No menu items!
15 C
Munich
Saturday, June 13, 2026

ತಾಲಿಬಾನ್ ನಂಟು ಸಾಬೀತು: ಆರೋಪಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

Must read

ತಾಲಿಬಾನ್ ನಂಟು ಸಾಬೀತು: ಆರೋಪಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಬೆಂಗಳೂರು: ನಿಷೇಧಿತ ತಾಲಿಬಾನ್ ಹಾಗೂ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸಂಘಟನೆಗಳ ಸದಸ್ಯರೊಂದಿಗೆ ಸಂಪರ್ಕ ಹೊಂದಿ ಯುವಕರನ್ನು ಉಗ್ರ ಸಂಘಟನೆಗಳಿಗೆ ನೇಮಕ ಮಾಡುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಮಹಾರಾಷ್ಟ್ರ ಮೂಲದ ಹಮ್ರಾಜ್ ವೋರ್ಷಿದ್ ಶೇಕ್ಗೆ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಇದಲ್ಲದೆ ಆರೋಪಿಗೆ 63 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. 2023ರ ಏಪ್ರಿಲ್ನಲ್ಲಿ ಹಮ್ರಾಜ್ ವೋರ್ಷಿದ್ ಶೇಕ್ ಹಾಗೂ ಮೊಹಮ್ಮದ್ ಆರೀಫ್ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ರಾಷ್ಟ್ರೀಯ ತನಿಖಾ ದಳ (NIA), ತನಿಖೆ ನಡೆಸಿ ಅದೇ ವರ್ಷದ ಅಕ್ಟೋಬರ್ನಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯ, ಆರೋಪಿಗಳ ಪೈಕಿ ಹಮ್ರಾಜ್ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆ ಶಿಕ್ಷೆ ಪ್ರಕಟಿಸಿದೆ. ಇತರ ಆರೋಪಿಗಳ ವಿರುದ್ಧದ ವಿಚಾರಣೆ ಇನ್ನೂ ಮುಂದುವರಿದಿದೆ.
ತನಿಖೆ ವೇಳೆ, 2019ರಿಂದ 2022ರವರೆಗೆ ಸೌದಿ ಅರೇಬಿಯಾದಲ್ಲಿದ್ದ ಹಮ್ರಾಜ್, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಮೂಲದ ಕೆಲ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿದ್ದನು ಎಂಬುದು ಬಹಿರಂಗವಾಗಿದೆ. ಈ ಸಂಪರ್ಕದ ಮೂಲಕ ಆತ ತಾಲಿಬಾನ್ ಹಾಗೂ ಟಿಟಿಪಿ ಉಗ್ರ ಸಂಘಟನೆಗಳ ಸಿದ್ಧಾಂತಗಳಿಂದ ಪ್ರಭಾವಿತನಾಗಿದ್ದ ಎಂದು ಎನ್ಐಎ ತಿಳಿಸಿದೆ.
ಇದಲ್ಲದೆ “ಹಂಝಲಾ” ಎಂಬ ಆನ್ಲೈನ್ ಹ್ಯಾಂಡ್ಲರ್ ಜೊತೆ ಹಮ್ರಾಜ್ ಸಂಪರ್ಕದಲ್ಲಿದ್ದ ಎಂಬುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. “ಕಾಶ್ಮೀರ ಪೇಜ್” ಹೆಸರಿನ ಇನ್ಸ್ಟಾಗ್ರಾಂ ಖಾತೆಯ ಮೂಲಕ ಯುವಕರನ್ನು ಪ್ರಚೋದಿಸಿ ಮೂಲಭೂತವಾದದತ್ತ ಸೆಳೆಯುವ ಕೆಲಸ ನಡೆಯುತ್ತಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ.
ಭಾರತಕ್ಕೆ ವಾಪಸ್ ಬಂದ ಬಳಿಕ ಹಮ್ರಾಜ್ ಹಾಗೂ ಮೊಹಮ್ಮದ್ ಆರೀಫ್ ಸೇರಿ ತಾಲಿಬಾನ್ ಮತ್ತು ಟಿಟಿಪಿ ಸಂಘಟನೆಗಳ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದರು. ಆರ್ಥಿಕ ಹಾಗೂ ವೈಯಕ್ತಿಕ ಸಂಕಷ್ಟದಲ್ಲಿದ್ದ ಯುವಕರನ್ನು ಗುರಿಯಾಗಿಸಿಕೊಂಡು ಸಂಘಟನೆ ಪರವಾಗಿ ಕೆಲಸ ಮಾಡಲು ಪ್ರಚೋದಿಸಿ ನೇಮಕಾತಿ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಇಬ್ಬರೂ ಭಾರತ ವಿರುದ್ಧ ಜಿಹಾದ್ ಯುದ್ಧ ನಡೆಸುವ ಉದ್ದೇಶದಿಂದ ಟಿಟಿಪಿ ಸೇರಲು ತಮ್ಮದೇ ತಂಡ ರಚನೆಗೆ ಸಿದ್ಧತೆ ನಡೆಸುತ್ತಿದ್ದರು ಎಂಬ ಗಂಭೀರ ಸಂಗತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಎನ್ಐಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -spot_img

More articles

- Advertisement -spot_img

Latest article