No menu items!
10.4 C
Munich
Thursday, May 14, 2026

ಮೋದಿ ಮಾತು ಮೀರದ ಫಡ್ನವಿಸ್ ; ವಿಧಾನಭವನಕ್ಕೆ ಬೈಕ್ ಏರಿ ಬಂದ ಮಹಾರಾಷ್ಟ್ರ ಸಿಎಂ

Must read

ಜಾಗತಿಕ ಮಟ್ಟದಲ್ಲಿ ಪಶ್ಚಿಮ ಏಷ್ಯಾ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂಧನ ಉಳಿತಾಯ ಮತ್ತು ಆರ್ಥಿಕ ಶಿಸ್ತು ಕಾಪಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಇಂಧನ ಬಳಕೆ ಕಡಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಓಗೊಟ್ಟಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಸ್ವತಃ ಬೈಕ್ ಮೂಲಕ ಕಚೇರಿಗೆ ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ನಾಯಕರು ಮಾದರಿಯಾಗಿ ನಿಂತರೆ ಮಾತ್ರ ಜನರಲ್ಲಿ ಬದಲಾವಣೆ ತರಲು ಸಾಧ್ಯ ಎಂಬ ಸಂದೇಶವನ್ನು ಅವರು ಈ ಮೂಲಕ ರವಾನಿಸಿದ್ದಾರೆ.

ಮೋದಿಯವರ ಸಲಹೆ ಮತ್ತು ಸರ್ಕಾರದ ಸ್ಪಂದನೆ


ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದ ಯುದ್ಧದ ಕಿಚ್ಚಿನಿಂದ ಭಾರತದ ಆರ್ಥಿಕತೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಎದುರಿಸಲು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಸೂಚಿಸಿದ್ದರು. ಪೆಟ್ರೋಲ್-ಡೀಸೆಲ್ ಬಳಕೆ ಕಡಿಮೆ ಮಾಡುವುದು, ಮೆಟ್ರೋ ರೈಲು ಹಾಗೂ ಕಾರ್‌ಪೂಲಿಂಗ್‌ಗೆ ಆದ್ಯತೆ ನೀಡುವುದು, ಅನಗತ್ಯ ವಿದೇಶಿ ಪ್ರವಾಸಗಳನ್ನು ರದ್ದುಗೊಳಿಸುವುದು ಮತ್ತು ಸ್ವದೇಶಿ ಉತ್ಪನ್ನಗಳಿಗೆ ಒತ್ತು ನೀಡುವಂತೆ ಅವರು ಸಲಹೆ ನೀಡಿದ್ದರು. ಮೋದಿಯವರ ಈ ಸಲಹೆಯನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಸುದ್ದಿ ಮುಖ್ಯಾಂಶಗಳು:

*ಸರ್ಕಾರದ ಶಿಸ್ತು : ಇಂಧನ ಉಳಿಸಲು ಬೈಕ್ ಏರಿ ಕಚೇರಿಗೆ ಬಂದ ದೇವೇಂದ್ರ ಫಡ್ನವಿಸ್.

*ವಿದೇಶಿ ಪ್ರವಾಸ ರದ್ದು: ಸಚಿವರು ಮತ್ತು ಶಾಸಕರ ಲಂಡನ್, ಜಪಾನ್ ಪ್ರವಾಸಗಳಿಗೆ ಸರ್ಕಾರದಿಂದ ತಡೆ.

*ವೆಚ್ಚ ಕಡಿತಕ್ಕೆ ಒತ್ತು: ಸಚಿವರ ಕಾನ್ವಾಯ್ ಇಳಿಕೆ; ಮುಂದಿನ 6 ತಿಂಗಳು ಅಬ್ಬರದ ಸಮಾರಂಭಗಳಿಲ್ಲ.

