ಜುಲೈ 1ರಿಂದ CBSE ಶಾಲೆಗಳಲ್ಲಿ ಮೂರು ಭಾಷೆಗಳ ಅಧ್ಯಯನ ಕಡ್ಡಾಯ; ಹೊಸ ಶಿಕ್ಷಣ ನೀತಿ ಜಾರಿ
ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದಿಂದ CBSE 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.
ಜುಲೈ 1ರಿಂದ ಹೊಸ ನಿಯಮ ಜಾರಿಗೆ ಬರಲಿದ್ದು, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು R1, R2 ಮತ್ತು R3 ಎಂಬ ಮೂರು ಭಾಷೆಗಳನ್ನು ಕಡ್ಡಾಯವಾಗಿ ಕಲಿಯಬೇಕಾಗುತ್ತದೆ ಎಂದು ಸಿಬಿಎಸ್ಇ ತಿಳಿಸಿದೆ. ಈ ಮೂರು ಭಾಷೆಗಳ ಪೈಕಿ ಕನಿಷ್ಠ ಎರಡು ಭಾಷೆಗಳು ಸ್ಥಳೀಯ ಭಾರತೀಯ ಭಾಷೆಗಳಾಗಿರಬೇಕು ಎಂದು ಮಂಡಳಿ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳ ಮೇಲಿನ ಅಧ್ಯಯನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ, 10ನೇ ತರಗತಿ ಮಟ್ಟದಲ್ಲಿ R3 ಭಾಷೆಗೆ ಪ್ರತ್ಯೇಕ ಬೋರ್ಡ್ ಪರೀಕ್ಷೆ ನಡೆಸುವುದಿಲ್ಲ ಎಂದು ಸಿಬಿಎಸ್ಇ ಹೇಳಿದೆ.
ಹೊಸ ಭಾಷಾ ನೀತಿಯ ಪ್ರಕಾರ, ವಿದ್ಯಾರ್ಥಿಗಳು ವಿದೇಶಿ ಭಾಷೆಯನ್ನು ಆಯ್ಕೆಮಾಡಲು ಅವಕಾಶವಿದ್ದರೂ, ಉಳಿದ ಎರಡು ಭಾಷೆಗಳು ಸ್ಥಳೀಯ ಭಾರತೀಯ ಭಾಷೆಗಳಾಗಿರಬೇಕು. ಜೊತೆಗೆ, ವಿದೇಶಿ ಭಾಷೆಯನ್ನು ಹೆಚ್ಚುವರಿ ನಾಲ್ಕನೇ ಭಾಷೆಯಾಗಿ ಕಲಿಯುವ ಅವಕಾಶವೂ ಇರಲಿದೆ.
R3 ಭಾಷೆಯ ಮೌಲ್ಯಮಾಪನ ಸಂಪೂರ್ಣವಾಗಿ ಶಾಲಾ ಮಟ್ಟದಲ್ಲೇ ನಡೆಯಲಿದ್ದು, ಆಂತರಿಕ ಪರೀಕ್ಷೆಗಳ ಆಧಾರದಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಅಂಕೀಕರಿಸಲಾಗುತ್ತದೆ. ಈ ಭಾಷೆಯಲ್ಲಿನ ಸಾಧನೆಯನ್ನು ಸಿಬಿಎಸ್ಇ ಪ್ರಮಾಣಪತ್ರದಲ್ಲೂ ದಾಖಲಿಸಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.
R3 ಭಾಷೆಯ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯನ್ನು 10ನೇ ತರಗತಿ ಬೋರ್ಡ್ ಪರೀಕ್ಷೆಯಿಂದ ನಿರ್ಬಂಧಿಸಲಾಗುವುದಿಲ್ಲ ಎಂದು ಸಿಬಿಎಸ್ಇ ಸ್ಪಷ್ಟಪಡಿಸಿದೆ. ಜೊತೆಗೆ, ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಸ್ಥಳೀಯ ಭಾರತೀಯ ಭಾಷಾ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿರುವ ಶಾಲೆಗಳು ಅಂತರ-ಶಾಲಾ ಸಂಪನ್ಮೂಲ ಹಂಚಿಕೆ, ಆನ್ಲೈನ್ ಅಥವಾ ಹೈಬ್ರಿಡ್ ತರಗತಿಗಳು, ನಿವೃತ್ತ ಶಿಕ್ಷಕರ ಸೇವೆ ಹಾಗೂ ಅರ್ಹ ಪದವೀಧರರ ನೆರವನ್ನು ಬಳಸಿಕೊಳ್ಳಬಹುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಪರಿಷ್ಕೃತ ಭಾಷಾ ನೀತಿ ಹಾಗೂ ಪಠ್ಯಸಾಮಗ್ರಿಗಳ ಬಳಕೆಗೆ ಸಂಬಂಧಿಸಿದ ಸಂಪೂರ್ಣ ಮಾರ್ಗಸೂಚಿಗಳನ್ನು ಜೂನ್ 15, 2026ರೊಳಗೆ ಬಿಡುಗಡೆ ಮಾಡಲಾಗುವುದು ಎಂದು ಸಿಬಿಎಸ್ಇ ತಿಳಿಸಿದೆ.



