No menu items!
12.1 C
Munich
Wednesday, May 20, 2026

ದೇವರಿದ್ದಾನೆ,ಹುಷಾರಾಗಿರಿ..ನಿಮ್ಮ ನಗು ತುಂಬಿದ ಸಂಸಾರವನ್ನು ಆತ ನಾಶ ಮಾಡದೇ ಬಿಡಲ್ಲ-ದಿಲೀಪ್ ರಾಜ್ ಪತ್ನಿ ಕಣ್ಣೀರು

Must read

ಕಿರುತೆರೆಯ ಜನಪ್ರಿಯ ನಟ, ನಿರ್ಮಾಪಕ ದಿಲೀಪ್ ರಾಜ್ ಹಠಾತ್ ಸಾವನ್ನಪ್ಪಿ ಒಂದು ವಾರವಾಗುತ್ತಾ ಬರ್ತಿದೆ. ಆದರೆ ಆ ಕರಾಳ ನೆನಪು ಮತ್ತು ಆಘಾತದಿಂದ ಹೊರಬರಲು ಕನ್ನಡಿಗರಿಗೆ ಇನ್ನು ಸಾಧ್ಯವಾಗುತ್ತಿಲ್ಲ. ಸೋಶಿಯಲ್ ಮೀಡಿಯಾ ತೆರೆದರೆ ಸಾಕು ದಿಲೀಪ್ ಅವರ ಫೋಟೋಗಳು, ಹಳೆಯ ವಿಡಿಯೋಗಳೇ ಕಣ್ಣಿಗೆ ರಾಚುತ್ತಿವೆ. ಅಷ್ಟು ನಗುನಗುತ್ತಾ ಇದ್ದ ಒಳ್ಳೆ ಮನುಷ್ಯನನ್ನು ಆ ದೇವರು ಇಷ್ಟು ಬೇಗ ಯಾಕೆ ಕರೆದುಕೊಂಡ? ಎಂದು ಆಪ್ತರು, ಅಭಿಮಾನಿಗಳು ಇಂದಿಗೂ ಮರುಗುತ್ತಿದ್ದಾರೆ. ಆದರೆ ಇವೆಲ್ಲದರ ನಡುವೆ, ಪತಿಯನ್ನು ಕಳೆದುಕೊಂಡು ಕತ್ತಲಲ್ಲಿ ನಿಂತಿರುವ ಪತ್ನಿ ಶ್ರೀವಿದ್ಯಾ ಹಾಗೂ ಮಕ್ಕಳ ಒಡಲಾಳದ ದುಃಖ ಮಾತ್ರ ಯಾರೂ ಊಹಿಸಲು ಸಾಧ್ಯವಿಲ್ಲದ ಮಟ್ಟದಲ್ಲಿದೆ.

ದಿಲೀಪ್ ರಾಜ್ ಹಾಗೂ ಶ್ರೀವಿದ್ಯಾ ಅವರದ್ದು ಅಪ್ಪಟ ಪ್ರೇಮದ ಸಂಸಾರ. ಕಾಲೇಜು ದಿನಗಳಲ್ಲೇ ದಿಲೀಪ್ ಅವರ ಅಭಿನಯಕ್ಕೆ ಫ್ಯಾನ್ ಆಗಿದ್ದ ಶ್ರೀವಿದ್ಯಾ, ನಂತರ ಗೆಳೆಯರ ಮೂಲಕ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದರು. ಪೋಷಕರ ವಿರೋಧದ ನಡುವೆಯೂ ಬಹಳ ಚಿಕ್ಕ ವಯಸ್ಸಿನಲ್ಲೇ ಇಬ್ಬರೂ ಮದುವೆಯಾಗಿ ಒಂದಾಗಿದ್ದರು. ಮದುವೆಯ ಹೊಸತರಲ್ಲಿ ದಿಲೀಪ್ ರಾಜ್ ಸಿನಿಮಾಗಾಗಿ ಧಾರಾವಾಹಿಗಳನ್ನು ಬಿಟ್ಟು, ಸತತ ಎರಡೂವರೆ ವರ್ಷಗಳ ಕಾಲ ಯಾವುದೇ ಆದಾಯವಿಲ್ಲದೆ ಕಷ್ಟಪಟ್ಟಾಗ ಇಡೀ ಸಂಸಾರವನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ್ದು ಇದೇ ಶ್ರೀವಿದ್ಯಾ. ಪತ್ನಿಯ ಆ ತ್ಯಾಗವನ್ನು ದಿಲೀಪ್ ಕೊನೆಯ ಉಸಿರಿರುವವರೆಗೂ ನೆನೆಯುತ್ತಿದ್ದರು.

