ಕರ್ನಾಟಕ ಯುವ ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೆ ದೊಡ್ಡದೊಂದು ಆಪರೇಷನ್ ನಡೆದಿದೆ. ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಆಕ್ಟಿವ್ ಆಗಿರದೆ, ಕೇವಲ ಹೆಸರಿಗೆ ಮಾತ್ರ ಹುದ್ದೆ ಹಿಡಿದುಕೊಂಡು ಓಡಾಡುತ್ತಿದ್ದ ಲೀಡರ್‌ಗಳಿಗೆ ಹೈಕಮಾಂಡ್ ಭರ್ಜರಿ ಶಾಕ್ ಕೊಟ್ಟಿದೆ. ಕರ್ತವ್ಯ ಲೋಪ ಹಾಗೂ ನಿಷ್ಕ್ರಿಯತೆಯ ಆರೋಪದ ಮೇಲೆ ರಾಜ್ಯ ಉಪಾಧ್ಯಕ್ಷೆ, ಎಂಟು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಬರೋಬ್ಬರಿ 15 ಪದಾಧಿಕಾರಿಗಳನ್ನು ಏಕಾಏಕಿ ಹುದ್ದೆಯಿಂದ ವಜಾ ಮಾಡಲಾಗಿದೆ. ಭಾರತೀಯ ಯುವ ಕಾಂಗ್ರೆಸ್ ತೆಗೆದುಕೊಂಡಿರುವ ಈ ದಿಢೀರ್ ನಿರ್ಧಾರ ಈಗ ಕೈ ಪಡೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.
ಯುವ ಕಾಂಗ್ರೆಸ್ ಪದಾಧಿಕಾರಿಗಳಾಗಿ ಆಯ್ಕೆಯಾದ ಮೇಲೆ ಸಂಘಟನೆಯನ್ನು ಬಲಪಡಿಸಬೇಕು, ಜನಪರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಮತ್ತು ಕಡ್ಡಾಯವಾಗಿ ನಡೆಯುವ ಸಭೆಗಳಿಗೆ ಹಾಜರಾಗಬೇಕು ಎಂಬ ಕಡಕ್ ರೂಲ್ಸ್ ಇದೆ. ಆದರೆ ವಜಾಗೊಂಡಿರುವ ಈ 15 ನಾಯಕರು ಕಳೆದ ಕೆಲವು ಸಮಯದಿಂದ ಸಂಘಟನೆಯ ಯಾವುದೇ ಕೆಲಸಗಳಿಗೂ ಬರುತ್ತಿರಲಿಲ್ಲವಂತೆ. ಕೇವಲ ಹುದ್ದೆಗಳನ್ನು ಮೈಮೇಲೆ ಹಾಕಿಕೊಂಡು ನಿಷ್ಕ್ರಿಯರಾಗಿದ್ದ ಇವರ ಕಂಪ್ಲೀಟ್ ರಿಪೋರ್ಟ್ ಹೈಕಮಾಂಡ್ ಕೈ ಸೇರಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ನಾಯಕರು, ತಕ್ಷಣದಿಂದಲೇ ಜಾರಿಗೆ ಬರುವಂತೆ ಇವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮೇ 13 ರಂದೇ ಭಾರತೀಯ ಯುವ ಕಾಂಗ್ರೆಸ್ ಈ ಸಂಬಂಧ ಅಧಿಕೃತ ನೋಟಿಸ್ ಜಾರಿ ಮಾಡಿದ್ದು, ಅದರಲ್ಲಿ ಅತ್ಯಂತ ಕಠಿಣ ಸಂದೇಶ ರವಾನಿಸಿದೆ. ಈ ಪತ್ರದ ಮೂಲಕ ಔಪಚಾರಿಕವಾಗಿ ನಿಮಗೆ ಸೂಚನೆ ನೀಡಲಾಗುತ್ತಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಮ್ಮನ್ನು ಅಮಾನತಿನಲ್ಲಿಡಲಾಗಿದೆ. ಅಲ್ಲದೆ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಡಿಯಲ್ಲಿ ನಿಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳಿಂದ ನಿಮ್ಮನ್ನು ತಾತ್ಕಾಲಿಕವಾಗಿ ಮುಕ್ತಗೊಳಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.
