ಡ ದೊಡ್ಡ ಚೆಂಡುಹೂವಿನ ಹಾರಗಳನ್ನು ಹಾಕಿ ಭರ್ಜರಿ ವೆಲ್‌ಕಮ್ ಮಾಡಲಾಗಿದೆ. ಅಷ್ಟಕ್ಕೇ ನಿಲ್ಲದ ಈತನ ಅಂಧಾಭಿಮಾನಿಗಳು, ಆರೋಪಿಯ ಪರವಾಗಿ ಜೈಕಾರದ ಘೋಷಣೆಗಳನ್ನು ಕೂಗುತ್ತಾ, ಆತನನ್ನು ಹೆಗಲ ಮೇಲೆ ಕೂರಿಸಿಕೊಂಡು ಇಡೀ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ.

ಒಬ್ಬ ಅತ್ಯಾಚಾರ ಆರೋಪಿಯನ್ನು ದೇಶ ಗೆದ್ದು ಬಂದ ವೀರನ ತರಹ ಮೆರವಣಿಗೆ ಮಾಡುತ್ತಿದ್ದರೂ, ಅಲ್ಲಿ ನೆರೆದಿದ್ದ ಯಾರಿಗೂ ಕನಿಷ್ಠ ಪ್ರಜ್ಞೆ ಇದ್ದಂತಿರಲಿಲ್ಲ. ಕೆಲವರು ಈ ಇಡೀ ವಿಕೃತ ರೋಡ್ ಶೋ ಅನ್ನು ಹೆಮ್ಮೆಯಿಂದ ತಮ್ಮ ಮೊಬೈಲ್ ಫೋನ್‌ಗಳಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ರಾಕೆಟ್ ವೇಗದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಮತ್ತು ಜನರ ವಿಕೃತ ಮನಸ್ಥಿತಿಗೆ ಉಗಿಯುತ್ತಿದ್ದಾರೆ.

ಟ್ವಿಟ್ಟರ್ (X) ಸೇರಿದಂತೆ ಜಾಲತಾಣಗಳಲ್ಲಿ ಈ ವಿಡಿಯೋ ನೋಡಿ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಮಗಳ ಮೇಲಿನ ಅತ್ಯಾಚಾರದ ಕಲೆ ಇಡೀ ಕುಟುಂಬವನ್ನು ಜೀವಂತವಾಗಿ ಕೊಲ್ಲುತ್ತದೆ, ಆದರೆ ಇಲ್ಲಿ ಅತ್ಯಾಚಾರಿಗಳಿಗೆ ಹೂವಿನ ಹಾರ ಹಾಕಿ ಸಂಭ್ರಮಿಸಲಾಗುತ್ತಿದೆ. ಇಂತಹವರಿಂದ ಹೆಣ್ಣುಮಕ್ಕಳಿಗೆ ರಕ್ಷಣೆ ಎಲ್ಲಿದೆ? ಎಂದು ಜನರು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ವಿಡಿಯೋ ವೈರಲ್ ಆಗಿ ಇಲಾಖೆಗೆ ಮುಜುಗರ ತರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸ್ಥಳೀಯ ಪೊಲೀಸರು, ಘಟನೆ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ, ದಿನಕ್ಕೊಂದು ಮಹಿಳಾ ದೌರ್ಜನ್ಯದ ಪ್ರಕರಣಗಳು ವರದಿಯಾಗುತ್ತಿರುವ ಈ ಕಾಲದಲ್ಲಿ, ಅತ್ಯಾಚಾರದ ಆರೋಪ ಹೊತ್ತ ವ್ಯಕ್ತಿಗೆ ಈ ಮಟ್ಟದ ಸಾರ್ವಜನಿಕ ಬೆಂಬಲ ಮತ್ತು ಅದ್ದೂರಿ ಸ್ವಾಗತ ಸಿಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಹೆಣ್ಣುಮಕ್ಕಳ ರಕ್ಷಣೆಯ ಬಗ್ಗೆ ದೊಡ್ಡ ದೊಡ್ಡ ಭಾಷಣ ಬಿಗಿಯುವ ನಾಯಕರು, ಇಂತಹ ವಿಕೃತಿ ಮೆರೆಯುವ ಕಿರಾತಕರು ಮತ್ತು ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.

- Advertisement -spot_img

More articles

- Advertisement -spot_img

Latest article