ಇದೇ ಬರುವ ನವೆಂಬರ್ ತಿಂಗಳಲ್ಲಿ ಈ ದಂಪತಿ ತಮ್ಮ 25ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದರು. ಆದರೆ ವಿಧಿ ಅಟ್ಟಹಾಸ ಮೆರೆದು ಎಲ್ಲವನ್ನೂ ಕಿತ್ತುಕೊಂಡಿದೆ. ದಿಲೀಪ್ ಅವರ ಅಂತಿಮ ಸಂಸ್ಕಾರದ ವೇಳೆ ಪತಿಯ ಶವದ ಮುಂದೆ ನಿಂತು, 25ನೇ ವರ್ಷದ ಆನಿವರ್ಸರಿಗೆ ನನಗೆ ತುಂಬಾ ಒಳ್ಳೆ ಗಿಫ್ಟ್ ಕೊಟ್ಟೆ ಅಲ್ವಾ ನೀನು? ಎಂದು ಶ್ರೀವಿದ್ಯಾ ಗೋಳಾಡಿದ ದೃಶ್ಯ ಅಲ್ಲಿದ್ದ ಪ್ರತಿಯೊಬ್ಬರ ಕರುಳು ಹಿಂಡುವಂತಿತ್ತು. ಸದ್ಯ ಈ ದುಃಖದ ಮಡುವಿನಲ್ಲೇ ಶ್ರೀವಿದ್ಯಾ ಅವರು ದೇವರ ವಿರುದ್ಧ ಆಕ್ರೋಶ ಹೊರಹಾಕಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಹಲವರನ್ನು ಭಾವುಕವನ್ನಾಗಿಸಿದೆ.

ತಮ್ಮ ಮನಸ್ಸಿನಲ್ಲಿ ಮಡುಗಟ್ಟಿರುವ ತೀವ್ರ ಆಕ್ರೋಶ ಮತ್ತು ನೋವನ್ನು ಶ್ರೀವಿದ್ಯಾ ಹಂಚಿಕೊಂಡಿದ್ದು, “ನನಗೆ ಈಗಿನ ಪರಿಸ್ಥಿತಿ ನೋಡಿ ಏನನಿಸುತ್ತಿದೆ ಎಂದರೆ, ಒಂದು ಸಂಸಾರ ಅಂದಮೇಲೆ ಗಂಡ ಹೆಂಡತಿಯನ್ನು ಯಾವಾಗಲೂ ಹೊಡೆಯುತ್ತಿರಬೇಕು, ಕುಡಿದು ಬಂದು ಗಲಾಟೆ ಮಾಡುತ್ತಿರಬೇಕು. ಹೆಂಡತಿ ಯಾವತ್ತೂ ಗಂಡನನ್ನೇ ದೂಷಿಸುತ್ತಿರಬೇಕು. ಮಕ್ಕಳು ತಂದೆ-ತಾಯಿಗೆ ಗೌರವ ಕೊಡಬಾರದು, ಹೆತ್ತವರೂ ಮಕ್ಕಳನ್ನು ಬೈಯುತ್ತಲೇ ಇರಬೇಕು. ಮನೆಯಲ್ಲಿ ಶಾಂತಿ, ನೆಮ್ಮದಿ ಅನ್ನೋದೇ ಇರಬಾರದು, ಒಬ್ಬರಿಗೊಬ್ಬರು ಕಿತ್ತಾಡಿಕೊಂಡೇ ಇರಬೇಕು! ಯಾಕೆಂದರೆ ಹುಷಾರ್, ಅಲ್ಲಿ ಒಬ್ಬ ದೇವರಿದ್ದಾನೆ!” ಎಂದಿದ್ದಾರೆ.

ಮುಂದುವರಿದು ದೇವರ ಅಸ್ತಿತ್ವ ಪ್ರಶ್ನಿಸಿರುವ ಶ್ರೀವಿದ್ಯಾ, “ಯಾರ ಮನೆ ಚೆನ್ನಾಗಿದೆಯೋ, ಎಲ್ಲರ ಮುಖದಲ್ಲೂ ಯಾವಾಗಲೂ ನಗು ಇರುತ್ತದೆಯೋ, ಯಾರು ತುಂಬಾ ಖುಷಿಯಿಂದ ಬದುಕುತ್ತಿರುತ್ತಾರೋ… ಅಂಥವರ ಮನೆಯ ಮೇಲೆ ಆ ದೇವನ ಕಣ್ಣು ಯಾವಾಗಲೂ ಬಿದ್ದಿರುತ್ತದೆ. ದೇವರಿದ್ದಾನೆ ಹುಷಾರಾಗಿರಿ, ಅವನು ನಿಮ್ಮ ಸುಂದರ ಸಂಸಾರವನ್ನು ಖಂಡಿತವಾಗಿಯೂ ಬಿಡುವುದಿಲ್ಲ. ಅದನ್ನು ಸಂಪೂರ್ಣವಾಗಿ ನಾಶ ಮಾಡದೇ ಬಿಡಲ್ಲ!” ಎಂದು ಕಣ್ಣೀರು ಹಾಕಿದ್ದಾರೆ.

