No menu items!
19.4 C
Munich
Thursday, May 21, 2026

ನಾಳೆ ಹೊರ ಬೀಳಲಿದೆ ‘ರಾಯರ ದರ್ಶನ’ ಆಲ್ಬಂ ಹಾಡಿನ ಬಿಗ್ ಅಪ್ಡೇಟ್,TNIT ಮೀಡಿಯಾ ಅವಾರ್ಡ್ಸ್‌ಗೂ ಕೌಂಟ್‌ಡೌನ್ ಶುರು

Must read

ಕಲಿಯುಗದ ಕಾಮಧೇನು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ಸಾರುವ, ಮನಸ್ಸಿಗೆ ಅಪಾರ ಶಾಂತಿ ನೀಡುವ ದಿವ್ಯ ಭಕ್ತಿಗೀತೆಯ ಆಲ್ಬಂ ”ರಾಯರ ದರ್ಶನ” ಬಿಡುಗಡೆಗೆ ಈಗ ಕೌಂಟ್‌ಡೌನ್ ಶುರುವಾಗಿದೆ.

ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಆಶೀರ್ವಾದದೊಂದಿಗೆ ಮೂಡಿಬಂದಿರುವ ಈ ”ರಾಯರ ದರ್ಶನ” ಆಲ್ಬಂ ಸಾಂಗ್‌ನ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಲು ತಂಡ ಮುಂದಾಗಿದ್ದು, ‘ಲಕ್ಷ್ಮೀ ಗಣೇಶ ಪ್ರೊಡಕ್ಷನ್’ ಮತ್ತು ‘ದಿ ನ್ಯೂ ಇಂಡಿಯನ್ ಟೈಮ್ಸ್’ ಸಂಸ್ಥೆ ಹೆಮ್ಮೆಯಿಂದ ಅರ್ಪಿಸುತ್ತಿರುವ ಈ ಮಹತ್ತರ ಪ್ರಾಜೆಕ್ಟ್‌ನ ಕಂಪ್ಲೀಟ್ ವಿವರಗಳನ್ನು ಹಂಚಿಕೊಳ್ಳಲು ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.

ಇನ್ನು ಕೇವಲ ಹಾಡಿನ ರಿಲೀಸ್ ಡೇಟ್ ಅಷ್ಟೇ ಅಲ್ಲದೆ, ಇದೇ ವೇದಿಕೆಯಲ್ಲಿ ದಕ್ಷಿಣ ಭಾರತದ ಮಾಧ್ಯಮ ರಂಗದ ಸಾಧಕರನ್ನು ಗೌರವಿಸುವ ಪ್ರಖ್ಯಾತ “TNIT ಮೀಡಿಯಾ ಅವಾರ್ಡ್ಸ್ 2026” (TNIT Media Awards 2026) ಪ್ರಶಸ್ತಿ ಕಾರ್ಯಕ್ರಮದ ವಿವರಗಳನ್ನೂ ಹಂಚಿಕೊಳ್ಳಲಾಗುತ್ತಿದೆ.

ನಾಳೆ (ಮೇ 22) ಶುಕ್ರವಾರ ಬೆಳಿಗ್ಗೆ 11:30 ಗಂಟೆಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ. ವರ್ಲ್ಡ್ ಮಾಲ್‌ನ ಪ್ರಸನ್ನ ಥಿಯೇಟರ್ ಹತ್ತಿರದ ‘ಉತ್ಸವ ಲೆಗಸಿ’ಯ 4ನೇ ಮಹಡಿಯಲ್ಲಿ ಈ ಪತ್ರಿಕಾಗೋಷ್ಠಿ ನಡೆಯಲಿದ್ದು, ರಾಯರ ಆರಾಧನಾ ಮಹೋತ್ಸವದ ಭವ್ಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಪತ್ರಿಕಾಗೋಷ್ಠಿಯಲ್ಲಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ”ರಾಯರ ದರ್ಶನ” ಹಾಡಿನ ಟೀಸರ್ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಬಂದಿದ್ದ ಸಾವಿರಾರು ಭಕ್ತರಲ್ಲಿ ಈ ಟೀಸರ್ ನೋಡಿ ಧನ್ಯತಾಭಾವ ಮೂಡಿತ್ತು. ರಾಯರ ಸಂಪೂರ್ಣ ಜೀವನ ಚರಿತ್ರೆಯನ್ನು ಕಣ್ಣಿಗೆ ಕಟ್ಟುವಂತೆ ಕೇವಲ ಒಂದೇ ಒಂದು ಸಾಂಗ್‌ನಲ್ಲಿ ಹಿಡಿದಿಡುವ ಅದ್ಭುತ ಪ್ರಯತ್ನವನ್ನು ರಘು ಭಟ್ ನೇತೃತ್ವದ ತಂಡ ಮಾಡಿದ್ದು, ಪದೇ ಪದೇ ಕೇಳಬೇಕು ಎನಿಸುವಷ್ಟು ದೈವಿಕ ಶಕ್ತಿ ಈ ಹಾಡಿನಲ್ಲಿದೆ ಎಂದು ಭಕ್ತರು ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದರು.

ಈ ಆಲ್ಬಂ ಸಾಂಗ್‌ಗೆ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರೆ, ನಾಗಾರ್ಜುನ ಶರ್ಮಾ ಅವರ ಭಾವಪೂರ್ಣ ಸಾಹಿತ್ಯವಿದೆ. ಶ್ರೀನಿಧಿ ಎಂ.ಕೆ. ಮತ್ತು ಖುಷಿ ಪ್ರಾಜೆಕ್ಟ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಸುಗುಣ ಭಟ್ ಮತ್ತು ರಘು ಭಟ್ ಅವರ ದೊಡ್ಡ ಕನಸಿನ ಕೂಸಾಗಿರುವ ಈ ಹಾಡನ್ನು ಸುಗುಣ ಭಟ್ ಭಕ್ತಿಪೂರ್ವಕವಾಗಿ ನಿರ್ಮಾಣ ಮಾಡಿದ್ದರೆ, ರಘು ಭಟ್ ಅವರು ಅತ್ಯಂತ ಸಿನಿಮೀಯ ಶೈಲಿಯಲ್ಲಿ ನಿರ್ದೇಶನ ಮಾಡಿದ್ದಾರೆ.

ಒಟ್ಟಾರೆಯಾಗಿ, ಮಂತ್ರಾಲಯ ರಾಯರ ಭಕ್ತರ ಹೃದಯಕ್ಕೆ ಲಗ್ಗೆ ಇಡಲು ರೆಡಿಯಾಗಿರುವ ”ರಾಯರ ದರ್ಶನ” ಹಾಗೂ ಮಾಧ್ಯಮ ಲೋಕದ ದಿಗ್ಗಜರನ್ನು ಸನ್ಮಾನಿಸುವ ‘TNIT ಮೀಡಿಯಾ ಅವಾರ್ಡ್ಸ್ 2026’ ಕಾರ್ಯಕ್ರಮದ ಕಂಪ್ಲೀಟ್ ಅಪ್ಡೇಟ್ಸ್ ನಾಳೆ (ಮೇ 22) ಹೊರಬೀಳಲಿದ್ದು, ಗುರು ರಾಘವೇಂದ್ರ ಸ್ವಾಮಿಗಳ ಭಕ್ತರಲ್ಲಿ ಹಾಗೂ ಗಾಂಧಿನಗರದ ವಲಯದಲ್ಲಿ ಭಾರೀ ಕುತೂಹಲ ಮನೆ ಮಾಡಿದೆ.

- Advertisement -spot_img

More articles

- Advertisement -spot_img

Latest article