ರಾಜ್ಯದಲ್ಲಿ ತಣ್ಣಗಾಗಿದ್ದ ಹಿಜಾಬ್ ಕಿಚ್ಚು ಈಗ ಮತ್ತೆ ಧಗಧಗಿಸಲು ಶುರುವಾಗಿದೆ. ಬಿಜೆಪಿ ಸರ್ಕಾರದ ಕಾಲದಲ್ಲಿ ತಣ್ಣಗಾಗಿದ್ದ ಈ ವಿವಾದಕ್ಕೆ ಈಗ ಕಾಂಗ್ರೆಸ್ ಸರ್ಕಾರ ಮತ್ತೆ ಜೀವ ಕೊಟ್ಟಂತಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ, ಹಿಂದೂ ಪರ ಸಂಘಟನೆಗಳು ಕೆಂಡಾಮಂಡಲವಾಗಿವೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆ ರಾಜ್ಯದಲ್ಲಿ ಹೊಸ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ.
ಈ ವಿವಾದದ ಬಿಸಿ ಇಂದು (ಮೇ 14 ) ಹುಬ್ಬಳ್ಳಿಯಲ್ಲಿ ಕಾವೇರಿದ್ದು, ಶ್ರೀರಾಮಸೇನೆ ಸಂಘಟನೆ ಸರ್ಕಾರದ ವಿರುದ್ಧ ಬೀದಿಗೆ ಇಳಿದು ಆಕ್ರೋಶ ಹೊರಹಾಕಿದೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಸರ್ಕಾರದ ನಿರ್ಧಾರಕ್ಕೆ ಕೆಂಡ ಕಾರಿದ್ದಾರೆ. ಅಷ್ಟೇ ಅಲ್ಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಶಿಕ್ಷಣ ಸಚಿವರಿಗೆ ಹಿಜಾಬ್ ಧರಿಸಿದಂತೆ ಎಡಿಟ್ ಮಾಡಲಾದ ಫೋಟೋಗಳನ್ನು ಹಿಡಿದು ಮೆರವಣಿಗೆ ಮಾಡಿ, ನಂತರ ಅವಕ್ಕೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಈ ವಿಚಾರವಾಗಿ ನೇರವಾಗಿಯೇ ಸವಾಲು ಎಸೆದಿದ್ದಾರೆ. ಸರ್ಕಾರ ಮಕ್ಕಳ ಮನಸ್ಸಿನಲ್ಲಿ ವಿಷ ಬಿತ್ತುವ ಕೆಲಸ ಮಾಡುತ್ತಿದೆ. ಇಂದಿರಾ ಗಾಂಧಿಯವರು ತಂದಿದ್ದ ಸಮವಸ್ತ್ರ ನಿಯಮವನ್ನೇ ಅವರ ಪಕ್ಷದವರು ಗಾಳಿಗೆ ತೂರುತ್ತಿದ್ದಾರೆ. ಶಾಲೆಗಳಲ್ಲಿ ಏಕತೆ ಇರಬೇಕೆ ಹೊರತು ಧರ್ಮದ ಪ್ರದರ್ಶನವಲ್ಲ ಎಂದು ಗುಡುಗಿದ್ದಾರೆ. ಅಷ್ಟೇ ಅಲ್ಲ, ಸರ್ಕಾರದ ಅಧಿಸೂಚನೆಯ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಮುತಾಲಿಕ್, ರಾಜ್ಯದ ಹಿಂದೂ ವಿದ್ಯಾರ್ಥಿಗಳಿಗೆ ಒಂದು ಖಡಕ್ ಕರೆ ನೀಡಿದ್ದಾರೆ. ಎಲ್ಲೆಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಾರೋ, ಅಲ್ಲೆಲ್ಲಾ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಹೋಗಿ. ಏನಾದರೂ ತೊಂದರೆಯಾದರೆ ನಿಮ್ಮ ರಕ್ಷಣೆಗೆ ನಾವು ಸಿದ್ಧವಿದ್ದೇವೆ. ಸರ್ಕಾರ ಎಷ್ಟು ಜನರ ಮೇಲೆ ಕೇಸ್ ಹಾಕುತ್ತೋ ಹಾಕಲಿ, ನಾವು ಎದುರಿಸುತ್ತೇವೆ ಎಂದು ಗುಡುಗುವ ಮೂಲಕ ಮತ್ತೆ ಕೇಸರಿ ವರ್ಸಸ್ ಹಿಜಾಬ್ ಫೈಟ್‌ಗೆ ವೇದಿಕೆ ಸಿದ್ಧಪಡಿಸಿದ್ದಾರೆ.