ಶ್ರೀವಿದ್ಯಾ ಅವರ ಈ ಕಣ್ಣೀರಿನ ಪೋಸ್ಟ್‌ಗೆ ಸಾವಿರಾರು ನೆಟ್ಟಿಗರು ಕರಗಿ ಕಮೆಂಟ್ ಮಾಡುತ್ತಿದ್ದಾರೆ. “ನೀವು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ ಮೇಡಂ. ಇದು ಪಾಪಿಗಳ ಕಾಲ, ಇಲ್ಲಿ ಒಳ್ಳೆಯವರಿಗೆ ಜಾಗವಿಲ್ಲ. ತಪ್ಪು ಕೆಲಸ ಮಾಡಿ ಇನ್ನೊಬ್ಬರ ಮನೆ ಹಾಳು ಮಾಡುವವರನ್ನು ದೇವರು ಆರಾಮಾಗಿ ಇಟ್ಟಿರುತ್ತಾನೆ, ಆದರೆ ಹೆಂಡತಿ ಮಕ್ಕಳನ್ನು ಜೀವ ಮುಕ್ಕಿ ನೋಡಿಕೊಳ್ಳುವ ದಿಲೀಪ್ ಸರ್ ಅವರಂತಹ ಮಹಾತ್ಮರನ್ನು ಬೇಗ ಎತ್ತಿಕೊಂಡು ಬಿಡುತ್ತಾನೆ. ಧೈರ್ಯವಾಗಿರಿ ಮೇಡಂ, ಸರ್ ನಿಮ್ಮ ನೆನಪುಗಳಲ್ಲಿ ಸದಾ ಇರುತ್ತಾರೆ” ಎಂದು ಅಭಿಮಾನಿಗಳು ಸಾಂತ್ವನ ಹೇಳುತ್ತಿದ್ದಾರೆ.

ಇತ್ತೀಚೆಗಷ್ಟೇ ದಿಲೀಪ್ ರಾಜ್ ಅವರ 16 ವರ್ಷದ ಮಗಳು ಧೃತಿ ಕೂಡ ಅಪ್ಪನ ಬಗ್ಗೆ ಅತ್ಯಂತ ಭಾವುಕವಾಗಿ ಬರೆದುಕೊಂಡಿದ್ದಳು. “ನನ್ನ ಜೀವನದ ಈ 16 ವರ್ಷಗಳಲ್ಲಿ ನಾನು ನೋಡಿದ ಅತ್ಯಂತ ಶ್ರೇಷ್ಠ ವ್ಯಕ್ತಿ ನೀನು ಅಪ್ಪಾ. ನೀನಿಲ್ಲದೆ ನಾನು ಮುಂದೆ ಒಬ್ಬ ನಟಿಯಾಗುವುದು ಹೇಗೆ ಎಂದು ಊಹಿಸಿಕೊಳ್ಳಲೂ ನನಗೆ ಸಾಧ್ಯವಾಗುತ್ತಿಲ್ಲ. ನಾನು ಎಂದಾದರೂ ದೊಡ್ಡ ನಟಿಯಾಗಿ ಬೆಳೆದರೆ ನಿನ್ನ ಹೆಸರನ್ನು ನನ್ನೊಂದಿಗೆ ಹೆಮ್ಮೆಯಿಂದ ಹೊತ್ತು ಸಾಗುತ್ತೇನೆ. ನಮ್ಮಿಬ್ಬರ ಹೆಸರಿನ ಮೊದಲ ಅಕ್ಷರಗಳು (DR – ದಿಲೀಪ್ ರಾಜ್, ಧೃತಿ ರಾಜ್) ಒಂದೇ. ನಿನ್ನನ್ನು ಎಂದಿಗೂ ಮರೆಯಲ್ಲ ಅಪ್ಪಾ” ಎಂದು ತಂದೆಯ ಸಾವಿನ ನೋವನ್ನು ತೋಡಿಕೊಂಡಿದ್ದರು.

- Advertisement -spot_img

More articles

- Advertisement -spot_img

Latest article