ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮತ್ತೆ ಬೆಲೆ ಬಿಸಿ: CNG ದರ ಕೆಜಿಗೆ ₹1 ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ
ನವದೆಹಲಿ: ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಸಿಎನ್ಜಿ ದರ ಏರಿಕೆಯ ಶಾಕ್ ನೀಡಿದೆ. ನೈಸರ್ಗಿಕ ಅನಿಲದ ಬೆಲೆಯನ್ನು ಮತ್ತೆ ಪ್ರತಿ ಕೆಜಿಗೆ 1 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಇದಕ್ಕೂ ಮೊದಲು ಎರಡು ದಿನಗಳ ಹಿಂದೆ ಸಿಎನ್ಜಿ ದರವನ್ನು 2 ರೂಪಾಯಿ ಏರಿಸಲಾಗಿತ್ತು. ಇದೀಗ ಕೇವಲ 48 ಗಂಟೆಗಳ ಅವಧಿಯಲ್ಲಿ ಎರಡನೇ ಬಾರಿಗೆ ದರ ಹೆಚ್ಚಳವಾಗಿರುವುದು ವಾಹನ ಚಾಲಕರ ಆತಂಕಕ್ಕೆ ಕಾರಣವಾಗಿದೆ.
ಹೊಸ ದರ ಅನ್ವಯ ರಾಷ್ಟ್ರ ರಾಜಧಾನಿ ನವದೆಹಲಿನಲ್ಲಿ ಪ್ರತಿ ಕೆಜಿ ಸಿಎನ್ಜಿ ಬೆಲೆ 80.09 ರೂಪಾಯಿಗೆ ತಲುಪಿದೆ. ಈ ಹಿಂದೆ 77.09 ರೂ. ಇದ್ದ ದರ ಮೊದಲು 79.09 ರೂ.ಗೆ ಏರಿಕೆಯಾಗಿದ್ದು, ಈಗ ಮತ್ತೆ 1 ರೂ. ಹೆಚ್ಚಳವಾಗಿದೆ.
ಸರ್ಕಾರಿ ತೈಲ ಕಂಪನಿಗಳ ಪ್ರಕಾರ, ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿನ ಅಸ್ಥಿರತೆ ಹಾಗೂ ಹೆಚ್ಚಿದ ಇನ್ಪುಟ್ ವೆಚ್ಚದ ಹಿನ್ನೆಲೆ ಸಿಎನ್ಜಿ ದರ ಪರಿಷ್ಕರಣೆ ಮಾಡಲಾಗಿದೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಕೆಯ ಪ್ರಮಾಣಕ್ಕೆ ಹೋಲಿಸಿದರೆ ಪ್ರಸ್ತುತ ದರ ಏರಿಕೆ ಅಲ್ಪಮಟ್ಟದಲ್ಲೇ ಇದೆ ಎಂದು ಮೂಲಗಳು ತಿಳಿಸಿವೆ.
ವಿವಿಧ ನಗರಗಳಲ್ಲಿ ಸಿಎನ್ಜಿ ದರ
• ಬೆಂಗಳೂರು – ₹90
• ನವದೆಹಲಿ – ₹80.09
• ನೋಯ್ಡಾ – ₹80.09
• ಗುರುಗ್ರಾಮ – ₹84.12
• ಮುಂಬೈ – ₹84
ಆಟೋ ಮತ್ತು ಕ್ಯಾಬ್ ಚಾಲಕರಿಗೆ ಹೆಚ್ಚಿದ ಸಂಕಷ್ಟ
ಸತತವಾಗಿ ಸಿಎನ್ಜಿ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಟೋ ಹಾಗೂ ಕ್ಯಾಬ್ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ನೈಸರ್ಗಿಕ ಅನಿಲ ದರ ಏರಿಕೆಯ ವಿರುದ್ಧ ವಿವಿಧ ಚಾಲಕರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದವು.
ಇಂಧನ ವೆಚ್ಚ ಹೆಚ್ಚುತ್ತಿರುವ ಕಾರಣ ಬಾಡಿಗೆ ದರವನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ ಎಂದು ಚಾಲಕರ ಸಂಘಟನೆಗಳು ಹೇಳಿವೆ.
ಬೆಂಗಳೂರುದಲ್ಲಿಯೂ ಆಟೋ ಚಾಲಕರ ಸಂಘಟನೆಗಳು ಮೀಟರ್ ದರ ಪರಿಷ್ಕರಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದು ಗಮನಾರ್ಹವಾಗಿದೆ.