ಸರ್ಕಾರದ ಈ ನಡೆ ಕೇವಲ ಮಕ್ಕಳ ಮನಸ್ಸು ಒಡೆಯುವ ಕೆಲಸವಲ್ಲ, ಇದು ವೋಟ್ ಬ್ಯಾಂಕ್ ರಾಜಕಾರಣದ ಪರಮಾವಧಿ ಅನ್ನೋದು ಪ್ರತಿಭಟನಾಕಾರರ ವಾದ. ಶಾಲೆಗೆ ಹೋದ ಮೇಲೆ ಎಲ್ಲರೂ ವಿದ್ಯಾರ್ಥಿಗಳೇ, ಅಲ್ಲಿ ಮುಸ್ಲಿಂ ಅಥವಾ ಹಿಂದೂ ಅನ್ನೋ ಭೇದಭಾವ ಇರಬಾರದು. ಹಿಜಾಬ್‌ಗೆ ಅವಕಾಶ ಕೊಟ್ಟರೆ ಶಾಲೆಯ ಶಿಸ್ತು ಹಾಳಾಗುತ್ತದೆ ಎಂದು ಶ್ರೀರಾಮಸೇನೆ ಕಾರ್ಯಕರ್ತರು ಕಿಡಿಕಾರಿದ್ದಾರೆ. ಪ್ರತಿಭಟನೆಯಿಂದಾಗಿ ಹುಬ್ಬಳ್ಳಿಯ ರಾಯಣ್ಣ ವೃತ್ತದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಮುತಾಲಿಕ್ ಅವರು ಈ ಹೋರಾಟವನ್ನು ಕೇವಲ ರಸ್ತೆಗೆ ಸೀಮಿತಗೊಳಿಸದೆ, ಕಾನೂನು ಸಮರಕ್ಕೂ ತಯಾರಿ ನಡೆಸಿದ್ದಾರೆ. ಈ ಸರ್ಕಾರದ ಆದೇಶದ ವಿರುದ್ಧ ಆದಷ್ಟು ಬೇಗ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸುವುದಾಗಿ ಅವರು ಘೋಷಿಸಿದ್ದಾರೆ. 2022ರಲ್ಲಿ ನಡೆದಿದ್ದ ದೊಡ್ಡ ವಿವಾದ ಕೋರ್ಟ್ ಮೆಟ್ಟಿಲೇರಿ ಸುಪ್ರೀಂ ವರೆಗೂ ಹೋಗಿತ್ತು. ಈಗ ಮತ್ತೆ ಅದೇ ಹಾದಿಯಲ್ಲಿ ವಿವಾದ ಸಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಒಟ್ಟಿನಲ್ಲಿ, ರಾಜ್ಯದಲ್ಲಿ ತಣ್ಣಗಾಗಿದ್ದ ಹಿಜಾಬ್ ಕಿಚ್ಚಿಗೆ ಈಗ ಮತ್ತೆ ತುಪ್ಪ ಸುರಿದಂತಾಗಿದೆ. ಒಂದು ಕಡೆ ಸರ್ಕಾರದ ಸಮರ್ಥನೆ, ಇನ್ನೊಂದು ಕಡೆ ಹಿಂದೂ ಸಂಘಟನೆಗಳ “ಕೇಸರಿ ಶಾಲು” ಎಚ್ಚರಿಕೆ. ಈ ಸಂಘರ್ಷ ಎಲ್ಲಿಗೆ ಹೋಗಿ ನಿಲ್ಲುತ್ತೆ? ಶೈಕ್ಷಣಿಕ ವರ್ಷದ ಆರಂಭದಲ್ಲೇ ಈ ಗದ್ದಲ ವಿದ್ಯಾರ್ಥಿಗಳ ಓದಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋ ಆತಂಕ ಈಗ ಪೋಷಕರಲ್ಲಿ ಮನೆ ಮಾಡಿದೆ.