*ಮೋದಿ ಮಂತ್ರ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಮಿತಬಳಕೆಗೆ ಪ್ರಧಾನಿ ಕರೆ

ಬೈಕ್ ಏರಿ ಬಂದ ನಾಯಕರು


ಮುಂಬೈನ ತಮ್ಮ ಅಧಿಕೃತ ನಿವಾಸ ‘ವರ್ಷಾ’ದಿಂದ ವಿಧಾನ ಭವನಕ್ಕೆ ಸಚಿವ ಆಶಿಶ್ ಶೇಲಾರ್ ಅವರೊಂದಿಗೆ ದೇವೇಂದ್ರ ಫಡ್ನವಿಸ್ ಬೈಕ್‌ನಲ್ಲಿ ಪ್ರಯಾಣ ಬೆಳೆಸಿದರು. ಇಂಧನ ಉಳಿತಾಯದ ಅಗತ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಇದೇ ಹಾದಿಯಲ್ಲಿ ಸಚಿವ ನಿತೇಶ್ ರಾಣೆ ಅವರು ಕೂಡ ಸಚಿವ ಸಂಪುಟ ಸಭೆಗೆ ನಡ್ಕೊಂಡೇ ಬರುವ ಮೂಲಕ ಆರ್ಥಿಕ ಶಿಸ್ತಿಗೆ ಒತ್ತು ನೀಡಿದ್ದಾರೆ. ಈ ಸರಳತೆ ಮತ್ತು ಶಿಸ್ತು ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ವಿದೇಶಿ ಪ್ರವಾಸಗಳಿಗೆ ಬಿತ್ತು ಬ್ರೇಕ್

ಸಂಪನ್ಮೂಲಗಳ ವಿವೇಚನಾಯುಕ್ತ ಬಳಕೆಗೆ ಮುಂದಾಗಿರುವ ಸರ್ಕಾರ, ಸಚಿವರು ಮತ್ತು ಅಧಿಕಾರಿಗಳ ಎಲ್ಲಾ ಮುಂದಿನ ವಿದೇಶಿ ಪ್ರವಾಸಗಳನ್ನು ರದ್ದುಗೊಳಿಸಿದೆ. ಅಗತ್ಯವಿದ್ದಲ್ಲಿ ಅಂತರಾಷ್ಟ್ರೀಯ ಸಭೆಗಳನ್ನು ವರ್ಚುವಲ್ ಅಥವಾ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲು ಸೂಚಿಸಲಾಗಿದೆ. ಪ್ರವಾಸೋದ್ಯಮ ಸಚಿವ ಶಂಭುರಾಜ್ ದೇಸಾಯಿ ಅವರ ಲಂಡನ್-ಪ್ಯಾರಿಸ್ ಪ್ರವಾಸ ಮತ್ತು ಶಾಸಕರ ಜಪಾನ್ ಅಧ್ಯಯನ ಪ್ರವಾಸಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ.

ಅನಗತ್ಯ ವೆಚ್ಚಗಳಿಗೆ ಕತ್ತರಿ


ಸಚಿವರ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಅರ್ಧಕ್ಕಿಳಿಸುವಂತೆ ಫಡ್ನವಿಸ್ ಸೂಚನೆ ನೀಡಿದ್ದಾರೆ. ಸಾರ್ವಜನಿಕ ಹಣದ ವ್ಯಯವನ್ನು ತಡೆಯಲು ಮುಂದಿನ 6 ತಿಂಗಳ ಕಾಲ ಯಾವುದೇ ದೊಡ್ಡ ಮಟ್ಟದ ಸರ್ಕಾರಿ ಆಚರಣೆ ಅಥವಾ ಕಾರ್ಯಕ್ರಮಗಳನ್ನು ನಡೆಸಬಾರದೆಂದು ತೀರ್ಮಾನಿಸಲಾಗಿದೆ. ಸಾತಾರಾದಲ್ಲಿ ನಡೆದ ಕಾರ್ಯಕ್ರಮವೇ ಸದ್ಯಕ್ಕೆ ಕೊನೆಯ ದೊಡ್ಡ ಸಮಾರಂಭವಾಗಿದ್ದು, ಇನ್ಮುಂದೆ ಸಂಪೂರ್ಣ ವೆಚ್ಚ ಕಡಿತಕ್ಕೆ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ.

- Advertisement -spot_img

More articles

- Advertisement -spot_img

Latest article