No menu items!
11.9 C
Munich
Wednesday, May 20, 2026

ರಾಜಸ್ಥಾನದ ‘ವೈಭವ’ಕ್ಕೆ ಕಂಗಾಲಾದ ಲಕ್ನೋ ; ಪ್ಲೇಆಫ್‌ಗೆ ಇನ್ನೊಂದೇ ಹೆಜ್ಜೆ ಬಾಕಿ

Must read

ರಾಜಸ್ಥಾನ್ ರಾಯಲ್ಸ್ ತವರು ಮೈದಾನ ಜೈಪುರ್ ಸಿಡಿಲಬ್ಬರದ ಬ್ಯಾಟಿಂಗ್ ರನ್‌ ಚೇಸಿಂಗ್‌ಗೆ ಸಾಕ್ಷಿಯಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ನೀಡಿದ್ದ 221 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್, ಇನ್ನು 5 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್‌ಆರ್ ಪಡೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದು, ಪ್ಲೇಆಫ್ ಹಂತ ತಲುಪಲು ಇನ್ನು ಕೇವಲ ಒಂದೇ ಒಂದು ಹೆಜ್ಜೆ ಬಾಕಿಯಿದೆ. ಮುಂಬರುವ ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಗೆದ್ದರೆ ರಾಜಸ್ಥಾನ್ ಟಾಪ್-4 ಸ್ಥಾನ ಅಧಿಕೃತವಾಗಿ ಫಿಕ್ಸ್ ಆಗಲಿದೆ.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ, ರಾಜಸ್ಥಾನ್ ಬೌಲರ್‌ಗಳನ್ನು ಮನಸೋಇಚ್ಛೆ ದಂಡಿಸಿತು. ಲಕ್ನೋ ಪರ ಬ್ಯಾಟಿಂಗ್ ಅಖಾಡಕ್ಕಿಳಿದ ಮಿಚೆಲ್ ಮಾರ್ಷ್ ಸಿಕ್ಸರ್ ಮತ್ತು ಫೋರ್‌ಗಳ ಮಳೆಯನ್ನೇ ಸುರಿಸಿದರು. ಜೋಶ್ ಇಂಗ್ಲೀಸ್ ಜೊತೆಗೂಡಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಮಾರ್ಷ್, ಕೇವಲ 50 ಎಸೆತಗಳಲ್ಲಿ ಬರೋಬ್ಬರಿ 109 ರನ್‌ಗಳ ಜೊತೆಯಾಟ ಆಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಜೋಶ್ ಇಂಗ್ಲೀಸ್ 29 ಎಸೆತಗಳಲ್ಲಿ 60 ರನ್ ಚಚ್ಚಿದರೆ, ನಾಯಕ ರಿಷಭ್ ಪಂತ್ 23 ಎಸೆತಗಳಲ್ಲಿ 35 ರನ್ ಸಿಡಿಸಿದರು.

ಒಂದು ಹಂತದಲ್ಲಿ ಲಕ್ನೋ ಪರ ಸೆಂಚುರಿ ಬಾರಿಸುವ ಮುನ್ಸೂಚನೆ ನೀಡಿದ್ದ ಮಿಚೆಲ್ ಮಾರ್ಷ್, ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು. 57 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 96 ರನ್ ಗಳಿಸಿ ಔಟಾದರು. ಪರಿಣಾಮ ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ರಾಜಸ್ಥಾನ್ ಪರ ಯಶ್ ರಾಜ್ 2 ವಿಕೆಟ್ ಹಾಗೂ ಜೋಫ್ರಾ ಆರ್ಚರ್ 1 ವಿಕೆಟ್ ಪಡೆದು ಗಮನ ಸೆಳೆದರು.