ಈ ವಜಾ ಪಟ್ಟಿಯಲ್ಲಿ ದೊಡ್ಡ ದೊಡ್ಡ ತಲೆಗಳೇ ಉರುಳಿವೆ. ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆಯಾಗಿದ್ದ ದೀಪಿಕಾ ರೆಡ್ಡಿ ಅವರ ಜವಾಬ್ದಾರಿಯನ್ನೇ ಕಿತ್ತುಕೊಳ್ಳಲಾಗಿದೆ. ಇವರ ಜೊತೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಸಿ.ಎಸ್. ಫ್ರಾನ್ಸಿಸ್ ಬೆನಿಟೊ, ಬಿಂದು ಗೌಡ, ಸುಮನ್ ಸೋಮಶೇಖರ್, ಅಫ್ನಾನಖಾನಂ, ಲಕ್ಷ್ಮಿ ಕೆ, ವಾಣಿ ಕಾಂಬ್ಳೆ ಮತ್ತು ದಕ್ಷಿಣಮೂರ್ತಿ ಎಸ್ ಅವರನ್ನು ಕೂಡ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಹೆಸರಿಗೆ ದೊಡ್ಡ ಪೋಸ್ಟ್ ಇಟ್ಟುಕೊಂಡು ಕೆಲಸ ಮಾಡದಿದ್ದರೆ ಯಾರನ್ನೂ ಬಿಡಲ್ಲ ಅನ್ನೋ ಸಂದೇಶವನ್ನು ಈ ಮೂಲಕ ರವಾನಿಸಲಾಗಿದೆ.
ಇಷ್ಟೇ ಅಲ್ಲದೆ, ಕೆಳಮಟ್ಟದಲ್ಲಿ ಸಂಘಟನೆ ಮಾಡಬೇಕಿದ್ದ ರಾಜ್ಯ ಕಾರ್ಯದರ್ಶಿಗಳಿಗೂ ಹೈಕಮಾಂಡ್ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ರಾಜ್ಯ ಕಾರ್ಯದರ್ಶಿಗಳಾಗಿದ್ದ ಅಬ್ದುಲ್ ರವೂಫ್ ಬಿ.ಎಂ., ಸೈಯದ್ ಹುಸೇನ್ ಖಾದ್ರಿ, ಮೊಹಮ್ಮದ್ ಆಸಿಫ್ ಹುಸೇನ್, ಎಸ್.ಆರ್.ಎಸ್ ಚಂದ್ ಬಾಷಾ, ಗೋವರ್ಧನ್ ಜಿ.ಸಿ., ಪವನ್ ಸಾಲಿಯಾನ್ ಮತ್ತು ನವೀನ್ ಕುಮಾರ್ ಎಸ್ ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ಮುಂದಿನ ಪರಾಮರ್ಶೆಯವರೆಗೆ ಈ ಯಾವುದೇ ಪದಾಧಿಕಾರಿಗಳು ಸಂಘಟನೆಯ ಹೆಸರಿನಲ್ಲಿ ಅಧಿಕಾರ ಚಲಾಯಿಸುವಂತಿಲ್ಲ ಎಂದು ದೆಹಲಿ ನಾಯಕರು ಖಡಕ್ ಆಗಿ ಹೇಳಿದ್ದಾರೆ.
ಭಾರತೀಯ ಯುವ ಕಾಂಗ್ರೆಸ್‌ನ ಪ್ರಮುಖ ನಾಯಕರಾದ ನಿಗಮ್ ಭಂಡಾರಿ, ಶ್ರೀನಿವಾಸ್ ರಾಥೋಡ್, ತಾರಿಖ್ ಬಾಗ್ವಾನ್ ಮತ್ತು ಮಂಜುನಾಥ್ ಎಚ್.ಎಸ್. ಅವರು ಜಂಟಿಯಾಗಿ ಈ ಅಮಾನತು ಆದೇಶದ ಪತ್ರಕ್ಕೆ ಸಹಿ ಹಾಕಿದ್ದಾರೆ. ಸಂಘಟನೆಯಲ್ಲಿ ಶಿಸ್ತು ಕಾಪಾಡುವ ಸಲುವಾಗಿ ಮತ್ತು ಮುಂಬರುವ ದಿನಗಳಲ್ಲಿ ಯುವ ಕಾಂಗ್ರೆಸ್ ಅನ್ನು ಮತ್ತಷ್ಟು ಚುರುಕುಗೊಳಿಸುವ ದೃಷ್ಟಿಯಿಂದ ಈ ಕಠಿಣ ನಿರ್ಧಾರ ತಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ದಿಢೀರ್ ಬೆಳವಣಿಗೆಯಿಂದಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದಲ್ಲಿ ಒಮ್ಮೆಲೇ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕೇವಲ ಹೆಸರಿಗಷ್ಟೇ ಸೀಮಿತವಾಗಿ, ಪಕ್ಷದ ಕೆಲಸಗಳಿಗೆ ಬಾರದೇ ಇರುವ ಇತರ ಲೀಡರ್‌ಗಳಿಗೂ ಇದೊಂದು ನೇರ ಮತ್ತು ಖಡಕ್ ಎಚ್ಚರಿಕೆಯ ಸಂದೇಶ ಎಂದೇ ವಿಶ್ಲೇಷಿಸಲಾಗುತ್ತಿದೆ.