ಬಳಿಕ 221 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಜೋಡಿ ಸ್ಫೋಟಕ ಆರಂಭ ಒದಗಿಸಿತು. ಇಬ್ಬರು ಯುವ ದಾಂಡಿಗರ ಅಬ್ಬರಕ್ಕೆ ಲಕ್ನೋ ಬೌಲರ್‌ಗಳು ತಬ್ಬಿಬ್ಬಾದರು. ಆರಂಭದಿಂದಲೇ ಬೌಂಡರಿ, ಸಿಕ್ಸರ್‌ಗಳ ಆಟವಾಡಿದ ಈ ಜೋಡಿ ಪವರ್‌ಪ್ಲೇ ಅವಧಿಯಲ್ಲೇ ತಂಡದ ಮೊತ್ತವನ್ನು 71 ರನ್‌ಗಳಿಗೆ ತಲುಪಿಸಿತು. ಈ ಹಂತದಲ್ಲಿ ಯಶಸ್ವಿ ಜೈಸ್ವಾಲ್ 23 ಎಸೆತಗಳಲ್ಲಿ 43 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಆ ನಂತರ ವೈಭವ್ ಸೂರ್ಯವಂಶಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಮೂಲಕ ಅಸಲಿ ಆರ್ಭಟ ಶುರು ಮಾಡಿದರು. ಲಕ್ನೋ ಬೌಲರ್‌ಗಳ ಲೆಕ್ಕಾಚಾರವನ್ನು ಸಂಪೂರ್ಣವಾಗಿ ಉಲ್ಟಾ ಮಾಡಿದ ವೈಭವ್, ಕೇವಲ 23 ಎಸೆತಗಳಲ್ಲಿ ಬಿರುಗಾಳಿಯ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬಳಿಕವೂ ಇವರ ಬ್ಯಾಟಿಂಗ್ ಅಬ್ಬರ ಕಮ್ಮಿಯಾಗಲಿಲ್ಲ. ಲಕ್ನೋ ಬೌಲಿಂಗ್ ಲೈನ್‌ಅಪ್ ಅನ್ನು ಮನಬಂದಂತೆ ಚಚ್ಚಿದ ವೈಭವ್ ಕೇವಲ 38 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಹಾಗೂ 7 ಫೋರ್‌ಗಳೊಂದಿಗೆ 93 ರನ್ ಸಿಡಿಸಿದರು.

ಶತಕದ ಸನಿಹದಲ್ಲಿದ್ದಾಗ ಭರ್ಜರಿ ಹೊಡೆತಕ್ಕೆ ಕೈಹಾಕಿದ ವೈಭವ್ ಸೂರ್ಯವಂಶಿ ಕ್ಯಾಚ್ ನೀಡಿ ಔಟಾದರು. ಕೇವಲ 7 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡರೂ, ಅವರು ಔಟಾಗುವಷ್ಟರಲ್ಲೇ 14 ಓವರ್‌ಗಳಲ್ಲಿ ರಾಜಸ್ಥಾನ್ ಸ್ಕೋರ್ 180 ರನ್‌ ದಾಟುವಂತೆ ನೋಡಿಕೊಂಡಿದ್ದರು. ಲಕ್ನೋ ಪರ ಆಕಾಶ್ ಸಿಂಗ್ ಮತ್ತು ಮೊಹ್ಸಿನ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರಾದರೂ ರನ್ ಹರಿವಿಗೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ.

ವೈಭವ್ ಸೂರ್ಯವಂಶಿ ನಿರ್ಗಮನದ ಬಳಿಕ ಧ್ರುವ್ ಜುರೆಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಲಕ್ನೋ ಬೌಲರ್‌ಗಳ ಸವಾಲನ್ನು ಸಮರ್ಥವಾಗಿ ಎದುರಿಸಿದ ಜುರೆಲ್ 38 ಎಸೆತಗಳಲ್ಲಿ ಅಜೇಯ 53 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿ ರೋಚಕ ಜಯ ದಾಖಲಿಸಿತು. ಈ ಭರ್ಜರಿ ಗೆಲುವಿನಿಂದಾಗಿ ರಾಜಸ್ಥಾನ್ ತಂಡದ ಪ್ಲೇಆಫ್ ಹಾದಿ ಈಗ ಅತ್ಯಂತ ಸುಲಭವಾಗಿದೆ.

- Advertisement -spot_img

More articles

- Advertisement -spot_img

Latest article